Movie Review: ‘ಬ್ಯಾಕ್​ ಬೆಂಚರ್ಸ್​’ ಚಿತ್ರದಲ್ಲಿ ಕಾಲೇಜ್ ಮಂದಿ ಕಥೆ; ತರ್ಲೆ, ತಮಾಷೆಗೆ ಆದ್ಯತೆ

ಯುವ ಪ್ರೇಕ್ಷಕರೇ ‘ಬ್ಯಾಕ್​ ಬೆಂಚರ್ಸ್​’ ಸಿನಿಮಾದ ಟಾರ್ಗೆಟ್​. ಸ್ಟೂಡೆಂಟ್​ ಲೈಫ್​ನ ಫನ್ನಿ ಸಂಗತಿಗಳೇ ಈ ಚಿತ್ರದಲ್ಲಿನ ಹೈಲೈಟ್​. ಕಾಲೇಜು ಕಹಾನಿ ನೋಡಿ ಎಂಜಾಯ್​ ಮಾಡುವ ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟ ಆಗುತ್ತದೆ. ಹೊಸ ನಟ-ನಟಿಯರೇ ತುಂಬಿಕೊಂಡಿರುವ ಈ ಸಿನಿಮಾದ ಪ್ಲಸ್​ ಏನು? ಮೈನಸ್​ ಏನು ಎಂಬುದು ಈ ವಿಮರ್ಶೆಯಲ್ಲಿದೆ..

Movie Review: ‘ಬ್ಯಾಕ್​ ಬೆಂಚರ್ಸ್​’ ಚಿತ್ರದಲ್ಲಿ ಕಾಲೇಜ್ ಮಂದಿ ಕಥೆ; ತರ್ಲೆ, ತಮಾಷೆಗೆ ಆದ್ಯತೆ
‘ಬ್ಯಾಕ್​ ಬೆಂಚರ್ಸ್​’ ಸಿನಿಮಾ ಪೋಸ್ಟರ್​
Follow us
ಮದನ್​ ಕುಮಾರ್​
|

Updated on: Jul 20, 2024 | 7:47 PM

ಸಿನಿಮಾ: ಬ್ಯಾಕ್​ ಬೆಂಚರ್ಸ್​. ನಿರ್ದೇಶನ: ಬಿ.ಆರ್​. ರಾಜಶೇಖರ್​. ನಿರ್ಮಾಣ: ರಮ್ಯಾ. ಪಾತ್ರವರ್ಗ: ರಂಜನ್​, ಜತಿನ್​ ಆರ್ಯನ್, ಆಕಾಶ್​ ಎಂ.ಪಿ., ಶಶಾಂಕ್​ ಸಿಂಹ, ಸುಚೇಂದ್ರ ಪ್ರಸಾದ್​, ಅರವಿಂದ್​ ಕುಪ್ಲಿಕರ್​, ಮಾನ್ಯ ಗೌಡ, ಅನುಷಾ ಸುರೇಶ್​ ಮುಂತಾದವರು. ಸ್ಟಾರ್​: 3/5

ಪ್ರೇಮಕಥೆಗಳು ಮತ್ತು ಕಾಲೇಜು ಕಥೆಗಳು ಎವರ್​ಗ್ರೀನ್​ ಆಗಿರುತ್ತವೆ. ಅಂತಹ ಕಥಾಹಂದರದ ಸಿನಿಮಾಗಳನ್ನು ಯುವ ಪ್ರೇಕ್ಷಕರು ಹೆಚ್ಚು ಇಷ್ಟಪಡುತ್ತಾರೆ. ‘ಜೋಶ್​’, ‘ಜಾಲಿಡೇಸ್​’ ಸಿನಿಮಾಗಳೇ ಈ ಮಾತಿಗೆ ಉದಾಹರಣೆ. ಆ ಚಿತ್ರಗಳ ಸಾಲಿಗೆ ಸೇರುವಂತಹ ಇನ್ನೊಂದು ಸಿನಿಮಾ ‘ಬ್ಯಾಕ್​ ಬೆಂಚರ್ಸ್​’. ಶೀರ್ಷಿಯೇ ಹೇಳುವಂತೆ ಇದು ಕೊನೇ ಬೆಂಚಿನಲ್ಲಿ ಕುಳಿತ ವಿದ್ಯಾರ್ಥಿಗಳ ಕಥೆ ಇರುವ ಸಿನಿಮಾ. ಬಹುತೇಕ ಹೊಸ ಕಲಾವಿದರನ್ನೇ ಆಯ್ಕೆ ಮಾಡಿಕೊಂಡು ನಿರ್ದೇಶಕ ಬಿ.ಆರ್​. ರಾಜಶೇಖರ್​ ಅವರು ‘ಬ್ಯಾಕ್​ ಬೆಂಚರ್ಸ್​’ ಸಿನಿಮಾ ಮಾಡಿದ್ದಾರೆ.

