ನಕಲಿ ದಾಖಲೆ ಬಳಕೆ ಪ್ರಕರಣ: ರಜನೀಕಾಂತ್​ ಪತ್ನಿಗೆ ಜಾಮೀನು ಮಂಜೂರು

Lata Rajinikanth: ನಕಲಿ ದಾಖಲೆ ಹಾಗೂ ಸಹಿ ಬಳಕೆ ಆರೋಪ ಎದುರಿಸುತ್ತಿರುವ ರಜನೀಕಾಂತ್ ಪತ್ನಿ ಲತಾ ರಜನೀಕಾಂತ್ ಅವರಿಗೆ ಬೆಂಗಳೂರಿನ ಒಂದನೇ ಎಸಿಎಂಎಂ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ನಕಲಿ ದಾಖಲೆ ಬಳಕೆ ಪ್ರಕರಣ: ರಜನೀಕಾಂತ್​ ಪತ್ನಿಗೆ ಜಾಮೀನು ಮಂಜೂರು
ಲತಾ ರಜನೀಕಾಂತ್
Follow us
ಮಂಜುನಾಥ ಸಿ.
|

Updated on: Dec 26, 2023 | 6:53 PM

ರಜನೀಕಾಂತ್ (Rajinikanth) ಪತ್ನಿ ಲತಾ ರಜನೀಕಾಂತ್ ಅವರಿಗೆ ‘ಕೊಚಾಡಿಯನ್’ (Kochadiyan) ಸಿನಿಮಾ ಕುರಿತ ವಂಚನೆ ಕೇಸ್​ಗೆ ನಕಲಿ ದಾಖಲೆ ಬಳಸಿದ ಪ್ರಕರಣದಲ್ಲಿ ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ರಜನೀಕಾಂತ್ ನಟಿಸಿ, ಅವರ ಪುತ್ರಿ ಐಶ್ವರ್ಯಾ ನಿರ್ದೇಶನ ಮಾಡಿದ್ದ ‘ಕೊಚಾಡಿಯನ್’ ಸಿನಿಮಾ ನಷ್ಟ ಅನುಭವಿಸಿದಾಗ ಮೆ.ಆ್ಯಡ್ ಬ್ಯೂರೋ ಅಡ್ವರ್ಟೈಸಿಂಗ್ ಸಂಸ್ಥೆಯು, ನಿರ್ಮಾಪಕಿ ಲತಾ ರಜನೀಕಾಂತ್ ಒಪ್ಪಂದದ ಪ್ರಕಾರ ನಷ್ಟ ಪರಿಹಾರ ನೀಡಿಲ್ಲವೆಂದು ಪ್ರಕರಣ ದಾಖಲಿಸಿತ್ತು, ಆದರೆ ಅದೇ ಪ್ರಕರಣದಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧಕಾಜ್ಞೆ ಪಡೆದುಕೊಳ್ಳಲು ಲತಾ ಅವರು ನಕಲಿ ದಾಖಲೆಗಳನ್ನು ಬಳಸಿದ್ದರೆಂಬ ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿದ್ದು ಆ ಪ್ರಕರಣದಲ್ಲಿ ಇದೀಗ ಷರತ್ತು ಬದ್ಧ ಜಾಮೀನನ್ನು ಲತಾ ಅವರಿಗೆ ನೀಡಲಾಗಿದೆ. ಇಂದು (ಡಿಸೆಂಬರ್ 26) ಲತಾ ಅವರು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡರು.

ತಮ್ಮ ಹಾಗೂ , ಮೀಡಿಯಾ ಒನ್, ಮೆ.ಆ್ಯಡ್ ಬ್ಯೂರೋ ಅಡ್ವರ್ಟೈಸಿಂಗ್ ಸಂಸ್ಥೆಗಳ ನಡುವಿನ ವಂಚನೆ ಪ್ರಕರಣದ ಬಗ್ಗೆ ವರದಿ ಮಾಡದಂತೆ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಪಡೆಯಲು ಲತಾ ಅವರು ನ್ಯಾಯಾಲಯಕ್ಕೆ ಕೆಲ ದಾಖಲೆಗಳನ್ನು ನೀಡಿದ್ದರು. ಅದರಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ ವಿಳಾಸದ ನಕಲಿ ದಾಖಲೆಗಳನ್ನು ಹಾಗೂ ನಕಲಿ ಸಹಿಯನ್ನು ಬಳಕೆ ಮಾಡಿದ್ದರು. ಮೀಡಿಯಾ ಒನ್ ಹಾಗೂ ಮೈ ಆಡ್ ಬ್ಯೂರೋ ಹೂಡಿದ್ದ ವಂಚನೆ ಪ್ರಕರಣವನ್ನು ರದ್ದು ಮಾಡಿದ್ದ ನ್ಯಾಯಾಲಯ ಫೋರ್ಜರಿ ಪ್ರಕರಣದ ವಿಚಾರಣೆ ಮುಂದುವರೆಯುವಂತೆ ಸೂಚಿಸಿತ್ತು, ಹಾಗಾಗಿ ಇಂದು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ದಾಖಲಿಸಿ ಷರತ್ತುಬದ್ಧ ಜಾಮೀನು ಪಡೆದಿದ್ದಾರೆ.

