Blank Movie Review: ಬುದ್ಧಿಗೆ ಸವಾಲು ಹಾಕುವ ಬ್ಲಾಂಕ್; ಕನಸು-ವಾಸ್ತವದ ನಡುವೆ ಹೀಗೊಂದು ಪ್ರಯೋಗ
Blank Movie Review: ಡಿಫರೆಂಟ್ ಆದ ಕಥೆಯನ್ನು ‘ಬ್ಲಾಂಕ್’ ಸಿನಿಮಾ ಒಳಗೊಂಡಿದೆ. ಗೊಂದಲದ ಜೊತೆಗೆ ಥ್ರಿಲ್ ನೀಡುವ ಗುಣ ಈ ಚಿತ್ರಕ್ಕಿದೆ.

ಚಿತ್ರ: ಬ್ಲಾಂಕ್ ನಿರ್ಮಾಣ: ಎನ್.ಪಿ. ಮಂಜುನಾಥ ಪ್ರಸನ್ನ ನಿರ್ದೇಶನ: ಎಸ್. ಜಯ್ ಪಾತ್ರವರ್ಗ: ಕೃಷಿ ತಾಪಂಡ, ಪೂರ್ಣಚಂದ್ರ ಮೈಸೂರು, ರಷ್ ಮಲಿಕ್, ಸುಚೇಂದ್ರ ಪ್ರಸಾದ್, ಪ್ರಶಾಂತ್ ಸಿದ್ದಿ ಮುಂತಾದವರು. ಸ್ಟಾರ್: 3.5 / 5
ಲಕ್ಷಾಂತರ ಜನರು ಸವೆಸಿದ ಹಾದಿಯಲ್ಲಿ ಸಾಗುವುದು ಸುಲಭ. ಆದರೆ ನಾವೇ ಹೊಸ ಹಾದಿ ಮಾಡಿಕೊಂಡು ಸಾಗುವುದು ಕಷ್ಟ. ಕನ್ನಡದ ‘ಬ್ಲಾಂಕ್’ (Blank Kannada Movie) ಚಿತ್ರತಂಡಕ್ಕೆ ಈ ಮಾತು ಹೊಂದಿಕೆ ಆಗುತ್ತದೆ. ಒಬ್ಬ ಹೀರೋ, ಒಬ್ಬಳು ಹೀರೋಯಿನ್, ಇನ್ನೊಬ್ಬ ವಿಲನ್, ಒಂದಷ್ಟು ಟ್ವಿಸ್ಟ್ ಇಟ್ಟುಕೊಂಡು ಸಾದಾಸೀದಾ ಸಿನಿಮಾ ಮಾಡುವವರ ಮಧ್ಯೆ ‘ಬ್ಲಾಂಕ್’ ತಂಡ ಭಿನ್ನವಾಗಿ ಒಂದು ಪ್ರಯತ್ನ ಮಾಡಿದೆ. ಸ್ಕ್ರಿಪ್ಟ್ ಕೆಲಸದಲ್ಲಿ ಈ ಚಿತ್ರತಂಡ ಬುದ್ಧಿವಂತಿಕೆ ತೋರಿಸಿದೆ. ಒಂದೆಡೆ ವಾಸ್ತವ, ಇನ್ನೊಂದೆಡೆ ಕನಸು, ಆ ಕನಸಿನೊಳಗೆ ಮತ್ತೊಂದು ಕನಸು.. ಹೀಗೆ ಒಂದೇ ಕಥೆಯ ಹಲವು ಸ್ತರಗಳನ್ನು ನಿರ್ದೇಶಕ ಎಸ್. ಜಯ್ ಅವರು ಕಟ್ಟಿಕೊಟ್ಟಿದ್ದಾರೆ. ಈ ರೀತಿಯ ಭಿನ್ನವಾದ ಪ್ರಯತ್ನಕ್ಕೆ ಹಣ ಹಾಕಿ ಹೊಸಬರ ಬೆನ್ನು ತಟ್ಟಿದ ನಿರ್ಮಾಪಕರಿಗೂ, ಕಥೆ ಹಾಗೂ ಪರಿಕಲ್ಪನೆಯ ಮೇಲೆ ನಂಬಿಕೆ ಇಟ್ಟು ನಟಿಸಲು ಒಪ್ಪಿಕೊಂಡ ಕಲಾವಿದರಿಗೂ, ನಿರ್ದೇಶಕರ ಆಲೋಚನೆಗೆ ತಕ್ಕಂತೆ ಕೆಲಸ ಮಾಡಿದ ತಂತ್ರಜ್ಞರಿಗೂ ಚಪ್ಪಾಳೆ ಸಲ್ಲಬೇಕು. ಹಾಗಾದರೆ ಈ ಸಿನಿಮಾದಲ್ಲಿ ಮೈನಸ್ ಅಂಶಗಳೇ ಇಲ್ಲವೇ? ಖಂಡಿತಾ ಇವೆ. ಅವುಗಳ ಜೊತೆಗೆ ಮೆಚ್ಚುವಂತಹ ವಿಷಯಗಳು ಕೂಡ ಇವೆ. ಒಟ್ಟಾರೆಯಾಗಿ ‘ಬ್ಲಾಂಕ್’ ಸಿನಿಮಾ ಹೇಗಿದೆ ಎಂದು ತಿಳಿಯಲು ಈ ವಿಮರ್ಶೆ (Blank Movie Review) ಓದಿ..
