ಫ್ರೀಯಾಗಿ ನೆಟ್‌ಫ್ಲಿಕ್ಸ್ ಪಡೆಯಲು ಹೋಗಿ 1 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ: ಆಗಿದ್ದೇನು?
ಉಚಿತವಾಗಿ ನೆಟ್‌ಫ್ಲಿಕ್ಸ್ ಒಟಿಟಿ ಚಂದಾದಾರಿಕೆ ಪಡೆಯಲು ಹೋಗಿ ಬೆಂಗಳೂರಿನ ವ್ಯಕ್ತಿಯೊಬ್ಬರು 1 ಲಕ್ಷ ರೂ. ಕಳೆದುಕೊಂಡ ಘಟನೆ ನಡೆದಿದೆ. 'ಟ್ಯೂಬಿ' ಎಂಬ ನಕಲಿ ಆಪ್ ಡೌನ್‌ಲೋಡ್ ಮಾಡಿದ್ದ ಅವರ ಖಾತೆಯಿಂದ ವಂಚಕರು ಅನಧಿಕೃತ ವಹಿವಾಟುಗಳ ಮೂಲಕ ಹಣವನ್ನು ದೋಚಿದ್ದಾರೆ. ಈ ಬಗ್ಗೆ ಗೊತ್ತಾಗುತ್ತಲೇ ಬ್ಯಾಂಕ್ ಸಂಪರ್ಕಿಸಿದ ಅವರು, ಉಳಿದ ಹಣವನ್ನು ತಂದೆಯ ಖಾತೆಗೆ ವರ್ಗಾಯಿಸಿದ್ದಾರೆ. ಬಳಿಕ ಈ ಬಗ್ಗೆ ಅಶೋಕ್ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ಬೆಂಗಳೂರು, ಮೇ 21: ಅಮೆಜಾನ್ ಪ್ರೈಮ್, ಹಾಟ್ಸ್ಟಾರ್, ನೆಟ್‌ಫ್ಲಿಕ್ಸ್ ಹೀಗೆ ಹತ್ತಾರು ಒಟಿಟಿಗಳು ಇಂದು ಮಾರುಕಟ್ಟೆಯನ್ನು ಆಳುತ್ತಿವೆ. ಹೊಸ ಸಿನಿಮಾ, ಧಾರಾವಾಹಿಗಳು ಸೇರಿ ಹಲವು ಚಾನೆಲ್ಗಳಿಗಿಂತ ಇಲ್ಲೇ ಮೊದಲು ಸಿಗುವ ಕಾರಣ ಇವುಗಳ ಚಂದಾದಾರರ ಸಂಖ್ಯೆಯೂ ದೊಡ್ಡದ್ದಿದೆ. ಆದರೆ ಹಲವು ಒಟಿಟಿಗಳ ಚಂದಾದಾರರಾಗಲು ಹೆಚ್ಚಿನ ಹಣ ವ್ಯಯಿಸಬೇಕಿರುವ ಕಾರಣ ಕೆಲವರು ಬೇರೆ ಏನಾದರೂ ಬೇರೆ ದಾರಿ ಇದೆಯಾ ಎಂದು ಹುಡುಕುವ ಕೆಲಸಕ್ಕೂ ಇಳಿಯುತ್ತಿದ್ದಾರೆ. ಇಂತಹುದೇ ಮಾಡಲು ಹೋಗಿ ಬೆಂಗಳೂರಿನ ವ್ಯಕ್ತಿಯೋರ್ವರು ಬರೋಬ್ಬರಿ 1 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ.