ಇದನ್ನೂ ಓದಿ:33 ವರ್ಷಗಳ ಬಳಿಕ ಇಬ್ಬರು ದಿಗ್ಗಜ ನಟರ ಸಮ್ಮಿಲನ: ರಜನೀಕಾಂತ್ ಜೊತೆಗೂಡುತ್ತಿರುವುದು ಯಾರು?

ವಿಚಾರಣೆ ಆಲಿಸಿದ ನ್ಯಾಯಾಧೀಶೆ ಆನಂದ್ ಕರಿಯಮ್ಮನವರ್ ಅವರು ಎರಡು ವೈಯಕ್ತಿಕ ಬಾಂಡ್ ನೀಡುವಂತೆ ಷರತ್ತು ವಿಧಿಸಿದ್ದಾರೆ. ಜಾಮೀನು ದೊರೆತ ಬಳಿಕ ಪ್ರತಿಕ್ರಿಯೆ ನೀಡಿದ ಲತಾ ರಜನೀಕಾಂತ್ ಅವರು, ‘‘ನಾನು ಕಾನೂನಿಗೆ ಗೌರವ ಕೊಡುವ ಮಹಿಳೆ, ನಾನು ಕಾನೂನು ಪಾಲಿಸಲು ನ್ಯಾಯಾಲಯಕ್ಕೆ ಗೌರವ ನೀಡುವ ಕಾರಣ ಖುದ್ದಾಗಿ ಹಾಜರಾಗಿದ್ದೇನೆ. ನಾನೊಬ್ಬ ಸೆಲೆಬ್ರಿಟಿ ಅನ್ನುವ ಕಾರಣಕ್ಕೆ ಹೀಗೆ ಮಾಡಿದ್ದಾರೆ, ಕಾನೂನು ಪ್ರಕ್ರಿಯೆಗಳು ನ್ಯಾಯಾಲಯದಲ್ಲಿ ನಡೆಯುತ್ತಿದೆ, ಮುಂದಿನದದ್ದು ಕಾನೂನು ಪ್ರಕಾರ ನಮ್ಮ ವಕೀಲರು ನೋಡಿಕೊಳ್ತಾರೆ’’ ಎಂದಿದ್ದಾರೆ.

2014ರಲ್ಲಿ ‘ಕೊಚಾಡಿಯನ್’ ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾವನ್ನು ರಜನೀಕಾಂತ್​ರ ಪುತ್ರಿ ಐಶ್ವರ್ಯಾ ರಜನೀಕಾಂತ್ ನಿರ್ದೇಶಿಸಿದ್ದರು. ನಿರ್ಮಾಣ ಮಾಡಿದ್ದು ಎರೋಸ್ ಹಾಗೂ ಮೀಡಿಯಾ ಒನ್ ಗ್ಲೋಬಲ್ ಇಂಟರ್ನ್ಯಾಷನ್ ನಿರ್ಮಾಣ ಸಂಸ್ಥೆಗಳು. ಸಿನಿಮಾದಲ್ಲಿ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದರು. ಆಗಿನ ಕಾಲಕ್ಕೆ 125 ಕೋಟಿ ಬಜೆಟ್​ನಲ್ಲಿ ಸಿನಿಮಾವನ್ನು ನಿರ್ಮಿಸಲಾಗಿತ್ತು. ಬಾಕ್ಸ್ ಆಫೀಸ್​ನಲ್ಲಿ ಹೀನಾಯ ಸೋಲು ಕಂಡಿದ್ದ ಈ ಸಿನಿಮಾ ಗಳಿಸಿದ್ದು 45 ಕೋಟಿ ಹಣ ಮಾತ್ರವೇ. ಸಿನಿಮಾ ಸೋತ ಬಳಿಕ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ಮೀಡಿಯಾ ಒನ್ ಗ್ಲೋಬಲ್ ಇಂಟರ್ನ್ಯಾಷನ್, ತಮಗೆ ಷ್ಯೂರಿಟಿ ನೀಡಿದ್ದ ಲತಾ ವಿರುದ್ಧ ವಂಚನೆ ಪ್ರಕರಣ ದಾಖಲಿಸಿತ್ತು. ವಂಚನೆ ಪ್ರಕರಣ ರದ್ದು ಮಾಡಲಾಯ್ತಾದರೂ ಪೋರ್ಜರಿ ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿದೆ. ಅದೇ ಪ್ರಕರಣದಲ್ಲಿ ಈಗ ಲತಾ ಅವರಿಗೆ ಜಾಮೀನು ನೀಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