ಸಿನಿಮಾ: ಫ್ಯಾಮಿಲಿ ಪ್ಯಾಕ್
ಪಾತ್ರವರ್ಗ: ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್, ರಂಗಾಯಣ ರಘು, ಪದ್ಮಜಾ ರಾವ್, ನಾಗಭೂಷಣ್ ಇತರರು
ನಿರ್ದೇಶನ: ಅರ್ಜುನ್ ಕುಮಾರ್ ಎಸ್.
ನಿರ್ಮಾಣ: ಪಿಆರ್ಕೆ ಪ್ರೊಡಕ್ಷನ್
ಸ್ಟಾರ್: 3/5
ಅಭಿ (ಲಿಖಿತ್ ಶೆಟ್ಟಿ) ಚಿಕ್ಕ ವಯಸ್ಸಿನಲ್ಲಿರುವಾಗಲೇ ಆತನ ತಂದೆ-ತಾಯಿ (ಅಚ್ಯುತ್ ಕುಮಾರ್-ಪದ್ಮಜಾ ರಾವ್) ಬೇರೆ ಆಗುತ್ತಾರೆ. ಅಭಿ ಬೆಳೆದು ದೊಡ್ಡವನಾಗುವವರೆಗೆ ಆತನ ತಂದೆಗೆ ಮೂರನೇ ಮದುವೆ ಆಗಿರುತ್ತದೆ. ಆದರೆ, ಅಭಿಗೆ ಮಾತ್ರ ಪ್ರೀತಿಯ ಆಸರೆ ಸಿಕ್ಕಿರುವುದಿಲ್ಲ. ಆರು ತಿಂಗಳು ತಂದೆಯ ಮನೆಯಲ್ಲಿರುವ ಅಭಿ ಮತ್ತಾರು ತಿಂಗಳು ಅಮ್ಮನ ಮನೆಯಲ್ಲಿ ವಾಸಿಸುತ್ತಿರುತ್ತಾನೆ. ಈ ಕಾಂಟ್ರ್ಯಾಕ್ಟ್ನಿಂದ ಬೇಸತ್ತಿರುವ ಅಭಿಗೆ ಭೂಮಿಕಾ (ಅಮೃತಾ) ಮೇಲೆ ಲವ್ ಆಗಿರುತ್ತದೆ. ಆದರೆ, ಆಕೆ ಈತನ ಕಡೆಗೂ ತಿರುಗಿ ನೋಡಿರುವುದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗೋಕೆ ಆಕೆ ಏನು ಮಾಡೋಕೂ ರೆಡಿ. ಹೀಗಿರುವಾಗಲೇ ಅಭಿ ಆತ್ಮಹತ್ಯೆಯ ನಿರ್ಧಾರಕ್ಕೆ ಬರುತ್ತಾನೆ. ಆಗ ಬಂದು ಕಾಪಾಡೋದು ಮಂಜುನಾಥ್ (ರಂಗಾಯಣ ರಘು). ಅಷ್ಟಕ್ಕೂ ಈ ಮಂಜುನಾಥ್ ಯಾರು? ಅವನು ಅಭಿಯನ್ನು ಏಕೆ ಕಾಪಾಡುತ್ತಾನೆ? ಈ ಎಲ್ಲಾ ಪ್ರಶ್ನೆಗೆ ನೀವು ಸಿನಿಮಾದಲ್ಲಿ ಉತ್ತರ ಹುಡುಕುವಾಗಲೇ ಒಂದು ದೊಡ್ಡ ಟ್ವಿಸ್ಟ್ ಕೂಡ ಸಿಗುತ್ತದೆ!
