‘ಜೈಲರ್ 2’ನಲ್ಲಿ ಸಾಲು-ಸಾಲು ಅತಿಥಿ ನಟರು, ಪಟ್ಟಿ ಹೀಗಿದೆ..

Jailer 2: ರಜನೀಕಾಂತ್ ನಟನೆಯ ‘ಜೈಲರ್’ ಸಿನಿಮಾ 2023 ರಲ್ಲಿ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿತ್ತು. ಸಿನಿಮಾದಲ್ಲಿ ಶಿವರಾಜ್ ಕುಮಾರ್ ಸೇರಿದಂತೆ ಹಲವರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಅತಿಥಿ ಪಾತ್ರಗಳಿಂದ ಸಿನಿಮಾಕ್ಕೆ ಬಲ ಬಂದಿತ್ತು. ಇದೀಗ ‘ಜೈಲರ್ 2’ ನಲ್ಲಿ ಇನ್ನೂ ಕೆಲ ಸೂಪರ್ ಸ್ಟಾರ್​ಗಳು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಜೈಲರ್ 2’ನಲ್ಲಿ ಸಾಲು-ಸಾಲು ಅತಿಥಿ ನಟರು, ಪಟ್ಟಿ ಹೀಗಿದೆ..
Shiva Rajkumar

Updated on: Apr 16, 2025 | 12:28 PM

ರಜನೀಕಾಂತ್ ನಟನೆಯ ‘ಜೈಲರ್’ ಸಿನಿಮಾ 2023 ರಲ್ಲಿ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿತ್ತು. ಸಿನಿಮಾದಲ್ಲಿ ಹಾಡು, ಹಿನ್ನೆಲೆ ಸಂಗೀತ ಇವುಗಳ ಜೊತೆಗೆ ಸಿನಿಮಾದಲ್ಲಿದ್ದ ಅತಿಥಿ ಪಾತ್ರಗಳು ಪ್ರೇಕ್ಷಕರನ್ನು ಸೆಳೆದಿದ್ದವು. ವಿಶೇಷವಾಗಿ ಶಿವಣ್ಣ ಸೀನ್​ಗಳಂತೂ ಸೂಪರ್-ಡೂಪರ್ ಹಿಟ್ ಆಗಿದ್ದವು. ಸಿನಿಮಾದ ನಾಯಕ ರಜನೀಕಾಂತ್ ಗಿಂತಲೂ ಹೆಚ್ಚಿನ ಶಿಳ್ಳೆ-ಚಪ್ಪಾಳೆ ಶಿವಣ್ಣನ ಎಂಟ್ರಿಗೆ ಬಿದ್ದಿತ್ತು. ಶಿವಣ್ಣ ಮಾತ್ರವೇ ಅಲ್ಲದೆ ಮೋಹನ್​ಲಾಲ್, ಜಾಕಿ ಶ್ರಾಫ್ ಇನ್ನೂ ಕೆಲವರು ಸಿನಿಮಾನಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದರು. ಇದೀಗ ‘ಜೈಲರ್ 2’ ಸಿನಿಮಾ ಬರುತ್ತಿದ್ದು, ಈ ಸಿನಿಮಾನಲ್ಲಿ ಅತಿಥಿ ಪಾತ್ರಗಳ ಸಂಖ್ಯೆ ಇನ್ನೂ ಹೆಚ್ಚಾಗಿದೆ ಎನ್ನಲಾಗುತ್ತಿದೆ.

‘ಜೈಲರ್’ ಸಿನಿಮಾನಲ್ಲಿ ಶಿವರಾಜ್ ಕುಮಾರ್, ಮೋಹನ್​ಲಾಲ್, ಜಾಕಿ ಶ್ರಾಫ್, ಸುನಿಲ್ ಅವರುಗಳು ಅತಿಥಿ ಪಾತ್ರದಲ್ಲಿ ನಟಿಸಿದ್ದರು. ತಮನ್ನಾ ಭಾಟಿಯಾ ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ರಮ್ಯಾ ಕೃಷ್ಣ ಅವರು ಸಹ ಇದ್ದರು. ‘ಜೈಲರ್’ ಸಿನಿಮಾನಲ್ಲಿದ್ದ ಅತಿಥಿ ಪಾತ್ರಗಳ ಜೊತೆಗೆ ಇನ್ನಷ್ಟು ಹೊಸ ಪಾತ್ರಗಳು ಈ ಬಾರಿ ಸೇರಿಕೊಳ್ಳಲಿವೆ. ಶಿವಣ್ಣ ಸಿನಿಮಾದಲ್ಲಿ ಇರುವುದು ಬಹುತೇಕ ಖಾತ್ರಿ ಆಗಿದೆ. ಮೋಹನ್​ಲಾಲ್, ಜಾಕಿ ಶ್ರಾಫ್ ಅವರೂ ಸಹ ಇರಲಿದ್ದಾರೆ. ಇವರುಗಳ ಜೊತೆಗೆ ತೆಲುಗು ಚಿತ್ರರಂಗದ ಸ್ಟಾರ್ ಹೀರೋ ನಂದಮೂರಿ ಬಾಲಕೃಷ್ಣ ಸಹ ಇರಲಿದ್ದಾರೆ ಎನ್ನಲಾಗುತ್ತಿದೆ.

