Garadi Movie Review: ಕುಸ್ತಿ, ಪ್ರೀತಿ ಮತ್ತು ಮಸ್ತಿ ತುಂಬಿದ ಯೋಗರಾಜ್​ ಭಟ್ಟರ ‘ಗರಡಿ’

Garadi Kannada Movie Movie: ನಟ ಯಶಸ್​ ಸೂರ್ಯ ಅವರಿಗೆ ‘ಗರಡಿ’ ಸಿನಿಮಾದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ಅಗತ್ಯ ಇರುವಾಗ ಮಾತ್ರ ಅಬ್ಬರಿಸಿ, ಇನ್ನುಳಿದ ಸಮಯದಲ್ಲಿ ಸೈಲೆಂಟ್​ ಆಗಿ ಇರುವಂತಹ ಈ ಪಾತ್ರವನ್ನು ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ನಟಿ ಸೋನಲ್​ ಮಾಂತೆರೋ ಅವರು ಎಂದಿನಂತೆ ಸುಂದರವಾಗಿ ಕಾಣಿಸಿಕೊಂಡು, ಉತ್ತಮವಾಗಿ ನಟಿಸಿದ್ದಾರೆ.

Garadi Movie Review: ಕುಸ್ತಿ, ಪ್ರೀತಿ ಮತ್ತು ಮಸ್ತಿ ತುಂಬಿದ ಯೋಗರಾಜ್​ ಭಟ್ಟರ ‘ಗರಡಿ’
ಬಿ.ಸಿ. ಪಾಟೀಲ್​, ಯಶಸ್​ ಸೂರ್ಯ, ಸುಜಯ್​ ಬೇಲೂರು
Follow us
ಮದನ್​ ಕುಮಾರ್​
|

Updated on: Nov 10, 2023 | 11:36 AM

ಚಿತ್ರ: ಗರಡಿ. ನಿರ್ಮಾಣ: ವನಜಾ ಪಾಟೀಲ್​. ನಿರ್ದೇಶನ: ಯೋಗರಾಜ್​ ಭಟ್​. ಪಾತ್ರವರ್ಗ: ಯಶಸ್​ ಸೂರ್ಯ, ಸೋನಲ್​ ಮಾಂಥೆರೋ, ಬಿ.ಸಿ. ಪಾಟೀಲ್​, ಸುಜಯ್​ ಬೇಲೂರು, ದರ್ಶನ್​, ಧರ್ಮಣ್ಣ, ರವಿಶಂಕರ್​, ಪೃಥ್ವಿ ಶಾಮನೂರು, ನಯನಾ ಮುಂತಾದವರು. ಸ್ಟಾರ್​: 3/5

ಕುಸ್ತಿಯನ್ನು ಕೇಂದ್ರವಾಗಿ ಇಟ್ಟುಕೊಂಡು ಮೂಡಿಬಂದ ಸಿನಿಮಾಗಳ ಸಂಖ್ಯೆ ಕಡಿಮೆ. ಅವುಗಳ ಸಾಲಿನಲ್ಲಿ ‘ಗರಡಿ’ ಸಿನಿಮಾ ಕೂಡ ಸೇರಿಕೊಂಡಿದೆ. ಹೆಸರೇ ಹೇಳುವಂತೆ ಇದು ಪೈಲ್ವಾನರ ಕಥೆ. ಅದರಲ್ಲಿ ಪ್ರೇಮಕಥೆಯೂ ಇದೆ. ಮೋಜು ಮಸ್ತಿಗೂ ಜಾಗ ಸಿಕ್ಕಿದೆ. ಆದರೆ ಅದೆಲ್ಲವೂ ಹಳೇ ಶೈಲಿಯಲ್ಲಿಯೇ ಇದೆ. ಯಶಸ್​ ಸೂರ್ಯ, ಸುಜಯ್​ ಬೇಲೂರು, ಸೋನಲ್​ ಮಾಂತೆರೋ, ರವಿಶಂಕರ್ ಮುಂತಾದ ಕಲಾವಿದರು ಹೆಚ್ಚು ಸ್ಕ್ರೀನ್​ ಸ್ಪೇಸ್​​ ಪಡೆದಿದ್ದಾರೆ. ಹಾಡು, ಫೈಟ್​, ಕಾಮಿಡಿ ಮುಂತಾದ ಮಸಾಲೆಗಳನ್ನು ಬೆರೆಸಿ ನಿರ್ದೇಶಕ ಯೋಗರಾಜ್​ ಭಟ್​ ಅವರು ಈ ಸಿನಿಮಾ ನಿರ್ದೇಶಿಸಿದ್ದಾರೆ. ‘ಗರಡಿ’ ಸಿನಿಮಾ ವಿಮರ್ಶೆ ಇಲ್ಲಿದೆ..

