
ಗುರುದತ್ ಗಾಣಿಗ ನಿರ್ದೇಶನದ, ಪ್ರಜ್ವಲ್ ದೇವರಾಜ್, ರಾಜ್ ಬಿ. ಶೆಟ್ಟಿ, ಮಿತ್ರ ಮೊದಲಾದವರು ನಟಿಸಿರೋ ‘ಕರಾವಳಿ’ ಸಿನಿಮಾ ಇಂದು (ಜುಲೈ 24) ರಿಲೀಸ್ ಆಗಿದೆ. ಈ ಚಿತ್ರ ರಿಲೀಸ್ಗೂ ಮೊದಲೇ ವಿವಾದ ಸೃಷ್ಟಿ ಮಾಡಿತ್ತು. ಹೆಸರೇ ಹೇಳುವಂತೆ ಇದು ಕರಾವಳಿಯ ಕಥೆ. ಅಲ್ಲಿನ ಜನರ ಸಂಸ್ಕೃತಿಯೊಂದಿಗೆ ಕಂಬಳ ಆಚರಣೆ ಹಾಸು ಹೊಕ್ಕಾಗಿದೆ. ಕೆಲವರಿಗೆ ಇದು ಪ್ರತಿಷ್ಠೆ, ಇನ್ನೂ ಕೆಲವರಿಗೆ ಇದು ಆಸಕ್ತಿ. ಪ್ರತಿಷ್ಠೆ ಹಾಗೂ ಆಸಕ್ತಿ ಹೊಂದಿರುವ ಇಬ್ಬರು ವ್ಯಕ್ತಿಯ ನಡುವೆ ಘರ್ಷಣೆ ಆದರೆ ಏನಾಗುತ್ತದೆ? ಪ್ಲಸ್ ಏನು? ನೆಗೆಟಿವ್ ಏನು? ಆ ಬಗ್ಗೆ ಇಲ್ಲಿದೆ ವಿವರ.
ಅದು ಸುಂದರ ಕರಾವಳಿ ತೀರ. ಅಲ್ಲಿ ಕೋಣದ ಕಂಬಳ ಪ್ರತಿಷ್ಠೆಯ ಪ್ರತೀಕವಾಗಿ ನೋಡುವ ಆದಿಶೇಷನಿದ್ದಾನೆ (ರಮೇಶ್ ಇಂದಿರ). ಕೋಣಗಳು ಎಂದರೆ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸೋ ವ್ಯಕ್ತಿ ಮಹಾಬಲ (ಮಿತ್ರ) ಹಾಗೂ ಮಹಾವೀರ (ರಾಜ್ ಬಿ ಶೆಟ್ಟಿ) ಇದ್ದಾರೆ. ಕರಾವಳಿಯ ಸಹಾವಸವೇ ಬೇಡ ಎಂದು ದೂರ ಹೋಗಿ ವಾಸ ಮಾಡುತ್ತಿರುವ ಧನಂಜಯ್ (ಪ್ರಜ್ವಲ್ ದೇವರಾಜ್) ಕುಟುಂಬ ಇದೆ. ಈ ಪಾತ್ರಗಳ ಮೇಲೆ ‘ಕರಾವಳಿ’ಯ ಕಥೆ ಸಾಗುತ್ತದೆ. ಈ ಎಲ್ಲಾ ಪಾತ್ರಗಳ ನಡುವೆ ಒಂದು ಕನೆಕ್ಷನ್ ಇದೆ. ಇದರ ಜೊತೆ ದ್ವೇಷ, ಸೇಡು, ಕುರ್ಚಿಗಾಗಿ ನಡೆಯುವ ಒಣ ಪ್ರತಿಷ್ಠೆ ಇದೆ. ಇಲ್ಲಿ ಕಥೆ ಏನು ಎಂದು ಹೇಳುವುದಕ್ಕಿಂತ ಅದನ್ನು ಥಿಯೇಟರ್ನಲ್ಲಿ ಎಂಜಾಯ್ ಮಾಡೋದು ಉತ್ತಮ.
