ಚಿತ್ರ: ಟಗರು ಪಲ್ಯ. ನಿರ್ಮಾಣ: ಡಾಲಿ ಧನಂಜಯ್. ನಿರ್ದೇಶನ: ಉಮೇಶ್ ಕೆ. ಕೃಪ. ಪಾತ್ರವರ್ಗ: ನಾಗಭೂಷಣ, ಅಮೃತಾ ಪ್ರೇಮ್, ರಂಗಾಯಣ ರಘು, ತಾರಾ ಅನುರಾಧಾ, ಚಿತ್ರಾ ಶೆಣೈ, ವಾಸುಕಿ ವೈಭವ್, ಹುಲಿ ಕಾರ್ತಿಕ್, ಶರತ್ ಲೋಹಿತಾಶ್ವ, ವೈಜನಾಥ ಬೀರಾದರ, ಚಂದ್ರಕಲಾ ಮುಂತಾದವರು. ಸ್ಟಾರ್: 3.5/5
ಹಳ್ಳಿ ಸೊಗಡಿನ ಕಥೆಯನ್ನು ಇಟ್ಟುಕೊಂಡು ನಿರ್ಮಾಣವಾದ ಅನೇಕ ಸಿನಿಮಾಗಳು ಸೂಪರ್ ಹಿಟ್ ಆದ ಉದಾಹರಣೆ ಇದೆ. ಇತ್ತೀಚೆಗೆ ಇಂಥ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದೆ ಎಂದೇ ಹೇಳಬಹುದು. ಆ ಕೊರತೆಯನ್ನು ನೀಗಿಸುವ ರೀತಿಯಲ್ಲಿ ‘ಟಗರು ಪಲ್ಯ’ (Tagaru Palya) ಸಿನಿಮಾ ಮೂಡಿಬಂದಿದೆ. ಹೊಸ ನಿರ್ದೇಶಕ ಉಮೇಶ್ ಕೆ. ಕೃಪಾ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಡಾಲಿ ಧನಂಜಯ್ ಅವರು ಒಂದು ವಿಶಿಷ್ಠವಾದ ಕಥೆಗೆ ಬಂಡವಾಳ ಹೂಡಿದ್ದಾರೆ. ಪ್ರತಿಭಾವಂತ ಕಲಾವಿದರ ಸಂಗಮದಿಂದಾಗಿ ಈ ಚಿತ್ರದ ಮೆರುಗು ಹೆಚ್ಚಿದೆ. ಹಲವು ಭಾವಗಳ ಮಿಶ್ರಣದಂತೆ ‘ಟಗರು’ ಸಿನಿಮಾ ಮೂಡಿಬಂದಿದೆ. ಈ ಚಿತ್ರದ ವಿಮರ್ಶೆ (Tagaru Palya Movie Review) ಇಲ್ಲಿದೆ..
ಗ್ರಾಮೀಣ ಭಾಗದಲ್ಲಿ ನಡೆಯುವ ಒಂದು ಆಚರಣೆಯನ್ನೇ ಕೇಂದ್ರವಾಗಿ ಇಟ್ಟುಕೊಂಡು ‘ಟಗರು ಪಲ್ಯ’ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ಕಾಡಿನೊಳಗೆ ಇರುವ ಊರಿನ ದೇವಿಗೆ ಹರಕೆ ತೀರಿಸಲು ಬರುವ ಕುಟುಂಬದ ಕಹಾನಿ ಇದರಲ್ಲಿ ಇದೆ. ಕುರಿಯನ್ನು ಬಲಿ ಕೊಡುವುದಕ್ಕೂ ಮುನ್ನ ಆ ಕುರಿ ತಲೆ ಅಲ್ಲಾಡಿಸುವ ಮೂಲಕ ಅನುಮತಿ ನೀಡಬೇಕು. ತಲೆ ಅಲ್ಲಾಡಿಸದ ಹೊರತು ಕುರಿಯನ್ನು ಕಡಿಯುವಂತಿಲ್ಲ ಎಂಬುದು ಜನರ ನಂಬಿಕೆ. ತಲೆ ಅಲ್ಲಾಡಿಸದಿದ್ದರೆ ಆ ಸಂದರ್ಭದಲ್ಲಿ ಎದುರಾಗುವ ಪ್ರಸಂಗಗಳು ಹೇಗಿರುತ್ತದೆ ಎಂಬುದನ್ನೇ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ ನಿರ್ದೇಶಕ ಉಮೇಶ್. ಪಕ್ಕಾ ಹಳ್ಳಿ ಸೊಗಡಿನಲ್ಲಿ ಈ ಸಿನಿಮಾ ಮೂಡಿಬಂದಿದೆ. ಕಥೆಗೆ ತಕ್ಕಂತೆಯೇ ಭಾಷೆಯ ಬಳಕೆ ಆಗಿದೆ. ಆ ವಿಚಾರದಲ್ಲಿ ‘ಟಗರು ಪಲ್ಯ’ ಗಮನ ಸೆಳೆಯುತ್ತದೆ.
