Hema Committee Report: ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ; ಹೇಮಾ ಸಮಿತಿ ವರದಿಯಲ್ಲೇನಿದೆ?
ಕೇರಳದಲ್ಲಿ ಚಲಿಸುವ ವಾಹನದೊಳಗೆ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಹಿನ್ನೆಲೆಯಲ್ಲಿ ವುಮೆನ್ ಇನ್ ಸಿನಿಮಾ ಕಲೆಕ್ಟಿವ್ ಮನವಿಗೆ ಪ್ರತಿಕ್ರಿಯೆಯಾಗಿ ಹೇಮಾ ಸಮಿತಿಯನ್ನು ರಚಿಸಲಾಗಿದೆ. ಹೇಮಾ ಸಮಿತಿಯು ಕೆಲಸದ ಪರಿಸ್ಥಿತಿಗಳು, ಸಂಭಾವನೆ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಭಾಗವಹಿಸುವಿಕೆ ಸೇರಿದಂತೆ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಅಧ್ಯಯನ ಮಾಡುವ ಕಾರ್ಯವನ್ನು ನಿರ್ವಹಿಸಿತು.
ಕೊಚ್ಚಿ ಆಗಸ್ಟ್ 20: ಮಲಯಾಳಂ (Malayalam Movie Industry) ಚಿತ್ರರಂಗದಲ್ಲಿ ಮಹಿಳೆಯರ ಸ್ಥಿತಿಗತಿಗಳ ಕುರಿತು ನ್ಯಾಯಮೂರ್ತಿ ಹೇಮಾ ಸಮಿತಿ ವರದಿಯಲ್ಲಿ (Hema Committee Report) ಹೇಳಿರುವ ಲಿಂಗ ಸಮಾನತೆ ಮತ್ತು ಕೆಲಸದ ಸ್ಥಳದಲ್ಲಿ ಶೋಷಣೆ ವಿಷಯಗಳು ಚರ್ಚೆಯನ್ನು ಹುಟ್ಟುಹಾಕಿದೆ. ಕೇರಳದಲ್ಲಿ ಚಲಿಸುವ ವಾಹನದೊಳಗೆ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಹಿನ್ನೆಲೆಯಲ್ಲಿ ವುಮೆನ್ ಇನ್ ಸಿನಿಮಾ ಕಲೆಕ್ಟಿವ್ (WCC) ಮನವಿಗೆ ಪ್ರತಿಕ್ರಿಯೆಯಾಗಿ ಸಮಿತಿಯನ್ನು ರಚಿಸಲಾಗಿದೆ. ಸದ್ಯ ಈ ಪ್ರಕರಣದಲ್ಲಿ ನಟ ದಿಲೀಪ್ (Actor Dileep) ವಿಚಾರಣೆ ಎದುರಿಸುತ್ತಿದ್ದಾರೆ.
ಹೇಮಾ ಸಮಿತಿಯು ಕೆಲಸದ ಪರಿಸ್ಥಿತಿಗಳು, ಸಂಭಾವನೆ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಭಾಗವಹಿಸುವಿಕೆ ಸೇರಿದಂತೆ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಅಧ್ಯಯನ ಮಾಡುವ ಕಾರ್ಯವನ್ನು ನಿರ್ವಹಿಸಿತು. ಲಿಂಗ ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸುರಕ್ಷತೆ ಮತ್ತು ಭದ್ರತೆಯನ್ನು ಸುಧಾರಿಸಲು ಕ್ರಮಗಳನ್ನು ಸೂಚಿಸಲು ಸಹ ಕೇಳಲಾಯಿತು. ಇದು ಉದ್ಯಮದ ವ್ಯಕ್ತಿಗಳನ್ನು ಸಂಪರ್ಕಿಸುವುದು, ಸ್ಟೆನೋಗ್ರಾಫರ್‌ನಂತಹ ಪ್ರಮುಖ ಸಿಬ್ಬಂದಿಗಳ ಕೊರತೆ ಮತ್ತು ಸಮಿತಿಯ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವಲ್ಲಿ ಪ್ರಮುಖ ವ್ಯಕ್ತಿಗಳಿಂದ ವಿಳಂಬಗಳಂತಹ ಮಹತ್ವದ ಸವಾಲುಗಳನ್ನು ಎದುರಿಸಿತು.
