ಸಿನಿಮಾ: ಭೈರತಿ ರಣಗಲ್. ನಿರ್ಮಾಣ: ಗೀತಾ ಶಿವರಾಜ್ಕುಮಾರ್. ನಿರ್ದೇಶನ: ನರ್ತನ್. ಪಾತ್ರವರ್ಗ: ಶಿವರಾಜ್ಕುಮಾರ್, ರುಕ್ಮಿಣಿ ವಸಂತ್, ಅವಿನಾಶ್, ರಾಹುಲ್ ಬೋಸ್, ಛಾಯಾ ಸಿಂಗ್, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು. ಸ್ಟಾರ್: 3/5
2017ರಲ್ಲಿ ‘ಮಫ್ತಿ’ ಸಿನಿಮಾ ಬಿಡುಗಡೆಯಾಗಿ ಹಿಟ್ ಆಗಿತ್ತು. ಆ ಸಿನಿಮಾಗೆ ನಿರ್ದೇಶನ ಮಾಡಿದ್ದ ನರ್ತನ್ ಅವರು ಭೈರತಿ ರಣಗಲ್ ಎಂಬ ಪಾತ್ರವನ್ನು ಕಟ್ಟಿಕೊಟ್ಟ ರೀತಿ ಎಲ್ಲರಿಗೂ ಇಷ್ಟ ಆಗಿತ್ತು. ಶಿವರಾಜ್ಕುಮಾರ್ ಅವರು ಭೈರತಿ ರಣಗಲ್ ಪಾತ್ರದಲ್ಲಿ ಕಾಣಿಸಿಕೊಂಡ ರೀತಿಗೆ ಫ್ಯಾನ್ಸ್ ಫಿದಾ ಆಗಿದ್ದರು. ಹಾಗಾಗಿ ಆ ಪಾತ್ರವನ್ನೇ ಹೈಲೈಟ್ ಮಾಡಿ ‘ಭೈರತಿ ರಣಗಲ್’ ಸಿನಿಮಾ ಮಾಡಿದ್ದಾರೆ ನರ್ತನ್. ಈ ಬಾರಿ ಸಿನಿಮಾವನ್ನು ಪೂರ್ತಿಯಾಗಿ ಆ ಪಾತ್ರವೇ ಆವರಿಸಿಕೊಂಡಿದೆ. ‘ಮಫ್ತಿ’ ನೋಡಿ ಇಷ್ಟಪಟ್ಟಿದ್ದ ಪ್ರೇಕ್ಷಕರಿಗೆ ‘ಭೈರತಿ ರಣಗಲ್’ ಇಷ್ಟ ಆಗುತ್ತಾ? ಈ ವಿಮರ್ಶೆ ಓದಿ..
ಭೈರತಿ ರಣಗಲ್ ಪಾತ್ರವನ್ನು ಮಫ್ತಿ ಸಿನಿಮಾದಲ್ಲಿ ತೋರಿಸಿದ್ದ ರೀತಿ ಭಿನ್ನವಾಗಿತ್ತು. ಆರಂಭದಲ್ಲಿ ಡಾರ್ಕ್ ಶೇಡ್ ಇದ್ದ ಆ ಪಾತ್ರ ನಂತರದಲ್ಲಿ ಬೇರೆ ರೀತಿ ಕಾಣಿಸಿಕೊಂಡಿತ್ತು. ಆದರೂ ಕೂಡ ಆ ಪಾತ್ರದ ಪೂರ್ಣ ಹಿನ್ನೆಲೆ ಏನು ಎಂಬುದು ಪ್ರೇಕ್ಷಕರಿಗೆ ತಿಳಿದಿರಲಿಲ್ಲ. ಆ ಹಿನ್ನೆಲೆಯ ಬಗ್ಗೆ ಹೇಳಬಹುದಾದ ಕಥೆ ಇನ್ನೂ ಬಾಕಿ ಇದೆ ಎಂಬ ಕಾರಣದಿಂದ ‘ಭೈರತಿ ರಣಗಲ್’ ಸಿನಿಮಾ ಸಿದ್ಧವಾಗಿದೆ.
