
ಕಾಮಿಡಿಯನ್ ಪ್ರಣಿತ್ ಮೋರೆ (Pranit More) ಶೋನಲ್ಲಿ ಡಾ. ಸೆಜಲ್ ಪವಾರ್ ಎಂಬುವವರು ನೀಡಿದ ವಿವಾದಾತ್ಮಕ ಹೇಳಿಕೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಕುರಿತು ಆಕ್ರೋಶ ಹೊರಹಾಕಿರುವ ಮುಂಬೈ ಮೇಯರ್ ರಿತು ತಾವ್ಡೆ, ಇಂತಹ ಸ್ಟ್ಯಾಂಡಪ್ ಕಾಮಿಡಿ (Stand-up Comedy) ಕಾರ್ಯಕ್ರಮಗಳನ್ನು ದೇಶದಲ್ಲಿ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಪತ್ರ ಬರೆಯುವುದಾಗಿ ಅವರು ಘೋಷಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮೇಯರ್ ರಿತು ತಾವ್ಡೆ, ‘ಮುಂಬೈನ ಮೇಯರ್ ಆಗಿ ನಾನು ಇದನ್ನು ಸಂಪೂರ್ಣವಾಗಿ ವಿರೋಧಿಸುತ್ತೇನೆ. ಇತ್ತೀಚಿನ ದಿನಗಳಲ್ಲಿ ಇಂತಹ ಸ್ಟ್ಯಾಂಡಪ್ ಕಾಮಿಡಿ ಶೋಗಳು ಇಂದಿನ ಯುವ ಪೀಳಿಗೆಯನ್ನು ದಾರಿ ತಪ್ಪಿಸುವ ಮತ್ತು ಹಾಳು ಮಾಡುವ ಕೆಲಸವನ್ನು ಮಾಡುತ್ತಿವೆ. ಸಂವಿಧಾನ ನಮಗೆ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ನಾವು ಮಾತನಾಡುತ್ತೇವೆ, ಆದರೆ ಆ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳಲು ಯಾರಿಗೂ ಹಕ್ಕಿಲ್ಲ. ಇಂತಹ ವೇದಿಕೆಗಳಲ್ಲಿ ಬಳಸಲಾಗುತ್ತಿರುವ ಭಾಷೆ ಮತ್ತು ನೀಡುತ್ತಿರುವ ಹೇಳಿಕೆಗಳು ತೀರಾ ಖಂಡನೀಯ’ ಎಂದು ಕಿಡಿಕಾರಿದ್ದಾರೆ.
ವೈದ್ಯಕೀಯ ಶಿಕ್ಷಣಕ್ಕಾಗಿ ದಾನ ಮಾಡಲಾಗುವ ಶವಗಳ ಬಗ್ಗೆ ಕಾಮಿಡಿ ಶೋನಲ್ಲಿ ಆಡಲಾದ ಮಾತುಗಳಿಗೆ ಮೇಯರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ಕುಟುಂಬದವರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖದಲ್ಲೂ, ಭವಿಷ್ಯದ ವೈದ್ಯರು ಕಲಿಯಲಿ ಎಂಬ ನಂಬಿಕೆಯಿಂದ ಶವಗಳನ್ನು ಸ್ವಯಂಪ್ರೇರಿತರಾಗಿ ವೈದ್ಯಕೀಯ ಸಂಸ್ಥೆಗಳಿಗೆ ದಾನ ಮಾಡುತ್ತಾರೆ. ಅಂತಹ ಶವಗಳ ಬಗ್ಗೆ ಈ ರೀತಿಯಾಗಿ ಹಾಸ್ಯ ಮಾಡುವುದು, ಮಾತನಾಡುವುದು ಅತ್ಯಂತ ಅಮಾನವೀಯ ಮತ್ತು ಅಸೂಕ್ಷ್ಮ ವರ್ತನೆ. ಇದು ಮಹಾರಾಷ್ಟ್ರದ ಸಂಸ್ಕೃತಿಗಾಗಲಿ ಅಥವಾ ಭಾರತದ ಸಂಸ್ಕೃತಿಗಾಗಲಿ ಒಪ್ಪುವಂಥದ್ದಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯೊಬ್ಬರು ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿರುವುದನ್ನು ಮೇಯರ್ ಪ್ರಶ್ನಿಸಿದ್ದಾರೆ. ‘ಪೋಷಕರು ಬ್ಯಾಂಕ್ ಸಾಲಗಳನ್ನು ಮಾಡಿ, ಲಕ್ಷಾಂತರ-ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ದೊಡ್ಡ ಮಟ್ಟದ ಆರ್ಥಿಕ ತ್ಯಾಗ ಮಾಡುತ್ತಾರೆ. ಇಷ್ಟೆಲ್ಲಾ ಕಷ್ಟಪಟ್ಟು ದೊಡ್ಡ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆದ ನಂತರ, ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವುದು ನಿಜಕ್ಕೂ ನಿರಾಶಾದಾಯಕ. ಇದು ಶವದಾನ ಮಾಡಿದ ಕುಟುಂಬಗಳ ಭಾವನೆಗಳಿಗೆ ತೀವ್ರ ಧಕ್ಕೆ ತರುತ್ತದೆ’ ಎಂದು ರಿತು ತಾವ್ಡೆ ಹೇಳಿದ್ದಾರೆ.
ಇದನ್ನೂ ಓದಿ: 370 ರೂ. ಬಿರಿಯಾನಿ ವಿವಾದ: ಪ್ರಣಿತ್ ಮೋರೆ, ಹಿಮಾಂಶು, ಡಾ. ಸೆಜಲ್ಗೆ ಮಹಿಳಾ ಆಯೋಗ ನೋಟಿಸ್
ಕಾಮಿಡಿಯನ್ ಪ್ರಣಿತ್ ಮೋರೆ ಅವರ ಶೋನಲ್ಲಿ ಭಾಗವಹಿಸಿದ್ದ ಡಾ. ಸೆಜಲ್ ಪವಾರ್ ಅವರು ವೈದ್ಯಕೀಯ ವಿದ್ಯಾರ್ಥಿಗಳು ಶವಪರೀಕ್ಷೆ ಹಾಗೂ ಅಂಗರಚನಾಶಾಸ್ತ್ರದ ಅಧ್ಯಯನಕ್ಕಾಗಿ ಬಳಸುವ ಶವಗಳ ಕುರಿತು ಅತ್ಯಂತ ಅಸೂಕ್ಷ್ಮ ಹಾಗೂ ಲಘುವಾಗಿ ಮಾತನಾಡಿದ್ದರು. ವೈದ್ಯಕೀಯ ಪ್ರಯೋಗಾಲಯಗಳಲ್ಲಿ ಇರುವ ಮೃತದೇಹಗಳನ್ನು ಕೇವಲ ತಮಾಷೆಯ ವಸ್ತುವಿನಂತೆ ಬಿಂಬಿಸಿ ಅವರು ಆಡಿದ ಮಾತುಗಳು ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಹಾಗೂ ವೈದ್ಯಕೀಯ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.