ಸಮಿತಿ ಕಂಡುಹಿಡಿದ ಸಂಗತಿಗಳೇನು?
ಚಿತ್ರರಂಗದಲ್ಲಿನ ಮಹಿಳೆಯರ ಪ್ರಕಾರ, ಕಿರುಕುಳವು ಕೆಳಗಿನ ಹಂತದಿಂದ ಅಥವಾ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಂತೆಯೇ ಆರಂಭವಾಗುತ್ತದೆ. ವಿವಿಧ ಸಾಕ್ಷಿಗಳ ಹೇಳಿಕೆಗಳನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ.
ಶೌಚಾಲಯ ವ್ಯವಸ್ಥೆ ಮತ್ತು ಸುರಕ್ಷಿತವಾಗಿ ಬಟ್ಟೆ ಬದಲಾಯಿಸುವ ಕೊಠಡಿಗಳ ಕೊರತೆ: ವರದಿಯಲ್ಲಿ ನಿರ್ದಿಷ್ಟವಾಗಿ ಮಹಿಳೆಯರಿಗೆ ಸಾಕಷ್ಟು ಶೌಚಾಲಯ ಸೌಲಭ್ಯಗಳ ಕೊರತೆಯನ್ನು ಗಮನಿಸಿ ಸಾಕಷ್ಟು ಸಂಖ್ಯೆಯಲ್ಲಿ ಇ-ಶೌಚಾಲಯಗಳನ್ನು ಸ್ಥಾಪಿಸಲು ಸೂಚಿಸಲಾಗಿದೆ. ಸುರಕ್ಷಿತವಾಗಿ ಬಟ್ಟೆ ಬದಲಾಯಿಸುವ ಕೊಠಡಿಗಳ ಕೊರತೆಯಿಂದಾಗಿ ನಟಿಯರು ಸುರಕ್ಷಿತವಾಗಿಲ್ಲ ಎಂದು ಭಾವಿಸುತ್ತಾರೆ. ಪ್ರತಿ ಚಿತ್ರೀಕರಣದ ಸ್ಥಳದಲ್ಲಿ ಸುರಕ್ಷಿತ ತಾತ್ಕಾಲಿಕ ಕೊಠಡಿಗಳನ್ನು ಹೊಂದಿಸಲು ವರದಿ ಶಿಫಾರಸು ಮಾಡಿದೆ.
ಹೊಂದಾಣಿಕೆ ಮತ್ತು ರಾಜಿ: ಪ್ರೊಡಕ್ಷನ್ ಕಂಟ್ರೋಲರ್ ಅಥವಾ ಇನ್ಯಾವುದೇ ವ್ಯಕ್ತಿ ಪಾತ್ರ ಮಾಡಲು ಮಹಿಳೆ/ಹುಡುಗಿಯನ್ನು ಸಂಪರ್ಕಿಸಿದರೆ ಅಥವಾ ಮಹಿಳೆ ಅವಕಾಶ ಕೋರಿ ಸಿನಿಮಾದಲ್ಲಿ ಯಾವುದೇ ವ್ಯಕ್ತಿಯನ್ನು ಸಂಪರ್ಕಿಸಿದಾಗ, ಆಕೆಯನ್ನು ಸಿನಿಮಾದಲ್ಲಿ ತೆಗೆದುಕೊಳ್ಳಲು “ಅಡ್ಜಸ್ಟ್‌ಮೆಂಟ್” ಮತ್ತು “ರಾಜಿ” ಮಾಡಿಕೊಳ್ಳಬೇಕು ಎಂದು ಹೇಳಲಾಗುತ್ತದೆ. ಇದು ಅದಕ್ಕಿಂತ ಮೇಲೆಯೂ ಹೋಗುತ್ತದೆ. “ಕಾಂಪ್ರಮೈಸ್” ಮತ್ತು ” ಅಡ್ಜಸ್ಟ್‌ಮೆಂಟ್ ” ಎಂಬ ಎರಡು ಪದಗಳು ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರಿಗೆ ಬಹಳ ಪರಿಚಿತವಾಗಿವೆ. ಬೇಡಿಕೆಯ ಮೇರೆಗೆ ದೈಹಿಕ ಸಂಪರ್ಕ ಬೆಳೆಸಲು ಆಕೆ ಒಪ್ಪುವಂತೆ ಕೇಳಿಕೊಳ್ಳಲಾಗುತ್ತದೆ ಎಂದು ವರದಿಯು ಉಲ್ಲೇಖಿಸುತ್ತದೆ.
