ಸಿನಿಮಾ: ನಾ ನಿನ್ನ ಬಿಡಲಾರೆ. ನಿರ್ಮಾಣ: ಭಾರತಿ ಬಾಲಿ. ನಿರ್ದೇಶನ: ನವೀನ್ ಜಿಎಸ್. ಪಾತ್ರವರ್ಗ: ಅಂಬಾಲಿ ಭಾರತಿ, ಪಂಚಿ, ಸೀರುಂಡೆ ರಘು, ಲೋಹಿತ್, ಶ್ರೀನಿವಾಸ್ ಪ್ರಭು, ಕೆ.ಎಸ್. ಶ್ರೀಧರ್ ಮುಂತಾದವರು. ಸ್ಟಾರ್: 3/5
ಯಾವುದೇ ಸೂಪರ್ ಹಿಟ್ ಸಿನಿಮಾದ ಶೀರ್ಷಿಕೆಯನ್ನು ಪುನಃ ಬಳಕೆ ಮಾಡುವಾಗ ಹೆಚ್ಚಿನ ಜವಾಬ್ದಾರಿ ಇರಬೇಕಾಗುತ್ತದೆ. ‘ನಾ ನಿನ್ನ ಬಿಡಲಾರೆ’ ಸಿನಿಮಾ ಬಗ್ಗೆ ಹೊಸದಾಗಿ ಹೇಳಬೇಕಾಗಿದ್ದಿಲ್ಲ. 1979ರಲ್ಲಿ ತೆರೆಕಂಡ ಆ ಸಿನಿಮಾ ಈಗಲೂ ಹಾರರ್ ಪ್ರಿಯರ ಫೇವರಿಟ್ ಲಿಸ್ಟ್ನಲ್ಲಿ ಇದೆ. ಈಗ ಅದೇ ಶೀರ್ಷಿಕೆಯನ್ನು ಮರುಬಳಕೆ ಮಾಡಿಕೊಂಡು ಹೊಸದೊಂದು ಹಾರರ್ ಸಿನಿಮಾ ಬಂದಿದೆ. ಈಗ ತೆರೆಕಂಡಿರುವ ‘ನಾ ನಿನ್ನ ಬಿಡಲಾರೆ’ ಸಿನಿಮಾದಲ್ಲಿ ಬಹುತೇಕ ಹೊಸ ಕಲಾವಿದರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಸಿನಿಮಾದ ವಿಮರ್ಶೆ ಇಲ್ಲಿದೆ.
ಹಾರರ್ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಸೇಡಿನ ಕಥೆ ಇರುತ್ತದೆ. ಅದನ್ನು ಹೊರತುಪಡಿಸಿ, ಏನಾದರೂ ಹೊಸ ಅಂಶಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದರೆ ಜನರಿಗೆ ಇಷ್ಟ ಆಗುತ್ತದೆ. ಈಗ ‘ನಾ ನಿನ್ನ ಬಿಡಲಾರೆ’ ಸಿನಿಮಾದಲ್ಲಿ ಕೂಡ ಒಂದು ಡಿಫರೆಂಟ್ ಆದಂತಹ ವಿಷಯವನ್ನು ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ಅದೇನು ಎಂಬುದನ್ನು ಸಿನಿಮಾ ನೋಡಿಯೇ ತಿಳಿಯಬೇಕು.
‘ನಾ ನಿನ್ನ ಬಿಡಲಾರೆ’ ಚಿತ್ರದ ಕಥೆ ಆರಂಭ ಆಗುವಾಗ ಒಂದು ಸಾಮಾನ್ಯ ಸಿನಿಮಾ ಎನಿಸುತ್ತದೆ. ಎಸ್ಟೇಟ್ನಲ್ಲಿ ಇರುವ ಒಂದು ದೆವ್ವದ ಮನೆ. ಅಲ್ಲಿ ಭೂತ ಇದೆಯೋ ಇಲ್ಲವೋ ಎಂಬುದನ್ನು ತಿಳಿಯಲು ಬರುವ ಕೆಲವು ಹುಡುಗರು. ಇದ್ದಕ್ಕಿದ್ದಂತೆ ದೆವ್ವ ಕಾಣಿಸಿಕೊಳ್ಳುವುದು. ಆ ಬಳಿಕ ಅದರ ಫ್ಲ್ಯಾಶ್ ಬ್ಯಾಕ್ ತೆರೆದುಕೊಳ್ಳುವುದು.. ಹೀಗೆ ತುಂಬ ಪರಿಚಿತ ಶೈಲಿಯಲ್ಲಿ ಸಿನಿಮಾ ಶುರುವಾಗುತ್ತದೆ. ಆದರೆ ಈ ಕಥೆ ಅಷ್ಟಕ್ಕೇ ಸೀಮಿತವಾಗಿಲ್ಲ. ಇಂಟರ್ವಲ್ ಬಳಿಕ ಪ್ರೇಕ್ಷಕರ ಎದುರು ಬೇರೊಂದು ಆಯಾಮ ಕಾಣಿಸುತ್ತದೆ.
ಈ ಸಿನಿಮಾದ ಮೊದಲಾರ್ಧಕ್ಕೆ ಹೋಲಿಸಿದರೆ, ಅಸಲಿ ಕಥೆ ಇರುವುದೇ ದ್ವಿತೀಯಾರ್ಧದಲ್ಲಿ. ಹಾಗಾಗಿ ಫಸ್ಟ್ ಹಾಫ್ ನೋಡಲು ಕೊಂಚ ತಾಳ್ಮೆ ಬೇಕಾಗುತ್ತದೆ. ಸೆಕೆಂಡ್ ಹಾಫ್ನಲ್ಲಿ ನಿರೂಪಣೆಗೆ ವೇಗ ಸಿಕ್ಕಿದೆ. ಮುಖ್ಯ ಪಾತ್ರ ಮಾಡಿರುವ ಅಂಬಾಲಿ ಭಾರತಿ ಅವರಿಗೆ ನಟಿಸಲು ಹೆಚ್ಚು ಅವಕಾಶ ಸಿಕ್ಕಿರುವುದೇ ದ್ವಿತೀಯಾರ್ಧದಲ್ಲಿ. ಫಸ್ಟ್ ಹಾಫ್ನಲ್ಲಿ ಕಾಮಿಡಿಗೆ ಆದ್ಯತೆ ನೀಡಲು ಪ್ರಯತ್ನಿಸಲಾಗಿದೆ. ಆದರೆ ಆ ಪ್ರಯತ್ನಕ್ಕೆ ನಿರೀಕ್ಷಿತ ಫಲ ಸಿಕ್ಕಂತೆ ಕಾಣುತ್ತಿಲ್ಲ. ಕೆಲವು ಡಬಲ್ ಮೀನಿಂಗ್ ಡೈಲಾಗ್ಗಳನ್ನು ತೆಗೆದು ಹಾಕಿದ್ದರೆ ಚೆನ್ನಾಗಿರುತ್ತಿತ್ತು.
ಇದನ್ನೂ ಓದಿ: Anshu Movie Review: ಕಿರುತೆರೆಯಿಂದ ಹಿರಿತೆರೆಗೆ ಬಂದು ಪ್ರಯೋಗ ಮಾಡಿದ ನಿಶಾ ರವಿಕೃಷ್ಣನ್
ಥ್ರಿಲ್ಲರ್ ಅಂಶಗಳು ಇರುವುದರಿಂದ ಸರಾಗವಾಗಿ ನೋಡಿಸಿಕೊಳ್ಳುವ ಗುಣ ಈ ಸಿನಿಮಾದ ದ್ವಿತೀಯಾರ್ಧಕ್ಕೆ ಇದೆ. ದೆವ್ವದ ದೃಶ್ಯಗಳ ಗ್ರಾಫಿಕ್ಸ್ ಕೂಡ ಮೆಚ್ಚುವಂತಿದೆ. ಇದು ಸೂಪರ್ ನ್ಯಾಚುರಲ್ ಕಥೆ ಆಗಿದ್ದರೂ ಕೂಡ ನಡುವೆ ಕೆಲವು ವೈಜ್ಞಾನಿಕ ವಿವರಗಳನ್ನು ಪೂರಕವಾಗಿ ನೀಡುವ ಮೂಲಕ ಸಿನಿಮಾದ ತೂಕವನ್ನು ಹೆಚ್ಚಿಸಲಾಗಿದೆ. ಇದು ಸಿನಿಮಾಗೆ ಪ್ಲಸ್ ಪಾಯಿಂಟ್ ಆಗಿದೆ. ಅಪರೂಪ ಎಂಬಂತಹ ಕೆಲವು ಮಾಹಿತಿಗಳನ್ನು ಕಥೆಯ ಮೂಲಕ ನೀಡಲಾಗಿದೆ.
ನೆಗೆಟಿವ್ ಶಕ್ತಿ ಹೊಡೆದೋಡಿಸಲು ಪಾಸಿಟಿವ್ ಶಕ್ತಿ ಬರಲೇಬೇಕು. 1979ರ ‘ನಾ ನಿನ್ನ ಬಿಡಲಾರೆ’ ಸಿನಿಮಾದಲ್ಲಿ ರಾಘವೇಂದ್ರ ಸ್ವಾಮಿಗಳ ಕೃಪೆಯನ್ನು ತೋರಿಸಲಾಗಿತ್ತು. ಈಗ ಹೊಸ ‘ನಾ ನಿನ್ನ ಬಿಡಲಾರೆ’ ಸಿನಿಮಾದಲ್ಲಿ ಕೂಡ ರಾಯರ ಮಹಿಮೆಯನ್ನು ತೋರಿಸುವ ದೃಶ್ಯಗಳು ಇವೆ. ಇನ್ನು, ಈ ಕಥೆಗೆ ನಿರ್ದೇಶಕರು ಅಂತ್ಯವನ್ನು ಸ್ವಲ್ಪ ಡಿಫರೆಂಟ್ ಆಗಿಯೇ ನೀಡಿದ್ದಾರೆ. ಕಥೆ ಮುಂದುವರಿಯಲು ಬೇಕಾದ ಅಂಶವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.
ಇದನ್ನೂ ಓದಿ: Zebra Movie Review: ಕಲರ್ ಕಲರ್ ನೋಟಿನ ಹಿಂದಿರುವ ಕಪ್ಪು-ಬಿಳಿ ಪಾತ್ರಗಳ ಕಹಾನಿ
ನಟಿ ಅಂಬಾಲಿ ಭಾರತಿ ಅವರಿಗೆ ಇದು ಮೊದಲ ಸಿನಿಮಾ. ಚೊಚ್ಚಲ ಪ್ರಯತ್ನದಲ್ಲಿಯೇ ಅವರು ಉತ್ತಮ ಅಭಿನಯದ ಜೊತೆಗೆ ಆ್ಯಕ್ಷನ್ ಮೂಲಕವೂ ಪ್ರೇಕ್ಷಕರನ್ನು ರಂಜಿಸಿದ್ದಾರೆ. ವೀರೇಶ್ ಅವರ ಛಾಯಾಗ್ರಹಣ, ತ್ಯಾಗರಾಜ್ ಅವರ ಸಂಗೀತದಿಂದ ‘ನಾ ನಿನ್ನ ಬಿಡಲಾರೆ’ ಸಿನಿಮಾದ ಮೆರುಗು ಹೆಚ್ಚಿದೆ. ಟ್ವಿಸ್ಟ್ ನೀಡುವಂತಹ ಪಾತ್ರದಲ್ಲಿ ಕಾಣಿಸಿಕೊಂಡಿರುವ ಲೋಹಿತ್ ಅವರ ನಟನೆಯನ್ನು ಮೆಚ್ಚಲೇಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.