ಶ್ರೀಮಂತರ ಮಕ್ಕಳ ಕಾಟ, ಚಂದನ್​ ಶೆಟ್ಟಿ ಪಾಠ: ಇದು ಟಾಸ್ಕ್​ಗಳ ಸುಳಿಗೆ ಸಿಕ್ಕ ಸಿನಿಮಾ

|

Updated on: Jul 19, 2024 | 10:53 PM

‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾ ಮೂಲಕ ಸಂಪೂರ್ಣ ಹೊಸ ತಲೆಮಾರಿನ ಪ್ರೇಕ್ಷಕರನ್ನು ಸೆಳೆದುಕೊಳ್ಳಲು ನಿರ್ದೇಶಕ ಅರುಣ್​ ಅಮುಕ್ತ ಅವರು ಪ್ರಯತ್ನಿಸಿದ್ದಾರೆ. ಒಂದು ರಿಯಾಲಿಟಿ ಶೋ ರೀತಿ ಟಾಸ್ಕ್​ಗಳನ್ನು ಹೆಣೆದು, ಹದಿಹರೆಯದ ಹುಡುಗ-ಹುಡುಗಿಯರಿಗೆ ಪಾಠ ಕಲಿಸುವ ಕಥೆ ಈ ಸಿನಿಮಾದಲ್ಲಿದೆ. ಇಲ್ಲಿದೆ ಸಿನಿಮಾದ ವಿಮರ್ಶೆ..

ಶ್ರೀಮಂತರ ಮಕ್ಕಳ ಕಾಟ, ಚಂದನ್​ ಶೆಟ್ಟಿ ಪಾಠ: ಇದು ಟಾಸ್ಕ್​ಗಳ ಸುಳಿಗೆ ಸಿಕ್ಕ ಸಿನಿಮಾ
‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾ ಪೋಸ್ಟರ್​
Follow us on

ಸಿನಿಮಾ: ವಿದ್ಯಾರ್ಥಿ ವಿದ್ಯಾರ್ಥಿನಿಯರೇ. ನಿರ್ಮಾಣ: ಸುಬ್ರಹ್ಮಣ್ಯ ಕುಕ್ಕೆ, ಶಿವಲಿಂಗೇಗೌಡ ಎ.ಸಿ. ನಿರ್ದೇಶನ: ಅರುಣ್ ಅಮುಕ್ತ. ಪಾತ್ರವರ್ಗ: ಚಂದನ್​ ಶೆಟ್ಟಿ, ಮನೋಜ್​ ವಿವಾನ್​, ಮನಸ್ವಿ, ಭಾವನಾ ಅಪ್ಪು, ಅಮರ್​, ಭವ್ಯಾ, ರಘು ರಾಮನಕೊಪ್ಪ, ಸುನಿಲ್​ ಪುರಾಣಿಕ್​, ಪ್ರಶಾಂತ್​ ಸಂಬರ್ಗಿ ಮುಂತಾದವರು. ಸ್ಟಾರ್​: 2.5

