Mohanlal: ಡೈರೆಕ್ಷನ್ ಕ್ಯಾಪ್ ತೊಟ್ಟ ಮೊದಲ ಸಿನಿಮಾದಲ್ಲೇ ಗುರುತು ಸಿಗದಷ್ಟು ಬದಲಾದ ಮೋಹನ್‌ಲಾಲ್; ಏನಿದರ ವಿಶೇಷ?
Barroz First Look: ಮೋಹನ್‌ಲಾಲ್ ಮೊದಲ ಬಾರಿಗೆ ಆಕ್ಷನ್ ಕ್ಯಾಪ್ ತೊಟ್ಟಿರುವ ‘ಬರೋಸ್’ನ ಮೊದಲ ಲುಕ್ ಬಿಡುಗಡೆಯಾಗಿದೆ. ಇದರಲ್ಲಿ ಮೋಹನ್‌ಲಾಲ್ ಸಂಪೂರ್ಣ ಭಿನ್ನ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದು, ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಅಷ್ಟಕ್ಕೂ ‘ಬರೋಸ್’ ಕತೆ ಏನು? ಇಲ್ಲಿದೆ ಮಾಹಿತಿ.
ಮಲಯಾಳಂ ನಟ ಮೋಹನ್‌ಲಾಲ್ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿರುವ ‘ಬರೋಸ್’ (Barroz) ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಫ್ಯಾಂಟಸಿ ಅಡ್ವೆಂಚರ್ ಮಾದರಿಯ ಈ ಚಿತ್ರದಲ್ಲಿ ಸ್ವತಃ ಮೋಹನ್‌ಲಾಲ್ (Mohanlal) ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಪ್ರೋಮೋ ಟೀಸರ್ ಕುತೂಹಲ ಮೂಡಿಸಿತ್ತು. ಪೋಸ್ಟರ್ಗಳೂ ಕುತೂಹಲ ಕೆರಳಿಸಿದ್ದವು. ಇದೀಗ ಹೊಸ ವರ್ಷದಂದು ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ ಚಿತ್ರತಂಡ. ಪೋಸ್ಟರ್ ನೋಡಿದ ಅಭಿಮಾನಿಗಳಿಗೆ ಅಚ್ಚರಿಯಾಗಿದೆ. ಕಾರಣ ಮೋಹನ್‌ಲಾಲ್ ಸಂಪೂರ್ಣ ಭಿನ್ನ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ತಲೆಗೂದಲಿಲ್ಲದೆ, ಗಡ್ಡ ಬಿಟ್ಟ ಮೋಹನ್ಲಾಲ್ರನ್ನು ಬಹುಶಃ ಅವರ ಫ್ಯಾನ್ಸ್ ಎದುರುಗೊಳ್ಳುತ್ತಿರುವುದು ಇದೇ ಮೊದಲ ಬಾರಿ. ಚಿನ್ನದ ಸಿಂಹಾಸನದಲ್ಲಿ ಮೋಹನ್‌ಲಾಲ್ ಕಾಲು ಚಾಚಿ ಕುಳಿತ ಪೋಸ್ಟರ್ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಟ್ವಿಟರ್ನಲ್ಲಿ ಪೋಸ್ಟರ್ ಹಂಚಿಕೊಂಡಿರುವ ಮೋಹನ್‌ಲಾಲ್, ‘ನಮ್ಮ ಮುಂದೆ ಮತ್ತೊಂದು ಹೊಸ ವರ್ಷ ನಿಂತಿದೆ. ಈ ವರ್ಷ ಎಲ್ಲರ ಜೀವನದಲ್ಲಿ ಅತ್ಯಂತ ಆನಂದದಾಯಕವಾದ ಕ್ಷಣಗಳು ಬರಲಿ’’ ಎಂಬರ್ಥದಲ್ಲಿ ಅವರು ಬರೆದುಕೊಂಡು, ಪೋಸ್ಟರ್ ಶೇರ್ ಮಾಡಿದ್ದಾರೆ. ಈಗಾಗಲೇ ‘ಬರೋಸ್’ ಚಿತ್ರ ತನ್ನ ಕಥಾ ಹಂದರದಿಂದ ಗಮನ ಸೆಳೆದಿದ್ದು, ಮೋಹನ್‌ಲಾಲ್ ಸ್ವತಃ ನಿರ್ದೇಶನದ ಕ್ಯಾಪ್ ತೊಟ್ಟಿರುವುದರಿಂದ ನಿರೀಕ್ಷೆ ನೂರ್ಮಡಿಯಾಗಿದೆ. ಇದೀಗ ಹೊಸ ಲುಕ್ ನೋಡಿದ ಫ್ಯಾನ್ಸ್ ಮತ್ತಷ್ಟು ಖುಷಿಯಾಗಿದ್ದಾರೆ.
