ಅಣ್ಣಾವ್ರ ಮಕ್ಕಳು ಮಾತನಾಡಿದ ದಿನ ಅವರ ಆಟ ಮುಗಿಯುತ್ತದೆ: ರಾಜ್ಕುಮಾರ್ ಪುತ್ರಿ ಪೂರ್ಣಿಮಾ
Dr Rajkumar: ರಾಜ್ಕುಮಾರ್ ಘನತೆಗೆ ಧಕ್ಕೆ ತರಲು ಸುಳ್ಳು ಸುದ್ದಿ ಹಬ್ಬಿಸುತ್ತಿರುವ ವ್ಯಕ್ತಿಗಳ ಬಗ್ಗೆ ರಾಜ್ಕುಮಾರ್ ಪುತ್ರಿ, ರಾಮ್ಕುಮಾರ್ ಪತ್ನಿ ಪೂರ್ಣಿಮಾ ರಾಮ್ಕುಮಾರ್ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಡಾ ರಾಜ್ಕುಮಾರ್ (Dr Rajkumar) ಕರ್ನಾಟಕದ ಮೇರು ಪ್ರತಿಭೆ, ಅವರನ್ನು ದೇವರೆಂದೇ ಭಾವಿಸಿರುವ ಕೋಟ್ಯಂತರ ಅಭಿಮಾನಿಗಳಿದ್ದಾರೆ. ರಾಜ್ಕುಮಾರ್ ಕುಟುಂಬವನ್ನು ದೊಡ್ಮನೆ ಕುಟುಂಬವೆಂದು ಕರೆದು ಗೌರವ ನೀಡಿದ್ದಾರೆ ಅಭಿಮಾನಿಗಳು. ಆದರೆ, ಹಣ್ಣಿನ ಮರಕ್ಕೆ ಕಲ್ಲು ಹೆಚ್ಚು ಎಂಬಂತೆ ಅಣ್ಣಾವ್ರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಕೆಲವು ಸುದ್ದಿಗಳನ್ನು ಕೆಲವರು ಆಗಾಗ್ಗೆ ಹರಿ ಬಿಡುತ್ತಿರುತ್ತಾರೆ. ಆದರೆ ಆ ಬಗ್ಗೆ ಈ ವರೆಗೆ ದೊಡ್ಮನೆ ಕುಟುಂಬದವರು ಪ್ರತಿಕ್ರಿಯಿಸಿಲ್ಲ. ಇದೀಗ ರಾಜ್ಕುಮಾರ್-ಪಾರ್ವತಮ್ಮ ರಾಜ್ಕುಮಾರ್ (Parvathamma Rajkumar) ಪುತ್ರಿ ಪೂರ್ಣಿಮಾ (Poornima Ramkumar) ಈ ಬಗ್ಗೆ ಮಾತನಾಡಿದ್ದಾರೆ.
ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿರುವ ಪೂರ್ಣಿಮಾ ರಾಮ್ಕುಮಾರ್, ಕೆಟ್ಟದ್ದು ಮಾಡುವುದಕ್ಕೆಂದೇ ಕೆಲವರು ಹುಟ್ಟಿಕೊಂಡಿರುತ್ತಾರೆ. ಅವರ ಕೆಲಸವೇ ಕೆಟ್ಟದು ಮಾಡುವುದು, ಕೆಟ್ಟದ್ದು ಮಾತನಾಡುವುದು. ಅದಕ್ಕೆ ನಾವಾಗಲಿ, ನಮ್ಮ ಕುಟುಂಬದ ಅಭಿಮಾನಿಗಳಾಗಲಿ ತಲೆ ಕೆಡಿಸಿಕೊಳ್ಳುವುದಿಲ್ಲ. ರಾಜ್ಕುಮಾರ್ ಮಕ್ಕಳಿಗೆ ಮಾತನಾಡಲು ಬರುವುದಿಲ್ಲ ಎಂದೇನೂ ಇಲ್ಲ. ನಮಗೂ ಮಾತನಾಡಲು ಬರುತ್ತದೆ, ನಮಗೂ ಸತ್ಯ ಗೊತ್ತಿದೆ, ಗೊತ್ತಿಲ್ಲದೇ ಏನೂ ಇಲ್ಲ. ನಮ್ಮ ಬಗ್ಗೆ ಕುಟುಂಬದ ಬಗ್ಗೆ ಯಾರಾದರೂ ಮಾತನಾಡಬೇಕಾದರೆ ಯಾರು ನಿಜ ಹೇಳುತ್ತಿದ್ದಾರೆ, ಯಾರು ಸುಳ್ಳು ಹೇಳುತ್ತಿದ್ದಾರೆ ಎಂಬುದು ನಮಗೆ ಗೊತ್ತಿರುತ್ತದೆ. ನೀವು ಎಷ್ಟೆ ಸುಳ್ಳು ಹೇಳಿಕೊಂಡು ಬಂದರೂ ಎಲ್ಲೋ ಒಂದು ಮಾತಿನಲ್ಲಿ ನಿಜ ನಿಮಗೇ ಗೊತ್ತಿಲ್ಲದೆ ಬಾಯಿಂದ ಬಂದು ನಿಜ ಗೊತ್ತಾಗಿಬಿಡುತ್ತದೆ” ಎಂದಿದ್ದಾರೆ ಪೂರ್ಣಿಮಾ ರಾಮ್ಕುಮಾರ್.