ಬಾಗಿಲು ತಟ್ಟಲಾಗುತ್ತದೆ: ನಟಿಯರು ಎಲ್ಲಾದರೂ ಉಳಿದುಕೊಳ್ಳಬೇಕಾಗಿ ಬರುವ ಸಂದರ್ಭದಲ್ಲಿ ಅವರು ತಮ್ಮ ಸ್ನೇಹಿತರು ಅಥವಾ ನಿಕಟ ಸಂಬಂಧಿಗಳೊಂದಿಗೆ ಹೋಗುತ್ತಾರೆ. ಏಕೆಂದರೆ ಅವರು ವಸತಿಗಳಲ್ಲಿ ಒಬ್ಬರೇ ಉಳಿಯಲು ಇಷ್ಟಪಡುವುದಿಲ್ಲ, ಅವರಿಗೆ ಸುರಕ್ಷಿತ ಭಾವ ಅಲ್ಲಿರುವುದಿಲ್ಲ. ತಾವು ಉಳಿದುಕೊಂಡಿರುವ ಹೆಚ್ಚಿನ ಹೋಟೆಲ್‌ಗಳಲ್ಲಿ, ಸಿನೆಮಾದಲ್ಲಿ ಕೆಲಸ ಮಾಡುವ ಪುರುಷರು ಬಂದು ಬಾಗಿಲು ಬಡಿಯುತ್ತಾರೆ.ಅವರು ಹೆಚ್ಚಾಗಿ ಮದ್ಯದ ಅಮಲಿನಲ್ಲಿ ಇರುತ್ತಾರೆ. ಅನೇಕ ಮಹಿಳೆಯರು ಹೀಗೆ ಬಂದು ಬಾಗಿಲು ಬಡಿಯುವುದು ಸರಿಯಲ್ಲ ಎಂದು ಹೇಳಿದ್ದರೂ, ಕೆಲವರು ಪದೇ ಪದೇ ಬಾಗಿಲು ಬಡಿಯುತ್ತಾರೆ. ಅನೇಕ ಸಂದರ್ಭಗಳಲ್ಲಿ, ಬಾಗಿಲು ಮುರಿದು ಪುರುಷರು ಬಲವಂತವಾಗಿ ಕೋಣೆಗೆ ಪ್ರವೇಶಿಸಬಹುದು ಎಂದು ಅವರು ಭಯಭೀತರಾಗಿರುತ್ತಾರೆ.
