ನಿಮ್ಹಾನ್ಸ್ ನೇಮಕಾತಿ: ಟೆಕ್ನಿಕಲ್ ಅಸಿಸ್ಟೆಂಟ್ ಮತ್ತು ಅಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರಿನ ಪ್ರತಿಷ್ಠಿತ ನಿಮ್ಹಾನ್ಸ್ 2026ರ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಟೆಕ್ನಿಕಲ್ ಅಸಿಸ್ಟೆಂಟ್ ಮತ್ತು ಇನ್ಸ್ಟ್ರುಮೆಂಟ್ ಅಟೆಂಡೆಂಟ್ ಹುದ್ದೆಗಳಿಗೆ ಒಟ್ಟು 02 ಅರ್ಜಿಗಳನ್ನು ಆಹ್ವಾನಿಸಲಾಗಿದೆ. B.Sc, M.Sc ಹಾಗೂ 12ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಮಾಸಿಕ 18,000 ರಿಂದ 38,000 ರೂ. ವೇತನ, ಶುಲ್ಕ ವಿನಾಯಿತಿ ಇದೆ. ನವೆಂಬರ್ 30ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಸರ್ಕಾರಿ ಉದ್ಯೋಗ ಪಡೆಯಲು ಇದೊಂದು ಉತ್ತಮ ಅವಕಾಶ.

ಬೆಂಗಳೂರಿನ ಪ್ರತಿಷ್ಠಿತ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ (NIMHANS) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನವೆಂಬರ್ 2026ರ ಅಧಿಕೃತ ಅಧಿಸೂಚನೆಯ ಪ್ರಕಾರ ಒಟ್ಟು 02 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಬೆಂಗಳೂರಿನಲ್ಲಿ ಸರ್ಕಾರಿ ಉದ್ಯೋಗವನ್ನು ಎದುರು ನೋಡುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಆಸಕ್ತರು ನವೆಂಬರ್ 30 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ ಮತ್ತು ಶೈಕ್ಷಣಿಕ ಅರ್ಹತೆ:
ಈ ನೇಮಕಾತಿಯಲ್ಲಿ ಒಟ್ಟು ಎರಡು ಹುದ್ದೆಗಳಿದ್ದು, ಟೆಕ್ನಿಕಲ್ ಅಸಿಸ್ಟೆಂಟ್ (Technical Assistant) ವಿಭಾಗದಲ್ಲಿ 01 ಹುದ್ದೆ ಹಾಗೂ ಇನ್ಸ್ಟ್ರುಮೆಂಟ್ ಅಟೆಂಡೆಂಟ್ (Instrument Attendant) ವಿಭಾಗದಲ್ಲಿ 01 ಹುದ್ದೆ ಖಾಲಿ ಇದೆ. ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ B.Sc, B.Pharm ಅಥವಾ M.Sc ಪದವಿ ಪಡೆದಿರಬೇಕು. ಅದೇ ರೀತಿ, ಇನ್ಸ್ಟ್ರುಮೆಂಟ್ ಅಟೆಂಡೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿ (ಪಿಯುಸಿ) ಉತ್ತೀರ್ಣರಾಗಿರುವುದು ಕಡ್ಡಾಯವಾಗಿದೆ.
ಮಾಸಿಕ ವೇತನ ಶ್ರೇಣಿ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ಆಕರ್ಷಕ ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ. ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 38,000ರೂ. ವೇತನ ನೀಡಲಾಗುವುದು. ಇನ್ಸ್ಟ್ರುಮೆಂಟ್ ಅಟೆಂಡೆಂಟ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 18,000 ರೂ. ವೇತನ ಲಭ್ಯವಿರುತ್ತದೆ.
ವಯೋಮಿತಿ ಮತ್ತು ವಯೋಮಿತಿ ಸಡಿಲಿಕೆ:
ನಿಮ್ಹಾನ್ಸ್ ನೇಮಕಾತಿ ಅಧಿಸೂಚನೆಯಂತೆ, ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 45 ವರ್ಷಗಳಾಗಿರಬೇಕು. ಇನ್ಸ್ಟ್ರುಮೆಂಟ್ ಅಟೆಂಡೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು 35 ವರ್ಷಗಳಿಗೆ ನಿಗದಿಪಡಿಸಲಾಗಿದೆ. ಇನ್ನು ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ ನಿಯಮಾವಳಿಗಳ ಪ್ರಕಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ದೊರೆಯಲಿದೆ.
ಇದನ್ನೂ ಓದಿ: ಮೊದಲ ಉದ್ಯೋಗ ಪಡೆಯುವುದು ಹೇಗೆ? ಫ್ರೆಶರ್‌ಗಳು ತಿಳಿದುಕೊಳ್ಳಬೇಕಾದ ಪ್ರಮುಖ ವಿಚಾರಗಳಿವು
ಅರ್ಜಿ ಶುಲ್ಕದ ಮಾಹಿತಿ:
ಈ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ಸಂಸ್ಥೆಯು ಶುಲ್ಕ ವಿನಾಯಿತಿ ನೀಡಿದೆ. ಯಾವುದೇ ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ.
ಅರ್ಜಿ ಸಲ್ಲಿಸುವ ವಿಧಾನ ಮತ್ತು ಕೊನೆಯ ದಿನಾಂಕ:
ಅರ್ಹ ಅಭ್ಯರ್ಥಿಗಳು ಮೊದಲು ನಿಮ್ಹಾನ್ಸ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಧಿಸೂಚನೆಯನ್ನು ಸರಿಯಾಗಿ ಓದಿಕೊಳ್ಳಬೇಕು. ನಂತರ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ, ಶೈಕ್ಷಣಿಕ ಹಾಗೂ ವಯಸ್ಸಿನ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನಾಂಕವಾಗಿದ್ದು, ಕೊನೆಯ ಕ್ಷಣದ ವರೆಗೆ ಕಾಯದೇ ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೂ ಮುನ್ನವೇ ಅರ್ಜಿ ಸಲ್ಲಿಸುವುದು ಸೂಕ್ತ.
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




