Choo Mantar Review: ‘ಛೂ ಮಂತರ್’ ವಿಮರ್ಶೆ; ತಿರುವುಗಳ ಹಾದಿಯಲ್ಲಿ ಅಮಾನುಷ ಶಕ್ತಿಗಳ ಕಾಟ

|

Updated on: Jan 10, 2025 | 10:22 AM

‘ಕರ್ವ’ ಸಿನಿಮಾ ನಿರ್ದೇಶನ ಮಾಡಿ ಖ್ಯಾತಿ ಪಡೆದವರು ನವನೀತ್. ಈಗ ಅವರು ಮತ್ತೊಂದು ಹಾರರ್ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬಂದಿದ್ದಾರೆ. ಅದುವೇ ‘ಛೂ ಮಂತರ್’. ಈ ಚಿತ್ರದಲ್ಲಿ ಏನಿದೆ? ಏನಿಲ್ಲ? ಈ ಎಲ್ಲಾ ವಿಚಾರಗಳ ಬಗ್ಗೆ ವಿಮರ್ಶೆಯಲ್ಲಿ ಇದೆ ಮಾಹಿತಿ.

Choo Mantar Review: ‘ಛೂ ಮಂತರ್’ ವಿಮರ್ಶೆ; ತಿರುವುಗಳ ಹಾದಿಯಲ್ಲಿ ಅಮಾನುಷ ಶಕ್ತಿಗಳ ಕಾಟ
ಛೂ ಮಂತರ್
Follow us on

ಸಿನಿಮಾ: ಛೂ ಮಂತರ್. ನಿರ್ದೇಶನ: ಕರ್ವ ನವನೀತ್. ಪಾತ್ರವರ್ಗ: ಶರಣ್, ಚಿಕ್ಕಣ್ಣ, ಅದಿತಿ ಪ್ರಭುದೇವ, ಪ್ರಭು ಮುಂಡ್ಕರ್ ಮೊದಲಾದವರು. ನಿರ್ಮಾಣ: ತರುಣ್ ಶಿವಪ್ಪ ಮತ್ತು ಮಾನಸಾ ತರುಣ್. ರೇಟಿಂಗ್: 3/5

2016ರಲ್ಲಿ ರಿಲೀಸ್ ಆದ ‘ಕರ್ವ’ ಸಿನಿಮಾ ಭರ್ಜರಿ ಮೆಚ್ಚುಗೆ ಪಡೆಯಿತು. ರಾಜಾ ಬಂಗಲೆ, ಅದರಲ್ಲಿ ನಡೆಯುವ ಭಯ ಬೀಳಿಸುವ ಘಟನೆ ಪ್ರಮುಖ ಹೈಲೈಟ್ ಆಗಿದ್ದವು. ಈ ಚಿತ್ರದ ಟ್ವಿಸ್ಟ್​ಗಳು ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ಈ ಚಿತ್ರ ನಿರ್ದೇಶನ ಮಾಡಿದ್ದ ನವನೀತ್ ಅವರು ಈ ಬಾರಿ ‘ಛೂ ಮಂತರ್’ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬಂದಿದ್ದಾರೆ. ಈ ಚಿತ್ರ ಹೇಗಿದೆ? ಇದರ ಪ್ಲಸ್ ಏನು? ಮೈನಸ್ ಏನು ಎಂಬ ಬಗ್ಗೆ ಇಲ್ಲಿದೆ ವಿವರ.

ದೆವ್ವ ಓಡಿಸೋದರಲ್ಲಿ ಗೌತಮ್ (ಶರಣ್) ಎತ್ತಿದ ಕೈ. ಅವನು ಒಂದು ರೂಂ ನೋಡಿ, ಅಲ್ಲಿನ ಹವಾಮಾನ ಗಮನಿಸಿ ರೂಂನಲ್ಲಿ ದೆವ್ವ ಇದೆಯೋ ಅಥವಾ ಇಲ್ಲವೋ ಎಂದು ಹೇಳುತ್ತಾನೆ. ಗೌತಮ್ ಹಾಗೂ ಅವನ ಗ್ಯಾಂಗ್​ ನಿಧಿಯ ಆಸೆಗೆ ಕರ್ನಾಟಕದಿಂದ 2000 ಕಿಮೀ ದೂರ ಇರುವ ‘ಮಾರ್ಗನ್​ ಹೌಸ್​’ಗೆ ಎಂಟ್ರಿ ಕೊಡುತ್ತಾರೆ. ಅಲ್ಲಿಂದ ಕಥೆ ತೆರೆದುಕೊಳ್ಳುತ್ತದೆ. ಆ ಬಂಗಲೆಯಲ್ಲಿ ಬಿದ್ದ ಹೆಣಗಳೆಷ್ಟು? ಅಲ್ಲಿರುವ ಅತೃಪ್ತ ಆತ್ಮಗಳೆಷ್ಟು? ಈ ದೆವ್ವವನ್ನು ಗೌತಮ್ ಹೇಗೆ ಓಡಿಸುತ್ತಾನೆ? ಈ ಮನೆಗೂ ಅವರಿಗೂ ಇರುವ ಕನೆಕ್ಷನ್ ಏನು ಎಂಬಿತ್ಯಾದಿ ವಿಚಾರಗಳನ್ನು ನಿರ್ದೇಶಕರು ಹಂತ ಹಂತವಾಗಿ ತೆರೆದಿಡುತ್ತಾ ಹೋಗುತ್ತಾರೆ.

ಟ್ವಿಸ್ಟ್ ಆ್ಯಂಡ್ ಟರ್ನ್​

‘ಕರ್ವ’ ಸಿನಿಮಾದಲ್ಲಿ ರಾಜಾ ಬಂಗಲೆ ಸಾಕಷ್ಟು ಗಮನ ಸೆಳೆದಿತ್ತು. ಇಲ್ಲಿ ಮಾರ್ಗನ್ ಹೌಸ್. ಬಂಗಲೆಯ ಸ್ವರೂಪ ಒಂದೇ ಆದರೂ ಕಥೆ ಸಂಪೂರ್ಣ ಬೇರೆಯೇ ಆಗಿದೆ. ‘ಕರ್ವ’ ಸಿನಿಮಾದಲ್ಲಿ ಸಾಕಷ್ಟು ಟ್ವಿಸ್ಟ್​ಗಳನ್ನು ನಿರ್ದೇಶಕರು ಇಟ್ಟಿದ್ದರು. ಇಲ್ಲಿಯೂ ಅದೇ ತಂತ್ರವನ್ನು ಉಪಯೋಗಿಸಿದ್ದಾರೆ. ಹಂತ ಹಂತದಲ್ಲೂ ಟ್ವಿಸ್ಟ್ ನೀಡುವ ಕೆಲಸ ಆಗಿದೆ. ಮಧ್ಯಂತರದಲ್ಲಿ ಸಿಗುವ ತಿರುವು ಪ್ರೇಕ್ಷಕನಿಗೆ ಥ್ರಿಲ್ ನೀಡುತ್ತದೆ. ಮಧ್ಯಂತರದ ಬಳಿಕವೂ ಒಂದಷ್ಟು ತಿರುವುಗಳು ಇವೆ. ಕೆಲವು ತಿರುವುಗಳನ್ನು ಪ್ರೇಕ್ಷಕ ಊಹಿಸಿದರೆ,  ಇನ್ನೂ ಕೆಲವು ಕಲ್ಪನೆಯ ಹೊರಗಿವೆ.

ತಾಂತ್ರಿಕವಾಗಿ ಶ್ರೀಮಂತ

ದೆವ್ವ ಎಂದಾಕ್ಷಣ ವಿಕಾರ ರೂಪ ಮಾಡಿ ಹೆದರಿಸುವ ಕೆಲಸ ಆಗುತ್ತದೆ. ಆದರೆ, ‘ಛೂ ಮಂತರ್’ ಸಿನಿಮಾದಲ್ಲಿ ಹಾಗಿಲ್ಲ. ಇಲ್ಲಿ ಹಿನ್ನೆಲೆ ಸಂಗೀತದ ಮೂಲಕವೇ ಪ್ರೇಕ್ಷಕರಲ್ಲಿ ಭಯ ಹುಟ್ಟಿಕೊಳ್ಳುತ್ತದೆ. ಹಿನ್ನೆಲೆ ಸಂಗೀತದ ಮೂಲಕ ಅವಿನಾಶ್ ಬಸತ್ಕೂರ್ ಹೆಚ್ಚು ಅಂಕ ಗಳಿಸುತ್ತಾರೆ. ಚಂದ್ ಶೆಟ್ಟಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ‘ಛೂ ಮಂತರ್’ ಹಾಡು ಗಮನ ಸೆಳೆಯುತ್ತದೆ. ಛಾಯಗ್ರಹಣ ಕೂಡ ಸಿನಿಮಾ ಶ್ರೀಮಂತಿಗೆ ಹೆಚ್ಚು ಸಹಕಾರಿ ಆಗಿದೆ. ಕೆಲವು ದೃಶ್ಯಗಳಲ್ಲಿ ಇದು ಬಾಲಿವುಡ್ ಸಿನಿಮಾ ಏನೋ ಎಂಬ ಭಾವನೆ ಕೊಡುತ್ತದೆ.

ಕಲಾವಿದರ ನಟನೆ

ಹಾಸ್ಯ ಕಲಾವಿದನಾಗಿದ್ದ ಶರಣ್ ಅವರು ಇತ್ತೀಚೆಗೆ ಭಿನ್ನ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ‘ಛೂ ಮಂತರ್’ ಸಿನಿಮಾದಲ್ಲಿ ಅವರು ಗಂಭಿರ ಹಾಗೂ ಹಾಸ್ಯ ಎರಡೂ ವಿಭಾಗವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಸಿನಿಮಾ ಉದ್ದಕ್ಕೂ ಅವರು ಕಾಣಿಸಿಕೊಳ್ಳುತ್ತಾರೆ. ಅವರ ಪ್ರಬುದ್ಧ ನಟನೆಯಿಂದ ಸಿನಿಮಾದ ತೂಕ ಹೆಚ್ಚಿದೆ. ವಿವಿಧ ಶೇಡ್​ಗಳಲ್ಲಿ ಅವರು ಗಮನ ಸೆಳೆದಿದ್ದಾರೆ. ಚಿಕ್ಕಣ್ಣ ಅವರು ಇದ್ದಷ್ಟು ಹೊತ್ತು ನಗುವಿಗೆ ಬರವಿಲ್ಲ. ಅದಿತಿ ಪ್ರಭುದೇವ ಪಾತ್ರಕ್ಕೂ ಮಹತ್ವ ಇದೆ. ಮೇಘನಾ ಗಾಂವ್ಕರ್, ಪ್ರಭು ಮುಂಡ್ಕರ್, ರಜನಿ ಭಾರದ್ವಾಜ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಬರುವ ಗುರುಕಿರಣ್ ಹೊರತುಪಡಿಸಿ ಪ್ರಥಮ್, ಓಂ ಪ್ರಕಾಶ್ ರಾವ್ ಪಾತ್ರಗಳು ಸಿನಿಮಾಗೆ ಹೆಚ್ಚಿನ ಕೊಡುಗೆ ಏನನ್ನೂ ನೀಡಿಲ್ಲ. ವಿಷ್ಣುವರ್ಧನ್ ಅವರನ್ನು ಇಲ್ಲಿ ಕರೆತರಲಾಗಿದೆ. ಅದು ಹೇಗೆ ಎಂಬುದನ್ನು ಥಿಯೇಟರ್​ನಲ್ಲಿ ನೋಡಿಯೇ ತಿಳಿದುಕೊಳ್ಳಬೇಕು.

ನಿರ್ದೇಶನ ಹೇಗಿದೆ?

ನಿರ್ದೇಶಕರು ಒಂದೊಳ್ಳೆಯ ಹಾರರ್ ಚಿತ್ರವನ್ನು ಪ್ರೇಕ್ಷಕರ ಎದುರು ಇಟ್ಟಿದ್ದಾರೆ. ಟ್ವಿಸ್ಟ್​ಗಳನ್ನು ನೀಡಿ ಪ್ರೇಕ್ಷಕರನ್ನು ರಂಜಿಸಲು ಯಶಸ್ವಿ ಆಗಿದ್ದಾರೆ. ಆದರೆ, ಅಲ್ಲಲ್ಲಿ ಅವರು ಎಡವಿದ್ದಾರೆ. ನಿರೂಪಣೆಯಲ್ಲಿ ಏರಿಳಿತ ಇದೆ. ಸಾಕಷ್ಟು ಕಡೆಗಳಲ್ಲಿ ಕನೆಕ್ಷನ್​​ ಕೊಂಡಿ ಮಿಸ್ ಆಗಿದೆ. ಬಂಗಲೆಯಲ್ಲಿ ಸತ್ತ ಎಲ್ಲರೂ ಏಕೆ ದೆವ್ವ ಆಗಿಲ್ಲ? ಎಂಬಿತ್ಯಾದಿ ಪ್ರಶ್ನೆಗಳೂ ಹಾಗೆಯೇ ಉಳಿದು ಬಿಡುತ್ತವೆ. ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ ಸಿನಿಮಾ ಇನ್ನಷ್ಟು ಉತ್ತಮವಾಗಿ ಮೂಡಿ ಬರುತ್ತಿತ್ತು. ಈಗಾಗಲೇ ‘ಕರ್ವ’ ಚಿತ್ರಕ್ಕೆ ಸೀಕ್ವೆಲ್ ಬರುತ್ತದೆ ಎಂದು ನಿರ್ದೇಶಕರು ಹೇಳಿದ್ದರು ಅದನ್ನೂ ತಂದಿಲ್ಲ. ‘ಛೂ ಮಂತರ್’ ಚಿತ್ರಕ್ಕೂ ಸೀಕ್ವೆಲ್ ಬರಲಿದೆ ಎಂದು ಕ್ಲೈಮ್ಯಾಕ್ಸ್​ನಲ್ಲಿ ಹೇಳಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:15 am, Fri, 10 January 25