ಈ ಹಿಂದೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ನಟನೊಂದಿಗೆ ನಟಿಯೊಬ್ಬಳು ಪತ್ನಿಯಾಗಿ ನಟಿಸಬೇಕಾದ ಉದಾಹರಣೆಯನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. “ಆಕೆಯ ಮೇಲೆ ನಟ ಮಾಡಿದ ದೌರ್ಜನ್ಯದ ಸಿಟ್ಟು, ಅಸಮಾಧಾನ ಎಲ್ಲವೂ ಶೂಟಿಂಗ್ ವೇಳೆ ಆಕೆಯ ಮುಖದಲ್ಲಿ ಪ್ರತಿಫಲಿಸುತ್ತಿತ್ತು. ಹಾಗಾಗಿ ಕೇವಲ ಒಂದು ಶಾಟ್‌ಗೆ 17 ರೀಟೇಕ್‌ಗಳನ್ನು ತೆಗೆದುಕೊಳ್ಳಬೇಕಾಗಿತ್ತು. ನಿರ್ದೇಶಕರು ಈ ರೀತಿ ಮಾಡಿದ್ದಕ್ಕಾಗಿ ಆಕೆಯ ಮೇಲೆ ಸಿಟ್ಟುಗೊಂಡಿದ್ದರು ”ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ತಾರಾಪ್ರಭೆ ಜಾಸ್ತಿ ಇದ್ದಷ್ಟು ಹೆಚ್ಚು ಮುಜುಗರ: ಲೈಂಗಿಕ ದೌರ್ಜನ್ಯದ ಸಂತ್ರಸ್ತರು ತಮ್ಮ ಜೀವಕ್ಕೆ ಬೆದರಿಕೆ ಮತ್ತು ಅವರ ಕುಟುಂಬ ಸದಸ್ಯರಿಗೆ ಗಂಭೀರ ಪರಿಣಾಮಗಳ ಭಯದಿಂದ ಪೊಲೀಸರಿಗೆ ವರದಿ ಮಾಡುವುದಿಲ್ಲ ಎಂದು ವರದಿ ಉಲ್ಲೇಖಿಸಿದೆ.“ಸಾಮಾನ್ಯ ಮಹಿಳೆಯರಿಗಿಂತ ಅವರು ಹೆಚ್ಚು ಮುಜುಗರಕ್ಕೊಳಗಾಗುತ್ತಾರೆ. ಏಕೆಂದರೆ ಅವರು ಸೈಬರ್ ದಾಳಿ ಸೇರಿದಂತೆ ವಿವಿಧ ಕಿರುಕುಳಕ್ಕೆ ಒಳಗಾಗುವ ಸಾರ್ವಜನಿಕ ವ್ಯಕ್ತಿಗಳು. ಮಹಿಳೆಯರು ದೌರ್ಜನ್ಯ ನಡೆದಾಗ ಪೊಲೀಸರಿಗೆ ಯಾಕೆ ದೂರು ಕೊಟ್ಟಿಲ್ಲ ಎಂದು ಕೇಳುವ ಪುರುಷರಿಗೂ ತಮ್ಮ ಕುಟುಂಬದ ಯಾವುದೇ ಮಹಿಳೆಯ ವಿರುದ್ಧ ಲೈಂಗಿಕ ದೌರ್ಜನ್ಯ ನಡೆದರೆ, ಯಾರೂ ದೂರಿನೊಂದಿಗೆ ಪೊಲೀಸ್ ಠಾಣೆಗೆ ಹೋಗುವುದಿಲ್ಲಎಂದು ತಿಳಿಯುತ್ತದೆ ”ಎಂದು ವರದಿ ಹೇಳಿದೆ.