‘ಗರಡಿ’ ಒಂದು ಮಸಾಲಾ ಭರಿತ ಸಿನಿಮಾ. ಕಥೆಯ ಶುರುವಿನಲ್ಲಿಯೇ ಪೈಲ್ವಾನನ ಕೊಲೆ. ಅದರಿಂದ ಪ್ರೇಕ್ಷಕರ ಕೌತುಕ ಹೆಚ್ಚುತ್ತದೆ. ಕೊಲೆಯಾದ ಪೈಲ್ವಾನನ ಇಬ್ಬರು ಗಂಡು ಮಕ್ಕಳು ಗರಡಿಯಲ್ಲಿ ಆಶ್ರಯ ಪಡೆದುಕೊಳ್ಳುತ್ತಾರೆ. ಆ ಮಕ್ಕಳ ಮೈಯಲ್ಲಿ ಪೈಲ್ವಾನನ ರಕ್ತ ಹರಿಯುತ್ತಿದ್ದರೂ ಕೂಡ ಅವರು ಕುಸ್ತಿಯ ಅಖಾಡಕ್ಕೆ ಇಳಿಯುವಂತಿಲ್ಲ. ಅಂಥ ಪರಿಸ್ಥಿತಿ ಬರಲು ಕಾರಣ ಏನು? ಆ ಮಕ್ಕಳು ದೊಡ್ಡವರಾದ ಬಳಿಕ ಪ್ರೀತಿಯಲ್ಲಿ ಬಿದ್ದರೆ ಏನಾಗುತ್ತದೆ? ಪ್ರೀತಿಯ ಸಲುವಾಗಿ ಕುಸ್ತಿ ಆಡಲೇಬೇಕಾದ ಅನಿವಾರ್ಯತೆ ಬಂದರೆ ಅದನ್ನು ಹೀರೋ ಹೇಗೆ ನಿಭಾಯಿಸುತ್ತಾನೆ ಎಂಬುದೇ ‘ಗರಡಿ’ ಸಿನಿಮಾದ ಕಥೆ.

ಇದನ್ನೂ ಓದಿ: Ghost Review: ಮಾಸ್​ ಪ್ರೇಕ್ಷಕರಿಗಾಗಿ ಅವಸರದಲ್ಲಿ ಹೇಳಿಮುಗಿಸಿದ ‘ಘೋಸ್ಟ್​’ ಕಹಾನಿ

ನಿರ್ದೇಶಕ ಯೋಗರಾಜ್​ ಭಟ್​ ಎಂದ ತಕ್ಷಣ ಒಂದು ಬಗೆಯ ಸಿನಿಮಾಗಳು ನೆನಪಿಗೆ ಬರುತ್ತವೆ. ವಟವಟ ಅಂತ ಮಾತಾಡುತ್ತಲೇ ಇರುವ ಹೀರೋ, ಊರೂರು ಸುತ್ತುವ ಪಾತ್ರಗಳು, ಕಣ್ಮನ ಸೆಳೆಯುವ ಲೊಕೇಷನ್​ಗಳು, ಹೃದಯದಾಳಕ್ಕೆ ಇಳಿಯುವ ಹಾಡುಗಳು.. ಇವೆಲ್ಲ ಭಟ್ಟರ ಟ್ರೇಡ್​ ಮಾರ್ಕ್​. ಆದರೆ ಅವರು ಅದೊಂದೇ ಶೈಲಿಗೆ ಕಟ್ಟು ಬಿದ್ದಿಲ್ಲ. ಕ್ರೀಡೆಯನ್ನು ಮುಖ್ಯವಾಗಿ ಇಟ್ಟುಕೊಂಡು ಸಿನಿಮಾ ಮಾಡುವಲ್ಲಿಯೂ ಅವರು ಆಸಕ್ತಿ ತೋರಿಸಿದ್ದುಂಟು. ಈ ಹಿಂದೆ ‘ಪಂಚತಂತ್ರ’ ಸಿನಿಮಾದಲ್ಲಿ ಕಾರ್​ ರೇಸ್​ ಹೈಲೈಟ್​ ಆಗಿತ್ತು. ಅದೇ ರೀತಿ ಈಗ ‘ಗರಡಿ’ ಸಿನಿಮಾದಲ್ಲಿ ಕುಸ್ತಿಯೇ ಕೇಂದ್ರ ಸ್ಥಾನವನ್ನು ಅಲಂಕರಿಸಿದೆ.