ಉಚಿತ OTT ಸೇವೆ ನೀಡುವುದಾಗಿ ಹೇಳಿದ ‘ಟ್ಯೂಬಿ’ (Tuby) ಮೊಬೈಲ್ ಆಪ್ ಡೌನ್‌ಲೋಡ್ ಮಾಡಿದ ಪರಿಣಾಮ 35 ವರ್ಷದ ಅಂಗಡಿ ವ್ಯವಸ್ಥಾಪಕರೊಬ್ಬರು ಯಾಮಾರಿದ್ದಾರೆ. ಶಿವಾಜಿನಗರದ ಸುಗಂಧ ದ್ರವ್ಯ ಅಂಗಡಿಯಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿರುವ, ರಿಚ್ಮಂಡ್ ಟೌನ್ ನಿವಾಸಿಯಾಗಿರುವ ಸಯ್ಯದ್ ವಸೀಂ ಅಹ್ಮದ್ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ವೀಕ್ಷಿಸುತ್ತಿದ್ದ ವೇಳೆ ಅವರಿಗೆ ‘ಟ್ಯೂಬಿ’ ಆಪ್ ಲಿಂಕ್ ಕಾಣಿಸಿಕೊಂಡಿತ್ತು. ಮೇ 18ರಂದು ಅವರು ಆಪ್ ಡೌನ್‌ಲೋಡ್ ಮಾಡಿದ್ದರು. ಆದರೆ ಆಪ್ ಇನ್‌ಸ್ಟಾಲ್ ಮಾಡಿದ ಕೆಲವೇ ಕ್ಷಣಗಳಲ್ಲಿ ವಂಚಕರು ಅವರ ಬ್ಯಾಂಕ್ ಖಾತೆ ಮಾಹಿತಿಗೆ ಪ್ರವೇಶ ಪಡೆದು, ಅನಧಿಕೃತ ವಹಿವಾಟುಗಳ ಮೂಲಕ 1 ಲಕ್ಷ ಹಣವನ್ನು ದೋಚಿದ್ದಾರೆ. ಈ ಬಗ್ಗೆ ಗೊತ್ತಾಗುತ್ತಲೇ ಬ್ಯಾಂಕ್ ಸಂಪರ್ಕಿಸಿದ ಅವರು, ಉಳಿದ ಹಣವನ್ನು ತಂದೆಯ ಖಾತೆಗೆ ವರ್ಗಾಯಿಸಿದ್ದಾರೆ. ಬಳಿಕ ಈ ಬಗ್ಗೆ ಅಶೋಕ್ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಇದು ಪಕ್ಕಾ ಸಿನಿಮೀಯ ವಂಚನೆ! ಡಿಸೈನ್ ಸೆಲೆಕ್ಟ್ ಮಾಡಿ ಫೋಟೋ ತೆಗೆಯೋ ನೆಪದಲ್ಲಿ 3 ಕೋಟಿ ರೂ. ಚಿನ್ನಾಭರಣ ದೋಚಿ ಖದೀಮರು ಪರಾರಿ
ನಕಲಿ ಆಫರ್‌ಗಳ ಬಗ್ಗೆ ಇರಲಿ ಎಚ್ಚರಿಕೆ
ಬೆಂಗಳೂರು ನಗರದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆಯೇ, ವಂಚಕರು ಈಗ ನಕಲಿ OTT ಸಬ್‌ಸ್ಕ್ರಿಪ್ಷನ್ ಆಫರ್‌ಗಳು ಹಾಗೂ ಆಪ್‌ಗಳ ಮೂಲಕ ಜನರನ್ನು ಗುರಿಯಾಗಿಸುತ್ತಿದ್ದಾರೆ. ಉಚಿತ ಅಥವಾ ಕಡಿಮೆ ದರದಲ್ಲಿ ಸಿನಿಮಾಗಳು, ವೆಬ್ ಸೀರಿಸ್ ಹಾಗೂ ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸಲು ಅವಕಾಶ ನೀಡುವುದಾಗಿ ಹೇಳಿ ಜನರನ್ನು ಸೆಳೆಯುತ್ತಾರೆ. ಆದರೆ ಇಂತಹ ಆಪ್‌ಗಳು ಬ್ಯಾಂಕಿಂಗ್ ವಿವರಗಳು, OTP ಸೇರಿದಂತೆ ಸೂಕ್ಷ್ಮ ಮಾಹಿತಿಯನ್ನು ಕದಿಯಲು ವಿನ್ಯಾಸಗೊಳಿಸಲ್ಪಟ್ಟಿರುತ್ತವೆ ಎಂದು ಸೈಬರ್ ಅಪರಾಧ ತಜ್ಞರೊಬ್ಬರು ತಿಳಿಸಿದ್ದಾರೆ. ಪ್ಲೇ ಸ್ಟೋರ್‌ನಿಂದ ಯಾವುದೇ ಆಪ್ ಡೌನ್‌ಲೋಡ್ ಮಾಡುವ ಮೊದಲು ಅದರ ರಿವ್ಯೂ, ರೇಟಿಂಗ್ ಹಾಗೂ ಡೌನ್‌ಲೋಡ್ ಸಂಖ್ಯೆಯನ್ನು ಪರಿಶೀಲಿಸಬೇಕು. ವಂಚಕ ಆಪ್‌ಗಳಲ್ಲಿ ನಕಲಿ ವಿಮರ್ಶೆಗಳು ಹಾಗೂ ಅನುಮಾನಾಸ್ಪದ ಅನುಮತಿಗಳು ಇರಬಹುದು. SMS, ಸಂಪರ್ಕಗಳು, ಗ್ಯಾಲರಿ ಅಥವಾ ಬ್ಯಾಂಕಿಂಗ್ ಮಾಹಿತಿಗೆ ಅನಗತ್ಯ ಪ್ರವೇಶ ಕೇಳುವ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಬಾರದು ಎಂದು ಎಚ್ಚರಿಕೆ ನೀಡಿರೋದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:18 am, Thu, 21 May 26





