ನನ್ನ ತಂದೆ ‘ಸಂಘಿ’ ಅಲ್ಲ: ಅಪ್ಪನ ಟೀಕಿಸಿದವರಗೆ ರಜನೀಕಾಂತ್ ಪುತ್ರಿ ತಿರುಗೇಟು
Rajinikanth: ಅಯೋಧ್ಯೆಗೆ ಹೋಗಿ ಬಂದು ರಾಮ ಮಂದಿರದ ಬಗ್ಗೆ ಹೇಳಿಕೆ ನೀಡಿದ್ದ ರಜನೀಕಾಂತ್ರನ್ನು ಕೆಲವರು ‘ಸಂಘಿ’ ಎಂದು ಟೀಕಿಸಿದ್ದರು. ಟೀಕೆಗೆ ರಜನೀಕಾಂತ್ ಪುತ್ರಿ ದಿಟ್ಟ ಉತ್ತರ ನೀಡಿದ್ದಾರೆ.
ಸೂಪರ್ ಸ್ಟಾರ್ ರಜನೀಕಾಂತ್ (Rajinikanth) ಅವರು ಕೆಲವು ಟೀಕೆಗಳಿಗೆ ಗುರಿಯಾಗುತ್ತಿದ್ದಾರೆ. ಆಹ್ವಾನದ ಮೇರೆಗೆ ಅಯೋಧ್ಯೆಗೆ ತೆರಳಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗಿಯಾಗಿದ್ದರು. ಆದರೆ ಅಲ್ಲಿಂದ ಮರಳಿ ಚೆನ್ನೈಗೆ ಬಂದ ಬಳಿಕ ನೀಡಿದ ಹೇಳಿಕೆಯೊಂದನ್ನು ಇಟ್ಟುಕೊಂಡು ಹಲವರು ರಜನೀಕಾಂತ್ ಅವರನ್ನು ಟೀಕೆ ಮಾಡುತ್ತಿದ್ದಾರೆ. ಟೀಕಾಕಾರಿಗೆ ರಜನೀಕಾಂತ್ರ ಪುತ್ರಿ ಐಶ್ವರ್ಯಾ ರಜನೀಕಾಂತ್ ದಿಟ್ಟ ಉತ್ತರ ಕೊಟ್ಟಿದ್ದು, ‘ನನ್ನ ತಂದೆ ‘ಸಂಘಿ’ ಅಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಐಶ್ವರ್ಯಾ ರಜನೀಕಾಂತ್, ‘ಲಾಲ್ ಸಲಾಂ’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದು, ಸಿನಿಮಾದ ಆಡಿಯೋ ಲಾಂಚ್ನಲ್ಲಿ ತಂದೆಯ ಬಗ್ಗೆ ಭಾವುಕರಾಗಿ ಮಾತನಾಡಿದರು. ‘ನನ್ನ ತಂದೆಯನ್ನು ಕೆಲವರು ‘ಸಂಘಿ’ (ಆರ್ಎಸ್ಎಸ್ಗೆ ಸೇರಿದವರು) ಎಂದು ಕರೆದಿದ್ದಾರೆ. ಇದನ್ನು ಕೇಳಿ ನನಗೆ ಆಕ್ರೋಶ ಬಂತು. ನನ್ನ ತಂದೆ ಸಂಘಿ ಅಲ್ಲ. ಒಂದೊಮ್ಮೆ ಅವರು ಸಂಘಿ ಆಗಿದ್ದಿದ್ದರೆ ‘ಲಾಲ್ ಸಲಾಂ’ ರೀತಿಯ ಸಿನಿಮಾದಲ್ಲಿ ನಟಿಸುತ್ತಲೇ ಇರಲಿಲ್ಲ. ಒಬ್ಬ ಸಂಘಿ ವ್ಯಕ್ತಿ ಈ ಸಿನಿಮಾದಲ್ಲಿ ನಟಿಸುವುದಿಲ್ಲ. ನಾನು ಏಕೆ ಹೀಗೆ ಹೇಳುತ್ತಿದ್ದೀನಿ ಎಂಬುದು ನಿಮಗೆ ಸಿನಿಮಾ ನೋಡಿದಾಗ ಗೊತ್ತಾಗುತ್ತದೆ. ಈ ಸಿನಿಮಾದಲ್ಲಿ ನಟಿಸಲು ಧೈರ್ಯ ಬೇಕಿತ್ತು, ಅದು ಕೆಲವರಲ್ಲೇ ಇದೆ. ಅದರಲ್ಲಿ ನನ್ನ ತಂದೆ ರಜನೀಕಾಂತ್ ಸಹ ಒಬ್ಬರು’ ಎಂದಿದ್ದಾರೆ.
