‘ತಂಡೇಲ್’ ಸಿನಿಮಾಗೆ 5 ಕೋಟಿ ರೂಪಾಯಿ ಸಂಭಾವನೆ ಪಡೆದ ಸಾಯಿ ಪಲ್ಲವಿ
ಬಹುಬೇಡಿಕೆಯ ನಟಿಯಾಗಿ ಸಾಯಿ ಪಲ್ಲವಿ ಗುರುತಿಸಿಕೊಂಡಿದ್ದಾರೆ. ಪ್ರತಿ ಸಿನಿಮಾಗೆ ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ವರದಿಗಳ ಪ್ರಕಾರ, ‘ತಂಡೇಲ್’ ಸಿನಿಮಾಗಾಗಿ ಅವರು 5 ಕೋಟಿ ರೂಪಾಯಿ ಸಂಬಳ ಪಡೆದಿದ್ದಾರೆ. ಫೆ.7ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ. ಚಿತ್ರದ ಟ್ರೇಲರ್ ಗಮನ ಸೆಳೆದಿದೆ.

ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ಅವರು ಎರಡನೇ ಬಾರಿಗೆ ಜೋಡಿಯಾಗಿ ನಟಿಸಿರುವ ‘ತಂಡೇಲ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಫೆಬ್ರವರಿ 7ರಂದು ಈ ಸಿನಿಮಾ ತೆರೆಕಾಣಲಿದೆ. ಈಗಾಗಲೇ ಟ್ರೇಲರ್ ಮೂಲಕ ಸಿನಿಮಾ ಕೌತುಕ ಸೃಷ್ಟಿಸಿದೆ. ಮೀನುಗಾರನ ಪಾತ್ರದಲ್ಲಿ ನಾಗ ಚೈತನ್ಯ ಅವರು ನಟಿಸಿದ್ದಾರೆ. ಹಳ್ಳಿ ಹುಡುಗಿಯಾಗಿ ಸಾಯಿ ಪಲ್ಲವಿ ಅವರು ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗಾಗಿ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಅವರು ಎಷ್ಟು ಸಂಭಾವನೆ ಪಡೆದಿದ್ದಾರೆ ಎಂಬುದು ಈಗ ಬಹಿರಂಗ ಆಗಿದೆ. ಸಾಯಿ ಪಲ್ಲವಿ ಅವರಿಗಿಂತಲೂ 3 ಪಟ್ಟು ಹೆಚ್ಚು ಸಂಭಾವನೆಯನ್ನು ನಾಗ ಚೈತನ್ಯ ಅವರಿಗೆ ನೀಡಲಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.
ನಾಗ ಚೈತನ್ಯ ಅವರು ವೃತ್ತಿಜೀವನದಲ್ಲಿ ಏಳು-ಬೀಳುಗಳು ಇವೆ. ಸಿನಿಮಾ ಮಾತ್ರವಲ್ಲದೇ ವೆಬ್ ಸಿರೀಸ್ ಮೂಲಕವೂ ಅವರು ಯಶಸ್ಸು ಕಂಡಿದ್ದಾರೆ. ‘ತಂಡೇಲ್’ ಸಿನಿಮಾಗಾಗಿ ಅವರು ಸಾಕಷ್ಟು ಕಷ್ಟಪಟ್ಟಿದ್ದಾರೆ. ವರದಿಗಳ ಪ್ರಕಾರ ಈ ಚಿತ್ರಕ್ಕಾಗಿ ಅವರು ಬರೋಬ್ಬರಿ 15 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಈವರೆಗಿನ ವೃತ್ತಿಜೀವನದಲ್ಲಿ ಅವರು ಪಡೆದ ಅತಿ ದೊಡ್ಡ ಸಂಭಾವನೆ ಇದಾಗಿದೆ.
ಇನ್ನು, ಸಾಯಿ ಪಲ್ಲವಿ ಕೂಡ ಬಹುಬೇಡಿಕೆಯ ನಟಿ. ಬಹುಭಾಷೆಯಲ್ಲಿ ಅವರು ಮಿಂಚುತ್ತಾರೆ. ಗ್ಲಾಮರ್ ಮೇಲೆ ಅವಲಂಬಿತವಾಗದೇ ನಟನೆಯ ಮೂಲಕವೇ ಅವರು ಎಲ್ಲರ ಹೃದಯ ಗೆದ್ದಿದ್ದಾರೆ. ‘ತಂಡೇಲ್’ ಸಿನಿಮಾದಲ್ಲಿ ನಟಿಸಿದ್ದಕ್ಕೆ ಅವರಿಗೆ 5 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ. ಟ್ರೇಲರ್ನಲ್ಲಿ ಅವರ ಪಾತ್ರ ಹೈಲೈಟ್ ಆಗಿದೆ. ಈ ಸಿನಿಮಾ ನೋಡಲು ಅಭಿಮಾನಿಗಳು ಕಾದಿದ್ದಾರೆ.
ಇದನ್ನೂ ಓದಿ: ‘ಅರ್ಜುನ್ ರೆಡ್ಡಿ’ ಚಿತ್ರದಲ್ಲಿ ನಟಿಸಬೇಕಿತ್ತು ಸಾಯಿ ಪಲ್ಲವಿ; ರಿಜೆಕ್ಟ್ ಆಗಲು ಕಾರಣ ಆಯ್ತು ಸ್ಲೀವ್ಲೆಸ್ ಡ್ರೆಸ್ ವಿಚಾರ
ಬಿಡುಗಡೆಗೂ ಮುನ್ನವೇ ‘ತಂಡೇಲ್’ ಸಿನಿಮಾ ಬಗ್ಗೆ ಪಾಸಿಟಿವ್ ಟಾಕ್ ಶುರುವಾಗಿದೆ. ಸಿನಿಮಾ ರಿಲೀಸ್ ಆದ ಬಳಿಕ ಉತ್ತಮ ವಿಮರ್ಶೆ ಸಿಕ್ಕರೆ ಖಂಡಿತಾ ಸಿನಿಮಾ ಗೆಲ್ಲಲಿದೆ. ಈ ಗೆಲುವಿಗಾಗಿ ನಾಗ ಚೈತನ್ಯ ಅವರು ಕಾಯುತ್ತಿದ್ದಾರೆ. ದೇವಿ ಶ್ರೀ ಪ್ರಸಾದ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಬನ್ನಿ ವಾಸು ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಂದು ಮೊಂಡೇಟಿ ಅವರ ನಿರ್ದೇಶನದಲ್ಲಿ ‘ತಂಡೇಲ್’ ಸಿನಿಮಾ ಮೂಡಿಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.