‘ಹೆಣ್ಮಕ್ಕಳಿಗೆ ನನಗಿಂತ ಹೆಚ್ಚು ಗೌರವ ನೀಡುವ ವ್ಯಕ್ತಿ ಬೇರೆ ಯಾರೂ ಇಲ್ಲ’: ವಿನಯ್ ಗೌಡ
‘ಮಹಿಳೆಯರ ಭಾವನೆಗೆ ನೋವು ತರಬೇಕು ಎಂಬ ಉದ್ದೇಶದಿಂದ ಬಳೆ ಎಂಬ ಪದವನ್ನು ನಾನು ಬಳಕೆ ಮಾಡಿಲ್ಲ. ರಸ್ತೆಯಲ್ಲಿ ಓಡಾಡುವಾಗ ನೀವು ಸಾಕಷ್ಟು ಬೈಗುಳುಗಳನ್ನು ಕೇಳುತ್ತೀರಿ. ಅದೆಲ್ಲವೂ ಮಹಿಳೆಯವರ ವಿರುದ್ಧವಾಗಿದೆ ಎಂದು ಹೇಳಿದರೆ ಇವತ್ತು ಜನಸಂಖ್ಯೆಯ ಅರ್ಧದಷ್ಟು ಜನರು ಜೈಲಿನಲ್ಲಿ ಇರಬೇಕಾಗುತ್ತದೆ’ ಎಂದು ವಿನಯ್ ಗೌಡ ಹೇಳಿದ್ದಾರೆ.
ನಟ ವಿನಯ್ ಗೌಡ (Vinay Gowda) ಅವರು ಬಿಗ್ ಬಾಸ್ ಗೆಲ್ಲುತ್ತಾರೆ ಎಂದು ಊಹಿಸಲಾಗಿತ್ತು. ಆದರೆ ಅದು ನಿಜವಾಗಲಿಲ್ಲ. ಟಾಪ್ 3 ಹಂತಕ್ಕೂ ಅವರು ಹೋಗಲಿಲ್ಲ. ಅಂತಿಮವಾಗಿ ಕಾರ್ತಿಕ್ ಮಹೇಶ್ ಅವರು ಬಿಗ್ ಬಾಸ್ (Bigg Boss Kannada) ವಿನ್ ಆದರು. ಹಾಗಾದರೆ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದ ವಿನಯ್ ಗೌಡ ಅವರು ಎಡವಿದ್ದು ಎಲ್ಲಿ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಬಿಗ್ ಬಾಸ್ (BBK 10) ಶೋನಲ್ಲಿ ಅವರು ಬಳೆಯ ಬಗ್ಗೆ ಮಾತನಾಡಿದ್ದು ಬಹಳ ಟೀಕೆಗೆ ಕಾರಣ ಆಗಿತ್ತು. ಆ ವಿಚಾರದಲ್ಲಿ ಕಿಚ್ಚ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದರು. ಹಾಗಾದರೆ, ಬಳೆಯ ಕಾರಣದಿಂದಲೇ ವಿನಯ್ಗೆ ಹಿನ್ನಡೆ ಆಯಿತಾ ಎಂಬ ಪ್ರಶ್ನೆ ಎದುರಾಗಿದೆ. ಅದಕ್ಕೆ ಸ್ವತಃ ವಿನಯ್ ಗೌಡ ಉತ್ತರ ನೀಡಿದ್ದಾರೆ. ‘ಟಿವಿ9 ಕನ್ನಡ’ ನಡೆಸಿದ ಸಂದರ್ಶನದಲ್ಲಿ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
‘ಮಹಿಳೆಯರ ಭಾವನೆಗೆ ನೋವು ತರಬೇಕು ಎಂಬ ಉದ್ದೇಶದಿಂದ ಬಳೆ ಎಂಬ ಪದವನ್ನು ನಾನು ಬಳಕೆ ಮಾಡಿಲ್ಲ. ಹೆಣ್ಣುಮಕ್ಕಳ ವಿರುದ್ಧವಾದ ಮಾತು ಅದಲ್ಲ. ರಸ್ತೆಯಲ್ಲಿ ಓಡಾಡುವಾಗ ನೀವು ಸಾಕಷ್ಟು ಬೈಗುಳುಗಳನ್ನು ಕೇಳುತ್ತೀರಿ. ಅದೆಲ್ಲವೂ ಮಹಿಳೆಯವರ ವಿರುದ್ಧವಾಗಿದೆ ಎಂದು ಹೇಳಿದರೆ ಇವತ್ತು ಜನಸಂಖ್ಯೆಯ ಅರ್ಧದಷ್ಟು ಜನರು ಜೈಲಿನಲ್ಲಿ ಇರಬೇಕಾಗುತ್ತದೆ. ಜಗಳ ಆಡುವಾಗ ಗಂಡುಮಕ್ಕಳು ಮಾತ್ರವಲ್ಲದೇ ಹೆಣ್ಣುಮಕ್ಕಳು ಕೂಡ ಸಾಕಷ್ಟು ಮಾತನಾಡುತ್ತಾರೆ. ಅದು ಮಾತಿನ ಭರದಲ್ಲಿ ಬಂದ ಪದ’ ಎಂದು ವಿನಯ್ ಗೌಡ ಹೇಳಿದ್ದಾರೆ.
