Old Monk Review: ಕಾಮಿಡಿ ಪ್ರಿಯರಿಗೆ ನಗುವಿನ ಕಿಕ್ ನೀಡುವ ‘ಓಲ್ಡ್ ಮಾಂಕ್’
Old Monk Kannada Movie Review: ‘ಓಲ್ಡ್ ಮಾಂಕ್’ ಚಿತ್ರದ ಶಕ್ತಿ ಇರುವುದೇ ಕಾಮಿಡಿಯಲ್ಲಿ. ಈ ವಿಚಾರದಲ್ಲಿ ಹೀರೋ/ನಿರ್ದೇಶಕ ಶ್ರೀನಿಗೆ ನಟ ಸುಜಯ್ ಶಾಸ್ತ್ರಿ ಹಾಗೂ ಸಂಭಾಷಣಕಾರ ವಿ.ಎಂ. ಪ್ರಸನ್ನ ಅತ್ಯುತ್ತಮವಾಗಿ ಸಾಥ್ ನೀಡಿದ್ದಾರೆ.
ಚಿತ್ರ: ಓಲ್ಡ್ ಮಾಂಕ್ ನಿರ್ದೇಶನ: ಶ್ರೀನಿ ನಿರ್ಮಾಣ: ಸಿದ್ಧಿ ಎಂಟರ್ಟೇನ್ಮೆಂಟ್ಸ್, ಎಸ್ ಒರಿಜಿನಲ್ಸ್ ಪಾತ್ರವರ್ಗ: ಶ್ರೀನಿ, ಅದಿತಿ ಪ್ರಭುದೇವ, ಸುಜಯ್ ಶಾಸ್ತ್ರಿ, ಎಸ್. ನಾರಾಯಣ್, ಸುದೇವ್ ನಾಯರ್, ಸಿಹಿ-ಕಹಿ ಚಂದ್ರು ಮುಂತಾದವರು. ಸ್ಟಾರ್: 3.5 / 5
ನಟನೆ ಮತ್ತು ನಿರ್ದೇಶನ ಎರಡಲ್ಲೂ ಪಳಗಿರುವವರು ಶ್ರೀನಿ (Srini) ಅವರು ‘ಓಲ್ಡ್ ಮಾಂಕ್’ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ತಮ್ಮ ಜೊತೆಗೆ ಅನೇಕ ಹಿರಿ-ಕಿರಿಯ ಕಲಾವಿದರನ್ನು ಸೇರಿಸಿಕೊಂಡು ಅವರು ಈ ಸಿನಿಮಾವನ್ನು ಪ್ರೇಕ್ಷಕರ ಎದುರು ತಂದಿದ್ದಾರೆ. ಅವರಿಗೆ ಜೋಡಿಯಾಗಿ ಅದಿತಿ ಪ್ರಭುದೇವ (Aditi Prabhudeva) ಸಾಥ್ ನೀಡಿದ್ದಾರೆ. ಹಲವು ತಿಂಗಳ ಹಿಂದೆ ‘ಓಲ್ಡ್ ಮಾಂಕ್’ ಟ್ರೇಲರ್ ಬಿಡುಗಡೆ ಆಗಿತ್ತು. ಈ ಚಿತ್ರದಲ್ಲಿ ಭರಪೂರ ಮನರಂಜನೆ ಇರಲಿದೆ ಎಂಬುದಕ್ಕೆ ಆ ಟ್ರೇಲರ್ ಸುಳಿವು ನೀಡಿತ್ತು. ಆ ಭರವಸೆ ಸುಳ್ಳಾಗಿಲ್ಲ. ಫೆ.25ರಂದು ಬಿಡುಗಡೆ ಆಗಿರುವ ‘ಓಲ್ಡ್ ಮಾಂಕ್’ (Old Monk Movie) ಸಿನಿಮಾದಲ್ಲಿ ಫ್ಯಾಮಿಲಿ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಅನೇಕ ಅಂಶಗಳಿವೆ. ನಕ್ಕು ಹಗುರಾಗಲು ಹಲವು ಹಾಸ್ಯದ ಸನ್ನಿವೇಶಗಳಿವೆ. ತಂದೆ-ತಾಯಿ ಬಗ್ಗೆ ಇನ್ನಷ್ಟು ಗೌರವ ಮೂಡಿಸುವಂತಹ ಸೆಂಟಿಮೆಂಟಲ್ ದೃಶ್ಯಗಳಿವೆ. ಒಟ್ಟಾರೆಯಾಗಿ ‘ಓಲ್ಡ್ ಮಾಂಕ್’ ಸಿನಿಮಾ ಹೇಗಿದೆ ಅಂತ ತಿಳಿಯಲು ಈ ವಿಮರ್ಶೆ ಓದಿ..
