ದಿ ರೈಸ್ ಆಫ್ ಅಶೋಕ ವಿಮರ್ಶೆ: ಶೋಷಿತರ ದನಿಯಂತಿರುವ ಸಿನಿಮಾಗೆ ಮಾಸ್, ಕಮರ್ಷಿಯಲ್ ಸ್ಪರ್ಶ

ದಿ ರೈಸ್ ಆಫ್ ಅಶೋಕ ವಿಮರ್ಶೆ: ಶೋಷಿತರ ದನಿಯಂತಿರುವ ಸಿನಿಮಾಗೆ ಮಾಸ್, ಕಮರ್ಷಿಯಲ್ ಸ್ಪರ್ಶ
The Rise Of Ashoka Review
ದಿ ರೈಸ್ ಆಫ್ ಅಶೋಕ
UA
  • Time - 133 Minutes
  • Released - February 27, 2026
  • Language - Kannada
  • Genre - Action, Drama
Cast - ಸತೀಶ್ ನೀನಾಸಂ, ಸಪ್ತಮಿ ಗೌಡ, ಬಿ. ಸುರೇಶ, ಸಂಪತ್ ಮೈತ್ರೇಯಾ, ಗೋಪಾಲಕೃಷ್ಣ ದೇಶಪಾಂಡೆ, ಯಶ್ ಶೆಟ್ಟಿ ಮುಂತಾದವರು.
Director - ವಿನೋದ್ ವಿ. ಧೋಂಡಲೆ
3
Critic's Rating

Updated on: Feb 27, 2026 | 8:58 PM

ನಟ ನೀನಾಸಂ ಸತೀಶ್ (Sathish Ninasam) ಅವರು ರಂಗಭೂಮಿ ಹಿನ್ನೆಲೆ ಉಳ್ಳವರು. ಸಾಮಾಜಿಕ ಕಳಕಳಿ ಇರುವ ಕಥೆಗಳನ್ನು ಅವರು ಆಯ್ಕೆ ಮಾಡುತ್ತಾರೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ಎಂದರೆ ‘ದಿ ರೈಸ್ ಆಫ್ ಅಶೋಕ’ (The Rise of Ashoka) ಸಿನಿಮಾ. ತುಳಿತಕ್ಕೆ ಒಳಗಾದ ಸಮಾಜದ ನೋವಿನ ಕಥೆ ಈ ಸಿನಿಮಾದಲ್ಲಿ ಇದೆ. ವಿನೋದ್ ವಿ. ಧೋಂಡಲೆ ನಿರ್ದೇಶನ ಮಾಡಿರುವ ಈ ಚಿತ್ರ ಫೆಬ್ರವರಿ 27ರಂದು ರಿಲೀಸ್ ಆಗಿದೆ. ಹಳ್ಳಿ ಹೈದನಾಗಿ ಸತೀಶ್ ಅವರು ಅಭಿನಯಿಸಿದ್ದಾರೆ. ಅವರಿಗೆ ಸಪ್ತಮಿ ಗೌಡ ಜೋಡಿ ಆಗಿದ್ದಾರೆ. ಸಿನಿಮಾದ ವಿಮರ್ಶೆ ಇಲ್ಲಿದೆ ಓದಿ..

ಬಹಳ ಹಿಂದೆಯೇ ಸೆಟ್ಟೇರಿದ್ದ ಸಿನಿಮಾ ‘ದಿ ರೈಸ್ ಆಫ್ ಅಶೋಕ’. ಇದರ ಬಿಡುಗಡೆ ತಡವಾಗಿದ್ದರೂ ಕೂಡ, ಅದರಲ್ಲಿ ಹೇಳಿರುವ ವಿಷಯ ಹಳೇ ಕಾಲದ್ದಾಗಿದ್ದರೂ ಕೂಡ ಈ ಸಿನಿಮಾ ಇಂದಿಗೂ ಎಂದೆಂದಿಗೂ ಪ್ರಸ್ತುತ ಎಂಬಂತಿದೆ. ಜಾತಿಯ ಕಾರಣಕ್ಕಾಗಿ ಶೋಷಣೆಗೆ ಒಳಗಾದ ಕೆಲವು ಸಮುದಾಯಗಳ ಕಷ್ಟದ ಕಥೆಯನ್ನು ಈ ಸಿನಿಮಾ ತೆರೆದಿಡುತ್ತದೆ.

