For Regn Review: ಡಿಫರೆಂಟ್​ ಜೋಡಿಯ ಸಂಸಾರದ ಕಥೆಯಲ್ಲಿ ಕೊನೆವರೆಗೂ ಸಸ್ಪೆನ್ಸ್​

|

Updated on: Feb 23, 2024 | 6:33 PM

ನವ ಜೋಡಿಯ ಸಂಸಾರದ ಕಹಾನಿಯನ್ನು ಇಟ್ಟುಕೊಂಡು ಹಲವು ಸಿನಿಮಾಗಳು ಮೂಡಿಬಂದಿವೆ. ಅವುಗಳಲ್ಲಿಯೇ ಸ್ವಲ್ಪ ಭಿನ್ನವಾದ ಕಥೆ ‘ಫಾರ್​ ರಿಜಿಸ್ಟ್ರೇಷನ್​’ ಸಿನಿಮಾದಲ್ಲಿದೆ. ಮಿಲನಾ ನಾಗರಾಜ್​ ಮತ್ತು ಪೃಥ್ವಿ ಅಂಬಾರ್​ ಅವರ ಕಾಂಬಿನೇಷನ್​ನಿಂದ ಈ ಕಥೆಗೆ ಬೇರೆಯದೇ ಮೆರುಗು ಬಂದಿದೆ. ‘ಫಾರ್​ ರಿಜಿಸ್ಟ್ರೇಷನ್​’ ಸಿನಿಮಾದ ವಿಮರ್ಶೆ ಇಲ್ಲಿದೆ..

For Regn Review: ಡಿಫರೆಂಟ್​ ಜೋಡಿಯ ಸಂಸಾರದ ಕಥೆಯಲ್ಲಿ ಕೊನೆವರೆಗೂ ಸಸ್ಪೆನ್ಸ್​
ಮಿಲನಾ ನಾಗರಾಜ್​, ಪೃಥ್ವಿ ಅಂಬಾರ್​
Follow us on

ಚಿತ್ರ: ಫಾರ್​ ರಿಜಿಸ್ಟ್ರೇಷನ್​. ನಿರ್ಮಾಣ: ಎನ್​. ನವೀನ್​ ರಾವ್​. ನಿರ್ದೇಶನ: ನವೀನ್​ ದ್ವಾರಕನಾಥ್​. ಪಾತ್ರವರ್ಗ: ಮಿಲನಾ ನಾಗರಾಜ್​, ಪೃಥ್ವಿ ಅಂಬಾರ್​, ಪಿ. ರವಿಶಂಕರ್​, ತಬಲ ನಾಣಿ, ಬಾಬು ಹಿರಣ್ಣಯ್ಯ, ಸುಧಾ ಬೆಳವಾಡಿ, ಎ.ಎಸ್​. ಉಮೇಶ್​, ಸಿಹಿಕಹಿ ಚಂದ್ರು, ರಮೇಶ್​ ಭಟ್​ ಮುಂತಾದವರು. ಸ್ಟಾರ್: 3/5

2020ರ ಆರಂಭದಲ್ಲಿ ‘ದಿಯಾ’ ಮತ್ತು ‘ಲವ್​ ಮಾಕ್ಟೇಲ್​’ ಸಿನಿಮಾಗಳು ಬಿಡುಗಡೆ ಆಗಿದ್ದವು. ಮೊದಲ ಲಾಕ್​ಡೌನ್​ ಆಗುವುದಕ್ಕೂ ಮುನ್ನ ಜನರು ಈ ಎರಡೂ ಚಿತ್ರಗಳನ್ನು ನೋಡಿ ಮೆಚ್ಚಿಕೊಂಡಿದ್ದರು. ‘ದಿಯಾ’ ಸಿನಿಮಾದಿಂದ ಪೃಥ್ವಿ ಅಂಬಾರ್​ (Pruthvi Ambaar) ರಾಜ್ಯಾದ್ಯಂತ ಜನಪ್ರಿಯತೆ ಹೆಚ್ಚಿಸಿಕೊಂಡರು. ಇತ್ತ, ‘ಲವ್​ ಮಾಕ್ಟೇಲ್​’ ಸಿನಿಮಾದಿಂದ ಮಿಲನಾ ನಾಗರಾಜ್​ ಅವರ ಖ್ಯಾತಿ ಹೆಚ್ಚಿತ್ತು. ಹೀಗೆ ಏಕಕಾಲಕ್ಕೆ ಬೇರೆ ಬೇರೆ ಸಿನಿಮಾಗಳಿಂದ ಯಶಸ್ಸು ಗಳಿಸಿದ ಮಿಲನಾ ನಾಗರಾಜ್​ (Milana Nagaraj) ಮತ್ತು ಪೃಥ್ವಿ ಅಂಬಾರ್​ ಅವರು ‘ಫಾರ್ ರಿಜಿಸ್ಟ್ರೇಷನ್​’ ಚಿತ್ರಕ್ಕಾಗಿ ಜೋಡಿಯಾಗುತ್ತಾರೆ ಎಂದಾಗ ಅಭಿಮಾನಿಗಳಿಗೆ ಖುಷಿಯಾಗಿತ್ತು. ಆ ಸಿನಿಮಾ ಇಂದು (ಫೆಬ್ರವರಿ 23) ಬಿಡುಗಡೆ ಆಗಿದೆ. ಹಾಗಾದರೆ ಈ ಜೋಡಿಯ ಸಿನಿಮಾ ಹೇಗಿದೆ ಎಂಬದನ್ನು ತಿಳಿಯಬೇಕಿದ್ದರೆ ಈ ವಿಮರ್ಶೆ (For Regn Review) ಓದಿ..

