AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜನೀಕಾಂತ್ ಹೊಸ ಸಿನಿಮಾ ಹೆಸರು ಘೋಷಣೆ, ಜೊತೆಗಿದ್ದಾರೆ ಹಲವು ಸ್ಟಾರ್​ಗಳು

Rajinikanth: ರಜನೀಕಾಂತ್ ನಟಿಸಿ ‘ಜೈ ಭೀಮ್’ ಖ್ಯಾತಿಯ ಟಿಜೆ ಜ್ಞಾನವೇಲು ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದ ಹೆಸರು ಘೋಷಿಸಲಾಗಿದೆ. ಈ ಸಿನಿಮಾದಲ್ಲಿ ತಾರೆಯರ ದಂಡೇ ಇದೆ.

ರಜನೀಕಾಂತ್ ಹೊಸ ಸಿನಿಮಾ ಹೆಸರು ಘೋಷಣೆ, ಜೊತೆಗಿದ್ದಾರೆ ಹಲವು ಸ್ಟಾರ್​ಗಳು
Follow us
ಮಂಜುನಾಥ ಸಿ.
|

Updated on:Jan 15, 2024 | 9:18 PM

ವರ್ಷಗಳು ಕಳೆದಷ್ಟು ರಜನೀಕಾಂತ್ (Rajinikanth)​ ಕ್ರೇಜ್ ಹೆಚ್ಚಾಗುತ್ತಲೇ ಸಾಗುತ್ತಿದೆ. ಅವರ ಕ್ರೇಜ್​ ನಿಲ್ಲುವ ಸೂಚನೆಯೇ ಕಾಣುತ್ತಿಲ್ಲ. ರಜನೀ ಅವರ ಈ ಹಿಂದಿನ ಸಿನಿಮಾ ‘ಜೈಲರ್’ ಕಮಾಲ್ ಮಾಡಿದೆ. ದಾಖಲೆಯ ಗಳಿಕೆಯನ್ನು ‘ಜೈಲರ್’ ಸಿನಿಮಾ ಮಾಡಿದ್ದು, ರಜನೀಗೆ ರಜನಿಯೇ ಸಾಟಿ ಎಂಬುದನ್ನು ತೋರಿಸಿದೆ. ಇದೀಗ ರಜನೀಕಾಂತ್​ರ ಹೊಸ ಸಿನಿಮಾದ ಹೆಸರು ಘೋಷಣೆ ಆಗಿದ್ದು, ಪೋಸ್ಟರ್ ಸಹ ಬಿಡುಗಡೆ ಆಗಿದೆ.

ರಜನೀಕಾಂತ್, ‘ಲಾಲ್ ಸಲಾಂ’ ಹೆಸರಿನ ಸಾಮಾಜಿಕ ಸಂದೇಶವುಳ್ಳ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿ ಸದ್ದು ಮಾಡುತ್ತಿದೆ. ಈ ಸಿನಿಮಾವನ್ನು ರಜನೀಕಾಂತ್ ಪುತ್ರಿ ನಿರ್ದೇಶನ ಮಾಡಿದ್ದಾರೆ. ಆದರೆ ಅಭಿಮಾನಿಗಳಿಗೆ ಈ ಸಿನಿಮಾಕ್ಕಿಂತಲೂ ಹೆಚ್ಚು ಕುತೂಹಲ, ನಿರೀಕ್ಷೆ ಇರುವುದು ರಜನೀಕಾಂತ್, ಟಿಜೆ ಜ್ಞಾನವೇಲು ಜೊತೆಗೆ ಮಾಡಲಿರುವ ಸಿನಿಮಾ ಬಗ್ಗೆ.

ಇದೀಗ ಆ ಸಿನಿಮಾದ ಹೆಸರು ಘೋಷಣೆ ಆಗಿದೆ. ಸಿನಿಮಾಕ್ಕೆ ‘ವೇಟ್ಟೈಯನ್’ ಎಂದು ಹೆಸರಿಡಲಾಗಿದೆ. ಸಿನಿಮಾದ ಪೋಸ್ಟರ್ ಸಹ ಬಿಡುಗಡೆ ಆಗಿದ್ದು, ರಜನೀಕಾಂತ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಗನ್ ಸಹ ಇದೆ. ಈ ಸಿನಿಮಾದ ಲುಕ್ ತುಸುವಷ್ಟೆ ‘ಜೈಲರ್’ ಸಿನಿಮಾದ ಲುಕ್ ಅನ್ನು ಹೋಲುತ್ತಿದೆ ಎಂದು ಸಹ ಕೆಲವರು ಗುರುತಿಸಿದ್ದಾರೆ.