ಚಂದನ್​ ಶೆಟ್ಟಿ ನಟನಾಗಿ ಬಡ್ತಿ ಪಡೆದಿದ್ದಾರೆ. ಇಷ್ಟು ದಿನ ಹಾಡುಗಳ ಮೂಲಕ ರಂಜಿಸಿದ್ದ ಅವರು ಈಗ ಅಭಿನಯದ ಮೂಲಕ ಜನರಿಗೆ ಇನ್ನಷ್ಟು ಹತ್ತಿರ ಆಗುವ ಪ್ರಯತ್ನ ಮಾಡಿದ್ದಾರೆ. ಅವರು ನಟಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾಗೆ ಅರುಣ್​ ಅಮುಕ್ತ ಅವರು ನಿರ್ದೇಶನ ಮಾಡಿದ್ದಾರೆ. ಬಹುತೇಕ ಹೊಸ ಕಲಾವಿದರೇ ಮುಖ್ಯ ಭೂಮಿಕೆಯಲ್ಲಿ ಇರುವ ಈ ಸಿನಿಮಾದಲ್ಲಿ ಸಂಪೂರ್ಣ ಯೂತ್​ಫುಲ್​ ಕಾಂಟೆಂಟ್​ ಇದೆ. ಶಾಲೆಯಲ್ಲಿ ನಡೆಯುವ ತರಲೆ, ಕೀಟಲೆ, ಅತಿಯಾದ ಹುಡುಗಾಟಿಕೆಯನ್ನೇ ಹೆಚ್ಚಾಗಿ ಈ ಚಿತ್ರದಲ್ಲಿ ತೋರಿಸಲಾಗಿದೆ. ಜೊತೆಗೆ ಒಂದು ಮೆಸೇಜ್​ ಕೂಡ ನೀಡಲಾಗಿದೆ. ಒಟ್ಟಾರೆ ಸಿನಿಮಾ ಹೇಗಿದೆ ಎಂಬುದಕ್ಕೆ ಉತ್ತರ ಈ ವಿಮರ್ಶೆಯಲ್ಲಿದೆ.

‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದಲ್ಲಿ ಹೊಸ ತಲೆಮಾರಿನ ಪ್ರೇಕ್ಷಕರನ್ನು ಸೆಳೆಯಲು ಡೈರೆಕ್ಟರ್​ ಅರುಣ್​ ಅಮುಕ್ತ ಪ್ರಯತ್ನ ಮಾಡಿದ್ದಾರೆ. ಹಾಗಾಗಿ ಅವರು ಹದಿಹರೆಯದ ಹುಡುಗ-ಹುಡುಗಿಯರ ಕಥೆಯಲ್ಲೇ ಇಲ್ಲಿ ಹೈಲೈಟ್​ ಮಾಡಿದ್ದಾರೆ. ಶ್ರೀಮಂತರ ಮಕ್ಕಳೇ ತುಂಬಿರುವ ಶಾಲೆಯೊಂದರಲ್ಲಿ ಏನೆಲ್ಲ ನಡೆಯಬಹುದು ಎಂಬುದನ್ನು ಅವರು ಈ ಸಿನಿಮಾದಲ್ಲಿ ತೋರಿಸಿದ್ದಾರೆ. ಹೈಸ್ಕೂಲ್​ನಲ್ಲಿ ಇರುವಾಗಲೇ ಲಂಗು-ಲಗಾಮು ಇಲ್ಲದೇ ಧೂಮಪಾನ, ಮದ್ಯಪಾನಕ್ಕೆ ದಾಸರಾದ ಯುವಕ-ಯುವತಿಯರೇ ಈ ಚಿತ್ರದ ಕೇಂದ್ರ ಪಾತ್ರಗಳು! ಆದರೆ ಕೊನೆಯಲ್ಲಿ ಬೇರೆಯದೇ ಮೆಸೇಜ್​ ಇದೆ.

