‘ಸಂಘಿ ಎನ್ನುವ ಶಬ್ದ ಕೆಟ್ಟದ್ದು ಎಂದು ನನ್ನ ಮಗಳು ಹೇಳಿಲ್ಲ’; ಐಶ್ವರ್ಯಾ ಪರ ರಜನಿಕಾಂತ್ ಬ್ಯಾಟಿಂಗ್  

| Updated By: ರಾಜೇಶ್ ದುಗ್ಗುಮನೆ

Updated on: Jan 29, 2024 | 3:18 PM

ಸದ್ಯ ‘ಸಂಘಿ’ ಎಂಬ ಶಬ್ದ ಚರ್ಚೆಯ ಕೇಂದ್ರ ಬಿಂದು ಆಗಿದೆ. ರಜನಿಕಾಂತ್ ಮಗಳು ಈ ಶಬ್ದ ಬಳಕೆ ಮಾಡಿದ್ದಾರೆ. ಈಗ ರಜನಿಕಾಂತ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ಸಂಘಿ ಎನ್ನುವ ಶಬ್ದ ಕೆಟ್ಟದ್ದು ಎಂಬುದಾಗಿ ನನ್ನ ಮಗಳು ಹೇಳಿಲ್ಲ’ ಎಂದಿದ್ದಾರೆ ರಜನಿಕಾಂತ್.

‘ಸಂಘಿ ಎನ್ನುವ ಶಬ್ದ ಕೆಟ್ಟದ್ದು ಎಂದು ನನ್ನ ಮಗಳು ಹೇಳಿಲ್ಲ’; ಐಶ್ವರ್ಯಾ ಪರ ರಜನಿಕಾಂತ್ ಬ್ಯಾಟಿಂಗ್  
ಐಶ್ವರ್ಯಾ-ರಜನಿ
Follow us on

ನಟ ರಜನಿಕಾಂತ್ (Rajinikanth) ಅವರು ವಿವಾದಗಳಿಂದ ಸದಾ ದೂರವೇ ಇರಲು ಪ್ರಯತ್ನಿಸುತ್ತಾರೆ. ಆದಾಗ್ಯೂ ಕೆಲವೊಮ್ಮೆ ವಿವಾದಗಳು ಅವರನ್ನು ಹುಡುಕಿ ಬರುತ್ತವೆ. ಇತ್ತೀಚೆಗೆ ಅವರ ಮಗಳು ಐಶ್ವರ್ಯಾ ರಜನಿಕಾಂತ್ ನೀಡಿದ್ದ ಹೇಳಿಕೆ ವಿವಾದ ಸೃಷ್ಟಿ ಮಾಡಿತ್ತು. ಅವರು ಬಳಕೆ ಮಾಡಿದ ‘ಸಂಘಿ’ ಎಂಬ ಶಬ್ದ ಚರ್ಚೆಯ ಕೇಂದ್ರ ಬಿಂದು ಆಗಿದೆ. ಈ ಬಗ್ಗೆ ಸ್ಪಷ್ಟನೆ ನೀಡುವ ಕೆಲಸವನ್ನು ರಜನಿಕಾಂತ್ ಮಾಡಿದ್ದಾರೆ. ‘ಸಂಘಿ ಎನ್ನುವ ಶಬ್ದ ಕೆಟ್ಟದ್ದು ಎಂಬುದಾಗಿ ನನ್ನ ಮಗಳು ಹೇಳಿಲ್ಲ’ ಎಂದಿದ್ದಾರೆ ರಜನಿಕಾಂತ್.

ಏನಿದು ಘಟನೆ?

ಜನವರಿ 26ರಂದು ಚೆನ್ನೈನಲ್ಲಿ ‘ಲಾಲ್ ಸಲಾಂ’ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ನಡೆಯಿತು. ರಜನಿಕಾಂತ್ ಅವರು ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಈ ಚಿತ್ರಕ್ಕೆ ಐಶ್ವರ್ಯಾ ರಜನಿಕಾಂತ್ ಅವರೇ ನಿರ್ದೇಶನ ಮಾಡಿದ್ದಾರೆ. ಈ ವೇದಿಕೆ ಮೇಲೆ ಐಶ್ವರ್ಯಾ ಮಾತನಾಡಿದ್ದಾರೆ. ‘ನನ್ನ ತಂದೆಯನ್ನು ಸಂಘಿ ಎಂದು ಕರೆಯುವುದನ್ನು ನಿಲ್ಲಿಸಿ’ ಎಂದಿದ್ದಾರೆ ಐಶ್ವರ್ಯಾ.