ಇದನ್ನೂ ಓದಿ: Ghost Review: ಮಾಸ್ ಪ್ರೇಕ್ಷಕರಿಗಾಗಿ ಅವಸರದಲ್ಲಿ ಹೇಳಿಮುಗಿಸಿದ ‘ಘೋಸ್ಟ್’ ಕಹಾನಿ
ಈ ಚಿತ್ರಕ್ಕೆ ನಾಗಭೂಷಣ ಹೀರೋ, ಅಮೃತಾ ಪ್ರೇಮ್ ಹೀರೋಯಿನ್. ಆದರೆ ಅವರನ್ನೂ ಮೀರಿಸುವ ರೀತಿಯಲ್ಲಿ ರಂಗಾಯಣ ರಘು ಮತ್ತು ತಾರಾ ಅನುರಾಧಾ ಅವರ ಪಾತ್ರಗಳು ಮೂಡಿಬಂದಿವೆ. ಇಡೀ ಸಿನಿಮಾವನ್ನು ರಂಗಾಯಣ ರಘು ಅವರು ಆವರಿಸಿಕೊಂಡಿದ್ದಾರೆ. ಮಗಳಿಗೆ ಮದುವೆ ಮಾಡಬೇಕು ಎಂದು ಸಿಕ್ಕಾಪಟ್ಟೆ ಕಷ್ಟಪಡುವ ತಂದೆಯ ಪಾತ್ರವನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರ ಪತ್ನಿಯ ಪಾತ್ರದಲ್ಲಿ ನಟಿ ತಾರಾ ಕೂಡ ಉತ್ತಮವಾಗಿ ನಟಿಸಿದ್ದಾರೆ. ಈ ಸಿನಿಮಾದ ಎಲ್ಲ ಪಾತ್ರಗಳಿಗೂ ಅವುಗಳದ್ದೇ ಆದಂತಹ ಮಹತ್ವ ಇದೆ. ಚಿತ್ರಾ ಶೆಣೈ, ವಾಸುಕಿ ವೈಭವ್, ಶ್ರೀನಾಥ ವಸಿಷ್ಠ, ಹುಲಿ ಕಾರ್ತಿಕ್, ಶರತ್ ಲೋಹಿತಾಶ್ವ, ವೈಜನಾಥ ಬೀರಾದರ, ಚಂದ್ರಕಲಾ ಸೇರಿದಂತೆ ಎಲ್ಲ ಕಲಾವಿದರು ‘ಟಗರು ಪಲ್ಯ’ ಸಿನಿಮಾದ ಮೆರುಗು ಹೆಚ್ಚಿಸಿದ್ದಾರೆ. ಏನನ್ನೂ ಮಾಡದೇ ಸುಮ್ಮನೇ ನಿಂತರೂ ಕೂಡ ‘7 ಸ್ಟಾರ್ ಸುಲ್ತಾನ್’ ಎಂಬ ಟಗರು ಭರ್ಜರಿ ಚಪ್ಪಾಳೆ ಗಿಟ್ಟಿಸುತ್ತದೆ. ಅದು ಕೂಡ ಪ್ರಮಖ ಪಾತ್ರವಾಗಿ ಆಕರ್ಷಿಸುತ್ತದೆ.
