Tenant Movie Review: ಟೆನಂಟ್ ಚಿತ್ರದಲ್ಲಿ ಇಮೇಜ್ ಬದಲಿಸಿದ ಧರ್ಮ, ಸೋನು ಗೌಡ
ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸುತ್ತಿರುವ ನಟ ಧರ್ಮ ಕೀರ್ತಿರಾಜ್ ಅವರು ‘ಟೆನಂಟ್’ ಸಿನಿಮಾದಲ್ಲಿ ನಟಿಸಿದ್ದಾರೆ. ಸೋನು ಗೌಡ, ತಿಲಕ್, ರಾಕೇಶ್ ಮಯ್ಯ, ಉಗ್ರಂ ಮಂಜು ಕೂಡ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಇದ್ದಾರೆ. ಧರ್ಮ ಕೀರ್ತಿರಾಜ್ ಮತ್ತು ಉಗ್ರಂ ಮಂಜು ಅವರು ಬಿಗ್ ಬಾಸ್ ಮನೆಯಲ್ಲಿ ಇರುವಾಗ, ಅವರ ಗಮನಕ್ಕೇ ಬಾರದಂತೆ ಈ ಸಿನಿಮಾ ಬಿಡುಗಡೆ ಆಗಿದೆ.
ಸಿನಿಮಾ: ಟೆನಂಟ್. ನಿರ್ಮಾಣ: ನಾಗರಾಜ್ ಟಿ., ಪೃಥ್ವಿರಾಜ್ ಸಾಗರ್. ನಿರ್ದೇಶನ: ಶ್ರೀಧರ್ ಶಾಸ್ತ್ರಿ. ಪಾತ್ರವರ್ಗ: ಧರ್ಮ ಕೀರ್ತಿರಾಜ್, ಸೋನು ಗೌಡ, ಉಗ್ರಂ ಮಂಜು, ರಾಕೇಶ್ ಮಯ್ಯ, ತಿಲಕ್ ಮುಂತಾದವರು. ಸ್ಟಾರ್: 3/5
ನಟ ಧರ್ಮ ಕೀರ್ತಿರಾಜ್ ಅವರು ಚಾಕೊಲೇಟ್ ಹೀರೋ ರೀತಿಯ ಪಾತ್ರಗಳನ್ನು ಮಾಡಿದ್ದೇ ಹೆಚ್ಚು. ‘ನವಗ್ರಹ’ ಸಿನಿಮಾದಲ್ಲಿ ಕ್ಯಾಡ್ಬರೀಸ್ ಎಂದೇ ಅವರು ಫೇಮಸ್ ಆಗಿದ್ದರು. ಅವರ ರಿಯಲ್ ಲೈಫ್ ಲುಕ್ ಕೂಡ ಹಾಗೆಯೇ ಇದೆ. ಆದರೆ ಈಗ ಅವರು ‘ಟೆನಂಟ್’ ಸಿನಿಮಾದಲ್ಲಿ ಅದಕ್ಕೆ ತದ್ವಿರುದ್ಧವಾದ ಪಾತ್ರವನ್ನು ಮಾಡಿದ್ದಾರೆ. ಟ್ರೇಲರ್ನಲ್ಲಿಯೇ ಅವರ ಪಾತ್ರದ ಝಲಕ್ ನೋಡಿದ ಪ್ರೇಕ್ಷಕರಿಗೆ ಅಚ್ಚರಿ ಎನಿಸಿತ್ತು. ಈ ಚಿತ್ರದಲ್ಲಿ ಅವರ ಪಾತ್ರ ಹೇಗೆ ಮೂಡಿಬಂದಿದೆ? ಸಿನಿಮಾದ ಕಥೆ ಏನು? ಒಟ್ಟಾರೆ ಸಿನಿಮಾ ಹೇಗಿದೆ? ಈ ಎಲ್ಲ ಪ್ರಶ್ನೆಗಳಿಗೆ ಈ ವಿಮರ್ಶೆಯಲ್ಲಿದೆ ಉತ್ತರ.