”ಅಪ್ಪಾಜಿ, ಅಪ್ಪು, ಅಮ್ಮ ಸೆಲೆಬ್ರಿಟಿಗಳು, ಅವರ ಹೆಸರು ಬಳಸಿದರೆ ಜನಪ್ರಿಯರಾಗುತ್ತೇವೆ, ಒಂದಿಷ್ಟು ಹಣ ಮಾಡಬಹುದು ಎಂಬುದು ಗೊತ್ತಿರುವುದರಿಂದ ಕೆಲವರು ಅವರ ಹೆಸರು ಹೇಳಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಮಾಡಲಿ, ಆದರೆ ಅದು ಅವರಿಗೆ ಶ್ರೇಯಸ್ಸು ತರುವುದಿಲ್ಲ. ಅಪ್ಪಾಜಿ-ಅಮ್ಮ ಇದ್ದಾಗ ನಮ್ಮ ಮನೆಯಲ್ಲಿ ಎಂದೂ ಈ ಬಗ್ಗೆ ಚರ್ಚೆ ಆಗಿರಲಿಲ್ಲ. ಎಂದಿಗೂ ನಮ್ಮ ಅಪ್ಪ-ಅಮ್ಮ ಸಹ ಅವರ ಬಗ್ಗೆ ಹರಡಿರುವ ಸುದ್ದಿಗಳ ಬಗ್ಗೆ ಮಾತನಾಡುತ್ತಿರಲಿಲ್ಲ. ಎಂದಿಗೂ ಅವರು ಹೀಗೆ ಇವರು ಹಾಗೆ ಎಂದು ಸಹ ಹೇಳಿಕೊಂಡಿದ್ದನ್ನು ನಾವು ಕೇಳಿಸಿಕೊಂಡಿಲ್ಲ. ನಮಗೆ ಬೆಂಗಳೂರಿನಲ್ಲಿ ಏನು ನಡೆಯುತ್ತಿದೆ ಎಂಬುದು ಸಹ ಗೊತ್ತಿರಲಿಲ್ಲ” ಎಂದಿದ್ದಾರೆ ಪೂರ್ಣಿಮಾ.
”ನಮ್ಮ ಕುಟುಂಬದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರಿಗೆ ಹೇಳುವುದೇನೆಂದರೆ, ಅಪ್ಪಾಜಿ-ಅಮ್ಮನ ಹೆಸರು ಅಳಿಸುವುದು ಯಾರ ಕೈಯಿಂದಲೂ ಸಾಧ್ಯವಿಲ್ಲ. ಅದು ಅವರ ಹಣೆಯಲ್ಲಿ ಬರೆದಿಲ್ಲ. ಸುಮ್ಮನೆ ಸಮಯ ವ್ಯರ್ಥ ಮಾಡಿಕೋಳ್ಳುತ್ತಿದ್ದಾರೆ. ರಾಜ್ಕುಮಾರ್ ಎಂಬುದು ಅವರಿಗೆ ಅಭಿಮಾನಿಗಳು ಇಟ್ಟಿರುವ ಹೆಸರು ಅದು. ಜನರು ಅವರ ಸುಳ್ಳುಗಳನ್ನು ನಂಬುವುದಿಲ್ಲ. ನಾವು ಮಾತನಾಡಬಲ್ಲೆವು ಆದರೆ ಬೇಡ, ನಾವು ಉತ್ತರ ಕೊಟ್ಟರೆ ಅವರು ತಡೆದುಕೊಳ್ಳಲು ಆಗಲ್ಲ, ನಾವು ಮಾತನಾಡದೆ ಇರುವವರೆಗೆ ಅಷ್ಟೆ ಅವರಿಗೆ ಕ್ಷೇಮ, ನಾವು ಮಾತನಾಡಿದರೆ ಅಂದಿಗೆ ಅವರ ಆಟ ಮುಗಿಯುತ್ತದೆ” ಎಂದು ಪರೋಕ್ಷ ಎಚ್ಚರಿಕೆ ಕೊಟ್ಟಿದ್ದಾರೆ ಪೂರ್ಣಿಮಾ ರಾಮ್ಕುಮಾರ್.
ರಾಜ್ಕುಮಾರ್ ಹಾಗೂ ಪಾರ್ವತಮ್ಮ ಅವರ ಪುತ್ರಿ ಪೂರ್ಣಿಮಾ. ಇವರು ಕನ್ನಡದ ಜನಪ್ರಿಯ ನಾಯಕ ನಟ ರಾಮ್ಕುಮಾರ್ ಅವರನ್ನು ವಿವಾಹವಾಗಿದ್ದಾರೆ. ಇವರಿಗೆ ಧನ್ಯಾ ಹಾಗೂ ಧೀರೆನ್ ಹೆಸರಿನ ಮಕ್ಕಳಿದ್ದು ಇಬ್ಬರೂ ಸಹ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಪೂರ್ಣಿಮಾ ಅವರು ಸಿನಿಮಾ ನಿರ್ಮಾಣದಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