
2023ನೇ ವರ್ಷದಲ್ಲಿ ಭಾರತೀಯ ಚಿತ್ರರಂಗ (Indian Film Industry) ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದೆ. ಬಾಕ್ಸ್ ಆಫೀಸ್ನಲ್ಲಿ ಹಲವು ಚಿತ್ರಗಳು ಅಬ್ಬರಿಸಿವೆ. ಶಾರುಖ್ ಖಾನ್, ಸನ್ನಿ ಡಿಯೋಲ್, ಅಕ್ಷಯ್ ಕುಮಾರ್, ರಣವೀರ್ ಸಿಂಗ್, ಸಾಯಿ ಧರಂ ತೇಜ್, ಟೊವಿನೋ ಥಾಮಸ್ ಮುಂತಾದ ನಟರ ಸಿನಿಮಾಗಳು ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿವೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ತೆರೆಕಂಡಾಗ ಎಲ್ಲವನ್ನೂ ಚಿತ್ರಮಂದಿರಕ್ಕೆ ಹೋಗಿ ನೋಡುವುದು ಕಷ್ಟ. ಯಾಕೆಂದರೆ ಟಿಕೆಟ್ ದರ (Movie Tickets Price) ದುಬಾರಿ ಆಗಿರುತ್ತದೆ. ಅದರಲ್ಲೂ ಮಲ್ಟಿಪ್ಲೆಕ್ಸ್ನಲ್ಲಿ ಸಿನಿಮಾ ನೋಡುವುದರಿಂದ ಜೇಬಿಗೆ ದೊಡ್ಡ ಕತ್ತರಿಯೇ ಬೀಳುತ್ತದೆ ಎಂದು ಕೊರಗುವವರಿಗಾಗಿ ಇಲ್ಲೊಂದು ಬಂಪರ್ ಆಫರ್ ನೀಡಲಾಗಿದೆ. ‘ನ್ಯಾಷನಲ್ ಸಿನಿಮಾ ಡೇ’ (National Cinema Day) ಆಚರಣೆಯ ಪ್ರಯುಕ್ತ ಕೇವಲ 99 ರೂಪಾಯಿಗೆ ಸಿನಿಮಾ ಟಿಕೆಟ್ ಮಾರಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಇಲ್ಲಿದೆ ವಿವರ..
ಕೊವಿಡ್ ಬಂದ ಬಳಿಕ ಚಿತ್ರರಂಗ ಸೊರಗಿತ್ತು. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರಲು ಕೆಲವು ಪ್ಲ್ಯಾನ್ ಮಾಡಲಾಗಿತ್ತು. ಅದರಲ್ಲಿ ‘ನ್ಯಾಷನಲ್ ಸಿನಿಮಾ ಡೇ’ ಆಚರಣೆ ಕೂಡ ಪ್ರಮುಖವಾದದ್ದು. ಒಂದು ನಿರ್ದಿಷ್ಟ ದಿನದಂದು ದೇಶಾದ್ಯಂತ ಬಹುತೇಕ ಮಲ್ಟಿಪ್ಲೆಕ್ಸ್ ಮತ್ತು ಆಯ್ದ ಚಿತ್ರಮಂದಿರಗಳಲ್ಲಿ ಎಲ್ಲ ಸಿನಿಮಾಗಳ ಟಿಕೆಟ್ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದು ಇದರ ಉದ್ದೇಶ. ಈ ಪ್ರಯತ್ನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಹಾಗಾಗಿ ಈ ವರ್ಷ ಕೂಡ ‘ನ್ಯಾಷನಲ್ ಸಿನಿಮಾ ಡೇ’ ಆಚರಿಸಲು ಮಲ್ಟಿಪ್ಲೆಕ್ಸ್ ಮತ್ತು ಚಿತ್ರಮಂದಿರಗಳ ಮಾಲೀಕರು ತೀರ್ಮಾನಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ 2 ಸಾವಿರ ರೂಪಾಯಿಗೆ ಸೇಲ್ ಆಗ್ತಿದೆ ‘ಆಪನ್ಹೈಮರ್’ ಚಿತ್ರದ ಟಿಕೆಟ್; ಅಂಥ ವಿಶೇಷ ಇದರಲ್ಲಿ ಏನಿದೆ?
