Photo Movie Review: ಲಾಕ್​ಡೌನ್​ನಲ್ಲಿ ಬೆಂದ ಬಡವನ ನೋವಿನ ಸತ್ಯದರ್ಶನ

ನಿರ್ದೇಶಕ ಉತ್ಸವ್​ ಗೋನಾವರ ಅವರು ಲಾಕ್​ಡೌನ್​ ದಿನಗಳ ಕಥೆಯನ್ನು ತೆರೆಗೆ ತಂದಿದ್ದಾರೆ. ಕಥೆ ಎಂದರೆ ಇದು ಕಟ್ಟುಕಥೆಯಲ್ಲ. ಲಾಕ್​ಡೌನ್​ ಆದಾಗ ಸಾವಿರಾರು ಬಡವರು ಅನುಭವಿಸಿರಬಹುದಾದ ನೋವಿನ ಕಥೆ. ತುಂಬ ರಿಯಲಿಸ್ಟಿಕ್​ ಆದ ಶೈಲಿಯಲ್ಲಿ ಈ ಸಿನಿಮಾವನ್ನು ಅವರು ಕಟ್ಟಿಕೊಟ್ಟಿದ್ದಾರೆ. ‘ಫೋಟೋ’ ಸಿನಿಮಾದ ವಿಮರ್ಶೆ ಇಲ್ಲಿದೆ..

Photo Movie Review: ಲಾಕ್​ಡೌನ್​ನಲ್ಲಿ ಬೆಂದ ಬಡವನ ನೋವಿನ ಸತ್ಯದರ್ಶನ
ಮಹಾದೇವ ಹಡಪದ, ವೀರೇಶ್​ ಗೋನಾವರ
Follow us
ಮದನ್​ ಕುಮಾರ್​
|

Updated on:Mar 15, 2024 | 5:42 PM

ಸಿನಿಮಾ: ಫೋಟೋ. ನಿರ್ಮಾಣ: ಮಸಾರಿ ಟಾಕೀಸ್​. ನಿರ್ದೇಶನ: ಉತ್ಸವ್​ ಗೋನಾವರ​. ಪಾತ್ರವರ್ಗ: ಮಹಾದೇವ​ ಹಡಪದ, ವೀರೇಶ್​ ಗೋನಾವರ, ಸಂಧ್ಯಾ ಅರಕೆರೆ, ಎಂ.ಎಸ್​. ಜಹಾಂಗೀರ್​ ಮುಂತಾದವರು. ಸ್ಟಾರ್​: 4/5

ಕಮರ್ಷಿಯಲ್​ ಸಿನಿಮಾಗಳ ಸಿದ್ಧ ಮಾದರಿ ಎಂಬುದು ಎಷ್ಟೇ ಪ್ರಭಾವಿ ಆಗಿರಲಿ, ಅದರ ಪ್ರಭಾವಕ್ಕೆ ಒಳಗಾಗದೇ ಸಂಪೂರ್ಣ ಬೇರೆ ಮಾದರಿಯಲ್ಲಿ ಸಿನಿಮಾ ಮಾಡಲು ಧೈರ್ಯ ತೋರಿಸುವ ನಿರ್ದೇಶಕರು ನಮ್ಮಲ್ಲಿದ್ದಾರೆ. ಸಾಮಾನ್ಯವಾಗಿ ಇಂಥ ಪ್ರಯತ್ನಗಳು ಆಗುವುದು ಹೊಸಬರಿಂದಲೇ ಎಂಬುದು ವಿಶೇಷ. ಯುವ ನಿರ್ದೇಶಕ ಉತ್ಸವ್​ ಗೋನಾವರ (Utsav Gonwar) ಅವರ ‘ಫೋಟೋ’ ಸಿನಿಮಾ ಈ ಮಾತಿಗೆ ಸೂಕ್ತ ಉದಾಹರಣೆ. ಈಗಾಗಲೇ ಹಲವು ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡಿರುವ ‘ಫೋಟೋ’ ಸಿನಿಮಾ (Photo Movie) ಈಗ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ‘ಮಸಾರಿ ಟಾಕೀಸ್​’ ಮೂಲಕ ನಿರ್ಮಾಣ ಆಗಿರುವ ಈ ಸಿನಿಮಾವನ್ನು ಪ್ರಕಾಶ್​ ರಾಜ್​ (Prakash Raj) ಅವರು ಪ್ರಸ್ತುತಪಡಿಸಿದ್ದಾರೆ. ಲಾಕ್​ಡೌನ್​ ಸಂದರ್ಭದ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ.