ಈ ಮೊದಲು ‘ಅಂಬಿ ನಿಂಗ್ ವಯಸ್ಸಾಯ್ತೋ’ ಹೆಸರಿನ ಸಿನಿಮಾ ಮಾಡಿದ್ದ ಯುವ ನಿರ್ದೇಶಕ ಗುರುದತ್ ಗಾಣಿಗ ಅವರು ಈ ಬಾರಿ, ಕರಾವಳಿಯ ಕಂಬಳದ ಕಥೆಯೊಂದಿಗೆ ಬಂದಿದ್ದಾರೆ. ಸಿನಿಮಾ ಉದ್ದಕ್ಕೂ ಅವರು ಕೋಣ ಹಾಗೂ ಕಂಬಳದ ಘಮ ಕಥೆಯಲ್ಲಿ ಇರುವಂತೆ ನೋಡಿಕೊಂಡಿದ್ದಾರೆ. ಸಿನಿಮಾನ ತುಂಬಾನೇ ಕ್ರಿಸ್ಪಿಯಾಗಿ ಕಟ್ಟಿಕೊಡೋ ಪ್ರಯತ್ನ ಮಾಡಿದ್ದಾರೆ. ಸಿನಿಮಾ ವೇಗವಾಗಿ ಸಾಗುವುದರಿಂದ ಎಲ್ಲಿಯೂ ಬೋರ್ ಹೊಡಿಸೋದಿಲ್ಲ. ಅವರ ಕಲ್ಪನೆಗೆ ಅಭಿಮನ್ಯು ಸದಾನಂದನ್ ಛಾಯಾಗ್ರಹಣ ಸಾತ್ ಕೊಟ್ಟಿದೆ.
ಈ ಚಿತ್ರದಲ್ಲಿ ಹೀರೋ ಪ್ರಜ್ವಲ್ ಇರಬಹುದೇ ಅಥವಾ ರಾಜ್ ಬಿ ಶೆಟ್ಟಿ ಇರಬಹುದೇ ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಾ ಇತ್ತು. ಆದರೆ, ಈ ಚಿತ್ರದಲ್ಲಿ ನಿಜವಾದ ಹೀರೋ ಮಿತ್ರ. ‘ಸಿಲ್ಲಿ ಲಲ್ಲಿ’ ಧಾರಾವಾಹಿಯಲ್ಲಿ ‘ಜಾಣೇಶ್’ ಹೆಸರಿನ ಪಾತ್ರ ಮಾಡಿ, ‘ಏನ್ ಬೇಕಿದ್ರು ಕೇಳಿ ಲೆಕ್ಕ ಮಾತ್ರ ಕೇಳಬೇಡಿ’ ಎಂದು ನಗಿಸುತ್ತಿದ್ದ ಅವರು, ಈ ಚಿತ್ರದಲ್ಲಿ ಭಾವನಾತ್ಮಕವಾಗಿ ಸೆಳೆದುಕೊಳ್ಳುತ್ತಾರೆ. ಕೋಣಗಳ ಮೇಲಿನ ಅವರ ಪ್ರೀತಿನೋಡಿ ಪ್ರೇಕ್ಷಕನ ಮನಸ್ಸು ತುಂಬಿ ಬರುತ್ತದೆ. ಅವರ ಅಸಹಾಯಕ ಪರಿಸ್ಥಿತಿಗಳು ಪ್ರೇಕ್ಷಕನನ್ನು ಮರುಗುವಂತೆ ಮಾಡುತ್ತವೆ. ಗೆಳೆಯನಿದ್ದರೆ ಹೀಗಿರಬೇಕು ಎಂದನಿಸುವಂತೆ ಮಾಡುತ್ತಾರೆ. ಅವರು ಪಾತ್ರವನ್ನು ಜೀವಿಸಿದ್ದಾರೆ ಎಂಬುದೇ ಇದಕ್ಕೆ ಸಾಕ್ಷಿ. ಈ ಚಿತ್ರದ ಬಳಿಕ ಅವರ ವೃತ್ತಿ ಬದುಕು ಮತ್ತೊಂದು ಹಂತಕ್ಕೆ ಹೋಗಬಹುದು.
