ಕರ್ನಾಟಕ ಅಗ್ನಿಶಾಮಕ ಇಲಾಖೆ ನೇಮಕಾತಿ: 472 ಫೈರ್ ಫೈಟರ್ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ (KSFES) 472 ಅಗ್ನಿಶಾಮಕ ಮತ್ತು ಅಗ್ನಿಶಾಮಕ ಠಾಣಾಧಿಕಾರಿ (FSO) ಹುದ್ದೆಗಳಿಗೆ KEA ಮೂಲಕ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. 10ನೇ ತರಗತಿ, PUC ಅಥವಾ ವಿಜ್ಞಾನ ಪದವಿ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದು. ಮಾಸಿಕ ವೇತನ 37,500 ರಿಂದ 76,100 ರೂ. ವರೆಗೆ. ಆಸಕ್ತರು ಡಿಸೆಂಬರ್ 22 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.

ಕರ್ನಾಟಕ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಭರ್ಜರಿ ಸಿಹಿಸುದ್ದಿ. ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿ (KSFES) ಖಾಲಿ ಇರುವ ಒಟ್ಟು 472 ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಮೂಲಕ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 22 ಡಿಸೆಂಬರ್ 2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ ಮತ್ತು ಶೈಕ್ಷಣಿಕ ಅರ್ಹತೆ:
ಈ ನೇಮಕಾತಿ ಪ್ರಕ್ರಿಯೆಯಲ್ಲಿ ಫೈರ್ ಫೈಟರ್ (Fire Fighter) ವಿಭಾಗದಲ್ಲಿ 460 ಹುದ್ದೆಗಳು ಹಾಗೂ ಅಗ್ನಿಶಾಮಕ ಠಾಣಾಧಿಕಾರಿ (Fire Station Officer – FSO) ವಿಭಾಗದಲ್ಲಿ 16 ಹುದ್ದೆಗಳು ಲಭ್ಯವಿವೆ. ನೇಮಕಾತಿ ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ (SSLC), ಪಿಯುಸಿ (PUC) ಅಥವಾ ರಸಾಯನಶಾಸ್ತ್ರ (Chemistry) ವಿಷಯದೊಂದಿಗೆ ವಿಜ್ಞಾನ ಪದವಿ (Graduation in Science) ಪೂರ್ಣಗೊಳಿಸಿರಬೇಕು.
ಮಾಸಿಕ ವೇತನ ಶ್ರೇಣಿ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾವಳಿಗಳ ಪ್ರಕಾರ ಆಕರ್ಷಕ ವೇತನ ಸಿಗಲಿದ್ದು, ಮಾಸಿಕ 37,500 ದಿಂದ 76,100 ರೂ. ವರೆಗೆ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ.
ವಯೋಮಿತಿ ಮತ್ತು ವಯೋಮಿತಿ ಸಡಿಲಿಕೆ:
ಹೊಸ ನಿಯಮಾವಳಿಗಳ ಪ್ರಕಾರ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷಗಳು ಹಾಗೂ ಗರಿಷ್ಠ ವಯೋಮಿತಿ 31 ವರ್ಷಗಳಾಗಿರಬೇಕು. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದಂತೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ. ಅದರಂತೆ OBC, ಪ್ರವರ್ಗ 2A, 2B, 3A ಮತ್ತು 3B ಅಭ್ಯರ್ಥಿಗಳಿಗೆ 3 ವರ್ಷಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (SC/ST) ಅಭ್ಯರ್ಥಿಗಳಿಗೆ 5 ವರ್ಷಗಳು ಹಾಗೂ ಅಂಗವಿಕಲ (PWD) ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕದ ವಿವರ:
ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗ ಹಾಗೂ ಪ್ರವರ್ಗ 2A, 2B, 3A ಮತ್ತು 3B ಅಭ್ಯರ್ಥಿಗಳಿಗೆ 500ರೂ. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (SC/ST) ಅಭ್ಯರ್ಥಿಗಳಿಗೆ 300ರೂ. ಅರ್ಜಿ ಶುಲ್ಕವಿರುತ್ತದೆ.
ಇದನ್ನೂ ಓದಿ: ಮೊದಲ ಉದ್ಯೋಗ ಪಡೆಯುವುದು ಹೇಗೆ? ಫ್ರೆಶರ್‌ಗಳು ತಿಳಿದುಕೊಳ್ಳಬೇಕಾದ ಪ್ರಮುಖ ವಿಚಾರಗಳಿವು
ಆಯ್ಕೆ ವಿಧಾನ ಮತ್ತು ದೈಹಿಕ ಮಾನದಂಡಗಳು (PST):
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದೈಹಿಕ ಪ್ರಮಾಣಿತ ಪರೀಕ್ಷೆ (PST) ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ದೈಹಿಕ ಪ್ರಮಾಣಿತ ಪರೀಕ್ಷೆಯಲ್ಲಿ (Physical Standard Test) ಭಾಗವಹಿಸುವ ಅಭ್ಯರ್ಥಿಗಳು ಕನಿಷ್ಠ 168 ಸೆಂ.ಮೀ ಎತ್ತರ ಮತ್ತು ಕನಿಷ್ಠ 50 ಕೆ.ಜಿ ತೂಕ ಹೊಂದಿರಬೇಕು. ಅಲ್ಲದೆ, ಎದೆಯ ಸುತ್ತಳತೆ ಸಾಮಾನ್ಯ ಸ್ಥಿತಿಯಲ್ಲಿ 81 ಸೆಂ.ಮೀ ಹಾಗೂ ಹಿಗ್ಗಿಸಿದಾಗ 86 ಸೆಂ.ಮೀ ಇರುವುದು ಕಡ್ಡಾಯವಾಗಿದೆ.
ಅರ್ಜಿ ಸಲ್ಲಿಸುವ ವಿಧಾನ ಮತ್ತು ಕೊನೆಯ ದಿನಾಂಕ:
ಅಭ್ಯರ್ಥಿಗಳು ಮೊದಲು KSFES / KEA ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ 2026ರ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಎಲ್ಲಾ ಅರ್ಹತಾ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಬೇಕು. ನಂತರ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯ ವಿವರಗಳನ್ನು ಭರ್ತಿ ಮಾಡಿ, ಇತ್ತೀಚಿನ ಭಾವಚಿತ್ರ ಹಾಗೂ ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್‌ಲೋಡ್ ಮಾಡಬೇಕು. ಕೊನೆಯದಾಗಿ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಮುಂದಿನ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆಯನ್ನು (Application Number) ಸುರಕ್ಷಿತವಾಗಿ ತೆಗೆದಿಟ್ಟುಕೊಳ್ಳಬೇಕು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಡಿ. 22 ಕೊನೆಯ ದಿನಾಂಕವಾಗಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