ಅರ್ಜುನ್ ಕುಮಾರ್ ಎಸ್. ಅವರು ಕಥೆಯ ಆಯ್ಕೆಯಲ್ಲಿ ಗೆದ್ದಿದ್ದಾರೆ. ನಿರ್ದೇಶಕರು ಮಾಡಿರುವ ಈ ಪ್ರಯೋಗ ಕನ್ನಡದ ವೀಕ್ಷಕರಿಗೆ ಹೊಸ ಫೀಲ್ ಕೊಡುತ್ತದೆ. ಅವರು ಆಯ್ಕೆ ಮಾಡಿಕೊಂಡಿರುವ ಕಥೆಗೆ ಒಂದಷ್ಟು ಮನರಂಜನೆ, ಎಮೋಷನ್ಸ್ನ ಒಗ್ಗರಣೆ ಹಾಕಿ, ಅಡುಗೆಯ ರುಚಿ ಹೆಚ್ಚಿಸಿದ್ದಾರೆ. ಸಿಂಪಲ್ ಫ್ಯಾಂಟಸಿ ಕಥೆಯನ್ನು ಸುಂದರವಾಗಿ ತೆರೆಮೇಲೆ ತರುವಲ್ಲಿ ಅರ್ಜುನ್ ಕುಮಾರ್ ಪ್ರಯತ್ನ ಯಶಸ್ವಿಯಾಗಿದೆ. ಸಿನಿಮಾದ ಆರಂಭದಲ್ಲೇ ಪ್ರೇಕ್ಷಕನಿಗೆ ಹಾರರ್ ಫೀಲ್ ಸಿಗುತ್ತದೆ. ಆದರೆ, ಮುಂದೆ ಅದೇ ದೃಶ್ಯ ಮತ್ತೆ ರಿಪೀಟ್ ಆದಾಗ ಆಗ ನಗು ಉಕ್ಕಿಸುತ್ತದೆ. ಈ ರೀತಿಯ ದೃಶ್ಯ ಸಂಯೋಜನೆಗಳು ಗಮನ ಸೆಳೆಯುತ್ತವೆ.
ತುಳು ಹಾಗೂ ಕನ್ನಡ ಚಿತ್ರರಂಗದಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಲಿಖಿತ್ ಶೆಟ್ಟಿ ಈ ಸಿನಿಮಾದಲ್ಲಿ ಲವರ್ ಬಾಯ್ ಆಗಿ ಗಮನ ಸೆಳೆದಿದ್ದಾರೆ. ಫ್ಯಾಮಿಲಿ ಆಡಿಯನ್ಸ್ ಜತೆಗೆ ಕಮರ್ಷಿಯಲ್ ವರ್ಗವನ್ನು ಸೆಳೆಯುವ ಪ್ರಯತ್ನದಲ್ಲಿ ನಿರ್ದೇಶಕರು ಡುಯೆಟ್ ಸಾಂಗ್, ಒಂದೆರಡು ಫೈಟ್ಗಳನ್ನು ‘ಫ್ಯಾಮಿಲಿ ಪ್ಯಾಕ್’ನಲ್ಲಿ ಇರಿಸಿದ್ದಾರೆ. ಅಮೃತಾ ಅಯ್ಯಂಗಾರ್ ಅವರು ನಾಯಕಿಯಾಗಿ ಹೆಚ್ಚು ಅಂಕ ಗಿಟ್ಟಿಸಿಕೊಳ್ಳುತ್ತಾರೆ.
ಅಚ್ಯುತ್ ಕುಮಾರ್ ಅವರು ನಿರ್ವಹಿಸಿರೋ ಪಾತ್ರ ಹೈಲೈಟ್ ಆಗಿದೆ. ರಂಗಭೂಮಿ ಹಿನ್ನೆಲೆಯಿಂದ ಬಂದ ಅಚ್ಯುತ್ ಕುಮಾರ್ ಅವರು ಅಭಿ ಅಪ್ಪನಾಗಿ ಅದ್ಭುತ ನಟನೆ ತೋರಿದ್ದಾರೆ. ಅವರ ಮದುವೆ ಪ್ರಹಸನವನ್ನು ಶಬ್ದದಲ್ಲಿ ವಿವರಿಸುವುದಕ್ಕಿಂತ ತೆರೆಮೇಲೆ ನೋಡಿದರೆ ಹೆಚ್ಚು ಮಜಾ. ನಗಿಸುತ್ತಲೇ ಕುಟುಂಬ ಹಾಗೂ ಸಂಬಂಧಗಳ ಬಗ್ಗೆ ಒಂದು ಸಂದೇಶ ರವಾನಿಸುವ ಕೆಲಸವೂ ಇಲ್ಲಿ ಆಗಿದೆ. ಪದ್ಮಜಾ ರಾವ್, ಸಿಹಿ ಕಹಿ ಚಂದ್ರು ಅವರದ್ದು ಎಂದಿನಂತೆ ಸಹಜ ನಟನೆ. ಸಾಧು ಕೋಕಿಲ ಅವರು ಎರಡೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಇಡೀ ಚಿತ್ರಕ್ಕೆ ಅವರೇ ಟರ್ನಿಂಗ್ ಪಾಯಿಂಟ್.