ಈ ಚಿತ್ರದಲ್ಲಿ ಪ್ರಜ್ವಲ್ಗೆ ಪ್ರಮುಖ ಪಾತ್ರ ಸಿಕ್ಕಿದೆ ಎಂಬುದು ನಿಜ, ಆದರೆ, ಅವರ ಧ್ವನಿ ಇಲ್ಲದಿರುವುದು ಪಾತ್ರದ ಫೀಲ್ ಕಡಿಮೆ ಮಾಡುತ್ತದೆ. ಅವರಿಗೆ ಸಂಭಾಷಣೆಯೂ ಕಡಿಮೆ ಎಂಬುದು ಮತ್ತೊಂದು ಬೇಸರದ ವಿಷಯ. ದ್ವಿತೀಯಾರ್ಧದಲ್ಲಿ ಅವರಿಗೆ ಸಿಕ್ಕಿರೋದು ಒಂದೇ ಒಂದು ಸಣ್ಣ ಡೈಲಾಗ್ ಎಂದರೆ ನೀವು ನಂಬಲೇಬೇಕು. ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆದರೆ, ಅವರನ್ನು ಇನ್ನೂ ಉತ್ತಮವಾಗಿ ಬಳಸಿಕೊಳ್ಳುವ ಅವಕಾಶ ಇತ್ತು. ಈ ಚಿತ್ರದ ಕಥೆಯ ಜೀವಾಳ ಕಂಬಳ. ಹೀಗಾಗಿ, ಅವರು ಕೂಡ ಕೋಣ ಓಡಿಸೋ ದೃಶ್ಯಗಳು ಇದ್ದಿದ್ದರೆ ಅವರ ಪಾತ್ರ ಮತ್ತಷ್ಟು ಸುಂದರ ಆಗುತ್ತಿತ್ತು.
ರಾಜ್ ಬಿ ಶೆಟ್ಟಿ ಅವರು ಈ ಮೊದಲೇ ಹೇಳಿದಂತೆ ಅವರದ್ದು ಅತಿಥಿ ಪಾತ್ರ. ಆದರೆ, ಇಡೀ ಸಿನಿಮಾದ ಜೀವಾಳವಾಗಿ ಈ ಪಾತ್ರ ನಿಲ್ಲುತ್ತದೆ. ಅವರು ಕಾಣಿಸಿಕೊಳ್ಳದೆ ಇದ್ದರೂ ಅವರ ಪಾತ್ರದ ಹೆಸರು ಆಗಾಗ ಮೊಳಗಿ, ಮುಂದೆ ಬರಬಹುದಾದ ಪಾತ್ರ ಎಷ್ಟು ತೂಕದ್ದಾಗಿರಬಹುದು ಎಂಬ ಸೂಚನೆಯನ್ನು ನಿರ್ದೇಶಕರು ನೀಡುತ್ತಾರೆ. ಇನ್ನು, ವಿಲನ್ ಪಾತ್ರದಲ್ಲಿ ರಮೇಶ್ ಇಂದಿರಾ ಅವರು ಹೆಚ್ಚು ಮಾರ್ಕ್ಸ್ ಪಡೆದುಕೊಳ್ಳುತ್ತಾರೆ. ಸಂಪದಾ, ಸುಷ್ಮಿತಾ ಭಟ್, ಗೋವಿಂದೇ ಗೌಡ ಹಾಗೂ ಇತರ ಪಾತ್ರಧಾರಿಗಳು ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಚಿನ್ ಬಸ್ರೂರು ಸಂಗೀತ ಇಷ್ಟ ಆಗುತ್ತದೆ. ಸುಮೇಧ್ ಕೆ ಅವರ ಕಂಪೋಸ್ ಅಲ್ಲಿ ಮೂಡಿ ಬಂದ ‘ಕರ್ಮ’ ಹಾಡು ಸರಿಯಾದ ಸಮಯದಲ್ಲಿ ಬಳಕೆ ಆಗಿದೆ.
ಒಂದು ಪರ್ಫೆಕ್ಟ್ ಸಿನಿಮಾ ತೆಗೆಯೋದು ಕಷ್ಟ. ಹೀಗಾಗಿ, ಈ ಚಿತ್ರದಲ್ಲಿಯೂ ಅಲ್ಲಲ್ಲಿ ಸಣ್ಣ ಪುಟ್ಟ ಮೈನಸ್ಗಳಿವೆ. ಉದಾಹರಣೆಗೆ, ಕೆಲವು ದೃಶ್ಯಗಳು ಅರ್ಥವಿಲ್ಲದೆ ಬಂದು ಹೋಗುತ್ತವೆ. ಆ ದೃಶ್ಯಗಳಿಂದ ಕಥೆಯಲ್ಲಿ ಯಾವುದೇ ಬದಲಾವಣೆ ಆಗೋದಿಲ್ಲ. ಈ ರೀತಿಯ ಸಣ್ಣ ತಪ್ಪುಗಳನ್ನು ಹೊಟ್ಟೆಗೆ ಹಾಕಿಕೊಂಡರೆ ಸಿನಿಮಾ ಇಷ್ಟ ಆಗುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:11 am, Fri, 24 July 26