ಸಿನಿಮಾ: ಮಿಸ್ಟರ್ ಬ್ಯಾಚುಲರ್
ನಿರ್ಮಾಣ: ಶ್ರೀನಿವಾಸ್ ಎಲ್., ಹನುಮಂತ ರಾವ್ ಹಾಗೂ ಸ್ವರ್ಣಲತಾ
ನಿರ್ದೇಶನ: ನಾಯ್ಡು ಬಂಡಾರು
ಸಂಗೀತ: ಮಣಿಕಾಂತ್ ಕದ್ರಿ
ಪಾತ್ರವರ್ಗ: ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ನಿಮಿಕಾ ರತ್ನಾಕರ್, ಸಾಧು ಕೋಕಿಲ, ಚಿಕ್ಕಣ್ಣ, ಅಯ್ಯಪ್ಪ ಮೊದಲಾದವರು.
ಸ್ಟಾರ್: 3/5
ಚಿಕ್ಕ ವಯಸ್ಸಿನಲ್ಲಿ ಏನಾಗಬೇಕು ಎಂದು ಕೇಳಿದರೆ ಸಾಮಾನ್ಯವಾಗಿ ಎಲ್ಲರೂ ಇಂಜಿನಿಯರ್, ಡಾಕ್ಟರ್ ಆಗಬೇಕೆಂದು ಹೇಳುತ್ತಾರೆ. ಆದರೆ, ಈ ಚಿತ್ರದ ಕಥಾ ನಾಯಕ ಕಾರ್ತಿಕ್ (ಡಾರ್ಲಿಂಗ್ ಕೃಷ್ಣ) ಕಂಡ ಕನಸು ಮದುವೆ ಆಗಬೇಕು ಎಂದು. ಮದುವೆ ಎಂದರೆ ಹಬ್ಬ, ವಿವಾಹ ಆದಮೇಲೆ ಹಾಯಾಗಿ ಇರಬಹುದು ಎಂಬ ಆಲೋಚನೆ ಆತನದ್ದು. ಇದನ್ನು ನನಸು ಮಾಡಿಕೊಳ್ಳಬೇಕು ಎಂದು ಹೊರಡುವ ಈ ಬ್ಯಾಚುಲರ್ ಫಜೀತಿಗೆ ಸಿಲುಕುತ್ತಾನೆ. ಕೆಲವೇ ದಿನಗಳ ಅಂತರದಲ್ಲಿ ಇಬ್ಬರು ನಾಯಕಿಯರ (ಮಿಲನಾ ನಾಗರಾಜ್, ನಿಮಿಕಾ ರತ್ನಾಕರ್) ಭೇಟಿ ಆಗುತ್ತದೆ. ವರ್ಜಿನ್ ಎಂಬುದೇ ಆತನಿಗೆ ಮುಳುವಾಗುತ್ತದೆ. ಅಲ್ಲಿಂದ ಏರಿಳಿತ ಶುರು. ಈ ನಾಯಕಿಯರಲ್ಲಿ ಅಂತಿಮವಾಗಿ ಕಾರ್ತಿಕ್ ಯಾರನ್ನು ಮದುವೆ ಆಗುತ್ತಾನೆ? ವಿಲನ್ಗಳು ಈತನ ವಿರುದ್ಧ ದ್ವೇಷ ಕಾರೋದು ಯಾಕೆ ಎಂಬುದು ಸಿನಿಮಾದ ಕಥೆ.
ಮಾಸ್ ಆ್ಯಂಡ್ ಕ್ಲಾಸ್
ಡಾರ್ಲಿಂಗ್ ಕೃಷ್ಣ ಅವರು ‘ಲವ್ ಮಾಕ್ಟೇಲ್’, ‘ಲವ್ ಮಾಕ್ಟೇಲ್ 2’ ಸಿನಿಮಾದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದರು. ಆ ಸಿನಿಮಾಗಳಲ್ಲಿ ಲವ್, ಮದುವೆ ವಿಚಾರ ಪ್ರಮುಖವಾಗಿ ಹೈಲೈಟ್ ಆಗಿತ್ತು. ಈ ಚಿತ್ರದಲ್ಲೂ ಮದುವೆ ವಿಚಾರ ಇದೆ. ಆದರೆ, ಕಥೆಯ ಸ್ವರೂಪ ಬೇರೆ. ಅದೇನು ಎಂಬುದನ್ನು ಸಿನಿಮಾದಲ್ಲೇ ಕಣ್ತುಂಬಿಕೊಳ್ಳಬೇಕು. ಡಾರ್ಲಿಂಗ್ ಕೃಷ್ಣ ಈ ಬಾರಿ ಮಾಸ್ ಅವತಾರ ತಾಳಿದ್ದಾರೆ. ಸಖತ್ ಆಗಿ ಅವರು ಫೈಟ್ ಮಾಡಿದ್ದಾರೆ. ಈ ರೀತಿಯಲ್ಲೂ ಅವರು ಇಷ್ಟವಾಗುತ್ತಾರೆ. ಮೊದಲಾರ್ಧದಲ್ಲಿ ನಗಿಸುವ ಅವರು, ಎರಡನೇ ಭಾಗದಲ್ಲಿ ಮಾಸ್ ಅವತಾರ ತಾಳುತ್ತಾರೆ.
