ನನಗೆ ಎ.ಆರ್ ರೆಹಮಾನ್ ಯಾರೆಂದೇ ಗೊತ್ತಿಲ್ಲ, ಭಾರತರತ್ನ ಪ್ರಶಸ್ತಿ ನನ್ನಪ್ಪನ ಉಗುರಿಗೆ ಸಮ; ವಿವಾದಕ್ಕೀಡಾದ ಖ್ಯಾತ ನಟ

ಟಿವಿ9 ತೆಲುಗು ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ತೆಲುಗು ನಟ ನಂದಮೂರಿ ಬಾಲಕೃಷ್ಣ ನನಗೆ ಎ.ಆರ್. ರೆಹಮಾನ್ ಯಾರೆಂದೇ ಗೊತ್ತಿಲ್ಲ. ಅವರು ದಶಕಕ್ಕೊಮ್ಮೆ ಹಿಟ್ ಹಾಡುಗಳನ್ನು ಕೊಡುತ್ತಾರೆ ಎನ್ನುವ ಮೂಲಕ ವಿವಾದಕ್ಕೀಡಾಗಿದ್ದಾರೆ.

ನನಗೆ ಎ.ಆರ್ ರೆಹಮಾನ್ ಯಾರೆಂದೇ ಗೊತ್ತಿಲ್ಲ, ಭಾರತರತ್ನ ಪ್ರಶಸ್ತಿ ನನ್ನಪ್ಪನ ಉಗುರಿಗೆ ಸಮ; ವಿವಾದಕ್ಕೀಡಾದ ಖ್ಯಾತ ನಟ
ನಂದಮೂರಿ ಬಾಲಕೃಷ್ಣ- ಎ.ಆರ್. ರೆಹಮಾನ್
TV9kannada Web Team

| Edited By: Sushma Chakre

Jul 21, 2021 | 9:00 PM

ಭಾರತೀಯ ಚಿತ್ರರಂಗದ ಆಸ್ಕರ್ ಪ್ರಶಸ್ತಿ ಪುರಸ್ಕೃತ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ (AR Rahman)  ಹೆಸರು ಯಾರಿಗೆ ತಾನೇ ಗೊತ್ತಿಲ್ಲ? ಬಾಲಿವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್ ಮಾತ್ರವಲ್ಲದೆ ಸ್ಲಂ ಡಾಗ್ ಮಿಲಿಯನೇರ್ ಎಂಬ ಇಂಗ್ಲಿಷ್ ಸಿನಿಮಾಗೂ ಸಂಗೀತ ನೀಡಿ ಇಡೀ ವಿಶ್ವದ ಗಮನ ಸೆಳೆದವರು ಎ.ಆರ್. ರೆಹಮಾನ್. ಆದರೆ, ಟಾಲಿವುಡ್ ಖ್ಯಾತ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರಿಗೆ ಎಆರ್ ರೆಹಮಾನ್ ಯಾರೆಂದೇ ಗೊತ್ತಿಲ್ಲವಂತೆ! ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಾಗುತ್ತಿರುವ ನಂದಮೂರಿ ಬಾಲಕೃಷ್ಣ ಇದೀಗ ರೆಹಮಾನ್ ಬಗ್ಗೆ ನೀಡಿದ ಹೇಳಿಕೆಯಿಂದ ಮತ್ತೊಮ್ಮೆ ಟ್ರೋಲ್ ಆಗಿದ್ದಾರೆ.

ಟಿವಿ9 ತೆಲುಗು ಚಾನೆಲ್​ಗೆ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಎ.ಆರ್. ರೆಹಮಾನ್ ಅವರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ನಂದಮೂರಿ ಬಾಲಕೃಷ್ಣ, ಎ.ಆರ್. ರೆಹಮಾನ್ ಯಾರು ಎಂಬುದೇ ನನಗೆ ಗೊತ್ತಿಲ್ಲ. ಅವರು ಆಸ್ಕರ್ ಪ್ರಶಸ್ತಿ ಪಡೆದಿದ್ದಾರೆಂದು ಕೇಳಿದ್ದೇನೆ. ಆದರೆ, ನನಗಿನ್ನೂ ಅವರು ಯಾರೆಂದೇ ಗೊತ್ತಾಗಿಲ್ಲ. ರೆಹಮಾನ್ ಎಲ್ಲೋ ಹತ್ತು ವರ್ಷಕ್ಕೊಂದು ಹಿಟ್ ಗೀತೆಯನ್ನು ಕೊಡುತ್ತಾರೆ ಅಷ್ಟೇ ಎನ್ನುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ನಟ ಬಾಲಕೃಷ್ಣ.

