Chow Chow Bath Review: ಸಿಂಪಲ್ ಆಗಿದ್ದರೂ ಸವಿ ಎನಿಸುವ ‘ಚೌ ಚೌ ಬಾತ್’ ಸಿನಿಮಾ
‘ಚೌ ಚೌ ಬಾತ್’ ಸಿನಿಮಾ ಆರಂಭದಿಂದ ಕೊನೆತನಕ ಲವಲವಿಕೆಯಿಂದ ಸಾಗುತ್ತದೆ. ಹೊಸ ಕಲಾವಿದರೇ ಹೆಚ್ಚಾಗಿ ಇರುವುದರಿಂದ ಪ್ರೇಕ್ಷಕರಿಗೆ ಒಂದು ಫ್ರೆಶ್ ಫೀಲಿಂಗ್ ಸಿಗುತ್ತದೆ. ಮೂರು ಬೇರೆ ಬೇರೆ ಪ್ರೇಮಕಥೆಯನ್ನು ಒಂದಕ್ಕೊಂದು ಬೆಸೆದುಕೊಂಡ ರೀತಿಯಲ್ಲಿ ನಿರ್ದೇಶಕರು ಹೆಣೆದಿದ್ದಾರೆ. ‘ಚೌ ಚೌ ಬಾತ್’ ಸಿನಿಮಾ ವಿಮರ್ಶೆ ಇಲ್ಲಿದೆ..
ಸಿನಿಮಾ: ಚೌ ಚೌ ಬಾತ್. ನಿರ್ಮಾಣ: ಹಾರೈಝೋನ್ ಮೂವೀಸ್. ನಿರ್ದೇಶನ: ಕೇಂಜ ಚೇತನ್ ಕುಮಾರ್. ಪಾತ್ರವರ್ಗ: ಸಾಗರ್ ಗೌಡ, ಸಂಕಲ್ಪ್ ಶರ್ಮಾ, ಸುಶ್ಮಿತಾ ಭಟ್, ಅರುಣಾ ಬಾಲರಾಜ್, ಧನುಷ್ ಕೈಕಂಪಾಡಿ, ಗೀತಾ ಬಂಗೇರ, ಪ್ರಕರ್ಶಾ ಶಾಸ್ತ್ರಿ ಮುಂತಾದವರು. ಸ್ಟಾರ್: 3/5
ನಿರ್ದೇಶಕ ಕೇಂಜ ಚೇತನ್ ಕುಮಾರ್ ಅವರು ಮೂರು ಕಥೆಗಳನ್ನು ಒಂದೇ ಸಿನಿಮಾದಲ್ಲಿ ಹೇಳಿದ್ದಾರೆ. ಇಲ್ಲಿ ಮೂರು ಪ್ರೇಮಕಥೆಗಳಿವೆ. ಮೇಲ್ನೋಟಕ್ಕೆ ಮೂರು ಪ್ರತ್ಯೇಕ ಕಥೆಗಳು ಎನಿಸಿದರೂ ಕೂಡ ಈ ಕಥೆಗಳಿಗೆ ಒಂದಕ್ಕೊಂದು ಸಂಬಂಧ ಇದೆ. ಆ ಕಾರಣಕ್ಕಾಗಿ ಚಿತ್ರತಂಡದವರು ಇದನ್ನು ಹೈಪರ್ ಲಿಂಕ್ ಸಿನಿಮಾ ಎಂದು ಕರೆದಿದ್ದಾರೆ. ಹೊಸ ಕಲಾವಿದರೇ ತುಂಬಿಕೊಂಡಿರುವ ‘ಚೌ ಚೌ ಬಾತ್’ ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ..
