Mohanlal: ಹೇಮಾ ಸಮಿತಿ ವರದಿ ಸಲ್ಲಿಕೆ ಬಳಿಕ ‘AMMA’ ಅಧ್ಯಕ್ಷ ಸ್ಥಾನಕ್ಕೆ ಮೋಹನ್​ಲಾಲ್ ರಾಜಿನಾಮೆ

ಮಲಯಾಳಂ ಸಿನಿಮಾರಂಗದ ಹಿರಿಯ ನಟ ಮೋಹನ್​ಲಾಲ್​ ಅವರ ವಿರುದ್ಧ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ‘ಮಲಯಾಳಂ ಸಿನಿಮಾ ಕಲಾವಿದರ ಸಂಘ’ದ ಅಧ್ಯಕ್ಷ ಸ್ಥಾನದಿಂದ ಅವರು ಕೆಳಗೆ ಇಳಿದಿದ್ದಾರೆ. ಮೋಹನ್​ಲಾಲ್​ ರಾಜಿನಾಮೆ ನೀಡಿದ ಬಳಿಕ ಇನ್ನುಳಿದ ಕಾರ್ಯಕಾರಿ ಸದಸ್ಯರ ಕೂಡ ಸಾಮೂಹಿಕ ರಾಜಿನಾಮೆ ಸಲ್ಲಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

Mohanlal: ಹೇಮಾ ಸಮಿತಿ ವರದಿ ಸಲ್ಲಿಕೆ ಬಳಿಕ ‘AMMA’ ಅಧ್ಯಕ್ಷ ಸ್ಥಾನಕ್ಕೆ ಮೋಹನ್​ಲಾಲ್ ರಾಜಿನಾಮೆ
ಮೋಹನ್​ಲಾಲ್
Edited By:

Updated on: Aug 28, 2024 | 10:04 AM

ಮಲಯಾಳಂ ಸಿನಿಮಾ ಕಲಾವಿದರ ಸಂಘದ (AMMA) ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಟ ಮೋಹನ್​ಲಾಲ್​ ಅವರು ರಾಜಿನಾಮೆ ನೀಡಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳ ಬಗೆ ನ್ಯಾಯಮೂರ್ತಿ ಹೇಮಾ ಸಮಿತಿಯು ವರದಿ ಸಲ್ಲಿಕೆ ಮಾಡಿದ ಬಳಿಕ ದೊಡ್ಡ ಚರ್ಚೆ ಶುರುವಾಗಿದೆ. ಮೋಹನ್​ಲಾಲ್ ಮಾತ್ರವಲ್ಲದೇ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು ಸಾಮೂಹಿಕವಾಗಿ ರಾಜಿನಾಮೆ ನೀಡಿದ್ದಾರೆ ಎಂದು ವರದಿ ಆಗಿದೆ. ಮಾಲಿವುಡ್​ನ ಪ್ರಭಾವಿಗಳ ಮೇಲೆ ಗಂಭೀರ ಆರೋಪಗಳು ಎದುರಾಗಿವೆ. ಈ ಹಿನ್ನೆಲೆಯಲ್ಲಿ ಪ್ರಮುಖ ಸ್ಥಾನಗಳಿಗೆ ರಾಜಿನಾಮೆ ನೀಡಲಾಗುತ್ತಿದೆ.

ಮಲಯಾಳಂ ಚಿತ್ರರಂಗದಲ್ಲಿ ಈ ಹಿಂದೆ ನಟಿಯೊಬ್ಬರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಳಿಕ ಹೇಮಾ ಸಮಿತಿ ರಚನೆ ಆಗಿತ್ತು. ಇತ್ತೀಚೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರಿಗೆ ಈ ಸಮಿತಿಯು ವರದಿ ಸಲ್ಲಿಸಿದೆ. ಆ ವರದಿಯಲ್ಲಿ ಶಾಕಿಂಗ್​ ಸಂಗತಿಗಳು ಬಯಲಾಗಿವೆ. ಚಿತ್ರರಂಗದಲ್ಲಿ ಕಾಸ್ಟಿಂಗ್​ ಕೌಚ್​, ಲೈಂಗಿಕ ಕಿರುಕುಳ ಹೇರಳವಾಗಿದೆ ಎಂಬುದು ಹೇಮಾ ಸಮಿತಿಯ ವರದಿಯಿಂದ ಬಹಿರಂಗವಾಗಿದೆ.

ಚಿತ್ರರಂಗದಲ್ಲಿನ ಸ್ತ್ರೀ-ಪೀಡಕರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಕೇರಳ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ. ಹೇಮಾ ಸಮಿತಿ ವರದಿ ಸಲ್ಲಿಸಿದ ಬಳಿಕ ಪಿಣರಾಯಿ ವಿಜಯನ್​ ಅವರು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ 7 ಜನರ ವಿಶೇಷ ತಂಡವನ್ನು ರಚಿಸಲು ನಿರ್ಧರಿಸಲಾಗಿದೆ. ನಟಿಯರು ಎದುರಿಸಿದ ಕಿರುಕುಳದ ಬಗ್ಗೆ ಈ ತಂಡ ತನಿಖೆ ನಡೆಸಲಿದೆ.

ಇದನ್ನೂ ಓದಿ: ಮಲಯಾಳಂ ಚಿತ್ರರಂಗದ ಕರಾಳ ಮುಖ ತೆರೆದಿಟ್ಟ ಹೇಮಾ ಸಮಿತಿ ವರದಿ

ಹೇಮಾ ಸಮಿತಿ ವರದಿ ಸಲ್ಲಿಕೆ ಆದ ನಂತರ ಮಲಯಾಳಂ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿ ಆಗಿದೆ. ಹಲವು ನಟಿಯರು ತಮಗೆ ಎದುರಾದ ಲೈಂಗಿಕ ಕಿರುಕುಳದ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಲನಚಿತ್ರ ಅಕಾಡೆಮಿಗೆ ನಿರ್ದೇಶಕ ರಂಜಿತ್​ ರಾಜಿನಾಮೆ ನೀಡಿದ್ದಾರೆ. ಮಲಯಾಳಂ ಸಿನಿಮಾ ಕಲಾವಿದರ ಸಂಘದಿಂದ ನಟ ಸಿದ್ಧಿಖಿ ಹೊರನಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:46 pm, Tue, 27 August 24

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us