AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Zebra Movie Review: ಕಲರ್ ಕಲರ್​ ನೋಟಿನ ಹಿಂದಿರುವ ಕಪ್ಪು-ಬಿಳಿ ಪಾತ್ರಗಳ ಕಹಾನಿ

ನಟ ಧನಂಜಯ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ‘ಪುಷ್ಪ’ ಚಿತ್ರದ ಬಳಿಕ ಅವರಿಗೆ ಅಂಥ ಖ್ಯಾತಿ ಸಿಕ್ಕಿತು. ಅಲ್ಲದೇ, ತೆಲುಗು ಚಿತ್ರರಂಗದಲ್ಲಿ ಅವರಿಗೆ ಅವಕಾಶಗಳು ಕೂಡ ಹೆಚ್ಚಾದವು. ಈಗ ಡಾಲಿ ಧನಂಜಯ ಅವರು ಟಾಲಿವುಡ್​ ನಟ ಸತ್ಯದೇವ್​ ಜೊತೆ ನಟಿಸಿರುವ ‘ಜೀಬ್ರಾ’ ಸಿನಿಮಾ ಬಿಡುಗಡೆ ಆಗಿದೆ. ಆ ಚಿತ್ರದ ವಿಮರ್ಶೆ ಇಲ್ಲಿದೆ.

Zebra Movie Review: ಕಲರ್ ಕಲರ್​ ನೋಟಿನ ಹಿಂದಿರುವ ಕಪ್ಪು-ಬಿಳಿ ಪಾತ್ರಗಳ ಕಹಾನಿ
‘ಜೀಬ್ರಾ’ ಸಿನಿಮಾ ಪೋಸ್ಟರ್​
ಮದನ್​ ಕುಮಾರ್​
|

Updated on: Nov 22, 2024 | 4:36 PM

Share

ಸಿನಿಮಾ: ಜೀಬ್ರಾ. ನಿರ್ಮಾಣ: ಎಸ್​ಎನ್​ ರೆಡ್ಡಿ, ಬಾಲಾ ಸುಂದರಮ್, ದಿನೇಶ್ ಸುಂದರಮ್. ನಿರ್ದೇಶನ: ಈಶ್ವರ್​ ಕಾರ್ತಿಕ್. ಪಾತ್ರವರ್ಗ: ಡಾಲಿ ಧನಂಜಯ, ಅಮೃತಾ ಅಯ್ಯಂಗಾರ್, ಸತ್ಯದೇವ್, ಪ್ರಿಯಾ ಭವಾನಿ ಶಂಕರ್​, ಸತ್ಯರಾಜ್, ಸತ್ಯ, ಗರುಡ ರಾಮ್ ಮುಂತಾದವರು. ಸ್ಟಾರ್​: 3/5

ಹೀರೋ ಪಾತ್ರಕ್ಕೂ ಸೈ, ವಿಲನ್ ಪಾತ್ರಕ್ಕೂ ಸೈ ಎಂಬಂತಿರುವ ನಟ ಡಾಲಿ ಧನಂಜಯ. ಈಗಾಗಲೇ ಅವರು ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಮಾಡಿದ್ದಾರೆ. ಅವರ ಜೊತೆ ಸಿನಿಮಾ ಮಾಡಲು ಪರಭಾಷೆಯ ಮಂದಿ ಕೂಡ ಇಷ್ಟಪಡುತ್ತಾರೆ. ಈ ವಾರ (ನವೆಂಬರ್​ 22) ಬಿಡುಗಡೆ ಆಗಿರುವ ‘ಜೀಬ್ರಾ’ ಚಿತ್ರವೇ ಈ ಮಾತಿಗೆ ಸಾಕ್ಷಿ. ಈ ಸಿನಿಮಾದ ಪಾತ್ರವರ್ಗದಲ್ಲಿ ತೆಲುಗು ಕಲಾವಿದರೇ ಜಾಸ್ತಿ ಇದ್ದಾರೆ. ಅವರ ಜೊತೆ ಡಾಲಿ ಧನಂಜಯ್ ಕೂಡ ಪ್ರಮುಖ ಪಾತ್ರವನ್ನು ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಈ ಚಿತ್ರ ಬಿಡುಗಡೆ ಆಗಿದೆ.