ಚೌ ಚೌ ಬಾತ್ ಒಂದು ಸರಳವಾದ ತಿನಿಸು. ಇದರಲ್ಲಿ ತುಂಬ ಅದ್ದೂರಿಯಾಗಿ ಏನನ್ನೂ ಅಪೇಕ್ಷಿಸೋಕೆ ಆಗಲ್ಲ. ಆದರೂ ಕೂಡ ಅದನ್ನು ಇಷ್ಟಪಟ್ಟು ಸವಿಯುವ ಜನರಿಗೇನೂ ಕೊರತೆ ಇಲ್ಲ. ಅದೇ ಮಾತು ‘ಚೌ ಚೌ ಬಾತ್’ ಸಿನಿಮಾಗೂ ಅನ್ವಯ. ಯಾಕೆಂದ್ರೆ, ಈ ಸಿನಿಮಾ ಕೂಡ ತುಂಬ ಸರಳವಾಗಿದೆ. ಪೂರ್ತಿ ನೋಡಿ ಮುಗಿಸಿದ ಬಳಿಕ ಒಂದು ಒಳ್ಳೆಯ ಫೀಲ್ ನೀಡುವಂತಹ ಪ್ರಯತ್ನವಾಗಿ ಈ ಸಿನಿಮಾ ಇಷ್ಟವಾಗುತ್ತದೆ.
ಈ ಸಿನಿಮಾ ವಿಶೇಷ ಎನಿಸುವುದು ಪಾತ್ರಗಳ ಕಾರಣದಿಂದ. ನಮ್ಮ-ನಿಮ್ಮಂತೆ ಇರುವ ಸಹಜವಾದ ಪಾತ್ರಗಳನ್ನೇ ಇಟ್ಟುಕೊಂಡು ನಿರ್ದೇಶಕರು ಈ ಕಥೆಯನ್ನು ಹೆಣೆದಿದ್ದಾರೆ. ಮದುವೆಯಾಗಲು ಮನೆಬಿಟ್ಟು ಓಡಿಬಂದ ದಿನವೇ ಪ್ರಿಯಕರನನ್ನು ಕಳೆದುಕೊಳ್ಳುವ ಹುಡುಗಿ ಈ ಸಿನಿಮಾದಲ್ಲಿ ಇದ್ದಾಳೆ. ಅವಳಿಗೆ ಸಹಾಯ ಮಾಡುತ್ತಲೇ ಪ್ರೀತಿಯಲ್ಲಿ ಬೀಳುವ ಇನ್ನೊಬ್ಬ ಹುಡುಗನೂ ಈ ಕಥೆಯಲ್ಲಿದ್ದಾನೆ. ತಾನು ಪ್ರೀತಿಸಿದ ಹುಡುಗಿಯನ್ನು ಮದುವೆ ಆಗುವುದಕ್ಕೂ ಮುನ್ನ ಆಕೆಯ ಅಕ್ಕನಿಗೆ ಗಂಡು ಹುಡುಕುವ ಜವಾಬ್ದಾರಿ ಹೊತ್ತುಕೊಳ್ಳುವ ವಿಶಾಲ ಹೃದಯದ ಯುವಕನೂ ‘ಚೌ ಚೌ ಬಾತ್’ ಕಥೆಯಲ್ಲಿ ಜಾಗ ಪಡೆದುಕೊಂಡಿದ್ದಾನೆ. ಮೂಲ ನಕ್ಷತ್ರದಲ್ಲಿ ಹುಟ್ಟಿದ್ದಕ್ಕೆ ಗಂಡು ಸಿಗದೇ ಕಣ್ಣೀರು ಹಾಕುವ ಯುವತಿಯ ಕಥೆ ಕೂಡ ಈ ಸಿನಿಮಾದಲ್ಲಿದೆ. ಇಂಥ ಹಲವು ವಿಚಾರಗಳು ಒಂದೆಡೆ ಸೇರಿ ‘ಚೌ ಚೌ ಬಾತ್’ ಆಗಿದೆ.
