100 ಕೋಟಿ ರೂಪಾಯಿ ಸನಿಹದಲ್ಲಿ ‘ತಂಡೇಲ್’ ಕಲೆಕ್ಷನ್; ಸಾಯಿ ಪಲ್ಲವಿ, ನಾಗ ಚೈತನ್ಯ ಫುಲ್ ಖುಷ್

ನಿರೀಕ್ಷೆಯಂತೆಯೇ ‘ತಂಡೇಲ್’ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಂಡಿದೆ. 5 ದಿನದ ಕಲೆಕ್ಷನ್ ಲೆಕ್ಕವನ್ನು ಹಂಚಿಕೊಳ್ಳಲಾಗಿದೆ. ಈಗಾಗಲೇ 80 ಕೋಟಿ ರೂಪಾಯಿ ಗಳಿಕೆ ಆಗಿದ್ದು, ಬರುವ ವೀಕೆಂಡ್​ನಲ್ಲಿ 100 ಕೋಟಿ ರೂಪಾಯಿ ಆಗಲಿದೆ ಎಂದು ಹೇಳಲಾಗುತ್ತಿದೆ. ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ಅವರಿಗೆ ಈ ಸಿನಿಮಾದಿಂದ ಗೆಲುವು ಸಿಕ್ಕಿದೆ.

100 ಕೋಟಿ ರೂಪಾಯಿ ಸನಿಹದಲ್ಲಿ ‘ತಂಡೇಲ್’ ಕಲೆಕ್ಷನ್; ಸಾಯಿ ಪಲ್ಲವಿ, ನಾಗ ಚೈತನ್ಯ ಫುಲ್ ಖುಷ್
Sai Pallavi, Naga Chaitanya

Updated on: Feb 12, 2025 | 7:18 PM

ನಟ ನಾಗ ಚೈತನ್ಯ ಅವರ ಜೀವನದಲ್ಲಿ ಈಗ ಎಲ್ಲವೂ ಒಳ್ಳೆಯದೇ ಆಗುತ್ತಿದೆ. ಶೋಭಿತಾ ದುಲಿಪಾಲ ಜೊತೆ ಮದುವೆ ಆದ ಬಳಿಕ ಅವರಿಗೆ ವೃತ್ತಿ ಜೀವನದಲ್ಲೂ ಯಶಸ್ಸು ಸಿಕ್ಕಿದೆ. ನಾಗ ಚೈತನ್ಯ ನಟನೆಯ ‘ತಂಡೇಲ್’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು. ಚಿತ್ರಕ್ಕಾಗಿ ಅವರು ತುಂಬ ಕಷ್ಟಪಟ್ಟಿದ್ದಾರೆ. ಸಾಕಷ್ಟು ಸಮಯ ಮೀಸಲಿಟ್ಟಿದ್ದಾರೆ. ಆ ಶ್ರಮಕ್ಕೆ ಸೂಕ್ತ ಪ್ರತಿಫಲ ಈಗ ಸಿಕ್ಕಿದೆ. ಬಾಕ್ಸ್ ಆಫೀಸ್​ನಲ್ಲಿ ‘ತಂಡೇಲ್’ ಸಿನಿಮಾ ಉತ್ತಮವಾಗಿ ಕಲೆಕ್ಷನ್ ಮಾಡುತ್ತಿದೆ. ಶೀಘ್ರದಲ್ಲೇ ಈ ಚಿತ್ರ 100 ಕೋಟಿ ರೂಪಾಯಿ ಕ್ಲಬ್ ಸೇರಲಿದೆ.

ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ಅವರು ‘ತಂಡೇಲ್’ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಇದು ಅವರಿಬ್ಬರ ಕಾಂಬಿನೇಷನ್​ನಲ್ಲಿ ಬಂದಿರುವ 2ನೇ ಸಿನಿಮಾ. ಇದಕ್ಕೂ ಮುನ್ನ ‘ಲವ್ ಸ್ಟೋರಿ’ ಸಿನಿಮಾದಲ್ಲಿ ಜನರಿಗೆ ಅವರಿಬ್ಬರ ಕಾಂಬಿನೇಷನ್ ಇಷ್ಟ ಆಗಿತ್ತು. ಆದರೆ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಆಗಿರಲಿಲ್ಲ. ಈಗ ‘ತಂಡೇಲ್’ ಸಿನಿಮಾ ಜನಮೆಚ್ಚುಗೆ ಪಡೆದುಕೊಂಡು ಬಾಕ್ಸ್ ಆಫೀಸ್​ನಲ್ಲಿ ಸದ್ದು ಮಾಡುತ್ತಿದೆ.

ಫೆಬ್ರವರಿ 7ರಂದು ‘ತಂಡೇಲ್’ ಸಿನಿಮಾ ಬಿಡುಗಡೆ ಆಯಿತು. ವಿದೇಶದಲ್ಲೂ ಈ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಒಟ್ಟು 5 ದಿನಕ್ಕೆ 80 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಪಾಸಿಟಿವ್ ವಿಮರ್ಶೆ ಸಿಕ್ಕಿರುವ ಕಾರಣ ಮುಂಬರುವ ವೀಕೆಂಡ್​ನಲ್ಲಿ ಕೂಡ ಒಳ್ಳೆಯ ಕಲೆಕ್ಷನ್ ಆಗುವ ನಿರೀಕ್ಷೆ ಇದೆ. ಹಾಗಾಗಿ 100 ಕೋಟಿ ರೂಪಾಯಿ ಗಡಿಯನ್ನು ಈ ಸಿನಿಮಾ ದಾಟಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

‘ತಂಡೇಲ್’ ಸಿನಿಮಾದಿಂದ ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ಅವರು ಗೆಲುವು ಕಂಡಿದ್ದಾರೆ. ಇಬ್ಬರ ಮುಖದಲ್ಲೂ ನಗು ಅರಳಿದೆ. ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ಅವರು ಹಳ್ಳಿ ಹುಡುಗಿಯ ಪಾತ್ರವನ್ನು ಮಾಡಿದ್ದಾರೆ. ನಾಗ ಚೈತನ್ಯ ಅವರು ಮೀನುಗಾರನಾಗಿ ಕಾಣಿಸಿಕೊಂಡಿದ್ದಾರೆ. ಅವರಿಬ್ಬರ ನಟನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾದ ಸಕ್ಸಸ್​ ಮೀಟ್ ಮಾಡಲಾಗಿದೆ.

ಇದನ್ನೂ ಓದಿ: ‘ತಂಡೇಲ್’ ಸಿನಿಮಾಗೆ 5 ಕೋಟಿ ರೂಪಾಯಿ ಸಂಭಾವನೆ ಪಡೆದ ಸಾಯಿ ಪಲ್ಲವಿ

ನಾಗಾರ್ಜುನ ಅವರು ‘ತಂಡೇಲ್’ ಸಕ್ಸಸ್ ಮೀಟ್​ನಲ್ಲಿ ಭಾವುಕವಾಗಿ ಮಾತನಾಡಿದ್ದಾರೆ. ‘ನಾನು ಸಕ್ಸಸ್​ಮೀಟ್​ಗಳಲ್ಲಿ ಭಾಗವಹಿಸಿ ತುಂಬ ಕಾಲ ಆಗಿತ್ತು. ನಾಗ ಚೈತನ್ಯ ಬಗ್ಗೆ ನನಗೆ ಖುಷಿ ಆಗಿದೆ. ಅವರ ಮುಖದಲ್ಲಿ ನಗು ನೋಡಿ ಸಂತಸ ಆಗುತ್ತಿದೆ. ಈ ಸಿನಿಮಾದಲ್ಲಿ ಅವನನ್ನು ನೋಡಿ ನನ್ನ ತಂದೆಯ ನೆನಪಾಯಿತು’ ಎಂದು ನಾಗಾರ್ಜುನ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.