Shravan Rathod: ಖ್ಯಾತ ಸಂಗೀತ ನಿರ್ದೇಶಕ ಶ್ರವಣ್​ ರಾಥೋಡ್​ ಕೊರೊನಾ ವೈರಸ್​ನಿಂದ ನಿಧನ; ಚಿತ್ರರಂಗಕ್ಕೆ ಆಘಾತ

Shravan Rathod Death: ಆಸ್ಪತ್ರೆಗೆ ದಾಖಲಿಸುವಾಗಲೇ ಶ್ರವಣ್​ ರಾಥೋಡ್​ ಅವರ ಆರೋಗ್ಯದ ಪರಿಸ್ಥಿತಿ ಗಂಭೀರವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಗುರುವಾರ (ಏ.22) ರಾತ್ರಿ ಇಹಲೋಕ ತ್ಯಜಿಸಿದರು.

Shravan Rathod: ಖ್ಯಾತ ಸಂಗೀತ ನಿರ್ದೇಶಕ ಶ್ರವಣ್​ ರಾಥೋಡ್​ ಕೊರೊನಾ ವೈರಸ್​ನಿಂದ ನಿಧನ; ಚಿತ್ರರಂಗಕ್ಕೆ ಆಘಾತ
ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್
Edited By:

Updated on: Apr 23, 2021 | 9:13 AM

ಬಾಲಿವುಡ್​ನ ಜನಪ್ರಿಯ ಸಂಗೀತ ನಿರ್ದೇಶಕ ಶ್ರವಣ್​ ರಾಥೋಡ್​ ಅವರು ಕೊರೊನಾ ವೈರಸ್​ನಿಂದಾಗಿ ಗುರುವಾರ (ಏ.22) ನಿಧನರಾಗಿದ್ದಾರೆ. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ರಾತ್ರಿ 10.15ರ ಸುಮಾರಿಗೆ ಅವರು ಕೊನೆಯುಸಿರೆಳೆದರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಶ್ರವಣ್​ ರಾಥೋಡ್​ ಅವರಿಗೆ 66 ವರ್ಷ ವಯಸ್ಸಾಗಿತ್ತು. ಅವರ ನಿಧನದ ಸುದ್ದಿ ಕೇಳಿ ಬಾಲಿವುಡ್​ಗೆ ತೀವ್ರ ನೋವಾಗಿದೆ.

ಕೆಲವೇ ದಿನಗಳ ಹಿಂದೆ ಶ್ರವಣ್​ ರಾಥೋಡ್​ ಅವರಿಗೆ ಕೊವಿಡ್​ 19 ಸೋಂಕು ತಗುಲಿತ್ತು. ಸೋಮವಾರ (ಏ.20) ಅವರನ್ನು ಮುಂಬೈನ ಎಸ್​.ಎಲ್​. ರಹೇಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಲೇ ಅವರ ಆರೋಗ್ಯದ ಪರಿಸ್ಥಿತಿ ಗಂಭೀರವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಗುರುವಾರ ರಾತ್ರಿ ಇಹಲೋಕ ತ್ಯಜಿಸಿದರು. ಅವರ ನಿಧನಕ್ಕೆ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿಯುತ್ತಿದ್ದಾರೆ.

‘ಶ್ರವಣ್​ ಅವರು ನಿಧನರಾದರು ಎಂಬ ಸುದ್ದಿ ಕೇಳಿ ಶಾಕ್​ ಆಗಿದೆ. ತುಂಬ ವಿನಯವಂತ ವ್ಯಕ್ತಿ ಆಗಿದ್ದರು. ನಮ್ಮ ಚಿತ್ರರಂಗದ ಮಹಾನ್​ ಸಂಗೀತ ನಿರ್ದೇಶಕ. ಈ ಪ್ಯಾಂಡಮಿಕ್​ನಿಂದಾದ ಇನ್ನೊಂದು ದೊಡ್ಡ ನಷ್ಟ ಇದು. ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ. ಶ್ರವಣ್​ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಖ್ಯಾತ ಗಾಯಕಿ ಶ್ರೇಯಾ ಘೋಷಾಲ್​ ಟ್ವೀಟ್​ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

‘ಶ್ರವಣ್​ ನಿಧನದಿಂದ ತೀವ್ರ ನೋವಾಗಿದೆ. ಈ ದುಸ್ವಪ್ನ ಯಾವಾಗ ಕೊನೆ ಆಗಲಿದೆ. ಶ್ರವಣ್​ ಕುಟುಂಬದವರಿಗೆ ನನ್ನ ಸಂಪಾತಗಳು’ ಎಂದು ಸಂಗೀತ ನಿರ್ದೇಶಕ ಪ್ರೀತಮ್​ ಕಂಬನಿ ಮಿಡಿದಿದ್ದಾರೆ. ಗಾಯಕ ಅದ್ನಾನ್ ಸಾಮಿ ಸೇರಿದಂತೆ ಅನೇಕರು ಶ್ರವಣ್​ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಸಂಗೀತ ನಿರ್ದೇಶಕ ನದೀಮ್​ ಸೈಫಿ ಜೊತೆ ಸೇರಿ ಶ್ರವಣ್ ಅವರು ಅನೇಕ ಸೂಪರ್​ ಹಿಟ್​ ಗೀತೆಗಳನ್ನು ನೀಡಿದ್ದರು. ಈ ಜೋಡಿ ನದೀಮ್​-ಶ್ರವಣ್​ ಎಂದೇ ಫೇಮಸ್​ ಆಗಿತ್ತು. 1975ರಿಂದಲೇ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರಿಗೆ 1990ರ ದಶಕದಲ್ಲಿ ಹೆಚ್ಚು ಯಶಸ್ಸು ಸಿಕ್ಕಿತು. ಆಶಿಕಿ, ಸಾಜನ್​, ಹಮ್​ ಹೈ ರಾಹಿ ಪ್ಯಾರ್​ ಕಿ, ಪರ್ದೇಸ್​, ರಾಜಾ ಹಿಂದೂಸ್ತಾನಿ ಸಿನಿಮಾಗಳ ಮೂಲಕ ನದೀಮ್​ ಶ್ರವಣ್​ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದರು.

ಇದನ್ನೂ ಓದಿ: ಕೊರೊನಾ ವೈರಸ್​ಗೆ ಬಲಿಯಾದ ಹಿರಿಯ ನಟ ಕಿಶೋರ್ ನಂದಲಸ್ಕರ್

ಸ್ಯಾಂಡಲ್​ವುಡ್​ ಯುವ ನಟ, ನಿರ್ಮಾಪಕ ಕೊರೊನಾಗೆ ಬಲಿ

(Music Director Shravan Rathod of Nadeem Shravan fame dies due to Covid 19)

Published On - 8:12 am, Fri, 23 April 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us