ರಂಗಾಯಣ ರಘು ಅವರು ನಿರ್ವಹಿಸಿರುವ ಮಂಜುನಾಥ್ ಪಾತ್ರವನ್ನು ಭಿನ್ನವಾಗಿ ಕಟ್ಟಿಕೊಡಲಾಗಿದೆ. ಅವರ ಪಾತ್ರದ ಗಮ್ಮತ್ತು ಏನು ಎಂಬುದನ್ನು ಬಿಟ್ಟುಕೊಟ್ಟರೆ, ಆ ಸಸ್ಪೆನ್ಸ್ ಹೋಗಿ ಬಿಡಬಹುದು. ಹೀರೋನ ಜತೆ ರಂಗಾಯಣ ರಘು ಪಾತ್ರವೂ ಟ್ರಾವೆಲ್ ಆಗುತ್ತದೆ. ಆರಂಭದಲ್ಲಿ ಸಿನಿಮಾ ಸ್ಲೋ ಎನಿಸಿದರೂ ರಂಗಾಯಣ ರಘು ಬಂದ ನಂತರ ವೇಗ ಪಡೆದುಕೊಳ್ಳುತ್ತದೆ. ಇಡೀ ಸಿನಿಮಾವನ್ನು ಅವರೇ ಆವರಿಸಿಕೊಂಡಿದ್ದಾರೆ. ನಾಗಭೂಷಣ, ಚಂದು ಗೌಡ ನಟನೆ ಗಮನ ಸೆಳೆಯುತ್ತದೆ. ‘ಗೀತಾ’ ಧಾರಾವಾಹಿಯಲ್ಲಿ ವಿಲನ್ ಪಾತ್ರ ಮಾಡುತ್ತಿರುವ ಶರ್ಮಿತಾ ಗೌಡ ಈ ಚಿತ್ರದಲ್ಲಿ ಭೂಮಿಕಾ ತಾಯಿ ಪಾತ್ರ ಮಾಡಿದ್ದಾರೆ. ಅವರಿಗೆ ಈ ಚಿತ್ರದಿಂದ ದೊಡ್ಡ ಪರದೆಯಲ್ಲಿ ಅವಕಾಶ ಹೆಚ್ಚಬಹುದು. ಸಿನಿಮಾದ ಕಥೆಯೇ ಆ ರೀತಿ ಇರುವುದಕ್ಕೆ ಇಲ್ಲಿ ಲಾಜಿಕ್ ಹುಡುಕೋಕೆ ಅವಕಾಶ ಇಲ್ಲ. ಅಲ್ಲಲ್ಲಿ ಕಥೆಯನ್ನು ಕೊಂಚ ಎಳೆದಾಡಿದಂತೆ ಭಾಸವಾಗುತ್ತದೆ. ಇಡೀ ಚಿತ್ರದಲ್ಲಿ ಎಲ್ಲಿಯೂ ಕಾಡುವಂತಹ ಸಾಂಗ್ ಇಲ್ಲ.
ಇದನ್ನೂ ಓದಿ: ‘ದ್ವಿತ್ವ’ ಸಿನಿಮಾದಲ್ಲಿ ಪುನೀತ್ ಬದಲು ಬೇರೆಯವರು ನಟಿಸ್ತಾರಾ? ತಂಡದಿಂದ ಸಿಕ್ತು ಉತ್ತರ
ಅಮೇಜಾನ್ ಪ್ರೈಮ್ನಲ್ಲಿ ಪಿಆರ್ಕೆ ವಾರ; ಒಂದು ತಿಂಗಳಲ್ಲಿ ಅಪ್ಪು ನಿರ್ಮಾಣದ ಮೂರು ಹೊಸ ಸಿನಿಮಾ ರಿಲೀಸ್?