ಈ ಚಿತ್ರದ ಕಥಾನಾಯಕ ಅಶೋಕ (ಸತೀಶ್) ಕ್ಷೌರಿಕ ಸಮುದಾಯಕ್ಕೆ ಸೇರಿದ ಯುವಕ. ಆತ ಓದಿ ಸರ್ಕಾರಿ ಅಧಿಕಾರಿ ಆಗಬೇಕು ಎಂಬುದು ತಂದೆಯ (ಬಿ. ಸುರೇಶ) ಆಸೆ. ಮಗ ಎಂದಿಗೂ ಕ್ಷೌರಿಕ ವೃತ್ತಿಗೆ ಬರಬಾರದು ಎಂಬ ಕಾರಣಕ್ಕೆ ಹಗಲಿರುಳು ಕಷ್ಟಪಟ್ಟು ದುಡಿಯುವ ತಂದೆಗೆ ಒಂದು ದಿನ ಆಘಾತ ಎದುರಾಗುತ್ತದೆ. ಸಿಕ್ಕ ಸರ್ಕಾರಿ ಕೆಲಸವನ್ನು ತ್ಯಜಿಸಿ ಮಗ ಕ್ಷೌರಿಕನಾಗಲು ನಿರ್ಧರಿಸುತ್ತಾನೆ! ಹಾಗಾದರೆ ಅಶೋಕನ ಆ ನಿರ್ಧಾರಕ್ಕೆ ಕಾರಣ ಏನು? ಮುಂದೇನಾಗುತ್ತದೆ? ಆತ ಸರ್ಕಾರಿ ಕೆಲಸ ಪಡೆಯುತ್ತಾನೋ ಇಲ್ಲವೋ ಎಂಬುದನ್ನು ಸಿನಿಮಾ ನೋಡಿ ತಿಳಿಯಬೇಕು.

ಶೋಷಿತ ವರ್ಗದ ಧ್ವನಿಯಾಗುವಂತಹ ಅನೇಕ ಸಿನಿಮಾಗಳು ಈಗಾಗಲೇ ಬಂದಿವೆ. ಅವುಗಳ ಸಾಲಿಗೆ ‘ರೈಸ್ ಆಫ್ ಅಶೋಕ’ ಸಿನಿಮಾ ಕೂಡ ಸೇರ್ಪಡೆ ಆಗಿದೆ. ಈ ಸಿನಿಮಾದ ಮೊದಲ ಶಕ್ತಿ ಎಂದರೆ ಪ್ರತಿಭಾವಂತ ಕಲಾವಿದರ ದಂಡು. ತಂದೆ ಪಾತ್ರ ಮಾಡಿರುವ ಬಿ. ಸುರೇಶ ಮತ್ತು ವಿಲನ್ ಆಗಿ ಅಬ್ಬರಿಸಿರುವ ಸಂಪತ್ ಮೈತ್ರೇಯಾ ಅವರು ಹೆಚ್ಚು ಗಮನ ಸೆಳೆಯುತ್ತಾರೆ. ಪಾತ್ರವೇ ತಾವಾಗಿ ಅವರು ಪ್ರೇಕ್ಷಕರ ಎದುರು ಬಂದಿದ್ದಾರೆ. ನಟ ಯಶ್ ಶೆಟ್ಟಿ ಕೂಡ ಕಡಿಮೆ ಏನಿಲ್ಲ. ಕಥೆಗೆ ತಿರುವು ನೀಡುವಂತಹ ಪಾತ್ರವನ್ನು ಗೋಪಾಲಕೃಷ್ಣ ದೇಶಪಾಂಡೆ ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ.