ಫ್ಯಾಮಿಲಿ ಪ್ಯಾಕೇಜ್​:

ಮಿಲನಾ ನಾಗರಾಜ್​ ಮತ್ತು ಪೃಥ್ವಿ ಅಂಬಾರ್​ ಅವರನ್ನು ಫ್ಯಾಮಿಲಿ ಪ್ರೇಕ್ಷಕರು ಹೆಚ್ಚು ಇಷ್ಟಪಡುತ್ತಾರೆ. ಕ್ಲಾಸ್​ ಆದಂತಹ ಕಥೆಗಳಿಗೆ ತುಂಬ ಚೆನ್ನಾಗಿ ಹೊಂದಿಕೆ ಆಗುವಂತಹ ಕಲಾವಿದರಿವರು. ಅವರಿಬ್ಬರ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ‘ಫಾರ್​ ರಿಜಿಸ್ಟ್ರೇಷನ್​’ ಸಿನಿಮಾ ಕೂಡ ಫ್ಯಾಮಿಲಿ ಆಡಿಯನ್ಸ್​ಗೆ ಹೇಳಿ ಮಾಡಿಸಿದಂತಿದೆ. ಒಂದು ಫ್ಯಾಮಿಲಿಯ ಕಹಾನಿ ಇದರಲ್ಲಿ ಇದೆ. ಗಂಡ-ಹೆಂಡತಿ ನಡುವಿನ ಸಂಬಂಧಗಳ ಕಥೆಯನ್ನು ಈ ಸಿನಿಮಾ ವಿವರಿಸುತ್ತದೆ. ಮನರಂಜನೆ ನೀಡುತ್ತಲೇ ಒಂದು ಮೆಸೇಜ್​ ನೀಡುವಲ್ಲಿಯೂ ಈ ಸಿನಿಮಾ ಯಶಸ್ವಿ ಆಗಿದೆ. ಆ ಮೆಸೇಜ್​ ಏನೆಂಬುದು ತಿಳಿಯಲು ‘ಫಾರ್​ ರಿಜಿಸ್ಟ್ರೇಷನ್​’ ಚಿತ್ರ ನೋಡಬೇಕು.

ಪೃಥ್ವಿ-ಮಿಲನಾ ಕಾಂಬಿನೇಷನ್​:

ಇದೇ ಮೊದಲ ಬಾರಿಗೆ ಪೃಥ್ವಿ ಅಂಬಾರ್​ ಮತ್ತು ಮಿಲನಾ ನಾಗರಾಜ್​ ಅವರು ಜೋಡಿಯಾಗಿ ನಟಿಸಿದ್ದಾರೆ. ಈ ಫ್ರೆಶ್​ ಜೋಡಿಯಿಂದಾಗಿ ಸಿನಿಮಾದ ಮೆರುಗು ಹೆಚ್ಚಿದೆ. ಕಂಪನಿಯೊಂದರ ಮಾರ್ಕೆಟಿಂಗ್​ ವಿಭಾಗದಲ್ಲಿ ಕೆಲಸ ಮಾಡುವ ಅಶು ಎಂಬ ಹುಡುಗನಾಗಿ ಪೃಥ್ವಿ ಅಂಬಾರ್​ ನಟಿಸಿದ್ದಾರೆ. ಅನ್ವಿ ಎಂಬ ಪಾತ್ರಕ್ಕೆ ಮಿಲನಾ ನಾಗರಾಜ್​ ಬಣ್ಣ ಹಚ್ಚಿದ್ದಾರೆ. ಮೊದಲು ಅಪರಿಚಿತರಾಗಿ, ನಂತರ ಪ್ರೇಮಿಗಳಾಗಿ, ಬಳಿಕ ಪತಿ-ಪತ್ನಿಯಾಗಿ ಇಬ್ಬರ ಕೆಮಿಸ್ಟ್ರಿ ಚೆನ್ನಾಗಿ ಮೂಡಿಬಂದಿದೆ. ನಂತರ ಮನಸ್ತಾಪದಿಂದ ಜಗಳವಾಡುವ ಸಂದರ್ಭ ಬಂದಾಗಲೂ ಅಶು ಮತ್ತು ಅನ್ವಿ ಪಾತ್ರಗಳನ್ನು ಈ ಕಲಾವಿದರು ಚೆನ್ನಾಗಿ ನಿಭಾಯಿಸಿದ್ದಾರೆ.

ಇದನ್ನೂ ಓದಿ: Shakhahaari Review: ‘ಶಾಖಾಹಾರಿ’ ಸಿನಿಮಾದಲ್ಲಿ ಹಲವು ಟ್ವಿಸ್ಟ್​; ರಂಗಾಯಣ ರಘು ಬೆಸ್ಟ್​

‘ಫಾರ್​ ರಿಜಿಸ್ಟ್ರೇಷನ್’ ಸಿನಿಮಾದ ಕಥೆ:

ಪೋಷಕರಿಗೆ ತಿಳಿಸದೆಯೇ ಮದುವೆ ಆಗಿ, ಬೇರೆ ಮನೆಯಲ್ಲಿ ಸಂಸಾರ ಮಾಡಿಕೊಂಡು ಜೀವನ ಸಾಗಿಸುವ ಜೋಡಿಯಾಗಿ ಮಿಲನಾ ನಾಗರಾಜ್​ ಮತ್ತು ಪೃಥ್ವಿ ಅಂಬಾರ್​ ನಟಿಸಿದ್ದಾರೆ. ಒಂದು ದಿನ ಈ ಸೀಕ್ರೆಟ್​ ಮದುವೆಯ ವಿಷಯ ರಟ್ಟಾಗುತ್ತದೆ. ಹಾಗಾದರೆ ಕುಟುಂಬದವರ ಸಮ್ಮುಖದಲ್ಲಿ ಇನ್ನೊಮ್ಮೆ ಮದುವೆ ಮಾಡಬೇಕು ಎಂಬ ನಿರ್ಧಾರಕ್ಕೆ ಬರಲಾಗುತ್ತದೆ. ಅಲ್ಲಿಂದ ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಇನ್ನೇನು ಆ ಸಮಸ್ಯೆಗಳೂ ಸರಿ ಆಯಿತು ಎನ್ನುವಾಗ ಪತಿ-ಪತ್ನಿಯ ನಡುವೆ ಹೊಸ ಕಾರಣಕ್ಕಾಗಿ ಮನಸ್ತಾಪ ಉಂಟಾಗುತ್ತದೆ. ಒಂದು ರಹಸ್ಯವಾದ ಫೋಟೋ ವಿಲನ್​ ಆಗಿ ಕಾಡುತ್ತದೆ. ಇನ್ನೇನು ವಿಚ್ಛೇದನ ಪಡೆಯಬೇಕು ಎಂಬ ಹಂತಕ್ಕೆ ಜಗಳ ಮುಂದುವರಿಯುತ್ತದೆ. ಹಾಗಾದರೆ ಇಬ್ಬರ ನಡುವಿನ ಸಮಸ್ಯೆ ಏನು? ಫೋಟೋದಲ್ಲಿ ಇರುವ ರಹಸ್ಯ ಏನು ಎಂಬಿತ್ಯಾದಿ ವಿಷಯಗಳ ಬಗ್ಗೆ ಕೊನೆವರೆಗೂ ಕೌತುಕ ಮೂಡಿಸುತ್ತ ಸಿನಿಮಾ ಆಗುತ್ತದೆ.

ಪ್ರತಿಭಾವಂತ ಕಲಾವಿದರ ಬಳಗ:

ಮಿಲನಾ ನಾಗರಾಜ್​ ಮತ್ತು ಪೃಥ್ವಿ ಅಂಬಾರ್​ ಮಾತ್ರವಲ್ಲದೇ ಈ ಸಿನಿಮಾದಲ್ಲಿ ಪ್ರತಿಭಾವಂತ ಕಲಾವಿದರ ದೊಡ್ಡ ಬಳಗವಿದೆ. ಪಿ. ರವಿಶಂಕರ್​, ತಬಲ ನಾಣಿ, ಸುಧಾ ಬೆಳವಾಡಿ, ಸಿಹಿ ಕಹಿ ಚಂದ್ರು, ರಮೇಶ್​ ಭಟ್​, ಎಂ.ಎಸ್​. ಉಮೇಶ್​, ಬಾಬು ಹಿರಣ್ಣಯ್ಯ ಮುಂತಾದವರು ಅಭಿನಯಿಸಿದ್ದಾರೆ. ಕಾಮಿಡಿ ಮೂಲಕ ತಬಲ ನಾಣಿ ಅವರು ಸಿನಿಮಾದ ಮೆರುಗು ಹೆಚ್ಚಿಸಿದ್ದಾರೆ. ಪಿ. ರವಿಶಂಕರ್​ ಹೆಚ್ಚು ಹೈಲೈಟ್​ ಆಗಿದ್ದಾರೆ. ಬೇರೆಲ್ಲ ಸಿನಿಮಾಗಳಲ್ಲಿ ವಿಲನ್ ಆಗಿ ಅಥವಾ ಖಡಕ್​ ತಂದೆ/ಅಣ್ಣನಾಗಿ ಅಬ್ಬರಿಸುವ ಅವರು ಈ ಸಿನಿಮಾದಲ್ಲಿ ಲವಲವಿಕೆ ಇರುವಂತಹ ಲಾಯರ್​ ಪಾತ್ರ ಮಾಡಿದ್ದಾರೆ. ಕಥೆಯ ನಡುನಡುವೆ ಅನೇಕ ದೃಶ್ಯಗಳಲ್ಲಿ ಬಂದು ಅವರು ಮನರಂಜನೆ ನೀಡುತ್ತಾರೆ.

ಇದನ್ನೂ ಓದಿ: Review: ಸರಳವಾದರೂ ತುಂಬ ವಿರಳವಾದ ಪ್ರೇಮಕಥೆಯಾಗಿ ಮೆಚ್ಚುಗೆ ಪಡೆಯುವ ಸುನಿ ಸಿನಿಮಾ

ಕೆಲವು ಮೈನಸ್​:

ಒಟ್ಟಾರೆಯಾಗಿ ‘ಫಾರ್​ ರಿಜಿಸ್ಟ್ರೇಷನ್​’ ಸಿನಿಮಾದಲ್ಲಿ ಮನರಂಜನೆಯ ಅಂಶ ಇದೆ. ಹಾಗಿದ್ದರೂ ಅಲ್ಲಲ್ಲಿ ಸಣ್ಣ-ಪುಟ್ಟ ಕೊರತೆ ಕಾಣಿಸುತ್ತದೆ. ಪದೇ ಪದೇ ಬರುವ ಹಾಡುಗಳು ಚೆನ್ನಾಗಿದ್ದರೂ ಕೂಡ ಕಥೆಯ ಓಟಕ್ಕೆ ಕೊಂಚ ಅಡ್ಡಿಪಡಿಸಿದಂತೆ ಭಾಸವಾಗುತ್ತದೆ. ಇರುವ ಒಂದು ಕೌತುಕದ ಅಂಶವನ್ನೇ ಎಷ್ಟು ಸಾಧ್ಯವೋ ಎಷ್ಟು ಹೊತ್ತು ಎಳೆದಾಡಿದಂತಾಗಿದೆ. ಕಾಮಿಡಿ ದೃಶ್ಯಗಳಿಗೆ ಇನ್ನಷ್ಟು ಹೊಸತನವನ್ನು ನೀಡಿದ್ದರೆ ಚೆನ್ನಾಗಿರುತ್ತಿತ್ತು. ಇಂಥ ಕೆಲವು ಕೊರತೆಗಳ ನಡುವೆಯೂ ‘ಫಾರ್​ ರಿಜಿಸ್ಟ್ರೇಷನ್​’ ಸಿನಿಮಾ ರಂಜನೀಯವಾಗಿ ಮೂಡಿಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.