ಲಾಕ್ ಡೌನ್ ಸಮಯದ ಒಂದು ಕಥೆಯನ್ನು ‘ಟೆನಂಟ್’ ಸಿನಿಮಾದಲ್ಲಿ ಹೇಳಲಾಗಿದೆ. ಮೊದಲ ಲಾಕ್ಡೌನ್ ಆಗುವುದಕ್ಕೂ ಮುನ್ನ ಆ ಪರಿಕಲ್ಪನೆಯೇ ಬಹುತೇಕರಿಗೆ ಇರಲಿಲ್ಲ. ಲಾಕ್ಡೌನ್ನಲ್ಲಿ ಜನರ ಜೀವನ ಕಷ್ಟ ಆಯಿತು. ಆದರೆ ಕೆಲವರು ಆ ಅವಕಾಶವನ್ನು ತಮ್ಮ ಲಾಭಕ್ಕೆ ಬಳಸಿಕೊಂಡರು. ಅಂಥ ಕೆಲವು ಪಾತ್ರಗಳ ಕಥೆ ‘ಟೆನಂಟ್’ ಸಿನಿಮಾದಲ್ಲಿದೆ. ಲಾಕ್ಡೌನ್ ವೇಳೆ ನಡೆಯುವ ಕಥೆ ಆದ್ದರಿಂದ ಸಿನಿಮಾದ ಭಾಗಶಃ ದೃಶ್ಯಗಳು ಒಂದೇ ಮನೆಯಲ್ಲಿ ನಡೆಯುತ್ತವೆ.
ಮನೆ ಓವನ್ ಆಗಿರುವ ದಂಪತಿ (ಸೋನು ಗೌಡ-ರಾಕೇಶ್ ಮಯ್ಯ) ಖುಷಿಯಾಗಿ ಸಂಸಾರ ನಡೆಸುತ್ತಾ ಇರುತ್ತಾರೆ. ಅದೇ ಮನೆಯ ಮೊದಲ ಮಹಡಿಗೆ ಬಾಡಿಗೆಗೆ ಬರುವ ಯುವಕ (ಧರ್ಮ ಕೀರ್ತಿರಾಜ್) ಆ ದಂಪತಿಯ ಸಂಸಾರದಲ್ಲಿ ಹುಳಿ ಹಿಂಡಲು ಪ್ರಯತ್ನಿಸುತ್ತಾನೆ. ನಂತರ ಏನಾಗುತ್ತದೆ ಎಂಬುದು ಟೆನಂಟ್ ಕಥೆ. ಆದರೆ ಈ ಕಥೆ ಬರೀ ಇಷ್ಟು ಸಿಂಪಲ್ ಆಗಿಲ್ಲ. ದಿನಗಳು ಸಾಗಿದಂತೆಲ್ಲ ಆ ಮನೆಯಲ್ಲಿ ಟೆನ್ಷನ್ ಹೆಚ್ಚುತ್ತದೆ. ಒಂದು ಕೊಲೆ ಕೂಡ ನಡೆಯುತ್ತದೆ! ಆ ಜಾಗಕ್ಕೆ ಪೊಲೀಸ್ (ತಿಲಕ್) ಎಂಟ್ರಿ ನೀಡಿದ ಬಳಿಕ ಹೊಸ ಟ್ವಿಸ್ಟ್ಗಳು ತೆರೆದುಕೊಳ್ಳುತ್ತವೆ.
ಮೊದಲೇ ಹೇಳಿದಂತೆ ಧರ್ಮ ಕೀರ್ತಿರಾಜ್ ಅವರು ನೆಗೆಟಿವ್ ಶೇಡ್ ಇರುವ ಪಾತ್ರವನ್ನು ಮಾಡಿದ್ದಾರೆ. ಈವರೆಗೂ ತಮಗೆ ಇದ್ದ ಇಮೇಜ್ ಬದಿಗಿಟ್ಟು ಅವರು ಸಂಪೂರ್ಣ ಬೇರೆ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ರೀತಿ, ನಟಿ ಸೋನು ಗೌಡ ಕೂಡ ತಮ್ಮ ಇಮೇಜ್ ಬದಲಿಸಿದ್ದಾರೆ. ಸಿನಿಮಾ ಪ್ರೀ-ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಾಗ ಎಲ್ಲ ಪಾತ್ರಗಳ ಇನ್ನೊಂದು ಮುಖ ಅನಾವರಣ ಆಗುತ್ತದೆ. ಇದರಿಂದಾಗಿ ಸಿನಿಮಾಗೆ ಸಸ್ಪೆನ್ಸ್ ಗುಣ ಬಂದಿದೆ.