ರ‍್ಯಾಗಿಂಗ್​ ನಿಜಕ್ಕೂ ಒಂದು ಪಿಡುಗು. ಅದನ್ನು ಖಂಡಿಸುವ ಕೆಲಸ ಈ ಸಿನಿಮಾದಿಂದ ಆಗಿದೆ. ಸ್ಮಾರ್ಟ್​ಫೋನ್​ಗಳಿಗೆ ಅಂಟಿಕೊಂಡ ಹದಿಹರೆಯದ ಹುಡುಗ-ಹುಡುಗಿಯರಿಗೆ ಈ ಸಿನಿಮಾ ಮೂಲಕ ಪಾಠ ಮಾಡಲಾಗಿದೆ. ಬಿಗ್ ಬಾಸ್ ರೀತಿಯ ರಿಯಾಲಿಟಿ ಶೋಗಳಲ್ಲಿ ಟಾಸ್ಕ್​ ನೀಡುವ ಹಾಗೆ, ಈ ಸಿನಿಮಾದಲ್ಲೂ ದಾರಿ ತಪ್ಪಿದ ಮಕ್ಕಳಿಗೆ ಟಾಸ್ಕ್​ ನೀಡಲಾಗುತ್ತದೆ. ಆ ಟಾಸ್ಕ್​ಗಳ ಮೂಲಕವೇ ಅವರನ್ನು ದಾರಿಗೆ ತರುವ ರೀತಿಯಲ್ಲಿ ನಿರ್ದೇಶಕರು ಕಥೆ ಹೆಣೆದಿದ್ದಾರೆ. ಆ ಕಾರಣದಿಂದಾಗಿ ಹೊಸ ಪೀಳಿಗೆಯ ಪ್ರೇಕ್ಷಕರಿಗೆ ಈ ಸಿನಿಮಾ ಆಪ್ತವಾಗುತ್ತದೆ.

ವಿಲನ್​ಗಳ ರೀತಿ ಇರುವ ಪಾತ್ರಗಳನ್ನೇ ಮುಂದಿಟ್ಟುಕೊಂಡು ಇಡೀ ಕಥೆಯನ್ನು ಹೇಳುವ ಸವಾಲನ್ನು ತೆಗೆದುಕೊಂಡಿರುವ ನಿರ್ದೇಶಕರು, ಕೊನೆಯಲ್ಲಿ ಅದೇ ಪಾತ್ರಗಳನ್ನು ಪರಿವರ್ತಿಸಿ ಒಳ್ಳೆಯ ಸಂದೇಶ ನೀಡಲು ಪ್ರಯತ್ನಿಸಿದ್ದಾರೆ. ಈ ಪ್ರಯತ್ನದಲ್ಲಿ ಅವರು ಭಾಗಶಃ ಸಫಲರಾಗಿದ್ದಾರೆ. ಆದರೆ ಇದಕ್ಕಾಗಿ ಅವರು ಹೆಣೆದ ದೃಶ್ಯಗಳು ಪ್ರೇಕ್ಷಕರಿಗೆ ಅಷ್ಟು ಸುಲಭವಾಗಿ ಕನೆಕ್ಟ್​ ಆಗುವುದಿಲ್ಲ. ಶಿಕ್ಷಕರು ಹಾಗೂ ತಂದೆ-ತಾಯಿ ಎಷ್ಟೇ ಬುದ್ಧಿ ಹೇಳಿದರೂ ಬಗ್ಗದ ಮಕ್ಕಳು ಒಂದೇ ಒಂದು ಗೇಮ್​ನಿಂದ ಬದಲಾಗಿಬಿಡುವ ಸನ್ನಿವೇಶ ಕೊಂಚ ಬಾಲಿಶ ಎನಿಸಬಹುದು. ಟಾಸ್ಕ್​ ನೀಡುವ ದೃಶ್ಯಗಳೇ ಈ ಸಿನಿಮಾದ ಮುಖ್ಯ ಭಾಗ. ಅದು ರುಚಿಸಿದರೆ ಪ್ರೇಕ್ಷಕರಿಗೆ ಈ ಚಿತ್ರ ಇಷ್ಟವಾಗುತ್ತದೆ. ಇಲ್ಲದಿದ್ದರೆ ಇಡೀ ಸಿನಿಮಾನೇ ಆ ಟಾಸ್ಕ್​ಗಳ ಸುಳಿಗೆ ಸಿಕ್ಕಂತೆ ಭಾಸವಾಗುತ್ತದೆ.