ವಿದ್ಯಾರ್ಥಿ ಜೀವನ ಸೂಪರ್​ ಆಗಿರುತ್ತದೆ. ಅಲ್ಲಿನ ತರಲೆ, ತಮಾಷೆ, ಮೋಜು, ಮಸ್ತಿಗೆ ಲೆಕ್ಕವೇ ಇಲ್ಲ. ಹದಿಹರೆಯದ ಮನಸ್ಸುಗಳೆಲ್ಲ ಒಂದೆಡೆ ಸೇರಿದಾಗ ಇರುವ ಜೋಶ್​ಗೆ ಮಿತಿ ಕೂಡ ಇರುವುದಿಲ್ಲ. ಪ್ರತಿ ಕಾಲೇಜಿನಲ್ಲೂ, ಪ್ರತಿ ಬ್ಯಾಚ್​ನಲ್ಲೂ ಇಂಥದ್ದೆಲ್ಲ ಇದ್ದೇ ಇರುತ್ತದೆ. ಮೊದಲ ಪ್ರೀತಿಯನ್ನು ಪಡೆಯಲು ಪ್ರಯತ್ನಿಸಿದ್ದು, ಮೊದಲ ಬಾರಿ ಪ್ರಪೋಸ್​ ಮಾಡಿದ್ದು, ಕ್ಲಾಸ್​ ರೂಮ್​ನಲ್ಲಿ ಮಾಡಿದ ಕೀಟಲೆ, ಮೊದಲ ಗಲಾಟೆ, ಏನೋ ಮಾಡಲು ಹೋಗಿ ಇನ್ನೇನೋ ಆಗಿದ್ದು, ಅಪ್ಪ-ಅಮ್ಮನ ಎದುರು ಬೈಯ್ಯಿಸಿಕೊಂಡಿದ್ದು.. ಹೀಗೆ ಎಲ್ಲವೂ ಸುಂದರ ನೆನಪುಗಳು. ಅವುಗಳನ್ನೆಲ್ಲ ಪ್ರೇಕ್ಷಕರಿಗೆ ಮತ್ತೊಮ್ಮೆ ನೆನಪಿಸುವ ಸಿನಿಮಾ ‘ಬ್ಯಾಕ್​ ಬೆಂಚರ್ಸ್​’.

