
‘ರಕ್ಕಸಪುರದೋಳ್’ (Rakkasapuradhol) ಎಂಬ ಶೀರ್ಷಿಕೆ ಕೇಳಿದರೆ ಇದು ಕ್ರೈಂ ಥ್ರಿಲ್ಲರ್ ಕಥೆ ಎಂಬುದು ತಿಳಿಯುತ್ತದೆ. ಆದರೆ ಅಷ್ಟು ಮಾತ್ರವಲ್ಲ, ಈ ಕಥೆಯೊಳಗೆ ಇನ್ನೂ ಹಲವು ಅಂಶಗಳು ಇವೆ. ರಾಜ್ ಬಿ. ಶೆಟ್ಟಿ (Raj B Shetty) ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾಗೆ ರವಿ ಸಾರಂಗ ಆ್ಯಕ್ಷನ್-ಕಟ್ ಹೇಳಿದ್ದಾರೆ. ರವಿವರ್ಮಾ ನಿರ್ಮಾಣದ ಈ ಸಿನಿಮಾ ಫೆ.6ರಂದು ಬಿಡುಗಡೆ ಆಗಿದ್ದು, ಗಟ್ಟಿಯಾದ ಕಥೆ ಮತ್ತು ಉತ್ತಮವಾದ ಮೇಕಿಂಗ್ನಿಂದ ಗಮನ ಸೆಳೆಯುತ್ತಿದೆ. ‘ರಕ್ಕಸಪುರದೋಳ್’ ಚಿತ್ರದ ವಿಮರ್ಶೆ (Rakkasapuradhol Review) ಇಲ್ಲಿದೆ..
ರಾಜ್ ಬಿ. ಶೆಟ್ಟಿ ಅವರು ಎಲ್ಲ ಬಗೆಯ ಪಾತ್ರಗಳನ್ನು ಮಾಡುತ್ತಾರೆ. ಎಲ್ಲ ರೀತಿಯ ಪ್ರಯೋಗಕ್ಕೂ ಅವರು ಒಗ್ಗಿಕೊಳ್ಳುತ್ತಾರೆ. ‘ರಕ್ಕಸಪುರದೋಳ್’ ಸಿನಿಮಾದಲ್ಲಿ ಅವರು ಪೊಲೀಸ್ ಇನ್ಸ್ಪೆಕ್ಟರ್ ಪಾತ್ರ ಮಾಡಿದ್ದಾರೆ. ಈ ಪೊಲೀಸ್ ಪಾತ್ರ ಸ್ವಲ್ಪ ಡಿಫರೆಂಟ್ ಆಗಿದೆ. ಮಾನಸಿಕ ಸಮಸ್ಯೆ ಹೊಂದಿರುವ ಆತನನ್ನು ರಕ್ಕಸಪುರ ಎಂಬ ಊರಿಗೆ ಕಳಿಸಲಾಗುತ್ತದೆ. ಆತ ಕಾಲಿಟ್ಟ ನಂತರವೇ ಆ ಊರಿನಲ್ಲಿ ಸರಣಿ ಕೊಲೆ ಸಂಭವಿಸುತ್ತವೆ.
ಆ ಸಾವುಗಳಿಗೂ, ಕಥಾನಾಯಕನಿಗೂ ಏನಾದರೂ ಸಂಬಂಧ ಇದೆಯಾ ಎಂಬ ಅನುಮಾನ ಆರಂಭದಲ್ಲೇ ಮೂಡುತ್ತದೆ. ನಂತರ ಅನುಮಾನದ ದೃಷ್ಟಿ ಬೇರೆ ಬೇರೆ ಪಾತ್ರಗಳ ಮೇಲೆ ಬೀಳುತ್ತದೆ. ಇದರ ನಡುವೆ ದೆವ್ವ ಭೂತದ ಕಾಟ ಕೂಡ ಶುರುವಾಗತ್ತದೆ. ಈ ಕೊಲೆಗಳಿಗೆ ಕಾರಣ ಆಗಿರುವುದು ಮನುಷ್ಯನಾ ಅಥವಾ ದೆವ್ವನಾ ಎಂಬ ಪ್ರಶ್ನೆ ಮೂಡುತ್ತದೆ. ಪ್ರೇಕ್ಷಕರು ಪ್ರತಿ ದೃಶ್ಯವನ್ನೂ ಭಾರಿ ಕುತೂಹಲದಿಂದ ನೋಡುವಂತಾಗುತ್ತದೆ. ಕೊಲೆಗಳ ರಹಸ್ಯ ಏನು ಎಂಬುದು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.
‘ರಕ್ಕಸಪುರದೋಳ್’ ಸಿನಿಮಾದಲ್ಲಿ ಟ್ವಿಸ್ಟ್ಗಳಿಗೆ ಬರವೇ ಇಲ್ಲ. ಪ್ರತಿ ಹಂತದಲ್ಲೂ ಒಂದೊಂದು ಟ್ವಿಸ್ಟ್ ಎದುರಾಗುತ್ತದೆ. ಅದರಲ್ಲೂ, ದ್ವಿತೀಯಾರ್ಧದಲ್ಲಿ ಪ್ರೇಕ್ಷಕರು ಊಹಿಸದ ಅನೇಕ ಸಂಗತಿಗಳು ಎದುರಾಗುತ್ತವೆ. ಮೂಢನಂಬಿಕೆ ಮತ್ತು ವಿಜ್ಞಾನದ ವಿಚಾರಗಳನ್ನು ಕಥೆಯಲ್ಲಿ ಹೇಳಲಾಗಿದೆ. ಸಸ್ಪೆನ್ಸ್, ಥ್ರಿಲ್ಲರ್, ಹಾರರ್, ಕಾಮಿಡಿ ಮುಂತಾದ ಅಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಬೆರೆಸಿ ಅಚ್ಚುಕಟ್ಟಾದ ಸಿನಿಮಾ ಮಾಡಲಾಗಿದೆ.
ನಿರ್ದೇಶಕ ರವಿ ಸಾರಂಗ ಅವರು ಗಟ್ಟಿಯಾದ ಕಥೆ ಮತ್ತು ಬಿಗಿಯಾದ ಚಿತ್ರಕಥೆಯನ್ನು ಹೆಣೆದುಕೊಳ್ಳುವ ಮೂಲಕ ಮೊದಲ ಹಂತದಲ್ಲೇ ಗೆದ್ದಿದ್ದಾರೆ. ಅದನ್ನು ಅಷ್ಟೇ ಉತ್ತಮವಾಗಿ ತೆರೆಗೆ ತರಲಾಗಿದೆ. ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ, ಅರ್ಜುನ್ ಜನ್ಯ ಅವರ ಸಂಗೀತದಿಂದಾಗಿ ಸಿನಿಮಾಗೆ ದೊಡ್ಡ ಬಲ ಬಂದಂತೆ ಆಗಿದೆ. ಹಿನ್ನೆಲೆ ಸಂಗೀತದಲ್ಲಿ ಅರ್ಜುನ್ ಜನ್ಯ ಹೆಚ್ಚು ಇಷ್ಟ ಆಗುತ್ತಾರೆ.
ಈ ಚಿತ್ರದಲ್ಲಿ ಹಲವು ಪಾತ್ರಗಳಿವೆ ಎಲ್ಲ ಪಾತ್ರಗಳಿಗೆ ಸ್ಕೋಪ್ ಇದೆ. ಸ್ವಾತಿಷ್ಟ ಕೃಷ್ಣನ್, ಅರ್ಚನಾ ಕೊಟ್ಟಿಗೆ, ಬಿ. ಸುರೇಶ, ಜಹಾಂಗೀರ್, ಅನಿರುದ್ಧ್ ಭಟ್, ಗೋಪಾಲ್ ದೇಶಪಾಂಡೆ ಮುಂತಾದವರು ಮಾಡಿರುವ ಪಾತ್ರಗಳು ಗಮನ ಸೆಳೆದಿವೆ. ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂಬ ಕುತೂಹಲದಲ್ಲೇ ಇಡೀ ಸಿನಿಮಾ ನೋಡಿಸಿಕೊಳ್ಳುತ್ತದೆ. ರಾಜ್ ಬಿ. ಶೆಟ್ಟಿ ಅವರ ವೃತ್ತಿಜೀವನದಲ್ಲಿ ಇದೊಂದು ಡಿಫರೆಂಟ್ ಸಿನಿಮಾವಾಗಿ ನಿಲ್ಲುತ್ತದೆ.
ಇದನ್ನೂ ಓದಿ: ನಾನು ಇರೋದೇ ಬೋಡ ಕಣೇ: ಬಾಲಕಿ ಜತೆ ರಾಜ್ ಬಿ. ಶೆಟ್ಟಿ ಕ್ಯೂಟ್ ಮಾತುಕಥೆ
ವಿಶೇಷ ಏನೆಂದರೆ, ‘ರಕ್ಕಸಪುರದೋಳ್’ ಚಿತ್ರದಲ್ಲಿ ಸಾಕಷ್ಟು ವಿಷಯಗಳನ್ನು ಹೇಳಲಾಗಿದೆ. ಹತ್ತಾರು ಪಾತ್ರಗಳ ಹಿಂದೆಯೂ ಸಾಕಷ್ಟು ಕಥೆ ಇದೆ. ಆ ಎಲ್ಲ ವಿಷಯಗಳನ್ನು ಪ್ರೇಕ್ಷಕರ ಎದುರು ತೆರೆದಿಡಲು ತೆಗೆದುಕೊಂಡಿರುವ ಸಮಯ ಕೇವಲ 2 ಗಂಟೆ 7 ನಿಮಿಷ! ಅಂದರೆ, ಅಷ್ಟು ಅಚ್ಚುಕಟ್ಟಾಗಿ, ಚುಟುಕಾಗಿ, ಮನಮುಟ್ಟುವಂತೆ ನಿರೂಪಣೆ ಮಾಡಲಾಗಿದೆ. ಅನೇಕ ಟ್ವಿಸ್ಟ್ಗಳು ಇದ್ದರೂ ಕೂಡ ಪ್ರೇಕ್ಷಕರಿಗೆ ಗೊಂದಲ ಮೂಡದಂತೆ ವಿವರಿಸಲಾಗಿದೆ. ಅದು ಈ ಸಿನಿಮಾದ ಶಕ್ತಿ ಆಗಿದೆ.
ಒಂದೇ ಸಿನಿಮಾದಲ್ಲಿ ಹಾರರ್, ಮರ್ಡರ್ ಮಿಸ್ಟರಿ, ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್, ಆ್ಯಕ್ಷನ್ ಎಲ್ಲವೂ ಬೇಕು ಎಂಬ ಪ್ರೇಕ್ಷಕರಿಗೆ ‘ರಕ್ಕಸಪುರದೋಳ್’ ಚಿತ್ರ ಒಂದು ಉತ್ತಮ ಆಯ್ಕೆ. ರಾಜ್ ಬಿ. ಶೆಟ್ಟಿ ಅವರ ಅಭಿಮಾನಿಗಳಿಗೆ ಈ ಚಿತ್ರ ಇಷ್ಟ ಆಗುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.