ಚಿರಂಜೀವಿಯನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದ, ಕನ್ನಡದಲ್ಲೂ ಸಿನಿಮಾ ಮಾಡಿದ್ದ ನಿರ್ದೇಶಕ ಕೆ. ವಾಸು ನಿಧನ

K Vasu Death: ಕೆ. ವಾಸು ಅವರಿಗೆ ನಿರಂತರವಾಗಿ ಚಿಕಿತ್ಸೆ ನೀಡಲಾಗುತ್ತಿತ್ತು. ಶುಕ್ರವಾರ ಸಂಜೆ ವಾಸು ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ. ವಾಸು ನಿಧನಕ್ಕೆ ಹಲವು ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಚಿರಂಜೀವಿಯನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದ, ಕನ್ನಡದಲ್ಲೂ ಸಿನಿಮಾ ಮಾಡಿದ್ದ ನಿರ್ದೇಶಕ ಕೆ. ವಾಸು ನಿಧನ
ವಾಸು
Follow us
|

Updated on:May 27, 2023 | 7:35 AM

ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಕೆ. ವಾಸು (K Vasu) ಅವರು ಶುಕ್ರವಾರ (ಮೇ 27) ಸಂಜೆ ಹೈದರಾಬಾದ್‌ನ ಫಿಲಂ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಕಳೆದ ಕೆಲವು ವರ್ಷಗಳಿಂದ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಕೆಲ ದಿನಗಳಿಂದ ಅವರ ಆರೋಗ್ಯ ತುಂಬಾನೇ ಹದಗೆಟ್ಟಿತ್ತು. ಅವರು ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಎರಡು ತಿಂಗಳಿಂದ ಡಯಾಲಿಸಿಸ್ ಕೂಡ ಮಾಡಿಸಿಕೊಳ್ಳುತ್ತಿದ್ದರು. ಅವರನ್ನು ಕಳೆದುಕೊಂಡ ಚಿತ್ರರಂಗ ಬಡವಾಗಿದೆ. ಚಿರಂಜೀವಿ ಸೇರಿ ಅನೇಕರು ಕೆ. ವಾಸು ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ. ಕೆ. ವಾಸುಗೆ ಕನ್ನಡ ಚಿತ್ರರಂಗದ ಜೊತೆಗೂ ನಂಟಿತ್ತು.

ಕೆ. ವಾಸು ಅವರಿಗೆ ನಿರಂತರವಾಗಿ ಚಿಕಿತ್ಸೆ ನೀಡಲಾಗುತ್ತಿತ್ತು. ಶುಕ್ರವಾರ ಸಂಜೆ ವಾಸು ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ. ವಾಸು ನಿಧನಕ್ಕೆ ಹಲವು ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅವರ ಜೊತೆ ಕಳೆದ ದಿನಗಳನ್ನು, ಅವರು ಹಾಕಿಕೊಟ್ಟ ಮಾರ್ಗದರ್ಶನವನ್ನು ನೆನಪಿಸಿಕೊಂಡಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ಅವರ ಮೊದಲ ಚಿತ್ರ ‘ಪ್ರಣಾಮ್ ಖರೀದು’ ಚಿತ್ರವನ್ನು ವಾಸು ನಿರ್ದೇಶಿಸಿದ್ದರು. ಈ ಚಿತ್ರದ ಮೂಲಕವೇ ಚಿರಂಜೀವಿ ಅವರು ಬೆಳ್ಳಿಪರದೆಗೆ ಕಾಲಿಟ್ಟರು. ವಾಸು ಅವರ ಕುಟುಂಬಕ್ಕೆ ಚಿತ್ರರಂಗದ ಜೊತೆ ಒಳ್ಳೆಯ ನಂಟಿತ್ತು.

ವಾಸು ಅವರು ಜನವರಿ 15, 1951ರಂದು ಜನಿಸಿದರು. 22ರ ಹರೆಯದಲ್ಲಿಯೇ ನಿರ್ದೇಶನ ಮಾಡಿ ಭೇಷ್ ಎನಿಸಿಕೊಂಡರು. ಚಿರಂಜೀವಿ ಜೊತೆ ವಾಸುಗೆ ಒಳ್ಳೆಯ ನಂಟಿತ್ತು. ಅವರು ಚಿರು ಜೊತೆ ಅನೇಕ ಹಿಟ್ ಸಿನಿಮಾಗಳನ್ನು ಮಾಡಿದರು. ‘ಕೊತ್ತಲ ರಾಯುಡು’ ಮೊದಲಾದ ಚಿತ್ರಗಳು ವಾಸು ನಿರ್ದೇಶನದಲ್ಲಿ ಮೂಡಿಬಂದಿದೆವೆ. ಅವರ ಭಕ್ತಿ ಪ್ರಧಾನ ಚಿತ್ರ ‘ಶ್ರೀ ಶಿರಡಿ ಸಾಯಿಬಾಬಾ ಮಹಾತ್ಯಮ್’ ತೆಲುಗು ಪ್ರೇಕ್ಷಕರು ಮೆಚ್ಚಿದ್ದಾರೆ.

ಇದನ್ನೂ ಓದಿ: ರಜನೀಕಾಂತ್ ಸೂಪರ್ ಸ್ಟಾರ್ ಅಲ್ಲ, ಚಿರಂಜೀವಿ ನಮ್ಮ ಸೂಪರ್ ಸ್ಟಾರ್: ಪೋಸಾನಿ

ವಾಸು ನಿಧನಕ್ಕೆ ಚಿರಂಜೀವಿ ಸಂತಾಪ

‘ಹಿರಿಯ ನಿರ್ದೇಶಕರು ಕೆ.ವಾಸು ಅವರು ಇನ್ನಿಲ್ಲ ಎಂಬ ಸುದ್ದಿ ಬಹಳ ದುಃಖ ತಂದಿದೆ. ನನ್ನ ವೃತ್ತಿಜೀವನದ ಆರಂಭದ ದಿನಗಳಲ್ಲಿ ನಾನು ಅವರ ಜೊತೆ ಹಲವು ಸಿನಿಮಾ ಮಾಡಿದ್ದೆ. ಅವರ ಕುಟುಂಬಕ್ಕೆ ನನ್ನ ಸಂತಾಪ’ ಎಂದು ಚಿರಂಜೀವಿ ಟ್ವೀಟ್ ಮಾಡಿದ್ದಾರೆ.

ಕನ್ನಡದಲ್ಲೂ ನಿರ್ದೇಶನ ಮಾಡಿದ್ದ ವಾಸು

ಕೆ. ವಾಸು ಅವರು ಕೇವಲ ತೆಲುಗು ಚಿತ್ರರಂಗಕ್ಕೆ ಮಾತ್ರ ಸೀಮಿತ ಆಗಿರಲಿಲ್ಲ. ಕನ್ನಡ ಚಿತ್ರರಂಗದ ಜೊತೆಗೂ ಅವರ ನಂಟಿತ್ತು. ಜಗ್ಗೇಶ್ ನಟನೆಯ ‘ಸರ್ವರ್ ಸೋಮಣ್ಣ’ ಸಿನಿಮಾವನ್ನು ಕೆ. ವಾಸು ನಿರ್ದೇಶನ ಮಾಡಿದ್ದರು. ಈ ಚಿತ್ರ ಹಾಸ್ಯಪ್ರಧಾನವಾಗಿತ್ತು. ಈ ಸಿನಿಮಾ ಯಶಸ್ಸು ಕಂಡಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:11 am, Sat, 27 May 23