ಲವ್ ಮಾಡಿ ಮದುವೆ ಆಗಬೇಕು ಎಂಬುದು ಅಪ್ಪಣ್ಣನ ಅಲಿಯಾಸ್ ಅಪ್ಪು (ಶ್ರೀನಿ) ಆಸೆ. ಆದರೆ ಅವನ ಆಸೆಗೆ ಅಪ್ಪನೇ (ಎಸ್. ನಾರಾಯಣ್) ಅಡ್ಡಗಾಲು ಹಾಕ್ತಾರೆ. ಎಷ್ಟೇ ಕಷ್ಟಪಟ್ಟರೂ ಅಪ್ಪಣ್ಣನಿಗೆ ಹುಡುಗಿ ಸಿಗದೇ ಇರಲಿ ಎಂಬ ದೇವರ ಶಾಪ ಕೂಡ ಕಾರಣ ಆಗಿದೆ. ಇಂಥ ಹುಡುಗನ ಬಾಳಿನಲ್ಲಿ ಸುಂದರಿ ಅಭಿಜ್ಞಾ (ಅದಿತಿ ಪ್ರಭುದೇವ) ಎಂಟ್ರಿ ನೀಡುತ್ತಾಳೆ. ಅವಳನ್ನು ಪಡೆಯಬೇಕು ಎಂದರೆ ಅಪ್ಪಣ್ಣ ಎಲೆಕ್ಷನ್ ಗೆದ್ದು ಎಂಎಲ್ಎ ಆಗಬೇಕು ಎಂಬುದು ಹುಡುಗಿ ಅಪ್ಪನ ಕಂಡೀಷನ್. ದೇವರ ಶಾಪ, ಅಪ್ಪನ ಶಪಥ ಮತ್ತು ಭಾವಿ ಮಾವನ ಕಂಡೀಷನ್ ಮೀರಿ ಅಪ್ಪಣ್ಣ ತನ್ನ ಪ್ರೀತಿ ಪಡೆಯುತ್ತಾನೋ ಇಲ್ಲವೋ ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.
‘ಓಲ್ಡ್ ಮಾಂಕ್’ ಚಿತ್ರದ ಶಕ್ತಿ ಇರುವುದೇ ಕಾಮಿಡಿಯಲ್ಲಿ. ಪ್ರಸನ್ನ ವಿ.ಎಂ. ಬರೆದಿರುವ ಕಚಗುಳಿ ಇಡುವಂತಹ ಸಂಭಾಷಣೆಗಳು ಈ ಸಿನಿಮಾಗೆ ಪ್ಲಸ್ ಪಾಯಿಂಟ್. ನಟನೆ ಮತ್ತು ಡೈಲಾಗ್ ಡೆಲಿವರಿ ಎರಡೂ ವಿಚಾರದಲ್ಲಿ ಹೀರೋ ಶ್ರೀನಿಗೆ ಅತ್ಯುತ್ತಮವಾಗಿ ಸಾಥ್ ನೀಡಿರುವುದು ನಟ ಸುಜಯ್ ಶಾಸ್ತ್ರಿ. ಇಡೀ ಸಿನಿಮಾದಲ್ಲಿ ಇವರಿಬ್ಬರ ಕಾಂಬಿನೇಷನ್ ರಾರಾಜಿಸಿದೆ. ಹೀರೋ ಮತ್ತು ಹೀರೋಯಿನ್ ಜೋಡಿಗಿಂತಲೂ ಸುಜಯ್ ಶಾಸ್ತ್ರಿ ಮತ್ತು ಶ್ರೀನಿ ನಡುವಿನ ದೃಶ್ಯಗಳು ಹೆಚ್ಚು ಹೈಲೈಟ್ ಆಗಿವೆ ಎಂದರೆ ತಪ್ಪಿಲ್ಲ.