ಇದನ್ನೂ ಓದಿ: ದೇವಸ್ಥಾನ ಕಟ್ಟಿಸಿ ಓಟ್ ಕೇಳುವವರ ಕಿವಿ ಹಿಂಡಿದ ‘ಮೂರನೇ ಕೃಷ್ಣಪ್ಪ’

ಆರಂಭದಲ್ಲಿ ವಿದ್ಯಾರ್ಥಿಗಳ ಮೋಜು, ಮಸ್ತಿ, ರ‍್ಯಾಗಿಂಗ್​, ಅತಿರೇಕದ ವರ್ತನೆ ಮುಂತಾದ್ದನ್ನು ತೋರಿಸಲು ಹಲವು ದೃಶ್ಯಗಳು ಮೀಸಲಾಗಿವೆ. ಚಂದನ್​ ಶೆಟ್ಟಿ ಎಂಟ್ರಿ ನೀಡಿದ ಬಳಿಕ ಕಥೆಯಲ್ಲಿ ಸಣ್ಣ ಕುತೂಹಲ ಮೂಡುತ್ತದೆ. ಮಧ್ಯಂತರದ ಸಮಯದಲ್ಲಿ ಸ್ವಲ್ಪ ಟ್ವಿಸ್ಟ್ ಕೂಡ ಎದುರಾಗುತ್ತದೆ. ಆ ಬಳಿಕ ಏನಾಗುತ್ತದೆ ಎಂಬುದನ್ನು ಪ್ರೇಕ್ಷಕರು ಸುಲಭವಾಗಿ ಊಹಿಸಬಹುದು. ಇದು ಈ ಸಿನಿಮಾದ ಮುಖ್ಯವಾದ ಮೈನಸ್​ ಪಾಯಿಂಟ್​. ಈ ವಿಚಾರದ ಬಗ್ಗೆ ನಿರ್ದೇಶಕರು ಸ್ವಲ್ಪ ಗಮನ ಹರಿಸಬೇಕಿತ್ತು. ಇನ್ನು, ಕೆಲವು ವಿಚಾರಗಳ ಪುನರಾವರ್ತನೆಯಿಂದ ಸಿನಿಮಾದ ಅವಧಿ ಕೂಡ ಅನಗತ್ಯವಾಗಿ ಹೆಚ್ಚಾಗಿದೆ.

ಕ್ವಾಲಿಟಿಯಲ್ಲಿ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾ ಎಲ್ಲಿಯೂ ರಾಜಿ ಆಗಿಲ್ಲ. ಬಾಕಿ ದೃಶ್ಯಗಳಿಗಿಂತಲೂ ಹಾಡುಗಳನ್ನು ಹೆಚ್ಚು ಶ್ರೀಮಂತವಾಗಿ ಚಿತ್ರಿಸಲಾಗಿದೆ. ಚಂದನ್​ ಶೆಟ್ಟಿ ಅಭಿಮಾನಿಗಳಿಗೆ ‘ಪಾರ್ಟಿ ಸಾಂಗ್’ ಮನರಂಜನೆ ನೀಡುತ್ತದೆ. ಡಬಲ್​ ಶೆಡ್​ ಇರುವ ಪಾತ್ರವನ್ನ ಚಂದನ್​ ಶೆಟ್ಟಿ ಚೆನ್ನಾಗಿ ನಿಭಾಯಿಸಿದ್ದಾರೆ. ಹೊಸ ಪ್ರತಿಭೆಗಳಾದ ಮನೋಜ್​ ವಿವಾನ್​, ಮನಸ್ವಿ, ಭಾವನಾ ಅಪ್ಪು, ಅಮರ್​ ಕೂಡ ಉತ್ತಮವಾಗಿ ನಟಿಸಿದ್ದಾರೆ. ಸುನಿಲ್​ ಪುರಾಣಿಕ್​, ಭವ್ಯಾ ಮುಂತಾದ ಹಿರಿಯ ಕಲಾವಿದರು ಹೊಸ ಹುಡುಗರಿಗೆ ಸಾಥ್​ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:29 pm, Fri, 19 July 24