‘ನಾನು ಸೋಶಿಯಲ್ ಮೀಡಿಯಾದಿಂದ ದೂರವೇ ಇರುತ್ತೇನೆ. ಆದರೆ, ನನ್ನ ತಂಡದವರು ಯಾವಾಗಲೂ ಏನನ್ನಾದರೂ ತೋರಿಸುತ್ತಾ ಇರುತ್ತಾರೆ. ಅದನ್ನು ನೋಡಿದಾಗ ಸಿಟ್ಟು ಬರುತ್ತದೆ. ನಾವೂ ಮನುಷ್ಯರು. ಇತ್ತೀಚೆಗೆ ಅನೇಕರು ನನ್ನ ತಂದೆಯನ್ನು ಸಂಘಿ ಎಂದು ಕರೆದಿದ್ದಾರೆ. ಅದರ ಅರ್ಥ ನಂಗೆ ಗೊತ್ತಿರಲಿಲ್ಲ. ಹೀಗಾಗಿ ಅದರ ಅರ್ಥವನ್ನು ಕೇಳಿ ತಿಳಿದುಕೊಂಡೆ. ಒಂದು ನಿರ್ದಿಷ್ಟ ಪಕ್ಷವನ್ನು ಬೆಂಬಲಿಸುವವರನ್ನು ಸಂಘಿ ಎನ್ನುತ್ತಾರಂತೆ. ಇಲ್ಲಿ ಒಂದು ವಿಚಾರ ಸ್ಪಷ್ಟಪಡಿಸಲು ಪ್ರಯತ್ನಿಸುತ್ತೇನೆ. ನನ್ನ ತಂದೆ ಸಂಘಿ ಅಲ್ಲ. ಅವರು ಸಂಘಿ ಆಗಿದ್ದರೆ ಲಾಲ್ ಸಲಾಂ ಅಂಥ ಸಿನಿಮಾ ಮಾಡುತ್ತಿರಲಿಲ್ಲ’ ಎಂದಿದ್ದಾರೆ ಐಶ್ವರ್ಯಾ. ಮಗಳ ಹೇಳಿಕೆ ಕೇಳಿ ರಜನಿಕಾಂತ್ ಅವರು ಕಣ್ಣೀರು ಹಾಕಿದ್ದರು. ಈ ವಿಡಿಯೋ ವೈರಲ್ ಆಗಿತ್ತು.

ಮಗಳ ಪರ ಬ್ಯಾಟಿಂಗ್

ಐಶ್ವರ್ಯಾ ಹೇಳಿಕೆಯನ್ನು ಅನೇಕರು ಟೀಕಿಸಿದ್ದರು. ‘ಐಶ್ವರ್ಯಾ ಅವರು ಸಂಘಿ ಎಂಬುದಕ್ಕೆ ಕೆಟ್ಟ ಅರ್ಥ ಇದೆ ಎಂಬರ್ಥದಲ್ಲಿ ಮಾತನಾಡಿದ್ದರು’ ಎಂದು ಅನೇಕರು ಟೀಕಿಸಿದ್ದರು. ಈಗ ರಜನಿಕಾಂತ್ ಅವರು ಈ ವಿಚಾರವಾಗಿ ಮಾತನಾಡಿದ್ದಾರೆ. ಇಂದು (ಜನವರಿ 29) ಚೆನ್ನೈ ವಿಮಾನ ನಿಲ್ದಾಣದ ಹೊರ ಭಾಗದಲ್ಲಿ ಮಾಧ್ಯಮದವರ ಜೊತೆ ಅವರು ಮಾತನಾಡಿದರು. ‘ನನ್ನ ಮಗಳು ಸಂಘಿ ಎನ್ನುವುದು ಕೆಟ್ಟ ಶಬ್ದ ಎಂದು ಎಂದಿಗೂ ಹೇಳಿಲ್ಲ. ನನ್ನ ತಂದೆಯನ್ನು ಏಕೆ ಬ್ರ್ಯಾಂಡ್ ಮಾಡುತ್ತೀರಿ ಎಂದಷ್ಟೇ ಕೇಳಿದ್ದಾರೆ’ ಎಂದಿದ್ದಾರೆ ರಜನಿಕಾಂತ್.

ಇದನ್ನೂ ಓದಿ: ಶಿವಣ್ಣನ ಸಿನಿಮಾ ಜತೆ ಕ್ಲ್ಯಾಶ್​ ಆಗಲ್ಲ ರಜನಿಕಾಂತ್​ ಚಿತ್ರ; ‘ಲಾಲ್​ ಸಲಾಂ’ ಬಿಡುಗಡೆ ಮುಂದಕ್ಕೆ

ರಜನಿಕಾಂತ್ ಅವರು ಕಳೆದ ವರ್ಷ ‘ಜೈಲರ್’ ಸಿನಿಮಾದಿಂದ ದೊಡ್ಡ ಗೆಲುವು ಕಂಡರು. ಈಗ ‘ಲಾಲ್ ಸಲಾಂ’ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈ ಸಿನಿಮಾ ಜನವರಿ 12ರಂದೇ ರಿಲೀಸ್ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾ ರಿಲೀಸ್ ದಿನಾಂಕ ಫೆಬ್ರವರಿ 9ಕ್ಕೆ ಮುಂದೂಡಲ್ಪಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:39 pm, Mon, 29 January 24