ಇದನ್ನೂ ಓದಿ: Abhiramachandra Review: ಮೊದಲ ಪ್ರೇಮಕ್ಕಾಗಿ ಎಮೋಷನಲ್​ ಜರ್ನಿ; ಮಿಕ್ಕಿದ್ದೆಲ್ಲ ಫನ್ನಿ

ಒಂದು ಕಾಲದಲ್ಲಿ ಹಳೆಯ ಸೂತ್ರಗಳನ್ನೆಲ್ಲ ಬದಿಗೊತ್ತಿ, ತಮ್ಮದೇ ಶೈಲಿಯಲ್ಲಿ ‘ಮುಂಗಾರು ಮಳೆ’ ಸುರಿಸಿ, ‘ಗಾಳಿಪಟ’ ಹಾರಿಸಿ, ‘ಮನಸಾರೆ’ ಮನರಂಜನೆ ನೀಡಿ, ಒಂದಷ್ಟು ‘ಡ್ರಾಮಾ’ ಮಾಡಿದ ಕಾರಣದಿಂದಲೇ ಯೋಗರಾಜ್​ ಭಟ್​ ಅವರು ಡಿಫರೆಂಟ್​ ಎನಿಸಿಕೊಂಡಿದ್ದರು. ಆದರೆ ‘ಗರಡಿ’ ಸಿನಿಮಾದಲ್ಲಿ ಅವರು ಯಾವುದೇ ಪ್ರಯೋಗ ಮಾಡಿಲ್ಲ. ತುಂಬ ಹಳೇ ಸಿನಿಮಾಗಳ ಸಿದ್ಧ ಸೂತ್ರವನ್ನೇ ಫಾಲೋ ಮಾಡಿದ್ದಾರೆ. ಆ ಕಾರಣದಿಂದ ಇದು ಹತ್ತರಲ್ಲಿ ಹನ್ನೊಂದನೆಯ ಸಿನಿಮಾ ಎನಿಸಿಕೊಳ್ಳುತ್ತದೆ. ಸುಲಭವಾಗಿ ಊಹಿಸಬಹುದಾದ ಕಥೆ ಇದರಲ್ಲಿದೆ. ಅದರ ನಡುವೆಯೂ ಈ ಸಿನಿಮಾದಲ್ಲಿ ಪ್ರೇಕ್ಷಕರನ್ನು ಹಿಡಿದಿಡುವ ಅಂಶ ಎಂದರೆ ಅದು ಕುಸ್ತಿ.

ಇದನ್ನೂ ಓದಿ: Tatsama Tadbhava Review: ಕೊಲೆ ಕೌತುಕದ ಕಥೆಯೊಂದಿಗೆ ನೋಡುಗರ ತಲೆಗೆ ಹುಳ ಬಿಡುವ ‘ತತ್ಸಮ ತದ್ಭವ’