ಇದನ್ನೂ ಓದಿ:ರಜನೀಕಾಂತ್ ನಟನೆಯ ‘ಲಾಲ್ ಸಲಾಂ’ ಸಿನಿಮಾದ ಹಾರ್ಡ್ ಡಿಸ್ಕ್ ನಾಪತ್ತೆ! ಮುಂದೇನು ಗತಿ

ಇನ್ನು ‘ವೇಟ್ಟೈಯನ್’ ಸಿನಿಮಾದಲ್ಲಿ ರಜನೀಕಾಂತ್ ಜೊತೆಗೆ ದೊಡ್ಡ ಸ್ಟಾರ್​ಗಳೇ ನಟಿಸುತ್ತಿದ್ದಾರೆ. ಅಮಿತಾಬ್ ಬಚ್ಚನ್ ದಶಕಗಳ ಬಳಿಕ ರಜನೀಕಾಂತ್​ ಜೊತೆ ಒಟ್ಟಿಗೆ ನಟಿಸುತ್ತಿದ್ದಾರೆ. ಯುವ ಸ್ಟಾರ್​ಗಳಾದ ರಾಣಾ ದಗ್ಗುಬಾಟಿ ಹಾಗೂ ಪ್ರತಿಭಾವಂತ ನಟ ಫಹಾದ್ ಫಾಸಿಲ್ ಸಹ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಪ್ರತಿಭಾವಂತ ನಟಿ ಮಂಜು ವಾರಿಯರ್ ಸಹ ಇದ್ದಾರೆ.

ಸಿನಿಮಾವನ್ನು ನಿರ್ದೇಶಿಸುತ್ತಿರುವ ಟಿಜೆ ಜ್ಞಾನವೇಲು ಅವರಿಗೆ ನಿರ್ದೇಶಕರಾಗಿ ಇದು ಮೂರನೇ ಸಿನಿಮಾವಷ್ಟೆ. ಆದರೆ ಜ್ಞಾನವೇಲು ನಿರ್ದೇಶಿಸಿರುವ ಮೊದಲ ಸಿನಿಮಾ ‘ಜೈ ಭೀಮ್’ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಆಸ್ಕರ್​ಗೆ ಸಹ ಹೋಗಿ ಮೊದಲ ಹಂತದಲ್ಲಿ ಆಯ್ಕೆಗೊಂಡು ಮುಂದೆ ಹೋಗಿತ್ತು, ಆದರೆ ನಾಮಿನೇಟ್ ಆಗುವಲ್ಲಿ ವಿಫಲವಾಯ್ತು. ಸಿನಿಮಾಕ್ಕೆ ಕೆಲವು ರಾಷ್ಟ್ರಪ್ರಶಸ್ತಿಗಳು ಸಂದವು, ನಾಯಕ ಸೂರ್ಯಗೆ ಸಹ ರಾಷ್ಟ್ರಪ್ರಶಸ್ತಿ ದೊರಕಿತು. ಈಗ ರಜನೀಕಾಂತ್ ಜೊತೆ ಜ್ಞಾನವೇಲು ಕೈ ಸೇರಿಸಿದ್ದು ಎಂಥಹಾ ವಿಷಯ ಇಟ್ಟುಕೊಂಡು ಪ್ರೇಕ್ಷಕರ ಮುಂದೆ ಬರಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿ ಇದೆ.

‘ಲಾಲ್ ಸಲಾಂ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ‘ವೇಟ್ಟೈಯನ್’ ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ಇದಾದ ಬಳಿಕ ಲೋಕೇಶ್ ಕನಗರಾಜ್ ನಿರ್ದೇಶನದ ಹೊಸ ಸಿನಿಮಾದಲ್ಲಿ ರಜನೀಕಾಂತ್ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:17 pm, Mon, 15 January 24