ಓಲ್ಡ್ ಈಸ್ ಗೋಲ್ಡ್ ಎಂಬ ಸೂತ್ರವನ್ನು ಶ್ರೀನಿ ಅವರು ಚೆನ್ನಾಗಿ ಅಳವಡಿಸಿಕೊಂಡಿದ್ದಾರೆ. ಟೈಟಲ್ ಕಾರ್ಡ್ನಿಂದ ‘ಶುಭಂ’ವರೆಗೆ ಅದನ್ನು ಅವರು ಪಾಲಿಸಿದ್ದಾರೆ. ಈ ಸಿನಿಮಾದ ಕಥೆ ಸಿಂಪಲ್ ಆಗಿದೆ. ಅದನ್ನು ನಿರೂಪಿಸಿರುವ ಶೈಲಿ ಕೂಡ ಸಾಂಪ್ರದಾಯಿಕವಾಗಿಯೇ ಇದೆ. ಟಿಪಿಕಲ್ ಇಂಡಿಯನ್ ಸಿನಿಮಾಗಳಲ್ಲಿ ಪ್ರೇಕ್ಷಕರು ಬಯಸುವ ಮನರಂಜನೆಯನ್ನು ನೀಡಲು ಶ್ರೀನಿ ಪ್ರಯತ್ನಿಸಿದ್ದಾರೆ. ಹೀರೋ ಮತ್ತು ವಿಲನ್ ನಡುವಿನ ಜಿದ್ದಾಜಿದ್ದಿ ಒಂದು ರೀತಿಯ ಹಾವು-ಏಣಿ ಆಟದಂತಿದೆ. ಟಾಮ್ ಆ್ಯಂಡ್ ಜೆರ್ರಿ ಫೈಟ್ ರೀತಿಯೇ ಹಲವು ದೃಶ್ಯಗಳು ಪ್ರೇಕ್ಷಕರನ್ನು ನಗಿಸುತ್ತವೆ.
ಪ್ರೇಕ್ಷಕರನ್ನು ಭರ್ಜರಿಯಾಗಿ ನಗಿಸಬೇಕು ಎಂಬುದೇ ‘ಓಲ್ಡ್ ಮಾಂಕ್’ ಚಿತ್ರದ ಪ್ರಮುಖ ಉದ್ದೇಶ. ಈ ಉದ್ದೇಶ ಈಡೇರಿಸಲು ಶ್ರೀನಿ ಅವರು ಹಲವು ಕಾಮಿಡಿ ದೃಶ್ಯಗಳನ್ನು ಹೆಣೆದಿದ್ದಾರೆ. ಅವುಗಳಲ್ಲಿ ಲಾಜಿಕ್ ಹುಡುಕಿದರೆ ಮ್ಯಾಜಿಕ್ ಮಾಯವಾಗಬಹುದು. ಆ ಕ್ಷಣಕ್ಕೆ ಪ್ರೇಕ್ಷಕರನ್ನು ನಕ್ಕು ನಲಿಯುವಂತಹ ಹಲವು ಸನ್ನಿವೇಶಗಳಿಂದ ‘ಓಲ್ಡ್ ಮಾಂಕ್’ ಚಿತ್ರದ ಮೈಲೇಜ್ ಹೆಚ್ಚಿದೆ.