ಡಾಲಿ ಧನಂಜಯ ಜೊತೆ ಕನ್ನಡದ ಅಮೃತಾ ಅಯ್ಯಂಗಾರ್, ಗರುಡ ರಾಮ್​ ಕೂಡ ‘ಜೀಬ್ರಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಹಾಗಾಗಿ ಕನ್ನಡದ ಪ್ರೇಕ್ಷಕರಿಗೆ ಈ ಸಿನಿಮಾ ಆಪ್ತವಾಗುವಂತಿದೆ. ಇನ್ನು, ಈ ಸಿನಿಮಾದ ಕಥೆ ಯಾವುದೇ ಒಂದು ಭಾಷೆಗೆ ಸೀಮಿತ ಆಗುವಂಥದ್ದಲ್ಲ. ಈ ಚಿತ್ರದಲ್ಲಿ ಬ್ಯಾಂಕಿಂಗ್ ವ್ಯವಹಾರಗಳ ಕುರಿತ ಕಥೆ ಇದೆ. ಕಲರ್​ ಕಲರ್​ ಕರೆನ್ಸಿ ನೋಟುಗಳು ಹರಿದಾಡುವ ಬ್ಯಾಂಕ್​ನಂತಹ ಜಾಗದಲ್ಲಿ ಕಪ್ಪು-ಬಿಳುಪಿನ ವ್ಯಕ್ತಿತ್ವದ ಜನರು ಹೇಗಿರುತ್ತಾರೆ ಎಂಬುದನ್ನು ‘ಜೀಬ್ರಾ’ ಸಿನಿಮಾ ವಿವರಿಸುತ್ತದೆ.

ಗ್ರಾಹಕರು ಹೊರಗಿನಿಂದ ನೋಡುವಷ್ಟು ಸರಳವಾಗಿ ಬ್ಯಾಂಗ್​ನ ಒಳಗಿನ ವ್ಯವಹಾರಗಳು ಇರುವುದಿಲ್ಲ. ಬ್ಯಾಂಕ್​ನಲ್ಲಿ ದುಡ್ಡು ಎಷ್ಟು ಭದ್ರವಾಗಿ ಇರುತ್ತದೆಯೋ ಅದೇ ರೀತಿ ಕೆಲವು ಲೋಪದೋಷಗಳು ಕೂಡ ಇರುತ್ತವೆ. ಅಂಥ ಅಂಶಗಳನ್ನು ಇಟ್ಟುಕೊಂಡು ನಿರ್ದೇಶಕ ಈಶ್ವರ್ ಕಾರ್ತಿಕ್ ಅವರು ಒಂದು ಥ್ರಿಲ್ಲಿಂಗ್ ಆದಂತಹ ಸಿನಿಮಾವನ್ನು ಮಾಡಿದ್ದಾರೆ. ಬ್ಯಾಂಕ್ ವ್ಯವಹಾರದ ಇನ್ನೊಂದು ಮುಖವನ್ನು ಕೂಡ ಅವರು ‘ಜೀಬ್ರಾ’ ಚಿತ್ರದಲ್ಲಿ ತೋರಿಸಿದ್ದಾರೆ.

