ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಚಿತ್ರರಂಗದಲ್ಲಿ 29 ವರ್ಷ ಪೂರೈಸಿದ್ದಾರೆ. ಈ ದೀರ್ಘ ಪಯಣದಲ್ಲಿ ಸಾಕಷ್ಟು ಹಿಟ್ ಹಾಡುಗಳನ್ನು ನೀಡಿದ ಖ್ಯಾತಿ ಹಾಗೂ ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡ ಹೆಚ್ಚುಗಾರಿಕೆ ರೆಹಮಾನ್ ಅವರದ್ದು. 1992ರಲ್ಲಿ ತೆರೆಗೆ ಬಂದ ‘ರೋಜಾ’ ಸಿನಿಮಾ ಮೂಲಕ ವೃತ್ತಿಜೀವನ ಆರಂಭಿಸಿದ ಅವರು ಈಗ ಭಾರತದ ಟಾಪ್ ಸಂಗೀತ ನಿರ್ದೇಶಕರಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ.
ರೆಹಮಾನ್ ಅವರು ಬಹಳ ಸಣ್ಣ ವಯಸ್ಸಿಗೆ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಝಾಕಿರ್ ಹುಸೇನ್, ಇಳಯರಾಜ, ವೈದ್ಯನಾಥನ್, ಎಕ್. ಶಂಕರ್ ಜತೆ ರೆಹಮಾನ್ ಒಳ್ಳೆಯ ಒಡನಾಟ ಹೊಂದಿದ್ದರು. ಇವರಿಂದ ರೆಹಮಾನ್ ಸಾಕಷ್ಟು ವಿಚಾರಗಳನ್ನು ಕಲಿತುಕೊಂಡರು.
ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದ ‘ರೋಜಾ’ ಸಿನಿಮಾದ ಹಾಡುಗಳು ಹಿಟ್ ಆದವು. ಇದು ರೆಹಮಾನ್ ಖ್ಯಾತಿಯನ್ನು ಹೆಚ್ಚಿಸಿತು. ಮೊದಲ ಚಿತ್ರದಲ್ಲೇ ರೆಹಮಾನ್ಗೆ ರಾಷ್ಟ್ರ ಪ್ರಶಸ್ತಿ ದೊರೆಯಿತು. ನಂತರ ರೆಹಮಾನ್ ಬತ್ತಳಿಕೆಯಿಂದ ಸಾಕಷ್ಟು ಹಿಟ್ ಹಾಡುಗಳು ಮೂಡಿಬಂದವು.
‘ಸ್ಲಮ್ಡಾಗ್ ಮಿಲಿಯನೇರ್’ ಚಿತ್ರದ ಹಾಡುಗಳಿಗೆ ರೆಹಮಾನ್ಗೆ ಎರಡು ಆಸ್ಕರ್ ಪ್ರಶಸ್ತಿ ಲಭಿಸಿದೆ. ಅಚ್ಚರಿ ಎಂದರೆ ರೆಹಮಾನ್ ತಾಯಿ ಕರೀಮಾ ಬೇಗಮ್ ಆಸ್ಕರ್ ಟ್ರೋಫಿಯನ್ನು ಜೋಪಾನವಾಗಿರಿಸಿದ್ದರು. ಕರೀಮಾ ಬೇಗಮ್ ಕಳೆದ ವರ್ಷದ ಅಂತ್ಯದಲ್ಲಿ ನಿಧನ ಹೊಂದಿದ್ದರು. ಈ ವೇಳೆ ರೆಹಮಾನ್ಗೆ ತಾಯಿ ಆಸ್ಕರ್ ಟ್ರೋಫಿಯನ್ನು ಎಲ್ಲಿಟ್ಟಿದ್ದಾರೆ ಎನ್ನುವ ಗೊಂದಲ ಕಾಡಿತ್ತು. ಎಷ್ಟೇ ಹುಡುಕಿದರೂ ಅವರಿಗೆ ಟ್ರೋಫಿ ಸಿಕ್ಕಿರಲಿಲ್ಲ. ನಂತರದಲ್ಲಿ ಕಳೆದು ಹೋಗಿದ್ದ ಟ್ರೋಫಿ ಲಭ್ಯವಾಗಿತ್ತು.
ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರದಲ್ಲಿ ಬಾಲಿವುಡ್ನಲ್ಲಿರುವ ಕೆಲ ಕಾಣದ ಕೈಗಳ ಬಗ್ಗೆ ಚರ್ಚೆ ನಡೆದಿತ್ತು. ಇದಕ್ಕೆ ರೆಹಮಾನ್ ಕೂಡ ಧ್ವನಿಗೂಡಿಸಿದ್ದರು. ಬಾಲಿವುಡ್ನಲ್ಲಿ ಗ್ಯಾಂಗ್ ಇದೆ. ಇದರಿಂದಾಗಿಯೇ ತಮಗೆ ಕೆಲಸ ಸಿಗುತ್ತಿಲ್ಲ ಎಂದು ಅವರು ಹೇಳಿದ್ದರು.
ಸದ್ಯ, ರೆಹಮಾನ್ ಕೈಯಲ್ಲಿ 11 ಪ್ರಾಜೆಕ್ಟ್ಗಳಿವೆ. ಮುಂದಿನ ಆರು ವರ್ಷಕ್ಕೆ ಸಾಕಾಗುವಷ್ಟು ಸಿನಿಮಾ ಕೆಲಸಗಳು ಅವರ ಕೈಯಲ್ಲಿವೆ. ಅನೇಕ ನಿರ್ದೇಶಕರು ಅವರ ಜತೆ ಕೆಲಸ ಮಾಡೋಕೆ ಕಾದು ಕೂತಿದ್ದಾರೆ. ಆದರೆ, ಅದು ಸಾಧ್ಯವಾಗುತ್ತಿಲ್ಲ.
ಇದನ್ನೂ ಓದಿ: ನನಗೆ ಎ.ಆರ್ ರೆಹಮಾನ್ ಯಾರೆಂದೇ ಗೊತ್ತಿಲ್ಲ, ಭಾರತರತ್ನ ಪ್ರಶಸ್ತಿ ನನ್ನಪ್ಪನ ಉಗುರಿಗೆ ಸಮ; ವಿವಾದಕ್ಕೀಡಾದ ಖ್ಯಾತ ನಟ