ಇದನ್ನೂ ಓದಿ:ರಜನೀಕಾಂತ್ ಹೊಸ ಸಿನಿಮಾ ಹೆಸರು ಘೋಷಣೆ, ಜೊತೆಗಿದ್ದಾರೆ ಹಲವು ಸ್ಟಾರ್ಗಳು
ಅಯೋಧ್ಯೆಗೆ ಭೇಟಿ ನೀಡಿದ್ದ ನಟ ರಜನೀಕಾಂತ್, ‘500 ವರ್ಷಗಳ ಹಿಂದಿನ ಸಮಸ್ಯೆಗೆ ಸುಪ್ರೀಂಕೋರ್ಟ್ ಪರಿಹಾರ ಒದಗಿಸಿದೆ. ಈ ದಿನ ಭಾರತೀಯ ಇತಿಹಾಸದಲ್ಲಿ ಮರೆಯಲಾಗದ ದಿನ’ ಎಂದಿದ್ದರು. ರಜನೀಕಾಂತ್ರ ‘ಕಬಾಲಿ’, ‘ಕಾಲ’ ಸಿನಿಮಾಗಳನ್ನು ನಿರ್ದೇಶಿಸಿರುವ ನಿರ್ದೇಶಕ ಪಾ ರಂಜಿತ್, ರಜನೀಕಾಂತ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ, ‘500 ವರ್ಷಗಳ ಹಿಂದಿನ ಸಮಸ್ಯೆ ಎಂದು ಹೇಳಿದ್ದು ಸೂಕ್ತವಲ್ಲ. ನಾವು ಈ ಪ್ರಕ್ರಿಯೆಯ ಹಿಂದಿನ ರಾಜಕೀಯವನ್ನು ಪ್ರಶ್ನೆ ಮಾಡಬೇಕಿದೆ’ ಎಂದಿದ್ದರು.
ಪಾ ರಂಜಿತ್ ಹೇಳಿಕೆಗೆ ಬೆಂಬಲ ಸೂಚಿಸಿದ್ದ ಕೆಲವರು ರಜನೀಕಾಂತ್ ಅವರನ್ನು ಸಂಘದ ಸದಸ್ಯನೆಂದು ಟೀಕೆ ಮಾಡಿದ್ದರು. ರಜನೀಕಾಂತ್ ಅವರು ‘ತಾವು ರಾಜಕಾರಣಿಯಲ್ಲ, ತಮಗೆ ರಾಜಕೀಯದ ಅವಶ್ಯಕತೆ ಇಲ್ಲ’ ಎಂದು ಪ್ರತಿಕ್ರಿಯೆ ನೀಡಿದ್ದರಾದರು, ರಜನೀಕಾಂತ್ ಅಯೋಧ್ಯೆಗೆ ಹೋಗಿ ಬಂದಾಗಿನಿಂದಲೂ ಟೀಕೆ ನಡೆಯುತ್ತಲೇ ಇತ್ತು. ಅದಕ್ಕೆ ಈಗ ರಜನೀಕಾಂತ್ ಪುತ್ರಿ ಜವಾಬು ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