ಮೋಹನ್‌ಲಾಲ್ ಹಂಚಿಕೊಂಡ ಟ್ವೀಟ್ ಇಲ್ಲಿದೆ:
Here’s a toast to another year that rises before us. Wishing all good fortunes and prosperity upon each one of you! May this year turn out to be one of the most treasured time frames of your life! #HappyNewYear #BarrozFirstLook pic.twitter.com/x3ZaawlMZ6
— Mohanlal (@Mohanlal) December 31, 2021
‘ಬರೋಸ್’ ಚಿತ್ರದ ವಿಶೇಷತೆ ಏನು? ಮೋಹನ್‌ಲಾಲ್ ‘ಬರೋಸ್’ ಚಿತ್ರದಲ್ಲಿ ಅದೇ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಪೂರ್ಣ ಹೆಸರು ‘ಬರೋಸ್: ಗಾರ್ಡಿಯನ್ ಆಫ್ ಡಿ‘ಗಾಮಾ ಟ್ರೆಷರ್’. ‘3ಡಿ’ಯಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಜಿಜೊ ಪನ್ನೋಸ್ ಬರೆದ ಕತೆಯನ್ನು ಆಧರಿಸಿ ಚಿತ್ರ ತಯಾರಾಗುತ್ತಿದೆ.
‘ಬರೋಸ್’ ಪ್ರೋಮೋ ಟೀಸರ್ ಇಲ್ಲಿದೆ:
‘ಬರೋಸ್’ ಎಂಬುವವನು 400 ವರ್ಷಗಳಿಂದ ಡಿ‘ಗಾಮಾನ ನಿಧಿಯನ್ನು ಕಾಯುತ್ತಿರುತ್ತಾನೆ. ಡಿ‘ಗಾಮಾನ ನಿಜವಾದ ವಂಶಸ್ಥರಿಗೆ ನಿಧಿಯನ್ನು ಒಪ್ಪಿಸುವುದು ಆತನ ಜವಾಬ್ದಾರಿಯಾಗಿರುತ್ತದೆ. ಇದು ಚಿತ್ರದ ಒನ್ಲೈನರ್. ಚಿತ್ರದಲ್ಲಿ ಸ್ಪಾನಿಷ್ ನಟರಾದ ಪಾಸ್ ವೇಗಾ, ರಫೇಲ್ ಅಮರ್ಗೋ ಮೊದಲಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆಶೀರ್ವಾದ್ ಸಿನಿಮಾಸ್ ಬ್ಯಾನರ್ನಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.
ಇದನ್ನೂ ಓದಿ:
ಹಣ ಉಳಿಸಲು ಅಭಿಮಾನಿಗಳಿಗೆ ಐದು ಕಿವಿಮಾತು ಹೇಳಿದ ‘ಕನ್ನಡತಿ’ ನಟಿ ರಂಜನಿ ರಾಘವನ್
‘ವಿಕ್ರಾಂತ್ ರೋಣ’ ರಿಲೀಸ್ ಮುಂದಕ್ಕೆ ಹೋಗಿಲ್ಲ; ಆದ್ರೂ ಜನರಿಗೆ ಡೌಟ್ ಬರಲು ಕಾರಣ ಏನು?