ಸಾವಿರಾರು ಜನರ ಪಾಲಿಗೆ ದೇವರಾಗಿರುವ ಭೈರತಿ ರಣಗಲ್ ಈ ಮೊದಲು ಏನಾಗಿದ್ದ? ಆತನ ಬಾಲ್ಯ ಹೇಗಿತ್ತು? ಡಾನ್ ರೀತಿ ಆತ ಬೆಳೆದು ನಿಂತಿದ್ದು ಹೇಗೆ? ಅವನ ಪರ್ಸನಲ್ ಲೈಫ್ ಯಾವ ರೀತಿ ಇತ್ತು ಎಂಬಿತ್ಯಾದಿ ವಿವರಗಳನ್ನು ‘ಭೈರತಿ ರಣಗಲ್’ ಸಿನಿಮಾದಲ್ಲಿ ಪೂರ್ತಿಯಾಗಿ ತೋರಿಸಲಾಗಿದೆ. ‘ಮಫ್ತಿ’ ಸಿನಿಮಾದ ಪ್ರೀಕ್ವೆಲ್ ಆಗಿ ಮೂಡಿಬಂದಿರುವ ‘ಭೈರತಿ ರಣಗಲ್’ ಚಿತ್ರದಲ್ಲಿ ‘ಮಫ್ತಿ’ಯ ಫ್ಲೇವರ್ ಕಾಣಿಸುವುದು ದ್ವಿತೀಯಾರ್ಧದಲ್ಲಿ ಮಾತ್ರ. ಮೊದಲಾರ್ಧದ ಬಹುಭಾಗ ಶಿವರಾಜ್ಕುಮಾರ್ ಅವರು ಲಾಯರ್ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಮಫ್ತಿ ಸಿನಿಮಾದಲ್ಲಿ ಅಂಡರ್ವರ್ಲ್ಡ್ ಕಥೆಯ ಜೊತೆಗೆ ಅಣ್ಣ-ತಂಗಿ ಸೆಂಟಿಮೆಂಟ್ ಕೂಡ ಹೈಲೈಟ್ ಆಗಿತ್ತು. ಆದರೆ ‘ಭೈರತಿ ರಣಗಲ್’ ಚಿತ್ರದಲ್ಲಿ ತಂಗಿ ಪಾತ್ರ (ಛಾಯಾ ಸಿಂಗ್) ಕಾಣಿಸಿಕೊಳ್ಳುವುದು ಕೆಲವು ದೃಶ್ಯಗಳಲ್ಲಿ ಮಾತ್ರ. ಅದೇ ರೀತಿ, ಹೀರೋಯಿನ್ (ರುಕ್ಮಿಣಿ ವಸಂತ್) ಪಾತ್ರಕ್ಕೂ ಕಡಿಮೆ ಸ್ಕ್ರೀನ್ಸ್ಪೇಸ್ ಸಿಕ್ಕಿದೆ. ಮಧು ಗುರುಸ್ವಾಮಿ ಅವರಂತಹ ನಟರಿಂದ ಪ್ರೇಕ್ಷಕರು ಹೆಚ್ಚು ನಿರೀಕ್ಷಿಸುತ್ತಾರೆ. ಆದರೆ ಅವರು ಸಹ ಹೆಚ್ಚು ಮುನ್ನೆಲೆಗೆ ಬಂದಿಲ್ಲ. ತಮಗೆ ಸಿಕ್ಕ ಪಾತ್ರವನ್ನು ಗೋಪಾಲಕೃಷ್ಣ ದೇಶಪಾಂಡೆ ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ.
ಇದನ್ನೂ ಓದಿ: Review: ಸೂಪರ್ ಹೀರೋ ಆದ ಶ್ರೀಮುರಳಿ; ‘ಬಘೀರ’ ಚಿತ್ರದಲ್ಲಿ ಬ್ಯಾಟ್ಮ್ಯಾನ್ ರೀತಿಯ ಕಥೆ
ಸಿನಿಮಾದ ಕಥೆ ತುಂಬ ನಿಧಾನವಾಗಿ ತೆರೆದುಕೊಳ್ಳುತ್ತದೆ. ಕಥೆ ಮುಂದೆ ಸಾಗುವುದು ಕೂಡ ನಿಧಾನಗತಿಯಲ್ಲಿ. ಹಾಗಾಗಿ ಕೊಂಚ ತಾಳ್ಮೆಯಿಂದ ಈ ಸಿನಿಮಾವನ್ನು ನೋಡಬೇಕು. ಒಟ್ಟಾರೆ ಕಥೆಯಲ್ಲಿ ತುಂಬ ಹೊಸತನ ಕಾಣಿಸದು. ಬಡವರ ಮೇಲೆ ಶ್ರೀಮಂತ ವಿಲನ್ ದಬ್ಬಾಳಿಕೆ ಮಾಡುತ್ತಾನೆ. ಬಡವರಿಗೆ ನ್ಯಾಯ ಕೊಡಿಸಲು ಹೀರೋ ಫೈಟ್ ಮಾಡುತ್ತಾನೆ. ಇಷ್ಟು ಸಿಂಪಲ್ ಆದಂತಹ ಕಥೆ ಈ ಸಿನಿಮಾದಲ್ಲಿ ಇದೆ. ಒಂದಷ್ಟು ಖಡಕ್ ಡೈಲಾಗ್ಗಳು, ಶಿವರಾಜ್ಕುಮಾರ್ ಅವರ ಉತ್ತಮವಾದ ನಟನೆ, ಶಬೀರ್, ರಾಹುಲ್ ಬೋಸ್ ಅವರಂತಹ ಖಳನಟರ ಕಾಂಬಿನೇಷನ್ನಿಂದಾಗಿ ಈ ಚಿತ್ರಕ್ಕೆ ಒಂದು ಫೋರ್ಸ್ ಬಂದಿದೆ. ಆ್ಯಕ್ಷನ್ ಬಯಸುವವರಿಗೆ ಈ ಸಿನಿಮಾದಲ್ಲಿ ಮನರಂಜನೆ ಇದೆ.
ಇದನ್ನೂ ಓದಿ: ಅದ್ದೂರಿಯಾಗಿ ರಿಲೀಸ್ ಆಯ್ತು ‘ಭೈರತಿ ರಣಗಲ್’; ಫಸ್ಟ್ ಹಾಫ್ನಲ್ಲಿ ಏನೆಲ್ಲ ಇದೆ?
ನರ್ತನ್ ಅವರು ಈ ಸಿನಿಮಾವನ್ನು ಅದ್ದೂರಿಯಾಗಿ ಕಟ್ಟಿಕೊಟ್ಟಿದ್ದಾರೆ. ತಾಂತ್ರಿಕವಾಗಿ ಎಲ್ಲಿಯೂ ಅವರು ರಾಜಿ ಆಗಿಲ್ಲ. ‘ಕಾವಲಿಗ..’, ‘ಭೈರತಿ ರಣಗಲ್..’ ಹಾಡುಗಳು ಹಾಗೂ ಹಿನ್ನೆಲೆ ಸಂಗೀತದ ಮೂಲಕ ರವಿ ಬಸ್ರೂರು ಅವರು ಚಿತ್ರದ ಬಲ ಹೆಚ್ಚಿಸಿದ್ದಾರೆ. ನವೀನ್ ಕುಮಾರ್ ಅವರ ಛಾಯಾಗ್ರಹಣ ಕೂಡ ಚೆನ್ನಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.