‘ಜೀಬ್ರಾ’ ಚಿತ್ರದಲ್ಲಿ ನಟ ಸತ್ಯದೇವ್​ ಅವರು ಬ್ಯಾಂಕ್ ಉದ್ಯೋಗಿಯಾಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಜೋಡಿ ಆಗಿರುವ ಪ್ರಿಯಾ ಭವಾನಿ ಶಂಕರ್​ ಕೂಡ ಬ್ಯಾಂಕ್ ಉದ್ಯೋಗಿಯ ಪಾತ್ರ ಮಾಡಿದ್ದಾರೆ. ನಟ ಧನಂಜಯ್ ಅವರು ಗ್ಯಾಂಗ್​ಸ್ಟರ್​ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅವರ ಪತ್ನಿಯಾಗಿ ಅಮೃತಾ ಅಯ್ಯಂಗಾರ್ ನಟಿಸಿದ್ದಾರೆ. ‘ಕಟ್ಟಪ್ಪ’ ಖ್ಯಾತಿಯ ಸತ್ಯರಾಜ್ ಅವರು ಒಂದು ಡಿಫರೆಂಟ್​ ಆದಂತಹ ಪಾತ್ರ ಮಾಡಿದ್ದಾರೆ. ಸತ್ಯ ಮತ್ತು ಸುನಿಲ್ ಅವರು ನಗಿಸುವ ಜವಾಬ್ದಾರಿ ನಿಭಾಯಿಸಿದ್ದಾರೆ. ಡಾಲಿ ಮತ್ತು ಅಮೃತಾ ಅಯ್ಯಂಗಾರ್ ಅವರನ್ನು ಹೆಚ್ಚು ಕಾಲ ಜೋಡಿಯಾಗಿ ನೋಡಬೇಕು ಎಂದುಕೊಂಡ ಪ್ರೇಕ್ಷಕರಿಗೆ ಕೊಂಚ ನಿರಾಸೆ ಆಗಬಹುದು. ಯಾಕೆಂದರೆ, ಈ ಸಿನಿಮಾದಲ್ಲಿ ಅಮೃತಾ ಅವರಿಗೆ ಇರುವುದು ತುಂಬ ಕಡಿಮೆ ಸ್ಕ್ರೀನ್​ ಸ್ಪೇಸ್​.

ಇದನ್ನೂ ಓದಿ: Tenant Movie Review: ಟೆನಂಟ್ ಚಿತ್ರದಲ್ಲಿ ಇಮೇಜ್ ಬದಲಿಸಿದ ಧರ್ಮ, ಸೋನು ಗೌಡ

ಬ್ಯಾಂಕ್​ ರಾಬರಿ ಎಂದರೆ ತುಂಬ ಸೀರಿಯಸ್​ ಆಗಿರುತ್ತದೆ. ಆದರೆ ಅಂಥ ಗಂಭೀರವಾದ ಕಥೆಯನ್ನು ಕಾಮಿಡಿ ದೃಶ್ಯಗಳ ಜೊತೆ ಬೆರೆಸಿ, ಸ್ವಲ್ಪ ಆ್ಯಕ್ಷನ್ ಸೇರಿಸಿ ಮನರಂಜನಾತ್ಮಕವಾಗಿ ‘ಜೀಬ್ರಾ’ ಸಿನಿಮಾದಲ್ಲಿ ತೋರಿಸಲಾಗಿದೆ. ಸಿನಿಮಾದ ಅವಧಿ ಕೊಂಚ ದೀರ್ಘವಾಯಿತು ಹಾಗೂ ಕೆಲವು ಟ್ವಿಸ್ಟ್​ಗಳನ್ನು ಮೊದಲೇ ಊಹಿಸಬಹುದು ಎಂಬುದು ಹೊರತುಪಡಿಸಿದರೆ ಈ ಚಿತ್ರದಲ್ಲಿ ಆರಂಭದಿಂದ ಕೊನೇ ತನಕ ಮನರಂಜನೆ ಇದೆ. ಮಾಸ್​ ಮತ್ತು ಕ್ಲಾಸ್​ ಪ್ರೇಕ್ಷಕರಿಗೆ ಸಿನಿಮಾ ಇಷ್ಟ ಆಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.