‘ಬ್ಯಾಕ್​ ಬೆಂಚರ್ಸ್​’ ಸಿನಿಮಾದ ಕಥೆಯ ಪ್ಯಾಟರ್ನ್​ ಹಳೆಯದಾಗಿದ್ದರೂ ಕೂಡ ಪಾತ್ರವರ್ಗದ ಕಾರಣದಿಂದಾಗಿ ಇದರಲ್ಲಿ ಹೊಸತನ ತುಂಬಿದೆ. ಈ ಸಿನಿಮಾದಲ್ಲಿ ನಟಿಸಿರುವ ಬಹುತೇಕ ಕಲಾವಿದರು ಹೊಸಬರು. ಆದ್ದರಿಂದ ಪ್ರೇಕ್ಷಕರಿಗೆ ತಾಜಾ ಅನುಭವ ಸಿಗುತ್ತದೆ. ಯಾವುದೇ ಪೂರ್ವಾಗ್ರಹ ಇಲ್ಲದೇ ಈ ಹೊಸ ಕಲಾವಿದರನ್ನು ನೋಡಿದಾಗ ಸಿಗುವ ಅನುಭೂತಿ ಹೊಸತು. ವಿದ್ಯಾರ್ಥಿಗಳ ಪಾತ್ರದಲ್ಲಿ ಕಾಣಿಸಿಕೊಂಡ ರಂಜನ್​, ಮಾನ್ಯ ಗೌಡ, ಶಶಾಂಕ್​ ಸಿಂಹ, ಜತಿನ್​ ಆರ್ಯನ್, ಆಕಾಶ್​ ಎಂ.ಪಿ., ಕುಂಕುಮ್, ಚತುರ್ಥಿ ರಾಜ್​ ಮುಂತಾದವರು ಈ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಈ ಸಿನಿಮಾದಲ್ಲಿ ಗಂಭೀರವಾದ ಯಾವುದೇ ವಿಷಯಗಳೂ ಇಲ್ಲ. ಸರಿ-ತಪ್ಪುಗಳ ಪಾಠ ಮಾಡುವಂತಹ ದೃಶ್ಯಗಳೂ ಅತಿಯಾಗಿಲ್ಲ. ಶುರುವಿನಿಂದ ಕೊನೇ ತನಕ ಫನ್​ ತೋರಿಸಿ, ಕೊನೆಯಲ್ಲಿ ಸಣ್ಣದೊಂದು ಮೆಸೇಜ್​ ನೀಡಲಾಗಿದೆ. ಎಷ್ಟು ಸಾಧ್ಯವೋ ಅಷ್ಟು ನಗಿಸಲು ‘ಬ್ಯಾಕ್​ ಬೆಂಚರ್ಸ್​’ ಪ್ರಯತ್ನಿಸಿದ್ದಾರೆ. ಕಾಮಿಡಿಯೇ ಈ ಸಿನಿಮಾದ ಹೈಲೈಟ್​. ಅನುಭವಿ ನಟ ಸುಚೇಂದ್ರ ಪ್ರಸಾದ್​ ಕೂಡ ಕಾಮಿಡಿ ಪಾತ್ರದಲ್ಲಿ ಸೈ ಎನಿಸಿಕೊಂಡಿದ್ದಾರೆ. ಅವರು ತೆರೆ ಮೇಲೆ ಬಂದಾಗಲೆಲ್ಲ ನಗು ಗ್ಯಾರಂಟಿ. ನಕುಲ್ ಅಭ್ಯಂಕರ್​ ಅವರ ಸಂಗೀತ, ಮನೋಹರ್​ ಜೋಶಿ ಅವರ ಛಾಯಾಗ್ರಹಣದಿಂದ ಸಿನಿಮಾದ ಮೆರುಗು ಹೆಚ್ಚಿದೆ. ಇದೆಲ್ಲವೂ ಈ ಸಿನಿಮಾದ ಪ್ಲಸ್​ ಪಾಯಿಂಟ್ಸ್​.

ಇದನ್ನೂ ಓದಿ: ಶ್ರೀಮಂತರ ಮಕ್ಕಳ ಕಾಟ, ಚಂದನ್​ ಶೆಟ್ಟಿ ಪಾಠ: ಇದು ಟಾಸ್ಕ್​ಗಳ ಸುಳಿಗೆ ಸಿಕ್ಕ ಸಿನಿಮಾ

‘ಬ್ಯಾಕ್​ ಬೆಂಚರ್ಸ್​’ ಚಿತ್ರದಲ್ಲಿ ಕೆಲವು ಮೈನಸ್​ ವಿಷಯಗಳೂ ಇವೆ. ಆರಂಭದಿಂದ ಕೊನೇ ತನಕ ಸಿನಿಮಾದ ಲಯ ಒಂದೇ ರೀತಿಯಲ್ಲಿ ಸಾಗುತ್ತದೆ. ಹೆಚ್ಚೇನೂ ಏರಿಳಿತವನ್ನು ಇಲ್ಲಿ ನಿರೀಕ್ಷಿಸಲಾಗದು. ಮೊದಲಾರ್ಧದಲ್ಲಿ ನೋಡಿದಂತಹ ತರ್ಲೆ-ತಮಾಷೆಯ ಸಂಗತಿಗಳೇ ದ್ವಿತೀಯಾರ್ಧದಲ್ಲೂ ಮುಂದುವರಿಯುತ್ತವೆ. ಅದರ ಬದಲು ಬೇರೆ ಅಂಶಗಳು ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಫಸ್ಟ್​ ಹಾಫ್​ಗೆ ಹೋಲಿಸಿದರೆ ಸೆಕೆಂಡ್​ ಹಾಫ್​ ಸ್ವಲ್ಪ ಡಲ್​ ಎನಿಸಿದೆ.​ ಇಂತಹ ಒಂದಷ್ಟು ಅಂಶಗಳನ್ನು ಮಾಫಿ ಮಾಡಿದರೆ ‘ಬ್ಯಾಕ್​ ಬೆಂಚರ್ಸ್​’ ಕಹಾನಿ ಹಿಡಿಸುತ್ತದೆ. ಕಾಲೇಜು ಹುಡುಗ-ಹುಡುಗಿಯರಿಗೆ ಈ ಕಥೆ ಹೆಚ್ಚು ಕನೆಕ್ಟ್​ ಆಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.