ಇದನ್ನೂ ಓದಿ: ‘ಯಾರು ಗೆಲ್ಲಬೇಕು ಅನ್ನೋದು ಫಿಕ್ಸ್ ಆಗಿತ್ತು’: ಬಿಗ್ ಬಾಸ್ ಮೇಲೆ ದೊಡ್ಡ ಆರೋಪ
‘ಜಗಳದ ನಡುವೆ ಆಡಿದ ಒಂದು ಪದವನ್ನು ಇಟ್ಟುಕೊಂಡು ನೀವು ಕ್ರಾಂತಿ ಮಾಡೋಕೆ ಆಗಲ್ಲ. ಬಳೆ ವಿಷಯ ಇಷ್ಟು ದೊಡ್ಡದಾಗಿದೆ ಎಂಬುದು ನನಗೆ ವೀಕೆಂಡ್ನಲ್ಲಿಯೇ ಗೊತ್ತಾಗಿದ್ದು. ಅದಕ್ಕೆ ನಾನು ಕ್ಷಮೆ ಕೂಡ ಕೇಳಿದ್ದೇನೆ. ಯಾರಿಗೂ ಅವಮಾನ ಮಾಡಬೇಕು ಎಂಬ ಉದ್ದೇಶ ಇರಲಿಲ್ಲ. ಹೆಣ್ಣುಮಕ್ಕಳು ವೀಕ್ ಅಂತ ತೋರಿಸೋಕೆ ಆಡಿದ ಮಾತು ಅದಲ್ಲ. ಹೆಣ್ಣುಮಕ್ಕಳಿಗೆ ನನಗಿಂತ ಹೆಚ್ಚು ಗೌರವ ನೀಡುವ ವ್ಯಕ್ತಿ ಬೇರೆ ಯಾರೂ ಇಲ್ಲ’ ಎಂದಿದ್ದಾರೆ ವಿನಯ್ ಗೌಡ.
‘ನನ್ನ ಹೆಂಡತಿ ನನಗೆ ಬೆನ್ನೆಲುಬಾಗಿ ನಿಂತಿದ್ದಾಳೆ. ಅವಳು ಸಾಮರ್ಥ್ಯ ತೋರಿಸಿ ನನ್ನನ್ನು ಬೆಳೆಸಿದ್ದಾಳೆ. ಮಹಿಳೆಯರನ್ನು ದುರ್ಬಲರು ಅಂತ ಕರೆಯುವ ಮುಠಾಳ ನಾನಲ್ಲ. ಮಾತಿನ ಭರದಲ್ಲಿ ಬಂದ ಪದ ಅಷ್ಟು ಇಶ್ಯೂ ಆಯಿತು. ಕಪ್ ಮಿಸ್ ಆಗಿದ್ದಕ್ಕೂ ಬಳೆಗೂ ಸಂಬಂಧ ಇಲ್ಲ ಎಂದುಕೊಳ್ಳುತ್ತೇನೆ. ಯಾಕೆಂದರೆ, ಆ ಸಮಯದಲ್ಲಿ ಆಗಿದ್ದೆಲ್ಲವೂ ಒಳ್ಳೆಯದಕ್ಕೆ. ಅದು ಆಗಿರಲಿಲ್ಲ ಎಂದರೆ ಇಷ್ಟು ಪ್ರೀತಿ ಸಿಗುತ್ತಿರಲಿಲ್ಲ ಎಂದುಕೊಳ್ಳುತ್ತೇನೆ’ ಎಂಬುದು ವಿನಯ್ ಗೌಡ ಅವರ ಮಾತು.
ಡ್ರೋನ್ ಪ್ರತಾಪ್ ರನ್ನರ್ಅಪ್ ಆಗಿದ್ದಾರೆ. ಅವರಿಗೆ ಬಹುಮಾನವಾಗಿ 10 ಲಕ್ಷ ರೂಪಾಯಿ ಹಾಗೂ ಒಂದು ಎಲೆಕ್ಟ್ರಿಕ್ ಸ್ಕೂಟರ್ ಸಿಕ್ಕಿದೆ. ಸಂಗೀತಾ ಶೃಂಗೇರಿ ಅವರು ಎರಡನೇ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ವಿನ್ನರ್ ಆದ ಕಾರ್ತಿಕ್ ಮಹೇಶ್ ಅವರಿಗೆ 50 ಲಕ್ಷ ರೂಪಾಯಿ, ಒಂದು ಕಾರು ಹಾಗೂ ಎಲೆಕ್ಟ್ರಿಕ್ ಸ್ಕೂಟರ್ ಬಹುಮಾನವಾಗಿ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