ನಿರ್ದೇಶಕ ಶ್ರೀಧರ್ ಶಾಸ್ತ್ರಿ ಅವರು ಚಿತ್ರಕಥೆಯ ಮೂಲಕ ಟೆನಂಟ್ ಕಥೆಯನ್ನು ರೋಚಕವಾಗಿಸಲು ಪ್ರಯತ್ನಿಸಿದ್ದಾರೆ. ಕಥೆ ಒಂದು ಹಂತಕ್ಕೆ ಸಾಗಿದ ಬಳಿಕ ಇಷ್ಟು ಹೊತ್ತು ಪ್ರೇಕ್ಷಕರು ನೋಡಿದ್ದು ನಿಜವೋ ಸುಳ್ಳೋ ಎಂಬ ಪ್ರಶ್ನೆ ಮೂಡುತ್ತದೆ. ಅಂತಹ ಟ್ವಿಸ್ಟ್ಗಳ ಮೂಲಕ ಅವರು ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ನಟ ರಾಕೇಶ್ ಮಯ್ಯ ಅವರು ಎಂದಿನಂತೆ ಸಹಜಾಭಿನಯ ತೋರಿದ್ದಾರೆ. ಉಗ್ರಂ ಮಂಜು ಅವರು ಕೆಲವೇ ದೃಶ್ಯಗಳಲ್ಲಿ ಬಂದರೂ ಕಥೆಗೆ ತಿರುವು ನೀಡುತ್ತಾರೆ.
ಇದನ್ನೂ ಓದಿ: Bhairathi Ranagal Review: ರಣಗಲ್ ಸಾಮ್ರಾಜ್ಯವನ್ನು ಪೂರ್ತಿಯಾಗಿ ಆವರಿಸಿಕೊಂಡ ಶಿವಣ್ಣ
ಇಡೀ ಸಿನಿಮಾದಲ್ಲಿ ಇರುವುದು ಕೆಲವೇ ಪಾತ್ರಗಳು ಹಾಗೂ ಒಂದೇ ಲೊಕೇಷನ್. ಆ ದೃಷ್ಟಿಯಿಂದ ನೋಡಿದರೆ, ಇಂಥ ಕಥೆಯನ್ನು ಇಂಟರೆಸ್ಟಿಂಗ್ ಆಗಿ ಹೇಳುವುದು ನಿರ್ದೇಶಕರಿಗೆ ಸವಾಲಿನ ಕೆಲಸ. ಶ್ರೀಧರ್ ಶಾಸ್ತ್ರಿ ಅವರು ಅಂಥ ಸವಾಲು ಸ್ವೀಕರಿಸಿದ್ದಾರೆ. ಹಾಗಿದ್ದರೂ ಕೂಡ ಕೆಲವು ಕಡೆ ಪ್ರೇಕ್ಷಕರಿಗೆ ಏಕತಾನತೆ ಕಾಡಬಹುದು. ಮೇಕಿಂಗ್ ಗುಣಮಟ್ಟದ ಬಗ್ಗೆ ಇನ್ನಷ್ಟು ಗಮನ ಹರಿಸುವುದು ಅಗತ್ಯವಿತ್ತು ಎನಿಸುತ್ತದೆ. ಅನಗತ್ಯವಾಗಿ ಏನನ್ನೂ ಸೇರಿಸಿಲ್ಲ. ಹಾಗಾಗಿ ಚಿತ್ರದ ಅವಧಿ 1 ಗಂಟೆ 39 ನಿಮಿಷ ಇದೆ. ಇದು ಸಿನಿಮಾಗೆ ಪ್ಲಸ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.