ಈ ವರ್ಷ ಅಕ್ಟೋಬರ್ 13ರಂದು ‘ನ್ಯಾಷನಲ್ ಸಿನಿಮಾ ಡೇ’ ಆಚರಿಸಲಾಗುತ್ತದೆ. ಅದರಲ್ಲಿ ಪಿವಿಆರ್, ಐನಾಕ್ಸ್, ಸಿನಿಪೊಲಿಸ್, ಮಿರಾಜ್, ಸಿಟಿಪ್ರೈಡ್, ಏಷ್ಯನ್, ಮೂವೀ ಟೈಮ್ ಮುಂತಾದ ಮಲ್ಟಿಪ್ಲೆಕ್ಸ್ಗಳು ಇದರಲ್ಲಿ ಭಾಗವಹಿಸುತ್ತಿವೆ. ಅ.13ರಂದು ದೇಶಾದ್ಯಂತ ಎಲ್ಲ ಸಿನಿಮಾಗಳ ಟಿಕೆಟ್ಗಳು ಕೇವಲ 99 ರೂಪಾಯಿಗೆ ಸಿಗಲಿವೆ. ಅಂದು ತಿಂಡಿ ಮತ್ತು ಪಾನೀಯಗಳ ಬೆಲೆಯಲ್ಲೂ ಇಳಿಕೆ ಮಾಡಲಾಗುತ್ತದೆ. ಇದರಿಂದ ಸಿನಿಪ್ರಿಯರಿಗೆ ಅನುಕೂಲ ಆಗಲಿದೆ. ಅಂದು ಅಪಾರ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವ ನಿರೀಕ್ಷೆ ಇದೆ.
NATIONAL CINEMA DAY ON 13 OCT… TICKETS PRICED AT ₹ 99/-… 4000+ SCREENS TO PARTICIPATE… Details in the OFFICIAL STATEMENT issued by #MAI. pic.twitter.com/L3ewzlvNgI
— taran adarsh (@taran_adarsh) September 21, 2023
ಕೊರೊನಾ ಹಾವಳಿಯಿಂದ ಉಂಟಾದ ಲಾಕ್ಡೌನ್ ಬಳಿಕ ಜನರು ಒಟಿಟಿಗೆ ಹೆಚ್ಚು ಒಗ್ಗಿಕೊಂಡರು. ಮನೆಯಲ್ಲೇ ಕುಳಿತು ಹೊಸ ಸಿನಿಮಾಗಳನ್ನು ನೋಡಲು ಬಯಸುವವರ ಸಂಖ್ಯೆ ಹೆಚ್ಚಿತು. ಅದರ ನಡುವೆಯೂ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ಹೊಸ ಸಿನಿಮಾ ರಿಲೀಸ್ ಆಗುವುದು ನಿಂತಿಲ್ಲ. ಎಂದಿನಂತೆ ಸ್ಟಾರ್ ನಟರ ಸಿನಿಮಾಗಳು ಅಬ್ಬರಿಸುತ್ತಿವೆ. ಆದರೆ ದುಬಾರಿ ಬೆಲೆ ಎಂಬ ಕಾರಣಕ್ಕೆ ಅನೇಕರು ಮಲ್ಟಿಪ್ಲೆಕ್ಸ್ಗೆ ಬರಲು ಹಿಂದೇಟು ಹಾಕುವುದುಂಟು. ಈಗ ‘ನ್ಯಾಷನಲ್ ಸಿನಿಮಾ ಡೇ’ ಪ್ರಯುಕ್ತ 99 ರೂಪಾಯಿಗೆ ಟಿಕೆಟ್ ಸಿಗುವುದರಿಂದ ಅಂದು ಬಹುತೇಕ ಕಡೆಗಳಲ್ಲಿ ಹೌಸ್ ಫುಲ್ ಆಗುವ ಸಾಧ್ಯತೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:55 pm, Thu, 21 September 23