ಇದಿಷ್ಟೇ ಅಲ್ಲದೆ, ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯ ಬಗ್ಗೆಯೂ ಲೇವಡಿ ಮಾಡುವ ಮೂಲಕ ನಂದಮೂರಿ ಬಾಲಕೃಷ್ಣ ವಿವಾದಕ್ಕೀಡಾಗಿದ್ದಾರೆ. ಭಾರತ ರತ್ನ ಪ್ರಶಸ್ತಿ ನನ್ನ ತಂದೆ ಎನ್​ಟಿಆರ್ ಅವರ ಕಾಲಿನ ಬೆರಳಿನ ಉಗುರಿಗೆ ಸಮಾನ. ಯಾವ ಪ್ರಶಸ್ತಿಗಳೂ ನಮ್ಮ ಕುಟುಂಬ ಟಾಲಿವುಡ್ ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನು ಮೀರಿಸಲು ಸಾಧ್ಯವಿಲ್ಲ. ನಮಗ್ಯಾರಿಗೂ ಪ್ರಶಸ್ತಿಗಳು ಬಂದಿಲ್ಲವೆಂದರೆ ಆ ಪ್ರಶಸ್ತಿಗಳೇ ಬೇಸರ ಮಾಡಿಕೊಳ್ಳಬೇಕೇ ಹೊರತು ನಾವಲ್ಲ ಎಂದು ಹೇಳಿಕೆ ನೀಡಿ ಟ್ರೋಲಿಗರಿಗೆ ಆಹಾರವಾಗಿದ್ದಾರೆ.

ಇತ್ತೀಚೆಗಷ್ಟೇ ಎನ್​ಟಿಆರ್​ಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಅನೇಕ ನಟರು ಒತ್ತಾಯಿಸಿದ್ದರು. ನಂದಮೂರಿ ಬಾಲಕೃಷ್ಣ ಅವರ ಈ ಸಂದರ್ಶನದ ತುಣುಕುಗಳು ಯೂಟ್ಯೂಬ್​ನಲ್ಲಿ ಪ್ರಸಾರವಾಗುತ್ತಿದ್ದಂತೆ ಎ.ಆರ್. ರೆಹಮಾನ್​ ಅಭಿಮಾನಿಗಳು ನಂದಮೂರಿ ಬಾಲಕೃಷ್ಣ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಇದೇ ಎ.ಆರ್. ರೆಹಮಾನ್ 1993ರಲ್ಲಿ ನಂದಮೂರಿ ಬಾಲಕೃಷ್ಣ ಅವರ ನಿಪ್ಪು ರವ್ವ ಎಂಬ ತೆಲುಗು ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದರು. ಆದರೂ ಅವರಿಗೆ ರೆಹಮಾನ್ ಯಾರೆಂದೇ ಗೊತ್ತಿಲ್ಲದಿರುವುದು ಆಶ್ವರ್ಯದ ಸಂಗತಿ ಎಂದು ನೆಟ್ಟಿಗರು ಟೀಕಿಸಿದ್ದಾರೆ.

ಇದನ್ನೂ ಓದಿ: ಎನ್​ಟಿಆರ್​ಗೆ ಭಾರತ ರತ್ನ ಕೊಡಿ; ಲೆಜೆಂಡರಿ ನಟನ ಜನ್ಮದಿನದಂದು ಬೇಡಿಕೆಯಿಟ್ಟ ಮೆಗಾಸ್ಟಾರ್​ ಚಿರಂಜೀವಿ

(Tollywood Actor Nandamuri Balakrishna Get Trolled after Controversial Statement on AR Rahman and Bharat Ratna Award)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada