ರಾಜಕಾರಣಿ, ನಟ ಪವನ್ ಕಲ್ಯಾಣ್ (Pawan Kalyan) ನಟನೆಯ ‘ಬ್ರೋ‘ (Bro) ಸಿನಿಮಾ ಕಳೆದ ಶುಕ್ರವಾರವಷ್ಟೆ ಬಿಡುಗಡೆ ಆಗಿ ಸಾಧಾರಣ ಕಲೆಕ್ಷನ್ ಮಾಡುತ್ತಿದೆ. ಆದರೆ ಈ ಸಿನಿಮಾದ ಒಂದು ದೃಶ್ಯದ ಬಗ್ಗೆ ಆಂಧ್ರ ಸರ್ಕಾರದ ಸಚಿವ ಅಂಬಾಟಿ ರಾಮ್ಬಾಬು ಆಕ್ಷೇಪಣೆ ಎತ್ತಿದ್ದು, ‘ಬ್ರೋ’ ಸಿನಿಮಾ, ನಟ ಪವನ್ ಕಲ್ಯಾಣ್ ಸಿನಿಮಾದ ನಿರ್ಮಾಪಕ ವಿಶ್ವಪ್ರಸಾದ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ ‘ಬ್ರೋ’ ಸಿನಿಮಾಕ್ಕೆ ಎದುರಾಗಿ ‘ಮ್ರೋ’ ಹೆಸರಿನ ನಿರ್ಮಿಸುವುದಾಗಿ ಘೋಷಣೆ ಮಾಡಿ, ಕತೆಯ ಎಳೆಯನ್ನೂ ಬಿಟ್ಟುಕೊಟ್ಟಿದ್ದಾರೆ!
ಅಂಬಾಟಿ ರಾಮ್ಬಾಬು, ಸಮುದಾಯವೊಂದರ ಮಹಿಳೆಯೊಟ್ಟಿಗೆ ಡ್ಯಾನ್ಸ್ ಮಾಡಿದ್ದ ವಿಡಿಯೋ ಒಂದು ವೈರಲ್ ಆಗಿತ್ತು. ಅದೇ ಮಾದರಿಯ ಸನ್ನಿವೇಶವನ್ನು ‘ಬ್ರೋ’ ಸಿನಿಮಾದಲ್ಲಿ ಸೃಷ್ಟಿಸಲಾಗಿದ್ದು, ಶ್ಯಾಮ್ಬಾಬು ಎಂಬಾತ, ವೈರಲ್ ವಿಡಿಯೋದಲ್ಲಿ ರಾಮ್ಬಾಬು ಧರಿಸಿದ್ದ ಬಣ್ಣದ ಬಟ್ಟೆ ತೊಟ್ಟು ಅದೇ ಮಾದರಿಯಲ್ಲಿ ಡ್ಯಾನ್ಸ್ ಮಾಡುವ ದೃಶ್ಯವಿದೆ. ಸಿನಿಮಾದಲ್ಲಿ ಪವನ್ ಕಲ್ಯಾಣ್ ಪಾತ್ರ, ಸಚಿವರ ರೀತಿಯಲ್ಲಿ ಡ್ಯಾನ್ಸ್ ಮಾಡಿರುವ ಪಾತ್ರವನ್ನು ಅವರ ಡ್ಯಾನ್ಸ್ ಅನ್ನು ವ್ಯಂಗ್ಯ ಮಾಡುವ ಸಂಭಾಷಣೆ ಇದೆ. ಇದರ ವಿರುದ್ಧ ಸಚಿವ ಅಂಬಾಟಿ ರಾಮ್ಬಾಬು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.
ಸಿನಿಮಾವನ್ನು ಸಿನಿಮಾ ಆಗಿ ತೆಗೆಯಬೇಕು, ಸಿನಿಮಾ ಹಾಗೂ ರಾಜಕೀಯವನ್ನು ಬೆರೆಸಬಾರದು, ಶತ್ರುವಿನ ಬೊಂಬೆ ಮಾಡಿ ಅದಕ್ಕೆ ಗುಂಡು ಹೊಡೆದು ಗೆದ್ದೆ ಎನ್ನುವ ವಿಕೃತ ಆನಂದ ಪಡೆವ ರೀತಿಯಲ್ಲಿಯೇ ಪವನ್ ಕಲ್ಯಾಣ್, ರಾಜಕೀಯವಾಗಿ ನನ್ನನ್ನು ಗೆಲ್ಲಲಾಗದೆ ನನ್ನನ್ನು ಹೋಲುವ ಪಾತ್ರ ಸೃಷ್ಟಿಸಿ ಅದರ ವಿರುದ್ಧ ದ್ವೇಷ ತೀರಿಸಿಕೊಂಡಿದ್ದಾರೆ. ಪೈಶಾಚಿಕ ಆನಂದ ಪಡೆಯುತ್ತಿದ್ದಾರೆ. ಅವರ ಈ ಕೆಟ್ಟತನದಿಂದಲೇ ‘ಬ್ರೋ’ ಸಿನಿಮಾ ಫ್ಲಾಪ್ ಆಗಿದೆ. ಈವರೆಗೆ 60 ಕೋಟಿ ಗಳಿಸಿದೆ. ಆದರೆ ಈ ಸಿನಿಮಾಕ್ಕೆ ಪವನ್ ಕಲ್ಯಾಣ್ ಪಡೆದಿರುವ ಸಂಭಾವನೆ 80 ಕೋಟಿ! ಪವನ್ ಪಡೆದಿರುವ ಸಂಭಾವನೆ ಮೊತ್ತವನ್ನೂ ಸಹ ಈ ಸಿನಿಮಾ ಮರಳಿ ಪಡೆದಿಲ್ಲ” ಎಂದಿದ್ದಾರೆ.
ಇದನ್ನೂ ಓದಿ:ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದ ‘ಬ್ರೋ’: ಪವನ್ ಕ್ರೇಜ್ ತಗ್ಗಿಲ್ಲ
ಸಿನಿಮಾದ ನಿರ್ಮಾಪಕ ವಿಶ್ವಪ್ರಸಾದ್ ಅಮೆರಿಕದಲ್ಲಿ ಸಾಫ್ಟ್ವೇರ್ ಸಂಸ್ಥೆಗಳಿವೆ, ಚಂದ್ರಬಾಬು ನಾಯ್ಡು ಅಮೆರಿಕದಲ್ಲಿ ಹಣ ಒಟ್ಟುಮಾಡಿ ವಿಶ್ವಪ್ರಸಾದ್ಗೆ ಕೊಟ್ಟಿದ್ದಾರೆ. ಅದನ್ನು ಸಿನಿಮಾ ಮೂಲಕ ಪವನ್ಗೆ ವಿಶ್ವಪ್ರಸಾದ್ ಪವನ್ಗೆ ಕೊಟ್ಟಿದ್ದಾರೆ. ಚಂದ್ರಬಾಬು ನಾಯ್ಡು ‘ಪ್ಯಾಕೇಜ್’ ಅನ್ನು ಪವನ್ಗೆ ವಿಶ್ವಪ್ರಸಾದ್ ತಲುಪಿಸಿದ್ದಾರೆ. ಇಷ್ಟೋಂದು ಸಂಭಾವನೆ ಪಡೆದಿರುವ ಪವನ್ ಇದನ್ನು ತೆರಿಗೆಯಲ್ಲಿ ತೋರಿಸಿದ್ದಾರಾ? ಎಂದು ಪ್ರಶ್ನೆ ಮಾಡಿರುವ ಸಚಿವ ಅಂಬಾಟಿ ರಾಮ್ಬಾಬು ಕಪ್ಪು ಹಣವನ್ನು ಬಿಳಿ ಮಾಡಲೆಂದು ಈ ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಒಂದು ಹಗರಣ ಎಂದು ಆರೋಪಿಸಿದ್ದಾರೆ.
”ನಾನೂ ಒಂದು ಸಿನಿಮಾ ಮಾಡುವ ಯೋಚನೆಯಲ್ಲಿದ್ದೀನಿ” ಎಂದ ಸಚಿವ ಅಂಟಾಟಿ ರಾಮ್ಬಾಬು, ಒಬ್ಬ ಕೆಟ್ಟ ವ್ಯಕ್ತಿ ತನ್ನ ಅಣ್ಣನ ನೆರವಿನಿಂದ ಸ್ಟಾರ್ ಆಗಿ ಮೂರು ನಾಲ್ಕು ಮದುವೆಗಳಾಗಿ ಹೆಣ್ಣು ಮಕ್ಕಳ ಜೀವನ ಹಾಳು ಮಾಡುವ ಸಿನಿಮಾದ ಕೊನೆಯಲ್ಲಿ ಅದೇ ಹೆಣ್ಣು ಮಕ್ಕಳು, ಅವರ ಮಕ್ಕಳು ಬಂದು ನಾಯಕನಿಗೆ ಬುದ್ಧಿ ಕಲಿಸುವ ಕತೆಯನ್ನು ಆ ಸಿನಿಮಾ ಒಳಗೊಂಡಿದೆ. ಆ ಸಿನಿಮಾಕ್ಕೆ ‘ಮ್ರೋ’ (ಮ್ಯಾರೇಜಸ್ ರಿಲೇಜಸ್ ಅಫೆಂಡರ್) ಎಂದು ಹೆಸರಿಡುವ ಉದ್ದೇಶ ಇದೆ” ಎಂದಿದ್ದಾರೆ. ‘ಮ್ರೋ’ ಮಾತ್ರವೇ ಅಲ್ಲದೆ ಇನ್ನೂ ಕೆಲವು ಹೆಸರುಗಳನ್ನು ರಾಮ್ಬಾಬು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:23 pm, Tue, 1 August 23