ನೆಟ್‌ಫ್ಲಿಕ್ಸ್ ವಿರುದ್ಧ ದಾವೆ, 1000 ಕೋಟಿ ಪರಿಹಾರಕ್ಕೆ ನಿರ್ಮಾಪಕ ಬೇಡಿಕೆ
Netflix movie: ನಿರ್ಮಾಣ ಸಂಸ್ಥೆಗಳನ್ನು ತಾಳಕ್ಕೆ ಕುಣಿಸುವ ನೆಟ್‌ಫ್ಲಿಕ್ಸ್ ಮೇಳೆ ನಿರ್ಮಾಪಕರೊಬ್ಬರು ದಾವೆ ಹೂಡಿದ್ದಾರೆ. ಮಾತ್ರವಲ್ಲದೆ, ನೆಟ್‌ಫ್ಲಿಕ್ಸ್ ತಮಗೆ ಬರೋಬ್ಬರಿ 1000 ಕೋಟಿ ರೂಪಾಯಿ ಪರಿಹಾರ ಮೊತ್ತವಾಗಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಏನಿದು ಪ್ರಕರಣ? ನಿರ್ಮಾಪಕ ದೂರು ದಾಖಲಿಸಿರುವುದು ಏಕೆ? ಮಾಹಿತಿ ಇಲ್ಲಿದೆ...

ನೆಟ್‌ಫ್ಲಿಕ್ಸ್ (Netflix), ವಿಶ್ವದ ದೊಡ್ಡ ಒಟಿಟಿಗಳಲ್ಲಿ ಒಂದು. ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳನ್ನೇ ತಾಳಕ್ಕೆ ತಕ್ಕಂತೆ ಕುಣಿಸುವ ಶಕ್ತಿಯನ್ನು ಹೊಂದಿದೆ ಈ ಒಟಿಟಿ ದೈತ್ಯ. ಆದರೆ ನಿರ್ಮಾಪಕರೊಬ್ಬರು ಇದೀಗ ನೆಟ್‌ಫ್ಲಿಕ್ಸ್ ಮೇಲೆ ದಾವೆ ಹೂಡಿದ್ದಾರೆ. ಮಾತ್ರವಲ್ಲದೆ, ನೆಟ್‌ಫ್ಲಿಕ್ಸ್ ತಮಗೆ ಬರೋಬ್ಬರಿ 1000 ಕೋಟಿ ರೂಪಾಯಿ ಪರಿಹಾರ ಮೊತ್ತವಾಗಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಏನಿದು ಪ್ರಕರಣ? ನಿರ್ಮಾಪಕ ದೂರು ದಾಖಲಿಸಿರುವುದು ಏಕೆ? ಮಾಹಿತಿ ಇಲ್ಲಿದೆ…
ನೆಟ್‌ಫ್ಲಿಕ್ಸ್ ಸ್ಟುಡಿಯೋಸ್‌ನಿಂದ ತಮ್ಮ ಬಿಡುಗಡೆಯಾಗದ ಚಲನಚಿತ್ರದ ಪ್ರತಿಯೊಂದು ಹಾರ್ಡ್ ಡ್ರೈವ್ ಕಳುವಾಗಿದೆ ಎಂದು ಆರೋಪಿಸಿ ಚಲನಚಿತ್ರ ನಿರ್ಮಾಪಕರೊಬ್ಬರು ನೆಟ್‌ಫ್ಲಿಕ್ಸ್ ವಿರುದ್ಧ 105 ಮಿಲಿಯನ್ ಡಾಲರ್ (1003 ಕೋಟಿ ರೂಪಾಯಿ) ಪರಿಹಾರ ಕೋರಿ ಮೊಕದ್ದಮೆ ಹೂಡಿದ್ದಾರೆ. ಬುಧವಾರ ಕ್ಯಾಲಿಫೋರ್ನಿಯಾದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಆರೋಪ ಗಂಭೀರವಾಗಿದ್ದು, ದೂರು ದಾಖಲಿಸಿರುವ ನಿರ್ಮಾಪಕರು ಸಹ ಹಿರಿಯ, ಅನುಭವಿ ನಿರ್ಮಾಪಕರೇ ಆಗಿದ್ದಾರೆ.
ನಿರ್ಮಾಪಕ ಸೈಮನ್ ಅಫ್ರಮ್ ಅವರು ಹಾಲಿವುಡ್ ಸ್ಟಾರ್ ನಟ ನಿಕೊಲಸ್ ಕೇಜ್ ಅವರನ್ನು ಹಾಕಿಕೊಂಡು ‘ಪೋರ್ಟಿಟ್ಯೂಡ್’ ಹೆಸರಿನ ಸಿನಿಮಾ ಮಾಡಿದ್ದಾರೆ. ಎರಡನೇ ವಿಶ್ವಯುದ್ಧದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ‘ಫೋರ್ಟಿಟ್ಯೂಡ್’ ಚಿತ್ರದ ಎನ್‌ಕ್ರಿಪ್ಟ್ ಮಾಡದ ಮಾಸ್ಟರ್ ಪ್ರತಿಯನ್ನು ನೆಟ್‌ಫ್ಲಿಕ್ಸ್ ಕೋರಿಕೆ ಮೇರೆಗೆ ಜೂನ್‌ನಲ್ಲಿ ಸ್ಟುಡಿಯೋಕ್ಕೆ ತಲುಪಿಸಲಾಗಿತ್ತು. ಈಗ ಆ ಪ್ರತಿ ಕಾಣೆ ಆಗಿದೆ. ನಿರ್ಮಾಪಕ ಸೈಮನ್ ಅಫ್ರಮ್ ಈ ಚಿತ್ರದ ನಿರ್ಮಾಣಕ್ಕಾಗಿ 7 ವರ್ಷ ಸಮಯ ವ್ಯವಯಿಸಿದ್ದು ಸುಮಾರು 45 ಮಿಲಿಯನ್ ಡಾಲರ್‌ಗಿಂತ (ಸುಮಾರು 500 ಕೋಟಿ) ಅಧಿಕ ಹಣವನ್ನು ಹೂಡಿಕೆ ಮಾಡಿದ್ದರು ಮತ್ತು ಅದನ್ನು ನೆಟ್‌ಫ್ಲಿಕ್ಸ್ ಅಥವಾ ಇನ್ಯಾವುದೇ ವಿತರಕರಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು.
ಇದನ್ನೂ ಓದಿ:‘ಧುರಂಧರ್’ ವಿಷಯದಲ್ಲಿ ಮಾಡಿದ ತಪ್ಪಿಗೆ ಭಾರೀ ದಂಡ ತೆತ್ತ ನೆಟ್‌ಫ್ಲಿಕ್ಸ್?
ಕಳೆದ ವಾರ ನೆಟ್ಫ್ಲಿಕ್ಸ್ನವರು ನಿರ್ಮಾಪಕರಿಗೆ ಮೇಲ್ ಮಾಡಿ ನಮ್ಮ ಮೇಜುಗಳಿಂದ ಯಾರೋ ದೊಡ್ಡ ಪ್ರಮಾಣದ ಡ್ರೈವ್‌ಗಳನ್ನು ಕಳವು ಮಾಡಿದ್ದಾರೆ. ಇದರಲ್ಲಿ ‘ಫೋರ್ಟಿಟ್ಯೂಡ್’ ಚಿತ್ರವಿರುವ ಡ್ರೈವ್ ಕೂಡ ಸೇರಿದೆ ಎಂದು ಮಾಹಿತಿ ನೀಡಿದ್ದರು. ಡ್ರೈವ್ ಕಳುವಾದ ಕಾರಣ ಚಲನಚಿತ್ರವು ಪೈರಸಿ ಸೈಟ್‌ಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ವಿತರಕರು ಅದನ್ನು ಖರೀದಿಸಲು ಮುಂದಾಗುವುದಿಲ್ಲ ಎಂಬ ಕಾರಣಕ್ಕಾಗಿ ಚಿತ್ರದ ಮೌಲ್ಯವು ನಾಶವಾಗಿದೆ ಎಂದು ನಿರ್ಮಾಪಕರು ವಾದಿಸಿದ್ದಾರೆ.
‘ಯಾವುದೇ ಪರಿಣಿತ ಖರೀದಿದಾರನು ಹತ್ತು ಮಿಲಿಯನ್ ಡಾಲರ್‌ಗಳನ್ನು ಹೂಡಿಕೆ ಮಾಡಿ ಚಿತ್ರವನ್ನು ಪಡೆದುಕೊಳ್ಳಲು ಅಥವಾ ಅದರ ಪ್ರಚಾರಕ್ಕಾಗಿ ಮತ್ತೆ ಹತ್ತು ಮಿಲಿಯನ್ ಡಾಲರ್‌ಗಳನ್ನು ಖರ್ಚು ಮಾಡಲು ಮುಂದಾಗುವುದಿಲ್ಲ, ಏಕೆಂದರೆ ಆ ಚಿತ್ರವು ಯಾವುದೇ ಕ್ಷಣದಲ್ಲಿ ಆನ್‌ಲೈನ್‌ನಲ್ಲಿ ಉಚಿತವಾಗಿ ಕಾಣಿಸಿಕೊಳ್ಳುವ ನಿರಂತರ ಅಪಾಯವಿರುತ್ತದೆ’ ಎಂದು ಮೊಕದ್ದಮೆಯಲ್ಲಿ ಉಲ್ಲೇಖಿಸಲಾಗಿದೆ. ಈ ಮೊಕದ್ದಮೆಯ ಮೂಲಕ ಕನಿಷ್ಠ 105 ಮಿಲಿಯನ್ ಡಾಲರ್ (1003 ಕೋಟಿ ರೂಪಾಯಿ) ಹಾನಿ ಪರಿಹಾರವನ್ನು ಕೋರಲಾಗಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ನೆಟ್‌ಫ್ಲಿಕ್ಸ್, ‘ನಮಗೆ ‘ಫೋರ್ಟಿಟ್ಯೂಡ್’ ಚಿತ್ರದ ಹಕ್ಕುಗಳಿಲ್ಲದಿದ್ದರೂ, ನಾವು ಕಂಟೆಂಟ್ ಭದ್ರತೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ಚಲನಚಿತ್ರ ನಿರ್ಮಾಪಕ ಹಾಗೂ ಅವರ ತಂಡಕ್ಕೆ ಬೆಂಬಲ ನೀಡಲು ಹೆಚ್ಚಿನ ಕ್ರಮಗಳನ್ನು ಕೈಗೊಂಡಿದ್ದೇವೆ, ಕಳುವಿನ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದೇವೆ’ ಎಂದು ಹೇಳಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:35 pm, Fri, 31 July 26