ಇದನ್ನೂ ಓದಿ: Abhiramachandra Review: ಮೊದಲ ಪ್ರೇಮಕ್ಕಾಗಿ ಎಮೋಷನಲ್ ಜರ್ನಿ; ಮಿಕ್ಕಿದ್ದೆಲ್ಲ ಫನ್ನಿ
‘ನೆನಪಿರಲಿ’ ಪ್ರೇಮ್ ಅವರ ಪುತ್ರಿ ಅಮೃತಾಗೆ ಇದು ಮೊದಲ ಸಿನಿಮಾ. ಅವರ ವಯಸ್ಸಿಗೆ ತಕ್ಕಂತಹ ಪಾತ್ರವೇ ಇಲ್ಲಿ ಅವರಿಗೆ ಸಿಕ್ಕಿದೆ. ಹದಿಹರೆಯದ ಹುಡುಗಿಯ ತಳಮಳಗಳನ್ನು ಅವರು ಚೆನ್ನಾಗಿ ಅಭಿವ್ಯಕ್ತಿಸಿದ್ದಾರೆ. ಮೊದಲಾರ್ಧದಲ್ಲಿ ಅವರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಸ್ಕ್ರೀನ್ ಸ್ಪೇಸ್ ಸಿಕ್ಕಿಲ್ಲವಾದರೂ ಪ್ರೀ-ಕ್ಲೈಮ್ಯಾಕ್ಸ್ ವೇಳೆಗೆ ಅವರ ಪಾತ್ರ ಹೆಚ್ಚು ಮುನ್ನೆಲೆಗೆ ಬರುತ್ತದೆ. ಕ್ಲೈಮ್ಯಾಕ್ಸ್ನಲ್ಲಿ ಅವರು ಶಿಳ್ಳೆ, ಚಪ್ಪಾಳೆ ಗಿಟ್ಟಿಸುವ ರೀತಿಯಲ್ಲಿ ನಟಿಸಿದ್ದಾರೆ. ಮೊದಲ ಸಿನಿಮಾದಲ್ಲೇ ಅವರು ತಮ್ಮ ಸಾಮರ್ಥ್ಯ ಏನು ಎಂಬುದನ್ನು ತೋರಿಸಿದ್ದಾರೆ. ನಾಗಭೂಷಣ ಅವರು ಹೀರೋ ಎಂಬುದಕ್ಕಿಂತಲೂ ಎಲ್ಲರ ನಡುವೆ ಇರುವ ಒಬ್ಬ ಸಾಮಾನ್ಯ ಹುಡುಗನಾಗಿ, ಒಂದು ಪಾತ್ರವಾಗಿ ಆವರಿಸಿಕೊಳ್ಳುತ್ತಾರೆ. ತಮಗೆ ಸಿಕ್ಕ ಅವಕಾಶವನ್ನು ಅವರು ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ.