ಸಪ್ತಮಿ ಗೌಡ ಮತ್ತು ಸತೀಶ್ ನೀನಾಸಂ ಅವರ ಜೋಡಿ ಚೆನ್ನಾಗಿದೆ. ಬಡವನ ಹೋರಾಟದ ಕಥೆಯಲ್ಲಿ ಒಂದು ಸುಂದರ ಪ್ರೇಮ್ ಕಹಾನಿ ಕೂಡ ಇದೆ. ಹಳ್ಳಿ ಹುಡುಗಿ ಪಾತ್ರದಲ್ಲಿ ಸಪ್ತಮಿ ಗೌಡ ಅವರು ಅಭಿಮಾನಿಗಳಿಗೆ ಇಷ್ಟವಾಗುವಂತೆ ನಟಿಸಿದ್ದಾರೆ. ಸತೀಶ್ ಅವರು ಎಮೋಷನಲ್ ದೃಶ್ಯಗಳಲ್ಲಿ ಮಾತ್ರವಲ್ಲದೇ ಆ್ಯಕ್ಷನ್ ಮೂಲಕವೂ ಅಬ್ಬರಿಸಿದ್ದಾರೆ.

‘ದಿ ರೈಸ್ ಆಫ್ ಅಶೋಕ’ ಸಿನಿಮಾದ ಕಥೆ ನಡೆಯುವುದು ರೆಟ್ರೋ ಕಾಲದಲ್ಲಿ. ಆ ಕಾಲಘಟ್ಟವನ್ನು ಬಹಳ ಚೆನ್ನಾಗಿ ತೋರಿಸಲಾಗಿದೆ. ಸಿನಿಮಾದ ಪ್ರತಿ ದೃಶ್ಯವನ್ನು ನೋಡುವಾಗ ಆ ಕಾಲದ ಹಳ್ಳಿ ಪರಿಸರಕ್ಕೆ ಹೋಗಿ ಬಂದಂತಹ ಅನುಭವ ಆಗುತ್ತದೆ. ಛಾಯಾಗ್ರಹಣ, ಹಾಡುಗಳು, ಹಿನ್ನೆಲೆ ಸಂಗೀತ.. ಹೀಗೆ ಎಲ್ಲ ತಾಂತ್ರಿಕ ವಿಭಾಗಗಳಲ್ಲೂ ಈ ಸಿನಿಮಾ ಗಮನ ಸೆಳೆಯುತ್ತದೆ.

ಇದನ್ನೂ ಓದಿ: Super Hit Review: ಗಿಲ್ಲಿ ‘ಸೂಪರ್ ಹಿಟ್’ ಜರ್ನಿಗೆ ಕಾಮಿಡಿ ಕಲಾವಿದರ ಸಾಥ್

ಈ ಚಿತ್ರದ ಮೊದಲಾರ್ಧವನ್ನು ಸಾಧ್ಯವಾದಷ್ಟು ನೈಜವಾಗಿ ಕಟ್ಟಿಕೊಡಲಾಗಿದೆ. ಆದರೆ ದ್ವಿತೀಯಾರ್ಧದಲ್ಲಿ ಮಾಸ್ ಅಂಶಗಳು ಹೆಚ್ಚಾಗಿ ಕಾಣಿಸಲು ಶುರುವಾದ ಬಳಿಕ ಸಿನಿಮಾ ಕೊಂಚ ಹಳಿ ತಪ್ಪಿದಂತಾಗುತ್ತದೆ. ಕಮರ್ಷಿಯಲ್ ಸೂತ್ರಗಳ ಚೌಕಟ್ಟಿಗೆ ಸಿಲುಕಿದ ನಂತರ ಇದು ಕೂಡ ಒಂದು ಮಾಮೂಲಿ ಹೊಡಿಬಡಿ ಸಿನಿಮಾ ಎಂಬಂತೆ ಭಾಸವಾಗುತ್ತದೆ. ಕಥೆಯ ಆಶಯವನ್ನು ಮಾಸ್, ಮಸಾಲೆ ಅಂಶಗಳು ಓವರ್​ಟೇಕ್ ಮಾಡಿದಂತಾಗಿದೆ. ಅದರಿಂದಾಗಿ ಒಂದು ಡಿಫರೆಂಟ್ ಸಿನಿಮಾ ಆಗಬಹುದಾಗಿದ್ದ ಅವಕಾಶ ಕೈತಪ್ಪಿದೆ. ಅದರ ಹೊರತಾಗಿಯೂ ‘ದಿ ರೈಸ್ ಆಫ್ ಅಶೋಕ’ ಸಿನಿಮಾ ಒಂದು ಪ್ರಾಮಾಣಿಕ ಪ್ರಯತ್ನವಾಗಿ ನೋಡಿಸಿಕೊಳ್ಳುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us