ಏನು ಈ ಚಿತ್ರದ ಕಾನ್ಸೆಪ್ಟ್?
ಕನಸು ಮತ್ತು ವಾಸ್ತವ ಕಥೆ ಇಟ್ಟುಕೊಂಡು ಕನ್ನಡದಲ್ಲಿ ಈ ಹಿಂದೆ ‘ಲೂಸಿಯಾ’ ಸಿನಿಮಾ ಬಂದಿತ್ತು. ಆ ಬಳಿಕ ಅಂಥ ಪ್ರಯತ್ನಗಳಾಗಿದ್ದು ಕಮ್ಮಿ. ಹಾಗಂತ ‘ಬ್ಲಾಂಕ್’ ಚಿತ್ರ ಕೂಡ ‘ಲೂಸಿಯಾ’ ರೀತಿ ಇದೆ ಎನ್ನಲಾಗದು. ಅದೇ ರೀತಿಯ ಕಾನ್ಸೆಪ್ಟ್ ಇಟ್ಟುಕೊಂಡಿದ್ದರೂ ಕೂಡ ಬೇರೆಯದೇ ಪ್ರಯತ್ನವಾಗಿ ‘ಬ್ಲಾಂಕ್’ ಚಿತ್ರ ಗಮನ ಸೆಳೆಯುತ್ತದೆ. ಕಥೆಯ ದ್ವಿತೀಯಾರ್ಧದಲ್ಲಿ ಹಾಲಿವುಡ್ನ ‘ಇನ್ಸೆಪ್ಷನ್’ ಚಿತ್ರ ನೆನಪಾಗದೇ ಇರದು. ಹಾಗಿದ್ದರೂ ಕೂಡ ಕನ್ನಡ ಚಿತ್ರರಂಗದಲ್ಲಿ ಒಂದು ಪ್ರಯೋಗವಾಗಿ ‘ಬ್ಲಾಂಕ್’ ಸಿನಿಮಾ ಇಷ್ಟವಾಗುತ್ತದೆ.
ಇದು ಹೇಳಲಾಗದ ಕಥೆ
ಒಂದೇ ವಾಕ್ಯದಲ್ಲಿ ಈ ಸಿನಿಮಾದ ಕಥೆ ಏನು ಅಂತ ಹೇಳಲು ಸಾಧ್ಯವಿಲ್ಲ. ಒಂದೇ ಕಥೆಯೊಳಗೆ ಹಲವು ಕಥೆಗಳಿವೆ. ಪ್ರತಿ ಪಾತ್ರಕ್ಕೂ ಹಲವು ಶೇಡ್ಗಳಿವೆ. ಯಾವುದು ನಿಜ? ಯಾವುದು ನಿಜವಲ್ಲ ಎಂಬುದನ್ನು ತಿಳಿಯುವುದರೊಳಗೆ ಇನ್ನೊಂದು ವರ್ಷನ್ ಕಥೆ ಕಣ್ಣೆದುರು ಬಂದು ಬಿಡುತ್ತದೆ. ಇದರಿಂದ ಸ್ವಲ್ಪ ಗೊಂದಲು ಉಂಟಾದರೂ ನಂತರ ಥ್ರಿಲ್ ಆಗಿ ಸಾಗುತ್ತದೆ ಈ ಚಿತ್ರದ ನಿರೂಪಣೆ.
ತಾಳ್ಮೆ ಇದ್ದರೆ ಮಾತ್ರ ಥ್ರಿಲ್
‘ಬ್ಲಾಂಕ್’ ಒಂದು ಮಸಾಲಾ ಸಿನಿಮಾ ಅಲ್ಲ. ಈ ಚಿತ್ರದಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಬಹಳ ತಾಳ್ಮೆ ಬೇಕು. ಒಂದರ ಹಿಂದೆ ಇನ್ನೊಂದು, ಅದರ ಹಿಂದೆ ಮತ್ತೊಂದು ಎಂಬಂತೆ ಹಲವು ಕಥೆಗಳು ತೆರೆದುಕೊಳ್ಳುವುದರಿಂದ ಪ್ರೇಕ್ಷಕರು ಬಹಳ ಗಂಭೀರವಾಗಿ ಸಿನಿಮಾ ನೋಡಬೇಕು. ನಾಲ್ಕು-ಐದು ನಿಮಿಷ ಮೊಬೈಲ್ ನೋಡುತ್ತ ಕಾಲ ಕಳೆದರೂ ಕೂಡ ಕಥೆ ಎತ್ತ ಸಾಗಿತು ಎಂಬುದೇ ತಿಳಿಯುವುದಿಲ್ಲ. ಅಷ್ಟು ಎಚ್ಚರದಿಂದ ಸಿನಿಮಾ ನೋಡುವವರಿಗೆ ಈ ಚಿತ್ರ ಥ್ರಿಲ್ ನೀಡುತ್ತದೆ.
ಮಾಮೂಲಿ ಮನರಂಜನೆ ನಿರೀಕ್ಷಿಸುವಂತಿಲ್ಲ!
ಒಂದು ಸಿನಿಮಾ ಎಂದರೆ ಅದರಲ್ಲಿ ಕಾಮಿಡಿ, ಸೆಂಟಿಮೆಂಟ್, ಮನಮುಟ್ಟುವ ಲವ್, ಭರ್ಜರಿ ಫೈಟ್ ಇತ್ಯಾದಿ ಅಂಶಗಳನ್ನು ಅಗತ್ಯವಾಗಿ ಬಯಸುವ ಒಂದು ಪ್ರೇಕ್ಷಕ ವರ್ಗವಿದೆ. ಅಂಥವರಿಗೆ ‘ಬ್ಲಾಂಕ್’ ಸಿನಿಮಾ ರುಚಿಸುವುದು ಕಷ್ಟ. ಈ ವಿಚಾರದ ಬಗ್ಗೆ ನಿರ್ದೇಶಕರು ಗಮನ ಹರಿಸಬಹುದಿತ್ತು. ಗಂಭೀರವಾದ ಕಥೆಯನ್ನೂ ಕೊಂಚ ಹಾಸ್ಯ ಮಿಶ್ರಿತವಾಗಿ ಹೇಳಲು ಪ್ರಯತ್ನಿಸಿದ್ದರೆ ಈ ಸಿನಿಮಾದ ಫಸ್ಟ್ ಹಾಫ್ಗೆ ಮೆರುಗು ಹೆಚ್ಚುತ್ತಿತ್ತು.
ಮಧ್ಯಂತರದ ಬಳಿಕ ಎದುರಾಗುವ ಪ್ರಪಂಚವೇ ಬೇರೆ:
‘ಬ್ಲಾಂಕ್’ ಚಿತ್ರದ ಫಸ್ಟ್ ಹಾಫ್ ಮತ್ತು ಸೆಕೆಂಡ್ ಹಾಫ್ ನಡುವೆ ದೊಡ್ಡ ವ್ಯತ್ಯಾಸವಿದೆ. ಮೊದಲಾರ್ಧದ ಕಥೆ ತುಂಬ ಸಿಂಪಲ್ ಎನಿಸುತ್ತದೆ. ಈ ಕಥೆಯಲ್ಲಿ ತುಂಬ ಭಿನ್ನವಾಗಿ ಏನೂ ನಡೆಯುತ್ತಲೇ ಇಲ್ಲ ಎನಿಸುತ್ತದೆ. ನಿರೂಪಣೆ ಕೂಡ ನಿಧಾನಗತಿಯಲ್ಲಿದೆ. ಆದರೆ ಮಧ್ಯಂತರದ ನಂತರ ಕಥೆಯಲ್ಲಿ ಭಾರೀ ಬದಲಾವಣೆಗಳು ಕಾಣುತ್ತದೆ. ಹಾಗಾಗಿ ತುಂಬ ತಾಳ್ಮೆವಹಿಸಿ ಫಸ್ಟ್ ಹಾಫ್ ನೋಡುವವರಿಗೆ ಸೆಕೆಂಡ್ ಹಾಫ್ನ ವೇಗದ ನಿರೂಪಣೆ ಖುಷಿ ಕೊಡುತ್ತದೆ.
ನಿರ್ದೇಶಕರ ಕನಸಿಗೆ ಸಾಥ್ ನೀಡಿದ ಕಲಾವಿದರು:
ಇಂಥ ಒಂದು ಪ್ರಯೋಗಾತ್ಮಕ ಸಿನಿಮಾದಲ್ಲಿ ನಟಿಸಲು ಹಿಂದೇಟು ಹಾಕುವವರೇ ಹೆಚ್ಚು. ಸೋಲು-ಗೆಲುವಿನ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳಲೇ ಬೇಕು. ಈಗಾಗಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಕೃಷಿ ತಾಪಂಡ, ಪೂರ್ಣಚಂದ್ರ ಮೈಸೂರು ಮುಂತಾದವರು ಆ ರಿಸ್ಕ್ ತೆಗೆದುಕೊಂಡಿದ್ದಾರೆ. ಅವರ ಜೊತೆಗೆ ಹೊಸ ಕಲಾವಿದರು ಕೂಡ ಕೈ ಜೋಡಿಸಿದ್ದಾರೆ. ಇಲ್ಲಿನ ಪ್ರತಿ ಪಾತ್ರಕ್ಕೂ ಎರಡು-ಮೂರು ಶೇಡ್ ಇದೆ. ಅವುಗಳಿಗೆ ಜೀವ ತುಂಬಲು ಕೃಷಿ ತಾಪಂಡ, ಪೂರ್ಣಚಂದ್ರ, ಭರತ್ ಹಾಸನ್, ರಷ್ ಮಲಿಕ್, ಪ್ರಶಾಂತ್ ಸಿದ್ದಿ ಪ್ರಯತ್ನಿಸಿದ್ದಾರೆ.
‘ಬ್ಲಾಂಕ್’ ಚಿತ್ರದ ಕಥೆಯಲ್ಲಿ ಮಾದಕ ವಸ್ತು ಸೇವನೆಯ ದೃಶ್ಯಗಳು ಹಲವು ಬಾರಿ ಬರುತ್ತವೆ. ಆ ಕಾರಣದಿಂದಲೂ ಕೂಡ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ‘ಎ’ ಪ್ರಮಾಣಪತ್ರ ಸಿಕ್ಕಿದೆ. ಹಾಗಾಗಿ ಎಲ್ಲ ವರ್ಗದ ಪ್ರೇಕ್ಷಕರಿಗೂ ಈ ಚಿತ್ರ ಅಲ್ಲ. ಕಥೆಯ ತಿರುವುಗಳಿಗೆ ಡ್ರಗ್ಸ್ ಕೂಡ ಕಾರಣ ಆಗಿರುವುದರಿಂದ ಅದರ ಸೇವನೆಯ ದೃಶ್ಯಗಳು ಮರುಕಳಿಸುವುದು ಸಹಜ. ಆದರೆ ಮಾದಕ ವಸ್ತು ಸೇವನೆಯು ಶಿಕ್ಷಾರ್ಹ ಅಪರಾಧ ಎಂಬುದನ್ನು ಇನ್ನಷ್ಟು ಒತ್ತಿ ಹೇಳುವ ಮೂಲಕ ನಿರ್ದೇಶಕರು ಸಾಮಾಜಿಕ ಕಳಕಳಿ ತೋರಬಹುದಿತ್ತು ಎಂದು ಎನಿಸದೇ ಇರದು.
ಗುಣಮಟ್ಟದ ಮೇಕಿಂಗ್:
ಮೇಕಿಂಗ್ ದೃಷ್ಟಿಯಿಂದ ‘ಬ್ಲಾಂಕ್’ ಸಿನಿಮಾ ಮೆಚ್ಚುಗೆ ಪಡೆಯುತ್ತದೆ. ಸಂಗೀತ ನಿರ್ದೇಶಕ ಶ್ರೀ ಸಾಸ್ತ ಅವರು ಹಾಡುಗಳಿಗಿಂತಲೂ ಹಿನ್ನೆಲೆ ಸಂಗೀತದಲ್ಲಿ ಹೆಚ್ಚು ಗಮನ ಸೆಳೆಯುತ್ತಾರೆ. ಛಾಯಾಗ್ರಾಹಕ ಜೆ.ಪಿ. ಮಾನ್ ಅವರ ಕೆಲಸ ಮೆಚ್ಚುವಂತಿದೆ. ಪ್ರೇಕ್ಷಕರ ತಲೆಗೆ ಹುಳ ಬಿಡುವಂತಹ ಚಿತ್ರಕಥೆ ಇರುವ ಈ ಸಿನಿಮಾವನ್ನು ಸ್ವತಃ ನಿರ್ದೇಶಕ ಎಸ್. ಜಯ್ ಅವರೇ ಸಂಕಲನ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ:
Old Monk Review: ಕಾಮಿಡಿ ಪ್ರಿಯರಿಗೆ ನಗುವಿನ ಕಿಕ್ ನೀಡುವ ‘ಓಲ್ಡ್ ಮಾಂಕ್’
Ek Love Ya Movie Review: ಅದ್ದೂರಿ ‘ಪ್ರೇಮ್’ ಕಹಾನಿಯ ಪ್ಲಸ್ ಏನು? ಮೈನಸ್ ಏನು?