ಮೊದಲ ಬಾರಿ ಕೊರೊನಾ ಕಾರಣದಿಂದ ದೇಶಾದ್ಯಂತ ಲಾಕ್​ಡೌನ್​ ಜಾರಿ ಮಾಡಿದಾಗ ಜನರ ಜೀವನ ಅಸ್ತವ್ಯಸ್ತ ಆಯಿತು. ನಗರದಲ್ಲಿ ವಾಸಿಸುವ ಶ್ರೀಮಂತರಿಗೆ ಎಲ್ಲ ಸೌಕರ್ಯಗಳು ಮನೆಯ ಬಾಗಿಲಿಗೆ ಬರುವ ಅನುಕೂಲ ಇತ್ತು. ಆದರೆ ಮನೆಯೇ ಇಲ್ಲದೇ ಬೀದಿಯಲ್ಲಿ ಆಶ್ರಯ ಪಡೆದ ಬಡವರ ಬದುಕು ಊಹಿಸಲಾಗದಂತಹ ಕಷ್ಟಕ್ಕೆ ನೂಕಲ್ಪಟ್ಟಿತ್ತು. ಕೂಲಿ ಕೆಲಸ ಮಾಡಲು ಬೇರೆ ಬೇರೆ ನಗರಗಳಿಗೆ ತೆರಳಿದ್ದ ಕಾರ್ಮಿಕರು ಪುನಃ ತಮ್ಮ ಊರು ಸೇರಲು ಪಟ್ಟ ಕಷ್ಟಗಳು ಒಂದೆರಡಲ್ಲ. ನಡುರಸ್ತೆಯಲ್ಲೇ ಪ್ರಾಣ ಬಿಟ್ಟವರೂ ಇದ್ದಾರೆ. ಅಂಥ ಕರಾಳ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತದೆ ‘ಫೋಟೋ’ ಸಿನಿಮಾ.

ಇದನ್ನೂ ಓದಿ: Review: ಸರಳವಾದರೂ ತುಂಬ ವಿರಳವಾದ ಪ್ರೇಮಕಥೆಯಾಗಿ ಮೆಚ್ಚುಗೆ ಪಡೆಯುವ ಸುನಿ ಸಿನಿಮಾ

ಕೂಲಿ ಕೆಲಸ ಮಾಡುವ ತಂದೆಯ ಜೊತೆಗೆ ಉತ್ತರ ಕರ್ನಾಟಕದ ಮುಗ್ಧ ಬಾಲಕನೊಬ್ಬ ಬೆಂಗಳೂರಿಗೆ ಬಂದಿರುತ್ತಾನೆ. ವಿಧಾನ ಸೌಧ ಮತ್ತು ‘ಡಿ ಬಾಸ್​’ ದರ್ಶನ್​ ಜೊತೆ ಒಂದು ಫೋಟೋ ತೆಗೆಸಿಕೊಳ್ಳಬೇಕು ಎಂಬುದು ಆತನ ಕನಸು. ಇನ್ನೇನು ಆತ ವಿಧಾನ ಸೌಧ ನೋಡಲು ಹೋಗಬೇಕು ಎಂಬಷ್ಟರಲ್ಲಿ ಲಾಕ್​ಡೌನ್​ ಜಾರಿ ಆಗುತ್ತದೆ. ತಂದೆ-ಮಗ ವಾಪಸ್​ ಊರು ಸೇರಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆದರೆ ಯಾವುದೇ ವಾಹನದ ವ್ಯವಸ್ಥೆ ಇಲ್ಲ. ನಡೆದುಕೊಂಡು ಹೋಗಲು ನಿರ್ಧರಿಸುವ ಅವರಿಗೆ ನರಕವೇ ಎದುರಾದಂತೆ ಕಷ್ಟಗಳು ಎದುರಾಗುತ್ತವೆ. ಹಣ ಇಲ್ಲದೇ, ಊಟವಿಲ್ಲದೇ ನೂರಾರು ಕಿಲೋಮೀಟರ್​ ಕಾಲು ನಡಿಗೆಯಲ್ಲಿ ಸಾಗುವ ತಂದೆ-ಮಗನ ಕಹಾನಿಯೇ ‘ಫೋಟೋ’ ಸಿನಿಮಾದ ಜೀವಾಳ.

