Laughing Buddha Movie Review: ‘ಲಾಫಿಂಗ್’ ಜೊತೆ ಒಂದಷ್ಟು ಸಸ್ಪೆನ್ಸ್

ರಿಷಬ್ ಶೆಟ್ಟಿ ಅವರು ಹೊಸ ತಂಡದವರಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಈಗ ಅವರು ಪ್ರಮೋದ ಶೆಟ್ಟಿ ನಟನೆಯ ‘ಲಾಫಿಂಗ್ ಬುದ್ಧ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇಂದು (ಆಗಸ್ಟ್ 30) ರಿಲೀಸ್ ಆದ ಸಿನಿಮಾದ ವಿಮರ್ಶೆ ‘ಟಿವಿ9 ಕನ್ನಡ ಡಿಜಿಟಲ್’ನಲ್ಲಿ.

Laughing Buddha Movie Review: ‘ಲಾಫಿಂಗ್’ ಜೊತೆ ಒಂದಷ್ಟು ಸಸ್ಪೆನ್ಸ್
‘ಲಾಫಿಂಗ್ ಬುದ್ಧ’
Follow us
ರಾಜೇಶ್ ದುಗ್ಗುಮನೆ
|

Updated on: Aug 30, 2024 | 10:55 AM

ಪಾತ್ರವರ್ಗ: ಪ್ರಮೋದ್ ಶೆಟ್ಟಿ, ತೇಜು ಬೆಳವಾಡಿ, ಸುಂದರ್ ರಾಜ್, ದಿಗಂತ್ ಮಂಚಾಲೆ. ನಿರ್ದೇಶನ: ಭರತ್ ರಾಜ್. ನಿರ್ಮಾಣ: ರಿಷಬ್ ಶೆಟ್ಟಿ. ಸಂಗೀತ ಸಂಯೋಜನೆ: ವಿಷ್ಣು ವಿಜಯ್. ಸ್ಟಾರ್: ***

ಪ್ರಮೋದ್ ಶೆಟ್ಟಿ ಅವರು ಅತಿಥಿ ಪಾತ್ರಗಳ ಮೂಲಕ ಗಮನ ಸೆಳೆದವರು. ಅವರು ಈಗ ‘ಲಾಫಿಂಗ್ ಬುದ್ಧ’ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಅವರಿಗೆ ತೇಜು ಬೆಳವಾಡಿ ಜೊತೆಯಾಗಿದ್ದಾರೆ. ಈ ಸಿನಿಮಾನ ರಿಷಬ್ ಶೆಟ್ಟಿ ಅವರು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಏನೆಲ್ಲ ಇದೆ? ಯಾವ ವಿಚಾರ ಹೈಲೈಟ್ ಆಗಿದೆ ಎಂಬ ಬಗ್ಗೆ ಇಲ್ಲಿದೆ ವಿವರ.

ಗೋವರ್ಧನ್ (ಪ್ರಮೋದ್ ಶೆಟ್ಟಿ) ಶಿವಮೊಗ್ಗ ಜಿಲ್ಲೆಯ ನೀರೂರು ಪೊಲೀಸ್ ಠಾಣೆಯಲ್ಲಿ ಕಾನ್ಸ್​ಟೇಬಲ್. ಆತನಿಗೆ ತಿಂಡಿಗಳ ಬಗ್ಗೆ ವಿಶೇಷ ಪ್ರೀತಿ. ಮನೆಯಲ್ಲಿ ಸರಿಯಾಗಿ ಊಟ ಬಾರಿಸುವುದರ ಜೊತೆಗೆ ಪೊಲೀಸ್ ಠಾಣೆಯ ಸಿಬ್ಬಂದಿ ತರುವ ಊಟವೂ ಇವನ ಹೊಟ್ಟೆ ಸೇರುತ್ತದೆ. ಗೋವರ್ಧನ್ ದೋಸೆ ತಿಂದಷ್ಟೇ ಸುಲಭದಲ್ಲಿ ಕೇಸ್​ಗಳನ್ನು ಪರಿಹರಿಸುವ ತಾಕತ್ತು ಹೊಂದಿದ್ದಾನೆ. ಈತನಿಗೆ ಫಿಟ್ನೆಸ್ ಇಲ್ಲ ಎಂಬುದರಿಂದಲೇ ಆತನ ಕೆಲಸಕ್ಕೆ ಕುತ್ತು ಬರುತ್ತದೆ. ಇದೇ ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ಪ್ರಮುಖ ಕೇಸ್ ಒಂದು ಬರುತ್ತದೆ. ನಂತರ ಏನಾಗುತ್ತದೆ ಅನ್ನೋದು ಸಿನಿಮಾದ ಕಥೆ.

‘ಲಾಫಿಂಗ್ ಬುದ್ಧ’ ಸಿನಿಮಾದಲ್ಲಿ ನಗುವಿನ ಘಮದ ಜೊತೆ ಸಸ್ಪೆನ್ಸ್​ನ ಒಗ್ಗರಣೆ ಹಾಕಲಾಗಿದೆ. ಪಂಚಿಂಗ್ ಡೈಲಾಗ್ ಮೂಲಕ ಸಿನಿಮಾದಲ್ಲಿ ಅಲ್ಲಲ್ಲಿ ನಗಿಸುವ ಕೆಲಸ ಆಗಿದೆ. ಸಿನಿಮಾಗಾಗಿ ಪ್ರಮೋದ್ ಶೆಟ್ಟಿ ಅವರು ತೂಕ ಹೆಚ್ಚಿಸಿಕೊಂಡಿದ್ದರು. ಹೀಗಾಗಿ, ಅವರ ಗೆಟಪ್ ಪಾತ್ರಕ್ಕೆ ಸರಿಯಾಗಿ ಹೊಂದಿಕೆ ಆಗಿದೆ. ಅವರು ಹಾಕಿದ ಶ್ರಮ ತೆರೆಮೇಲೆ ಎದ್ದು ಕಾಣುತ್ತದೆ. ಡೊಳ್ಳು ಹೊಟ್ಟೆಯಲ್ಲಿ ಅವರು ಗಮನ ಸೆಳೆದಿದ್ದಾರೆ. ಅವರ ಮ್ಯಾನರಿಸಂ ಗಮನ ಸೆಳೆಯುತ್ತದೆ. ಸಿನಿಮಾದಲ್ಲಿ ಬರೋ ದಿಗಂತ್ ಮಂಚಾಲೆ ಪಾತ್ರ ಸಿನಿಮಾಗೆ ಪ್ರಮುಖ ತಿರುವು ನೀಡುತ್ತದೆ. ಉಳಿದಂತೆ ತೇಜು ಬೆಳವಾಡಿ, ಸುಂದರ್ ರಾಜ್ ತಮಗೆ ಸಿಕ್ಕ ಪಾತ್ರವನ್ನು ಸರಿಯಾಗಿ ನಿರ್ವಹಿಸಿದ್ದಾರೆ. ಅವರ ಪಾತ್ರಕ್ಕೆ ನಿರ್ದೇಶಕರು ಇನ್ನಷ್ಟು ಒತ್ತು ನೀಡಬಹುದಿತ್ತು.

ಇದನ್ನೂ ಓದಿ: ರಿಷಬ್ ಶೆಟ್ಟಿಯಿಂದ ರಾಜ್​ ಶೆಟ್ಟಿಗೆ ಮೋಸ ಆಯ್ತಾ? ಪ್ರಮೋದ್ ಶೆಟ್ಟಿಯದ್ದೂ ಇದೆ ಪಾಲು

ನಿರ್ದೇಶಕ ಭರತ್ ರಾಜ್ ಅವರು ಈ ಮೊದಲು ‘ಹೀರೋ’ ಸಿನಿಮಾ ನಿರ್ದೇಶನ ಮಾಡಿದ್ದರು. ಈ ಸಿನಿಮಾದ ಬಳಿಕ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅವರು ನಿರ್ದೇಶನದಲ್ಲಿ ಮೊದಲಿಗಿಂತ ಪಳಗಿದ್ದಾರೆ. ಕೆಲಸದ ಒತ್ತಡದಿಂದ ಅನೇಕ ಪೊಲೀಸರಿಗೆ ಫಿಟ್ನೆಸ್ ಬಗ್ಗೆ ಗಮನಹರಿಸೋಕೆ ಸಾಧ್ಯವಾಗುವುದಿಲ್ಲ. ಈ ವಿಚಾರವನ್ನು ಹೈಲೈಟ್ ಮಾಡುವ ಪ್ರಯತ್ನವನ್ನು ಭರತ್ ರಾಜ್ ಮಾಡಿದ್ದಾರೆ. ನಿರ್ದೇಶಕರು ಅನೇಕ ವಿಚಾರಗಳನ್ನು ಹೇಳಲು ಪ್ರಯತ್ನಿಸಿದ್ದಾರೆ. ಆದರೆ, ಆ ವಿಚಾರಗಳನ್ನು ಇನ್ನಷ್ಟು ಪ್ರಭಾವಶಾಲಿಯಾಗಿ ಹೇಳಲು ಪ್ರಯತ್ನಿಸಬಹುದಿತ್ತು. ಹಾಸ್ಯಕ್ಕೆ ಇನ್ನಷ್ಟು ಒತ್ತು ಕೊಟ್ಟಿದ್ದರೆ ಪ್ರೇಕ್ಷಕನಿಗೆ ನಗು ಬರಬಹುದಿತ್ತು. ನಿರ್ಮಾಪಕ ರಿಷಬ್ ಶೆಟ್ಟಿ ಅವರು ಹೊಸ ತಂಡವನ್ನು ಬೆಂಬಲಿಸಿ ಈ ರೀತಿಯ ಕಮರ್ಷಿಯಲ್ ಸಿನಿಮಾ ಮಾಡುತ್ತಿರುವುದರಿಂದ ಅವರನ್ನು ಮೆಚ್ಚಲೇಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.