ಜಂಗಲ್ ಮಂಗಲ್ ವಿಮರ್ಶೆ: ಲಾಕ್​ ಡೌನ್ ಪ್ರೇಮಕಥೆ ನಡುವೆ ಒಂದಷ್ಟು ರೋಚಕತೆ

ಜಂಗಲ್ ಮಂಗಲ್ ವಿಮರ್ಶೆ: ಲಾಕ್​ ಡೌನ್ ಪ್ರೇಮಕಥೆ ನಡುವೆ ಒಂದಷ್ಟು ರೋಚಕತೆ
Jungle Mangal Movie Poster
Jungle Mangal
UA
  • Time - 92 Minutes
  • Released - 04 July 2025
  • Language - Kannada
  • Genre - Adventure, Thriller
Cast - ಯಶ್ ಶೆಟ್ಟಿ, ಹರ್ಷಿತಾ ರಾಮಚಂದ್ರ, ಉಗ್ರಂ ಮಂಜು, ಬಾಲ ರಾಜವಾಡಿ, ದೀಪಕ್ ರೈ ಪಾಣಾಜೆ ಮುಂತಾದವರು.
Director - ರಕ್ಷಿತ್ ಕುಮಾರ್
3
Critic's Rating
Updated By: Digi Tech Desk

Updated on: Jul 18, 2025 | 5:40 PM

ಕೊರೊನಾ ವೈರಸ್ ಕಾರಣದಿಂದ ಲಾಕ್ ಡೌನ್ ಆದಾಗ ಎಲ್ಲರ ಜೀವನವೂ ಕಷ್ಟಕರವಾಗಿತ್ತು. ಒಬ್ಬೊಬ್ಬರ ಕಷ್ಟ ಒಂದೊಂದು ರೀತಿ. ಆ ಸಮಯದಲ್ಲಿ ಏನೆಲ್ಲ ನಡೆಯಿತು ಎಂಬುದನ್ನು ಇಟ್ಟುಕೊಂಡು ಬೇಕಾದಷ್ಟು ಸಿನಿಮಾ ಮಾಡಬಹುದು. ಈಗಾಗಲೇ ಲಾಕ್​ಡೌನ್ ದಿನಗಳನ್ನು ಕೇಂದ್ರವಾಗಿಟ್ಟುಕೊಂಡು ಕೆಲವು ಸಿನಿಮಾಗಳು ಬಂದಿವೆ. ಆ ಸಾಲಿಗೆ ಹೊಸ ಸೇರ್ಪಡೆ ‘ಜಂಗಲ್ ಮಂಗಲ್’. ರಕ್ಷಿತ್ ಕುಮಾರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಕಾಡಿನೊಳಗೆ ಸಿಕ್ಕಿ ಹಾಕಿಕೊಳ್ಳುವ ಪ್ರೇಮಿಗಳ ಕಥೆ ಈ ಸಿನಿಮಾದಲ್ಲಿದೆ.

‘ಜಂಗಲ್ ಮಂಗಲ್’ ಕಥೆ ಹೀಗಿದೆ.. ಲಾಕ್ ಡೌನ್ ಆದ ಕಾರಣ ಹಲವು ದಿನಗಳಿಂದ ತನ್ನ ಪ್ರೇಯಸಿಯನ್ನು ನೋಡದೇ ಪ್ರಿಯಕರ ನೊಂದಿರುತ್ತಾನೆ. ಹೇಗಾದರೂ ಮಾಡಿ ಆಕೆಯ ಜೊತೆ ಸ್ವಲ್ಪ ಹೊತ್ತು ಕಳೆಯಬೇಕು ಎಂಬ ಆಸೆ ಅವನದ್ದು. ಅದಕ್ಕಾಗಿ ಆಕೆಯ ಮನವೊಲಿಸಿ, ದಟ್ಟವಾದ ಕಾಡಿಗೆ ಕರೆದುಕೊಂಡು ಹೋಗುತ್ತಾನೆ. ಅವರಿಬ್ಬರು ಕಾಡಿನಲ್ಲಿ ಕುಳಿತು ಏಕಾಂತದಲ್ಲಿ ಮಾತನಾಡುತ್ತಿರುವಾಗ ದುಷ್ಟರ ಕಣ್ಣು ಬೀಳುತ್ತದೆ. ಅಲ್ಲಿಂದ ಅವರು ಹೇಗೆ ತಪ್ಪಿಸಿಕೊಂಡು ಬರುತ್ತಾರೆ ಎಂಬುದೇ ‘ಜಂಗಲ್ ಮಂಗಲ್’ ಕಹಾನಿ.

ಆದರೆ ಈ ಕಥೆ ಇಷ್ಟೇ ಸಿಂಪಲ್ ಆಗಿಲ್ಲ. ಆ ಪ್ರೇಮಿಗಳ ಹಿನ್ನೆಲೆ ಏನು? ಅವರಿಗೆ ಕಾಟಕೊಡುವ ದುಷ್ಟರ ಸಂಚು ಏನು ಎಂಬಿತ್ಯಾದಿ ವಿವರಗಳು ತೆರೆದುಕೊಳ್ಳುತ್ತಾ ಹೋದಂತೆ ರೋಚಕತೆ ಹೆಚ್ಚಾಗುತ್ತದೆ. ಅಲ್ಲದೇ ಈ ಕಥೆಯಲ್ಲಿ ಒಂದಷ್ಟು ಟ್ವಿಸ್ಟ್ ಕೂಡ ಇದೆ. ಪ್ರತಿ ಟ್ವಿಸ್ಟ್ ಎದುರಾದಾಗಲೂ ಥ್ರಿಲ್ ಹೆಚ್ಚುತ್ತದೆ. ಇನ್ನು, ಈ ಸಿನಿಮಾದ ಅವಧಿ ಕೇವಲ 1 ಗಂಟೆ 32 ನಿಮಿಷ. ಚಿಕ್ಕದಾದ ಚೊಕ್ಕದಾದ ಕಥೆಯನ್ನು ನೋಡಿ ಮನರಂಜನೆ ಪಡೆಯಬೇಕು ಎಂಬ ಪ್ರೇಕ್ಷಕರಿಗೆ ಈ ಸಿನಿಮಾ ರುಚಿಸುತ್ತದೆ.

ಒಂದು ಥ್​ರಿಲ್ಲರ್ ಸಿನಿಮಾಗೆ ಬೇಕಾದ ಎಲ್ಲ ಅಂಶಗಳನ್ನು ನಿರ್ದೇಶಕ ರಕ್ಷಿತ್ ಕುಮಾರ್ ಅವರು ಈ ಸಿನಿಮಾದಲ್ಲಿ ಇರಿಸಿದ್ದಾರೆ. ಫ್ಲ್ಯಾಶ್​ಬ್ಯಾಕ್ ಮೂಲಕ ಕಥೆಯನ್ನು ನಿರೂಪಿಸುತ್ತಾ, ಕೊನೆತನಕ ಕೌತುಕ ಕಾಪಾಡಿಕೊಳ್ಳಲು ಅವರು ಪ್ರಯತ್ನಿಸಿದ್ದಾರೆ. ಆದರೆ ಕೆಲವು ದೃಶ್ಯಗಳು ರಿಪೀಟ್ ಆಗಿ ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸುತ್ತವೆ. ದೃಶ್ಯಗಳು ರಿಪೀಟ್ ಆಗಿದ್ದಕ್ಕೂ ಒಂದು ಕಾರಣ ಇರಲೇಬೇಕಲ್ಲವೇ ಅಂದುಕೊಂಡು, ಕ್ಲೈಮ್ಯಾಕ್ಸ್ ತನಕ ಕಾದರೆ ಎಲ್ಲದಕ್ಕೂ ಉತ್ತರ ಸಿಗುತ್ತದೆ.

‘ಜಂಗಲ್ ಮಂಗಲ್’ ಸಿನಿಮಾದ ಮುಖ್ಯ ಪಾತ್ರದಲ್ಲಿ ಯಶ್ ಶೆಟ್ಟಿ ಅವರು ನಟಿಸಿದ್ದಾರೆ. ಆದರೆ ಅವರ ಪಾತ್ರವನ್ನು ಹೀರೋ ಎನ್ನಲು ಸಾಧ್ಯವಿಲ್ಲ. ಎಲ್ಲರೊಳಗೆ ಇರುವಂತಹ ಸಾಮಾನ್ಯ ವ್ಯಕ್ತಿಯಾಗಿ ಆ ಪಾತ್ರ ಕಾಣಿಸಿಕೊಂಡಿದೆ. ಹಾಗಾಗಿ, ಜನಸಾಮಾನ್ಯರಿಗೆ ಹೆಚ್ಚು ಕನೆಕ್ಟ್ ಆಗುತ್ತದೆ. ಒಟ್ಟಾರೆಯಾಗಿ ನೋಡಿದರೆ ಕಥೆಯೇ ಈ ಸಿನಿಮಾದ ಹೀರೋ ಎನಿಸಿಕೊಳ್ಳುತ್ತದೆ.

ಇದನ್ನೂ ಓದಿ: Hebbuli Cut Review: ನಕ್ಕು ನಗಿಸುತ್ತಲೇ ಕರಾಳ ಸತ್ಯ ತೆರೆದಿಡುವ ಹೆಬ್ಬುಲಿ ಕಟ್

ಉಗ್ರಂ ಮಂಜು ಅವರು ಎಂದಿನಂತೆ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಪಾಗಲ್ ಪ್ರೇಮಿಯಾಗಿ ಅವರು ಆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕಿಯಾಗಿ ನಟಿಸಿರುವ ಹರ್ಷಿತಾ ರಾಮಚಂದ್ರಪ್ಪ ಅವರು ಗಮನ ಸೆಳೆಯುತ್ತಾರೆ. ಹಳ್ಳಿ ಹುಡುಗಿಯ ಆ ಪಾತ್ರ ಅವರಿಗೆ ಹೆಚ್ಚು ಸೂಕ್ತವಾಗಿದೆ. ಕೆಲವೇ ಪಾತ್ರಗಳನ್ನು ಇಟ್ಟುಕೊಂಡು ಸಿನಿಮಾವನ್ನು ಕಟ್ಟಿಕೊಡಲಾಗಿದೆ. ತಾಂತ್ರಿಕವಾಗಿ ‘ಜಂಗಲ್ ಮಂಗಲ್’ ಸಿನಿಮಾ ಅಚ್ಚುಕಟ್ಟಾಗಿದೆ. ಪ್ರಸಾದ್ ಕೆ. ಶೆಟ್ಟಿ, ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ, ವಿಷ್ಣು ಪ್ರಸಾದ್ ಅವರ ಛಾಯಾಗ್ರಹಣ ಚೆನ್ನಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:30 pm, Fri, 4 July 25