ಅಂದಹಾಗೆ, ‘ಟಗರು ಪಲ್ಯ’ ಸಿನಿಮಾದ ಕಥೆ ನಡೆಯುವುದು ಒಂದೇ ದಿನದಲ್ಲಿ. ಯಾವುದೇ ಫ್ಲ್ಯಾಶ್ ಬ್ಯಾಕ್ ಕೂಡ ಬರುವುದಿಲ್ಲ. ಬಹುತೇಕ ಒಂದೇ ಲೊಕೇಷನ್ನಲ್ಲಿ ಮುಂಜಾವಿನಿಂದ ಸಂಜೆ ತನಕ ನಡೆಯುವ ಇಂಥ ಕಥೆಯನ್ನು ಬೋರು ಹೊಡೆಸದಂತೆ ಕಟ್ಟಿಕೊಡುವುದು ನಿಜಕ್ಕೂ ಸವಾಲಿನ ಕೆಲಸ. ಅದನ್ನು ನಿರ್ದೇಶಕ ಉಮೇಶ್ ಚೆನ್ನಾಗಿ ನಿಭಾಯಿಸಿದ್ದಾರೆ. ಕಥೆ ಒಂದೇ ಜಾಗದಲ್ಲಿ ನಡೆದರೂ ಕೂಡ ಪ್ರೇಕ್ಷಕರಿಗೆ ಏಕತಾನತೆ ಕಾಡದಂತೆ ನೋಡಿಕೊಳ್ಳಲು ಏನೆಲ್ಲ ಬೇಕೋ ಅದನ್ನು ನಿರ್ದೇಶಕರು ಮಾಡಿದ್ದಾರೆ. ಎಲ್ಲ ಪಾತ್ರಗಳ ಕಡೆಗೆ ಕಥೆ ಸಾಗುವುದು, ನಗು ಉಕ್ಕಿಸುವಂತಹ ಡೈಲಾಗ್ಗಳನ್ನು ಸೇರಿಸುವುದು, ಅಲ್ಲಲ್ಲಿ ಸಸ್ಪೆನ್ಸ್ ಕಾಯ್ದುಕೊಳ್ಳುವುದು, ಹಾಡಿನ ಮೂಲಕ ರಂಗು ತುಂಬುವುದು ಸೇರಿದಂತೆ ಅನೇಕ ತಂತ್ರಗಳನ್ನು ಬಳಸಿಕೊಂಡು ಒಂದು ಚಂದದ ಸಿನಿಮಾವನ್ನು ಅವರು ಕಟ್ಟಿಕೊಟ್ಟಿದ್ದಾರೆ.
ಇದನ್ನೂ ಓದಿ: The Vaccine War Review: ಕೊವಿಡ್ಗೆ ಲಸಿಕೆ ಕಂಡುಹಿಡಿದ ವಿಜ್ಞಾನಿಗಳ ಏಕಪಕ್ಷೀಯ ಸಂವಾದ
ಒಂದು ರೀತಿಯಲ್ಲಿ ನೋಡಿದರೆ ಇದು ಸುಲಭವಾಗಿ ಊಹಿಸಬಹುದಾದ ಕಥೆ. ನಾಯಕಿ ಯಾರನ್ನು ಪ್ರೀತಿಸುತ್ತಿರಬಹುದು? ಆಕೆಯ ಪ್ರೀತಿಗೆ ಏನು ಅಡ್ಡಿ ಆಗಿರಬಹುದು? ಕಡೆಯಲ್ಲಿ ಈ ಸಮಸ್ಯೆ ಹೇಗೆ ಬಗೆಹರಿಯುತ್ತದೆ? ಅಂತಿಮವಾಗಿ ಆಕೆ ಯಾರ ಜೊತೆ ಮದುವೆ ಆಗುತ್ತಾಳೆ ಎಂಬುದನ್ನೆಲ್ಲ ಪ್ರೇಕ್ಷಕರು ಮೊದಲೇ ಊಹಿಸಿಬಿಡುವಷ್ಟು ಸರಳವಾಗಿದೆ ಈ ಸಿನಿಮಾದ ಕಥೆ. ಮೊದಲಾರ್ಧದಲ್ಲಿ ಕುರಿ ಕಡಿಯಲು ಪ್ರಯತ್ನಿಸುವ ದೃಶ್ಯಗಳು ಪದೇಪದೇ ರಿಪೀಟ್ ಆದಾಗ ಸ್ವಲ್ಪ ಬೋರು ಎನಿಸಬಹುದು. ಕುರಿ ತಲೆ ಅಲ್ಲಾಡಿಸಲಿ ಎಂದು ಕಥೆಯಲ್ಲಿನ ಪಾತ್ರಗಳು ಗಂಟೆಗಟ್ಟಲೆ ಕಾಯುವ ರೀತಿಯೇ ಪ್ರೇಕ್ಷಕರು ಕೂಡ ಕಥೆ ಬೇಗ ತೆರೆದುಕೊಳ್ಳಲಿ ಎಂದು ಕಾಯುವಂತಾಗುತ್ತದೆ. ಇಂಥ ಚಿಕ್ಕಪುಟ್ಟ ಮೈನಸ್ ಅಂಶಗಳನ್ನು ಹೊರತುಪಡಿಸಿದರೆ ಈ ಸಿನಿಮಾ ಮೆಚ್ಚುಗೆ ಅರ್ಹವಾಗಿದೆ.
ಇದನ್ನೂ ಓದಿ: Toby Review: ಮಾತನಾಡದೆ ಮನಸ್ಸಿಗೆ ನಾಟುವ ‘ಟೋಬಿ’; ಇಲ್ಲಿದೆ ಒಂದಷ್ಟು ಪ್ಲಸ್, ಇನ್ನೊಂದಿಷ್ಟು ಮೈನಸ್
ಮೊದಲಾರ್ಧಕ್ಕೆ ಹೋಲಿಸಿದರೆ ದ್ವಿತೀಯಾರ್ಧದಲ್ಲಿ ‘ಟಗರು ಪಲ್ಯ’ ಸಿನಿಮಾದ ವೇಗ ಹೆಚ್ಚಾಗಿದೆ. ಫಸ್ಟ್ ಹಾಫ್ನಲ್ಲಿ ಕಾಮಿಡಿಗೆ ಹೆಚ್ಚು ಒತ್ತು ನೀಡಿರುವ ನಿರ್ದೇಶಕರು ಸೆಕೆಂಡ್ ಹಾಫ್ನಲ್ಲಿ ಎಮೋಷನ್ಗೆ ಮಹತ್ವ ನೀಡಿದ್ದಾರೆ. ರಂಗಾಯಣ ರಘು, ನಾಗಭೂಷಣ, ಅಮೃತಾ ಪ್ರೇಮ್ ಅವರು ತಮ್ಮ ನಟನೆ ಮೂಲಕ ಪ್ರೇಕ್ಷಕರ ಕಣ್ಣುಗಳನ್ನು ತೇವವಾಗಿಸುತ್ತಾರೆ. ಅದಕ್ಕೆ ತಕ್ಕಂತೆಯೇ ಹಿನ್ನೆಲೆ ಸಂಗೀತ ಮೋಡಿ ಮಾಡಿದೆ. ಸಂಬಂಧಗಳು ಬಹಳ ಮುಖ್ಯ ಎಂಬ ಸಂದೇಶವನ್ನು ನೀಡಲು ಕ್ಲೈಮ್ಯಾಕ್ಸ್ ಮೀಸಲಾಗಿದೆ. ಸಿಟಿ ಜೀವನದ ವ್ಯಾಮೋಹ, ದುಂದುವೆಚ್ಚದ ಮದುವೆ ಇತ್ಯಾದಿ ವಿಚಾರಗಳ ಬಗ್ಗೆಯೂ ಪಾಠ ಮಾಡಲಾಗಿದೆ. ರಕ್ತ ಸಂಬಂಧಿಗಳ ನಡುವೆ ಎಷ್ಟೇ ಕಿರಿಕ್ ಇದ್ದರೂ ಮೌಲ್ಯಗಳು ಮುಖ್ಯ ಎಂಬ ಮೆಸೇಜ್ ನೀಡಲಾಗಿದೆ. ಒಟ್ಟಾರೆ ಫ್ಯಾಮಿಲಿ ಪ್ರೇಕ್ಷಕರಿಗೆ ಈ ಚಿತ್ರ ಹೇಳಿಮಾಡಿಸಿದಂತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:25 am, Fri, 27 October 23