ಇದನ್ನೂ ಓದಿ: Photo Movie Review: ಲಾಕ್ಡೌನ್ನಲ್ಲಿ ಬೆಂದ ಬಡವನ ನೋವಿನ ಸತ್ಯದರ್ಶನ
ಚಿನಕುರುಳಿ ರೀತಿಯ ಡೈಲಾಗ್ಗಳು ‘ಚೌ ಚೌ ಬಾತ್’ ಸಿನಿಮಾದಲ್ಲಿ ತುಂಬಿಕೊಂಡಿವೆ. ಮೇಲ್ನೋಟಕ್ಕೆ ಸಿಂಪಲ್ ಎನಿಸಿದರೂ ಆ ಸಂಭಾಷಣೆಗಳ ಮೂಲಕ ಒಂದಷ್ಟು ವಿಷಯಗಳನ್ನು ಪ್ರೇಕ್ಷಕರಿಗೆ ದಾಟಿಸುವ ಪ್ರಯತ್ನ ಆಗಿದೆ. ಫೈಟಿಂಗ್, ಅದ್ದೂರಿ ಸೆಟ್ ಮುಂತಾದ ಅಂಶಗಳನ್ನು ಬಯಸುವ ಮಾಸ್ ಪ್ರೇಕ್ಷಕರಿಗೆ ಈ ಸಿನಿಮಾದಲ್ಲಿ ಏನೂ ಧಕ್ಕುವುದಿಲ್ಲ. ಯಾಕೆಂದರೆ, ಇದು ಪಕ್ಕಾ ಕ್ಲಾಸ್ ಸಿನಿಮಾ. ಸಾವಧಾನದಿಂದ ವೀಕ್ಷಿಸಿ, ಪ್ರತಿ ಪಾತ್ರದ ಜೊತೆ ಸಹಾನುಭೂತಿ ಹೊಂದುವ ಪ್ರೇಕ್ಷಕರಿಗೆ ‘ಚೌ ಚೌ ಬಾತ್’ ಖುಷಿ ನೀಡುತ್ತದೆ.
ಇದನ್ನೂ ಓದಿ: Kerebete Review: ಕುತೂಹಲಭರಿತ ಕೆರೆಬೇಟೆಯಲ್ಲಿ ಊಹಿಸಲಾಗದ ಟ್ವಿಸ್ಟ್
ಕಥೆ ಸರಳವಾಗಿದ್ದರೂ ಕೂಡ ಅದರಲ್ಲಿ ಒಂದು ಸಸ್ಪೆನ್ಸ್ ಕಾಯ್ದುಕೊಳ್ಳುವಲ್ಲಿ ನಿರ್ದೇಶಕರು ಯಶಸ್ವಿ ಆಗಿದ್ದಾರೆ. ಯಾರ ಪ್ರೀತಿಯ ಹೂವು ಯಾರ ಮುಡಿ ಏರುತ್ತದೆ ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು. ನಿಜವಾದ ಪ್ರೀತಿ ಹೇಗಿರುತ್ತದೆ ಎಂಬುದನ್ನು ಅವರು ಈ ಚಿತ್ರದ ಮೂಲಕ ತೋರಿಸಿಕೊಟ್ಟಿದ್ದಾರೆ. ಆರಂಭದಿಂದ ಕೊನೆತನಕ ಲವಲವಿಕೆಯಿಂದಲೇ ಸಿನಿಮಾ ಸಾಗುತ್ತದೆ. ಕೆಲವೊಮ್ಮೆ ಸೀರಿಯಲ್ ರೀತಿ ಅನಿಸುತ್ತದೆ. ಆ ಬಗ್ಗೆ ನಿರ್ದೇಶಕರು ಎಚ್ಚರಿಕೆ ವಹಿಸಿದ್ದರೆ ಈ ಸಿನಿಮಾ ಇನ್ನಷ್ಟು ಆಪ್ತವಾಗುತ್ತಿತ್ತು. ತಾಂತ್ರಿಕವಾಗಿ ‘ಚೌ ಚೌ ಬಾತ್’ ಅಚ್ಚುಕಟ್ಟಾಗಿದೆ. ಹೊಸ ಕಲಾವಿದರ ಈ ಹೊಸ ಕಥೆಯನ್ನು ಒಮ್ಮೆ ನೋಡಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.