ಭರಪೂರ ಹಾಸ್ಯ
ಡಾರ್ಲಿಂಗ್ ಕೃಷ್ಣ ಅವರ ಸಿನಿಮಾದಲ್ಲಿ ನಗು ಇದ್ದೇ ಇರುತ್ತದೆ. ಈ ಸಿನಿಮಾದಲ್ಲೂ ಅದು ಮುಂದುವರಿದಿದೆ. ಗಿರಿ, ಚಿಕ್ಕಣ್ಣ ಅವರು ಈ ಸಿನಿಮಾದಲ್ಲಿ ಸಖತ್ ನಗುವಿನ ಕಿಕ್ ನೀಡಿದ್ದಾರೆ. ಸಾಧು ಕೋಕಿಲ ಕೆಲವೇ ದೃಶ್ಯಗಳಿಗೆ ಸೀಮಿತವಾಗಿದ್ದಾರೆ. ಮಿಲನಾ ನಾಗರಾಜ್ಗಿಂತ ನಿಮಿಕಾ ರತ್ನಾಕರ್ ಅವರ ಪಾತ್ರ ಹೆಚ್ಚು ಹೈಲೈಟ್ ಆಗಿದೆ. ಯಶ್ ಶೆಟ್ಟಿ ಅವರು ಕೆಲವೇ ನಿಮಿಷ ತೆರೆಮೇಲೆ ಬರುತ್ತಾರೆ. ಅಯ್ಯಪ್ಪ ಅವರು ವಿಲನ್ ಆಗಿ ಅಬ್ಬರಿಸಿದ್ದಾರೆ. ಪವಿತ್ರಾ ಲೋಕೇಶ್ ಅವರು ತಾಯಿ ಸೆಂಟಿಮೆಂಟ್ ಮೂಲಕ ಇಷ್ಟವಾಗುತ್ತಾರೆ.
ಸಿನಿಮಾ ಪರಿಪೂರ್ಣವೇ?
‘ಮಿಸ್ಟರ್ ಬ್ಯಾಚುಲರ್’ ಸಿನಿಮಾಗೆ ನಿರ್ದೇಶನ ಮಾಡಿರುವ ನಾಯ್ಡು ಬಂಡಾರು ಅವರು ಒಂದು ಹಂತಕ್ಕೆ ಗೆದ್ದಿದ್ದಾರೆ. ಆದರೆ, ಸಿನಿಮಾ ಪರಿಪೂರ್ಣ ಅಲ್ಲ. ಸಣ್ಣಪುಟ್ಟ ಲೋಪದೋಷಗಳಿವೆ. ವರ್ಜಿನಿಟಿ ವಿಚಾರ ಪದೇಪದೇ ಕಿವಿಮೇಲೆ ಬೀಳುವುದರಿಂದ ಫ್ಯಾಮಿಲಿ ಆಡಿಯನ್ಸ್ಗೆ ಮುಜುಗರ ತರಬಹುದು. ಹಾಡುಗಳು ಪ್ರೇಕ್ಷಕರ ಕಿವಿಯಲ್ಲಿ ಗುನುಗುವುದಿಲ್ಲ. ಫೈಟ್ ನೋಡಿ ನಾಯಕನ ಮೇಲೆ ನಾಯಕಿಗೆ ಲವ್ ಆಗೋದು, ಓಪನ್ ಸೀನ್ನಲ್ಲಿ ನಾಯಕ ಬಾರ್ಗೆ ಬಂದು ಕೂತು ಕಂಟಪೂರ್ತಿ ಕುಡಿಯುವುದು ಸೇರಿ ಅನೇಕ ವಿಚಾರಗಳು ಈ ಮೊದಲಿನ ಸಿನಿಮಾಗಳಲ್ಲಿ ಬಂದು ಹೋದ ದೃಶ್ಯಗಳನ್ನು ನೆನಪಿಸುತ್ತವೆ. ಕಥೆ ಹಾಗೂ ನಿರೂಪಣೆ ವಿಚಾರದಲ್ಲಿ ನಿರ್ದೇಶಕರು ಹೊಸತನ ಪ್ರಯತ್ನಿಸಬಹುದಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