ಮೊದಲೇ ಹೇಳಿದಂತೆ ‘ಫೋಟೋ’ ಸಿನಿಮಾವನ್ನು ನಿರ್ದೇಶಕ ಉತ್ಸವ್​ ಗೋವಾವರ್​ ಅವರು ಸಂಪೂರ್ಣ ಬೇರೆ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಸಿದ್ಧ ಮಾದರಿಯ ಕಮರ್ಷಿಯಲ್​ ಸಿನಿಮಾಗಳಿಗೆ ‘ಫೋಟೋ’ ಚಿತ್ರವನ್ನು ಹೋಲಿಸಲು ಸಾಧ್ಯವಿಲ್ಲ. ಹಿನ್ನೆಲೆ ಸಂಗೀತದ ಮೂಲಕ ಭಾವನೆಗಳನ್ನು ತೀವ್ರಗೊಳಿಸುವ ಅನಿವಾರ್ಯಕ್ಕೂ ನಿರ್ದೇಶಕರು ಕಟ್ಟುಬಿದ್ದಿಲ್ಲ. ಇದ್ದಿದ್ದನ್ನು ಇದ್ದಂತೆಯೇ ಬಹಳ ರಿಯಲಿಸ್ಟಿಕ್​ ಆಗಿ ಕಥೆಯನ್ನು ವಿವರಿಸಿದ್ದಾರೆ. ಲಾಕ್​ಡೌನ್​ ವೇಳೆ ಬಡವನ ಬದುಕು ಎಷ್ಟು ನೋವು ಅನುಭವಿಸಿತ್ತು ಎಂಬುದರ ಸತ್ಯದರ್ಶನವನ್ನು ಈ ಸಿನಿಮಾ ಮೂಲಕ ಮಾಡಿಸಿದ್ದಾರೆ.

ಇದನ್ನೂ ಓದಿ: Laapataa Ladies Review: ಈ ಕಾಲಕ್ಕೆ ಬೇಕಾದ ಮಹತ್ವಪೂರ್ಣ ಸಿನಿಮಾ ‘ಲಾಪತಾ ಲೇಡೀಸ್’

ರಂಗಭೂಮಿ ಕಲಾವಿದ ಮಹಾದೇವ ಹಡಪದ ಅವರು ಕೂಲಿ ಕಾರ್ಮಿಕನ ಪಾತ್ರದಲ್ಲಿ ನಟಿಸಿದ್ದಾರೆ. ಮಗನ ಪಾತ್ರದಲ್ಲಿ ಬಾಲ ನಟ ವೀರೇಶ್​ ಗೋನಾವರ ನಟಿಸಿದ್ದಾನೆ. ಅವರಿಬ್ಬರು ನಿಜವಾಗಿಯೂ ತಂದೆ-ಮಗನೇನೋ ಎಂಬಷ್ಟು ಸಹಜವಾಗಿದೆ ಅವರ ನಟನೆ. ಯಾವುದೇ ದೃಶ್ಯದಲ್ಲೂ ಹಿನ್ನೆಲೆ ಸಂಗೀತ ಇಲ್ಲ. ಇಂಥ ಸಿನಿಮಾದಲ್ಲಿ ಭಾವನೆಗಳನ್ನು ಪ್ರೇಕ್ಷಕರ ಹೃದಯಕ್ಕೆ ನಾಟುವಂತೆ ಅಭಿನಯಿಸುವುದು ಸವಾಲಿನ ಕೆಲಸ. ಅದನ್ನು ಮಹಾದೇವ ಹಡಪದ ಹಾಗೂ ವೀರೇಶ್​ ಗೋನಾವರ ತುಂಬ ಸಮರ್ಥವಾಗಿ ನಿಭಾಯಿಸಿದ್ದಾರೆ. ಇನ್ನುಳಿದ ಪಾತ್ರಗಳಲ್ಲಿ ಕಾಣಿಸಿಕೊಂಡ ಸಂಧ್ಯಾ ಅರಕೆರೆ ಹಾಗೂ ಎಂ.ಎಸ್. ಜಹಾಂಗೀರ್​ ಅವರ ಅಭಿನಯವೂ ಮನಸ್ಸಿನಲ್ಲಿ ಉಳಿಯುತ್ತದೆ.