ಅಸಲಿಗೆ 2023 ರ ‘ಜೈಲರ್’ ಸಿನಿಮಾನಲ್ಲಿಯೇ ಬಾಲಕೃಷ್ಣ ಅತಿಥಿ ಪಾತ್ರದಲ್ಲಿ ನಟಿಸಬೇಕಿತ್ತಂತೆ. ಆದರೆ ಅವರ ಪಾತ್ರ ಯಾಕೋ ಪರಿಪೂರ್ಣ ಅನಿಸುತ್ತಿಲ್ಲ ಎಂಬ ಕಾರಣಕ್ಕೆ ಅವರ ಪಾತ್ರವನ್ನು ಕೈಬಿಟ್ಟಿದ್ದರಂತೆ ನಿರ್ದೇಶಕ ನೆಲ್ಸನ್. ಈ ಬಾರಿ ಕಡ್ಡಾಯವಾಗಿ ಬಾಲಕೃಷ್ಣ ಅವರನ್ನು ಚಿತ್ರದಲ್ಲಿ ಸೇರಿಸಿಕೊಳ್ಳಲಾಗುತ್ತಿದೆ. ಪ್ರತಿಯೊಬ್ಬ ಅತಿಥಿ ಪಾತ್ರಧಾರಿಗಳಿಗೂ ಭರ್ಜರಿ ಎಂಟ್ರಿ ಸೀನ್​ಗಳನ್ನು ಇರಿಸಿದ್ದಾರಂತೆ ನಿರ್ದೇಶಕ ನೆಲ್ಸನ್.

ಇದನ್ನೂ ಓದಿ:ಅಣ್ಣಾವ್ರ ಸಮಾಧಿಗೆ ಪೂಜೆ ಮಾಡಿದ ನಟ ಶಿವರಾಜ್ ಕುಮಾರ್

‘ಜೈಲರ್’ ಸಿನಿಮಾ ನಿರ್ಮಾಣ ಮಾಡಿದ್ದ ಕಲಾನಿಧಿ ಮಾರನ್ ಅವರೇ ‘ಜೈಲರ್ 2’ ಸಿನಿಮಾಕ್ಕೂ ಬಂಡವಾಳ ಹೂಡಿದ್ದಾರೆ. ಆ ಸಿನಿಮಾದಲ್ಲಿ ಕೆಲಸ ಮಾಡಿದ್ದ ತಂತ್ರಜ್ಞರ ತಂಡವೇ ‘ಜೈಲರ್ 2’ಗೆ ಸಹ ಕೆಲಸ ಮಾಡಲಿದೆ. ಸಿನಿಮಾ ಅನ್ನು ತಮ್ಮ ಸಂಗೀತದಿಂದ ಮೇಲಕ್ಕೆತ್ತಿದ್ದ ಅನಿರುದ್ದ್ ರವಿಚಂದ್ರನ್ ಅವರು ‘ಜೈಲರ್ 2’ ಸಿನಿಮಾಕ್ಕೂ ಸಂಗೀತ ನೀಡಲಿದ್ದಾರೆ. ಸಿನಿಮಾದ ಚಿತ್ರೀಕರಣ ಈಗಾಗಲೇ ಕೇರಳದಲ್ಲಿ ಆರಂಭವಾಗಿದೆ. ಚಿತ್ರೀಕರಣದಲ್ಲಿ ನಟಿ ರಮ್ಯಾ, ಯೋಗಿ ಬಾಬು ಹಾಗೂ ಇನ್ನೂ ಕೆಲವರು ಭಾಗವಹಿಸಿದ್ದಾರೆ.

ಶಿವರಾಜ್ ಕುಮಾರ್ ಪ್ರಸ್ತುತ ಬುಚ್ಚಿಬಾಬು ಸನಾ ನಿರ್ದೇಶನದ ‘ಪೆದ್ದಿ’ ಸಿನಿಮಾನಲ್ಲಿ ರಾಮ್ ಚರಣ್ ಜೊತೆಗೆ ನಟಿಸುತ್ತಿದ್ದಾರೆ. ಅದರ ಜೊತೆಗೆ ಅವರ 131ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ಹೇಮಂತ್ ರಾವ್ ಸಿನಿಮಾ, ಪವನ್ ಒಡೆಯರ್ ಅವರ ಸಿನಿಮಾಗಳಲ್ಲಿಯೂ ನಟಿಸಲಿದ್ದಾರೆ. ಇದೆಲ್ಲದರ ನಡುವೆ ಸಣ್ಣ ಬಿಡುವು ಪಡೆದುಕೊಂಡು ‘ಜೈಲರ್ 2’ ಸಿನಿಮಾನಲ್ಲಿಯೂ ನಟಿಸಿ ಬರಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