ನಟ ಯಶಸ್​ ಸೂರ್ಯ ಅವರಿಗೆ ‘ಗರಡಿ’ ಸಿನಿಮಾದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ಅಗತ್ಯ ಇರುವಾಗ ಮಾತ್ರ ಅಬ್ಬರಿಸಿ, ಇನ್ನುಳಿದ ಸಮಯದಲ್ಲಿ ಸೈಲೆಂಟ್​ ಆಗಿ ಇರುವಂತಹ ಈ ಪಾತ್ರವನ್ನು ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ನಟಿ ಸೋನಲ್​ ಮಾಂತೆರೋ ಅವರು ಎಂದಿನಂತೆ ಸುಂದರವಾಗಿ ಕಾಣಿಸಿಕೊಂಡು, ಉತ್ತಮವಾಗಿ ನಟಿಸಿದ್ದಾರೆ. ಗರಡಿ ಮನೆಯ ಗುರುವಿನ ಪಾತ್ರದಲ್ಲಿ ಹಿರಿಯ ನಟ ಬಿ.ಸಿ. ಪಾಟೀಲ್​ ಅವರದ್ದು ಖಡಕ್​ ಅಭಿನಯ. ವಿಲನ್​ ಪಾತ್ರದಲ್ಲಿ ಆರ್ಭಟಿಸಿದ್ದಾರೆ ಪಿ. ರವಿಶಂಕರ್​. ಮೊದಲೇ ತಿಳಿದಿರುವಂತೆ ಈ ಸಿನಿಮಾದಲ್ಲಿ ದರ್ಶನ್​ ಅವರದ್ದು ಅತಿಥಿ ಪಾತ್ರ. ಪ್ರೇಕ್ಷಕರ ಊಹೆಯಂತೆಯೇ ಅವರು ಕ್ಲೈಮ್ಯಾಕ್ಸ್​ನಲ್ಲಿ ಬಂದು ಆ್ಯಕ್ಷನ್​ ಪ್ರಿಯರಿಗೆ ಮನರಂಜನೆ ನೀಡುತ್ತಾರೆ. ನಟ ಧರ್ಮಣ್ಣ ಅವರು ನಗಿಸುವ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಮೊದಲ ಬಾರಿಗೆ ನಟಿಸಿರುವ ಸುಜಯ್​ ಬೇಲೂರು ಅವರು ಗಮನ ಸೆಳೆಯುವಂತೆ ಅಭಿನಯಿಸಿದ್ದಾರೆ.

ಇದನ್ನೂ ಓದಿ: Toby Review: ಮಾತನಾಡದೆ ಮನಸ್ಸಿಗೆ ನಾಟುವ ‘ಟೋಬಿ’; ಇಲ್ಲಿದೆ ಒಂದಷ್ಟು ಪ್ಲಸ್​, ಇನ್ನೊಂದಿಷ್ಟು ಮೈನಸ್​

ನಟಿ ನಿಶ್ವಿಕಾ ನಾಯ್ಡು ಅವರು ‘ಹೊಡಿರಲೆ ಹಲಗಿ..’ ಹಾಡಿನಲ್ಲಿ ಬಿಂದಾಸ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ. ಈ ಹಾಡಿನಿಂದ ಕಥೆಗೆ ಹೆಚ್ಚೇನೂ ಉಪಯೋಗ ಆಗಿಲ್ಲ. ಕಥೆಯಿಂದ ಹೊರಗಿಟ್ಟು ಪ್ರತ್ಯೇಕ ಗೀತೆಯಾಗಿ ನೋಡಿದರೆ ಪಡ್ಡೆಗಳಿಗೆ ಈ ಸಾಂಗ್ ಮಸ್ತ್​ ಮನರಂಜನೆ ನೀಡುತ್ತದೆ. ‘ಅನಿಸಬಹುದು ನಿನಗೆ ಇದು ತುಂಬ ಸಣ್ಣ ವಿಷಯ..’ ಹಾಡು ಕಥಾನಾಯಕನ ಪರಿಸ್ಥಿತಿಯನ್ನು ತೆರೆದಿಡುತ್ತದೆ. ಆದರೆ ಆತನ ಪ್ರೀತಿಯ ತೀವ್ರತೆಯನ್ನು ಕಟ್ಟಿಕೊಡಲು ಇಷ್ಟು ಮಾತ್ರ ಸಾಲದು ಎನಿಸುತ್ತದೆ. ಹರಿಕೃಷ್ಣ ಅವರು ಹಿನ್ನೆಲೆ ಸಂಗೀತಕ್ಕೆ ಇನ್ನಷ್ಟು ಶ್ರಮ ಹಾಕಿ ‘ಗರಡಿ’ ಗಮ್ಮತ್ತು ಹೆಚ್ಚಿಸಬಹುದಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು