SSE Side B Review: ‘ಸೈಡ್​ ಎ’ ಬಳಿಕ ಮನು, ಪ್ರಿಯಾ ಬದುಕು ಬದಲಾದರೂ ‘ಸೈಡ್​ ಬಿ’ ಲಯ ಬದಲಾಗಿಲ್ಲ

| Updated By: ರಾಜೇಶ್ ದುಗ್ಗುಮನೆ

Updated on: Nov 17, 2023 | 6:09 AM

Sapta Sagaradaache Ello Side B Review: ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಚಿತ್ರದಲ್ಲಿ ಬೇರೆಯದೇ ರಕ್ಷಿತ್​ ಶೆಟ್ಟಿ ಕಾಣಲು ಸಿಗುತ್ತಾರೆ. ಪ್ರೀತಿ, ನೋವು, ಅಸಹಾಯಕತೆ, ಹತಾಶೆ, ದ್ವೇಷ ಎಲ್ಲವೂ ಬೆರೆತಂತಿರುವ ಮನು ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ಪ್ರೇಕ್ಷಕರು ನಿರೀಕ್ಷಿಸದೇ ಇರುವಂತಹ ರೀತಿಯಲ್ಲಿ ಈ ಚಿತ್ರದ ಕಹಾನಿ ಸಾಗುತ್ತದೆ. ಸಿನಿಮಾದ ವಿಮರ್ಶೆ ಇಲ್ಲಿದೆ..

SSE Side B Review: ‘ಸೈಡ್​ ಎ’ ಬಳಿಕ ಮನು, ಪ್ರಿಯಾ ಬದುಕು ಬದಲಾದರೂ ‘ಸೈಡ್​ ಬಿ’ ಲಯ ಬದಲಾಗಿಲ್ಲ
ರಕ್ಷಿತ್​ ಶೆಟ್ಟಿ
Follow us on

ಚಿತ್ರ: ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ. ನಿರ್ಮಾಣ: ಪರಂವಾ ಪಿಕ್ಚರ್ಸ್​. ನಿರ್ದೇಶನ: ಹೇಮಂತ್​ ಎಂ. ರಾವ್​. ಪಾತ್ರವರ್ಗ: ರಕ್ಷಿತ್​ ಶೆಟ್ಟಿ, ರುಕ್ಮಿಣಿ ವಸಂತ್​, ಚೈತ್ರಾ ಜೆ. ಆಚಾರ್​, ಗೋಪಾಲಕೃಷ್ಣ ದೇಶಪಾಂಡೆ, ರಮೇಶ್​ ಇಂದಿರಾ ಮುಂತಾದವರು. ಸ್ಟಾರ್​: 3/5

‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಎ’ ಸಿನಿಮಾದಲ್ಲಿ ಮನು ಮತ್ತು ಪ್ರಿಯಾ ಕಥೆ ಅರ್ಧಕ್ಕೆ ನಿಂತಿತ್ತು. ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಚಿತ್ರದಲ್ಲಿ ಆ ಕಥೆ ಮುಂದುವರಿದಿದೆ. ಪರಿಸ್ಥಿತಿಯ ಕಾರಣದಿಂದ ದೂರ ಆಗಿದ್ದ ಆ ಪ್ರೇಮಿಗಳು ಮತ್ತೆ ಒಂದಾಗಲಿ ಎಂಬ ಹಂಬಲ ‘ಸೈಡ್​ ಎ’ ನೋಡಿದ ಪ್ರೇಕ್ಷಕರಲ್ಲಿ ಮೂಡಿತ್ತು. ಅದೇ ಆಶಾಭಾವವನ್ನೇ ಬಿತ್ತುತ್ತ ‘ಸೈಡ್​ ಬಿ’ ಕಹಾನಿ ಆರಂಭಿಸಿದ್ದಾರೆ ನಿರ್ದೇಶಕ ಹೇಮಂತ್​ ಎಂ. ರಾವ್​. ಈ ಸಿನಿಮಾದಲ್ಲಿ ರಕ್ಷಿತ್​ ಶೆಟ್ಟಿ ಅವರ ಶೇಡ್​ ಬದಲಾಗಿದೆ. ಹೊಸ ಪಾತ್ರಗಳು ಎಂಟ್ರಿ ಆಗಿವೆ. ಹಾಗಿದ್ದರೂ ಕೂಡ ಹೇಮಂತ್​ ರಾವ್​ ಅವರು ‘ಸೈಡ್​ ಎ’ ಚಿತ್ರದಲ್ಲಿದ್ದ ಲಯವನ್ನು ಬದಲಾಯಿಸಿಲ್ಲ. ಯಾವ ಅವಸರವನ್ನೂ ತೋರದೇ ಅವರು ‘ಸೈಡ್​ ಬಿ’ ಕಥೆಯನ್ನು ಪ್ರೇಕ್ಷಕರ ಎದುರು ತೆರೆದಿಟ್ಟಿದ್ದಾರೆ.

ನಿಧಾನವಾದರೂ ಪರವಾಗಿಲ್ಲ, ಒಂದು ಕಾವ್ಯದ ರೀತಿಯಲ್ಲಿ ಕಥೆಯನ್ನು ವಿವರಿಸಿದ ಕಾರಣಕ್ಕಾಗಿ ಜನರಿಗೆ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಎ’ ಸಿನಿಮಾ ಇಷ್ಟ ಆಗಿತ್ತು. ಅದನ್ನು ಇಷ್ಟಪಟ್ಟ ಪ್ರೇಕ್ಷಕರಿಗೆ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಸಿನಿಮಾ ಕೂಡ ಇಷ್ಟವಾಗುತ್ತದೆ. ಮುಂದುವರಿದ ಈ ಕಥೆಯಲ್ಲಿ ಮನು ಮತ್ತು ಪ್ರಿಯಾ ದೂರ ದೂರ ಇದ್ದರೂ ಕೂಡ ಪ್ರೀತಿಯ ತೀವ್ರತೆ ಕಡಿಮೆ ಆಗದ ರೀತಿಯಲ್ಲಿ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ದೂರದಲ್ಲಿ ಇದ್ದುಕೊಂಡೇ ಪ್ರೇಯಸಿಗಾಗಿ ಹಂಬಲಿಸುವ ಮಾಜಿ ಪ್ರೇಮಿಯಾಗಿ ರಕ್ಷಿತ್​ ಶೆಟ್ಟಿ ಅವರು ಗಮನಾರ್ಹವಾಗಿ ನಟಿಸಿದ್ದಾರೆ.

ಇದನ್ನೂ ಓದಿ: ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್​ ಎ’ ವಿಮರ್ಶೆ: ಪಾತ್ರ ಪರಿಚಯವೇ ಸುದೀರ್ಘ; ಭಾವ ತೀವ್ರತೆ ಅಮೋಘ

ಈ ಸಿನಿಮಾದಲ್ಲಿ ಒಂದು ಕಾಡುವ ಗುಣವಿದೆ. ಆ ಗುಣವೇ ಈ ಚಿತ್ರದ ಪ್ಲಸ್​ ಪಾಯಿಂಟ್​. ಸಾಧ್ಯವಾದ ಕಡೆಗಳಲ್ಲೆಲ್ಲ ರೂಪಕಗಳ ಮೂಲಕ ಭಾವ ತೀವ್ರತೆಯನ್ನು ಹೆಚ್ಚಿಸಲಾಗಿದೆ. ಜೈಲಿನಿಂದ ಹೊರಬಂದ ಬಳಿಕ ಬೇರೊಂದು ಹಂತಕ್ಕೆ ಸಾಗುವ ಕಥಾನಾಯಕ ಮನು ವೀಕ್ಷಕರನ್ನು ಕೂಡ ಬೇರೆಡೆಗೆ ಸೆಳೆದುಕೊಳ್ಳುತ್ತಾನೆ. ಹಲವು ವಿಚಾರಗಳನ್ನು ಸೂಕ್ಷ್ಮವಾಗಿ ತಿಳಿಸುವ ಪ್ರಯತ್ನವೂ ಈ ಸಿನಿಮಾದಲ್ಲಿ ಆಗಿದೆ. ಅವೆಲ್ಲದಕ್ಕೂ ಪೂರಕವಾಗಿ ಹಿನ್ನೆಲೆ ಸಂಗೀತದ ಮೂಲಕ ಸಿನಿಮಾದ ಮೆರುಗು ಹೆಚ್ಚಿಸಿದ್ದಾರೆ ಚರಣ್​ ರಾಜ್​. ಛಾಯಾಗ್ರಹಣದಲ್ಲಿ ಅದ್ವೈತ್​ ಗುರುಮೂರ್ತಿ ಕಸುಬುದಾರಿಕೆ ಇಷ್ಟವಾಗುತ್ತದೆ.

ಈವರೆಗೂ ಪ್ರೇಕ್ಷಕರು ಸಾವಿರಾರು ಸಿನಿಮಾಗಳಲ್ಲಿ ನೋಡಿದ ಪ್ರೇಮಕಥೆಗಿಂತಲೂ ಕೊಂಚ ಭಿನ್ನವಾದ ಕಹಾನಿಯನ್ನು ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಸಿನಿಮಾ ​ತೆರೆದಿಡುತ್ತದೆ. ಕೈ ತಪ್ಪಿಹೋದ ಪ್ರೇಮವನ್ನು ಮತ್ತೆ ಪಡೆಯುವ ಪ್ರಯತ್ನದಲ್ಲಿ ಮನು ಮುಳುಗಿಹೋಗುತ್ತಾನೆ. ಆದರೆ ಅವನು ಈಗ ‘ಸೈಡ್​ ಎ’ ಚಿತ್ರದಲ್ಲಿ ಇದ್ದಂತೆ ಸಂಪೂರ್ಣ ಒಳ್ಳೆಯವನಲ್ಲ. ಕೆಲವು ಕ್ರೈಮ್​ಗಳಿಗೆ ಅವನ ಮನಸ್ಸು ಒಗ್ಗಿಕೊಂಡಿದೆ. ಹಾಗಾಗಿ ಅವನನ್ನು ಬೆಂಬಲಿಸಬೇಕೋ ಅಥವಾ ಬೇಡವೋ ಎಂಬ ಸಂಕೀರ್ಣತೆಯ ಭಾವ ಪ್ರೇಕ್ಷಕರನ್ನು ಆವರಿಸುತ್ತದೆ. ನಿಜ ಜೀವನದ ಬಹುತೇಕ ಸಂದರ್ಭಗಳಲ್ಲಿ ಎದುರಾಗುವ ಇಂಥ ಸಂದಿಗ್ಧತೆ ಪ್ರತಿಬಿಂಬದಂತೆ ‘ಸೈಡ್​ ಬಿ’ ಕಾಣಿಸಿದೆ.

ಇದನ್ನೂ ಓದಿ: Garadi Movie Review: ಕುಸ್ತಿ, ಪ್ರೀತಿ ಮತ್ತು ಮಸ್ತಿ ತುಂಬಿದ ಯೋಗರಾಜ್​ ಭಟ್ಟರ ‘ಗರಡಿ’

‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಚಿತ್ರದಲ್ಲಿ ಬೇರೆಯದೇ ರಕ್ಷಿತ್​ ಶೆಟ್ಟಿ ಕಾಣಲು ಸಿಗುತ್ತಾರೆ. ಪ್ರೀತಿ, ನೋವು, ಅಸಹಾಯಕತೆ, ಹತಾಶೆ, ದ್ವೇಷ ಎಲ್ಲವೂ ಬೆರೆತಂತಿರುವ ಮನು ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ಅವರಿಗೆ ಅಷ್ಟೇ ಚೆನ್ನಾಗಿ ಚೈತ್ರಾ ಜೆ. ಆಚಾರ್​ ಸಾಥ್​ ನೀಡಿದ್ದಾರೆ . ಹೆಚ್ಚು ಸಂಭಾಷಣೆಗಳು ಇಲ್ಲದೆಯೂ ರುಕ್ಮಿಣಿ ವಸಂತ್ ಗಮನಾರ್ಹವಾಗಿ ನಟಿಸಿದ್ದಾರೆ. ಇಡೀ ಸಿನಿಮಾದಲ್ಲಿ ನಾಯಕನ ಜೊತೆಗಿರುವಂತಹ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಕಾಣಿಸಿಕೊಂಡಿದ್ದಾರೆ. ವಿಲನ್​ ಆಗಿ ರಮೇಶ್​ ಇಂದಿರಾ ಅದೇ ಮ್ಯಾನರಿಸಂ ಮುಂದುವರಿಸಿದ್ದಾರೆ.

ಇದನ್ನೂ ಓದಿ: Ghost Review: ಮಾಸ್​ ಪ್ರೇಕ್ಷಕರಿಗಾಗಿ ಅವಸರದಲ್ಲಿ ಹೇಳಿಮುಗಿಸಿದ ‘ಘೋಸ್ಟ್​’ ಕಹಾನಿ

ಪ್ರೇಕ್ಷಕರು ನಿರೀಕ್ಷಿಸದೇ ಇರುವಂತಹ ರೀತಿಯಲ್ಲಿ ‘ಸೈಡ್​ ಬಿ’ ಕಹಾನಿ ಸಾಗುತ್ತದೆ. ಕೆಲವು ದೃಶ್ಯಗಳು ಅನವಶ್ಯಕ ಎನಿಸಲೂಬಹುದು. ಬೇರೆಲ್ಲ ದೃಶ್ಯಗಳಲ್ಲಿ ತಮ್ಮ ಛಾಪು ಮೂಡಿಸಿರುವ ನಿರ್ದೇಶಕ ಹೇಮಂತ್​ ರಾವ್​ ಅವರು ಫೈಟಿಂಗ್​ ಸನ್ನಿವೇಶದಲ್ಲಿ ಮಾತ್ರ ಸಿದ್ಧಸೂತ್ರಕ್ಕೆ ಶರಣಾದಂತೆ ಕಾಣುತ್ತದೆ. ಏನೋ ಒಂದು ಮ್ಯಾಜಿಕ್​ ತೋರಿಸುವ ಹಠಕ್ಕೆ ಬಿದ್ದ ಅವರು ಹಲವು ಸಂದರ್ಭಗಳಲ್ಲಿ ಲಾಜಿಕ್​ ಮರೆತಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಇವುಗಳನ್ನು ಹೊರತುಪಡಿಸಿದರೆ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ’ ಸಿನಿಮಾ ರುಚಿಸುತ್ತದೆ. ಇದರ ಕ್ಲೈಮ್ಯಾಕ್ಸ್​ ಅಪೂರ್ಣ ಎಂಬಂತಿದೆ. ಮುಂದೆ ಏನೆಲ್ಲ ಆಗಿರಬಹುದು ಎಂಬುದನ್ನು ಪ್ರೇಕ್ಷಕರೇ ಊಹಿಸಿಕೊಳ್ಳಬೇಕು. ಆ ರೀತಿಯ ಒಂದು ಅಂತ್ಯದೊಂದಿಗೆ ಮನು-ಪ್ರಿಯಾ ಪ್ರೇಮಕಥೆಯು ಕಡಲಿನಲ್ಲಿ ಲೀನವಾಗುತ್ತದೆ​.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:02 am, Fri, 17 November 23