ಅಧಿಪತ್ಯದ ಪವರ್: ಬೆರಳೆಣಿಕೆಯಷ್ಟು ನಿರ್ಮಾಪಕರು, ನಿರ್ದೇಶಕರು, ನಟರು ಮತ್ತು ನಿರ್ಮಾಣ ನಿಯಂತ್ರಕರನ್ನು ಒಳಗೊಂಡಿರುವ ಎಲ್ಲಾ ಪ್ರಭಾವಶಾಲಿ ಸಂಬಂಧವು ಉದ್ಯಮವನ್ನು ನಿಯಂತ್ರಿಸುತ್ತದೆ ಎಂದು ವರದಿಯು ಆರೋಪಿಸಿದೆ. “ಅಧಿಕಾರದಲ್ಲಿರುವವರ ಮೇಲೆ ಯಾರಾ ದರೂ ಲೈಂಗಿಕ ಕಿರುಕುಳದ ಆರೋಪ ಮಾಡಿದರೆ, ಘಟನೆ ಸಂಭವಿಸಿದ ನಿರ್ದಿಷ್ಟ ಚಲನಚಿತ್ರದಿಂದ ಮಾತ್ರವಲ್ಲದೆ ಇತರರು ನಿರ್ಮಿಸಿದ ಎಲ್ಲಾ ಚಲನಚಿತ್ರಗಳಿಂದಲೂ ಅವರನ್ನು ಹೊರಹಾಕಬಹುದು ಎಂಬ ಭಯದಿಂದಲೇ ದೂರು ನೀಡಲು ಮಹಿಳೆಯರು ತುಂಬಾ ಹೆದರುತ್ತಾರೆ. ಹೀಗೆ ದೂರು ನೀಡಿದರೆ ಅಲ್ಲಿಗೆ ಅವರ ವೃತ್ತಿ ಜೀವನವೂ ಮುಗಿದುಹೋಗುತ್ತದೆ ಎಂದು ಯಾರೊಬ್ಬರೂ ದೂರು ನೀಡಲು ಮುಂದಾಗುವುದಿಲ್ಲ. ಪುರುಷರು ಸೇರಿದಂತೆ ಹಲವಾರು ಮಹತ್ವಾಕಾಂಕ್ಷಿ ನಟರು ಈ ಪವರ್ ಬಗ್ಗೆ ಭಯಗೊಂಡಿದ್ದಾರೆ ಎಂದು ವರದಿ ಹೇಳಿದೆ.
ಇದನ್ನೂ ಓದಿ: ಕೀರ್ತಿ ಸುರೇಶ್ ತಾಯಿ ರಾಜ್ಕುಮಾರ್ ಜೊತೆ ನಟಿಸಿದ್ದರು ಅನ್ನೋ ವಿಚಾರ ಗೊತ್ತೇ?
ಪೂರ್ತಿ ಸಂಭಾವನೆಗಾಗಿ ಅಲೆಯಬೇಕು: ಸಿನಿಮಾದಲ್ಲಿ ಮೇಲ್ದರ್ಜೆಯಲ್ಲಿರುವ ಕಲಾವಿದರ ಪ್ರಕರಣಗಳನ್ನು ಹೊರತುಪಡಿಸಿ ಲಿಖಿತ ಒಪ್ಪಂದದ ಅನುಪಸ್ಥಿತಿಯನ್ನು ಸಮಿತಿಯು ಗಮನಿಸುತ್ತದೆ. ಮಹಿಳೆಯರು ಮತ್ತು ಕಿರಿಯ ನಟರಿಗೆ ಅವರ ಸಂಪೂರ್ಣ ವೇತನವನ್ನು ನೀಡಲಾಗುವುದಿಲ್ಲ. ಲಿಖಿತ ಒಪ್ಪಂದಗಳ ಕೊರತೆಯಿಂದಾಗಿ ಅವರಿಗೆ ಸರಿಯಾಗಿ ಸಂಬಳವನ್ನೂ ನೀಡಲಾಗುತ್ತಿಲ್ಲ. ನಟಿಯೊಬ್ಬರು ತನ್ನ ನ್ಯಾಯಯುತ ವೇತನವನ್ನು ಪಡೆಯಲು ಅಲೆಯಬೇಕಾಗಿ ಬಂದ ಸಂದರ್ಭವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಸಮಸ್ಯೆಗಳನ್ನು ಪರಿಹರಿಸುವುದು, ಮಹಿಳೆಯರಿಗೆ ನ್ಯಾಯವನ್ನು ಖಾತ್ರಿಪಡಿಸುವುದು ಮಾತ್ರವಲ್ಲದೆ ಕೇರಳದಲ್ಲಿ ಹೆಚ್ಚು ಸಮಾನ ಮತ್ತು ಎಲ್ಲರನ್ನೂ ಒಳಗೊಳ್ಳುವ ಚಲನಚಿತ್ರೋದ್ಯಮವನ್ನು ರಚಿಸಬೇಕಾಗಿದೆ ಎಂದು ವರದಿ ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