ಈ ಸಿನಿಮಾದಲ್ಲಿ ಅನುಭವಿ ಕಲಾವಿದರ ಕೊಡುಗೆ ದೊಡ್ಡದಿದೆ. ಲವ್ ಮ್ಯಾರೇಜ್ ವಿರೋಧಿಸುವ ಅಪ್ಪನಾಗಿ ಎಸ್. ನಾರಾಯಣ್ ಅವರು ಉತ್ತಮ ಅಭಿನಯ ನೀಡಿದ್ದಾರೆ. ಕಾಮಿಡಿ ದೃಶ್ಯಗಳಲ್ಲಿ ಅವರು ಹೆಚ್ಚು ಅಂಕ ಗಿಟ್ಟಿಸುತ್ತಾರೆ. ವಿಲನ್ ಪಾತ್ರ ಮಾಡಿರುವ ಸುದೇವ್ ನಾಯರ್ ನಟನೆ ಕೂಡ ಗಮನ ಸೆಳೆಯುತ್ತದೆ. ಸಿಹಿ-ಕಹಿ ಚಂದ್ರು ಅವರು ಎಂದಿನಂತೆ ಕಾಮಿಡಿ ಕಚಗುಳಿ ಇಡುತ್ತಾರೆ. ನಾಯಕಿ ಅದಿತಿ ಪ್ರಭುದೇವ ಅವರಿಗೆ ಹೆಚ್ಚು ಸ್ಕ್ರೀನ್ ಸ್ಪೇಸ್ ಇಲ್ಲದಿದ್ದರೂ ಕೂಡ ಸಿಕ್ಕ ಅವಕಾಶದಲ್ಲಿ ಅವರು ಮಿಂಚಿದ್ದಾರೆ. ಹೀರೋ ತಾಯಿ ಪಾತ್ರದಲ್ಲಿ ಅರುಣಾ ಬಾಲರಾಜ್ ಇಷ್ಟವಾಗುತ್ತಾರೆ. ಕೃಷ್ಣನಾಗಿ ಸುನೀಲ್ ರಾವ್ ಹಾಗೂ ಕಾಲನಾಗಿ ಪಿ.ಡಿ. ಸತೀಶ್ಚಂದ್ರ ನಟಿಸಿದ್ದಾರೆ.
ಕಥೆಯಲ್ಲಿನ ಲಾಜಿಕಲ್ ಅಂಶಗಳ ಬಗ್ಗೆ ನಿರ್ದೇಶಕರು ಇನ್ನಷ್ಟು ಗಮನ ವಹಿಸಿದ್ದರೆ ಚೆನ್ನಾಗಿರುತ್ತಿತ್ತು. ಚಿತ್ರದ ಮೊದಲಾರ್ಧಕ್ಕೆ ಹೋಲಿಸಿದರೆ ದ್ವಿತೀಯಾರ್ಧದಲ್ಲಿ ನಿರೂಪಣೆಯ ವೇಗ ಕೊಂಚ ತಗ್ಗಿದೆ. ಉಳಿದಂತೆ ಒಂದು ಉತ್ತಮ ಸಿನಿಮಾವಾಗಿ ‘ಓಲ್ಡ್ ಮಾಂಕ್’ ಮೂಡಿಬಂದಿದೆ. ತಾಂತ್ರಿಕವಾಗಿಯೂ ಈ ಚಿತ್ರ ಗುಣಮಟ್ಟ ಕಾಯ್ದುಕೊಂಡಿದೆ. ಭರತ್ ಪರಶುರಾಮ್ ಛಾಯಾಗ್ರಹಣ, ಸೌರಭ್-ವೈಭವ್ ಸಂಗೀತ ನಿರ್ದೇಶನ, ದೀಪು ಎಸ್. ಕುಮಾರ್ ಅವರ ಸಂಕಲನದಿಂದಾಗಿ ಸಿನಿಮಾದ ಮೆರುಗು ಹೆಚ್ಚಿದೆ. ಫ್ಯಾಮಿಲಿ ಪ್ರೇಕ್ಷಕರನ್ನು ಮಾತ್ರವಲ್ಲದೇ ಕ್ಲಾಸ್ ಸಿನಿಮಾವನ್ನು ಬಯಸುವ ಎಲ್ಲರಿಗೂ ‘ಓಲ್ಡ್ ಮಾಂಕ್’ ಇಷ್ಟ ಆಗಲಿದೆ.
ಇದನ್ನೂ ಓದಿ:
Ek Love Ya Movie Review: ಅದ್ದೂರಿ ‘ಪ್ರೇಮ್’ ಕಹಾನಿಯ ಪ್ಲಸ್ ಏನು? ಮೈನಸ್ ಏನು?
‘ಇದು ಬರೀ ಸಿನಿಮಾ ಅಲ್ಲ, ಮ್ಯಾಜಿಕ್’: ‘ಗಂಗೂಬಾಯಿ ಕಾಠಿಯಾವಾಡಿ’ ನೋಡಿದ ಸೆಲೆಬ್ರಿಟಿಗಳ ವಿಮರ್ಶೆ
Published On - 1:36 pm, Fri, 25 February 22