ಕಟ್ಟುಕಥೆಯ ಸಿನಿಮಾಗಳಿಗಿಂತ ನೈಜ ಘಟನೆಯನ್ನು ಸ್ಫೂರ್ತಿಯಾಗಿಟ್ಟು ನಿರ್ಮಾಣ ಆಗುವ ‘ಫೋಟೋ’ ರೀತಿಯ ಸಿನಿಮಾಗಳ ಮಹತ್ವ ದೊಡ್ಡದು. ಲಾಕ್​ಡೌನ್​ನಲ್ಲಿ ಅಸಹಾಯಕತೆಯಿಂದ ಪ್ರಾಣ ಕಳೆದುಕೊಂಡ ಎಲ್ಲರಿಗೂ ನಮನ ಸಲ್ಲಿಸುವ ಪ್ರಯತ್ನದ ರೀತಿಯಲ್ಲಿ ಈ ಸಿನಿಮಾ ಮೂಡಿಬಂದಿದೆ. ಬಡ ಜೀವಗಳು ಅವ್ಯವಸ್ಥೆಯ ವಿರುದ್ಧ ಸಿಡಿದೇಳುವುದಿಲ್ಲ. ಆಳುವವರ ಅವೈಜ್ಞಾನಿಕ ನಿರ್ಧಾರಗಳನ್ನು ಜೋರು ಧ್ವನಿಯಲ್ಲಿ ಬಡವರು ಪ್ರಶ್ನಿಸುವುದಿಲ್ಲ. ಅಂತಹ ಧ್ವನಿ ಅಡಗಿದ ಮಂದಿಯ ಧ್ವನಿಯಂತಿದೆ ‘ಫೋಟೋ’ ಸಿನಿಮಾ.

ಇದನ್ನೂ ಓದಿ: Kerebete Review: ಕುತೂಹಲಭರಿತ ಕೆರೆಬೇಟೆಯಲ್ಲಿ ಊಹಿಸಲಾಗದ ಟ್ವಿಸ್ಟ್​

ನಿರ್ದೇಶಕ ಉತ್ಸವ್​ ಗೋನಾವರ ಅವರು ಹೇಳಬೇಕಾದ ಎಲ್ಲವನ್ನೂ ಮೊನಚಾದ ದೃಶ್ಯಗಳ ಮೂಲಕವೇ ಹೇಳಿದ್ದಾರೆ. ಅಬ್ಬರದ ಸಂಭಾಷಣೆಯನ್ನು ಅವರು ಎಲ್ಲಿಯೂ ಬಳಸಿಲ್ಲ. ಲಾಕ್​ಡೌನ್​ನ ಕರಾಳತೆಯನ್ನು ತೋರಿಸಲು ಅವರು ಯಶಸ್ವಿ ಆಗಿದ್ದಾರೆ. ಪ್ರತಿ ದೃಶ್ಯದಲ್ಲೂ ಅವರ ತಂಡದ ಶ್ರಮ ಕಾಣುತ್ತದೆ. ನಿರ್ದೇಶಕರ ಆಶಯಕ್ಕೆ ದಿನೇಶ್​ ದಿವಾಕರನ್​ ಅವರ ಛಾಯಾಗ್ರಹಣ ಕೂಡ ಚೆನ್ನಾಗಿ ಸಾಥ್​ ನೀಡಿದೆ. ಮುಗಿದ ನಂತರವೂ ಕಾಡುವಂತಹ ಗುಣ ಇರುವ ಸಿನಿಮಾವಾಗಿ ‘ಫೋಟೋ’ ಆಪ್ತವೆನಿಸುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 5:40 pm, Fri, 15 March 24