ಪ್ರಭಾಸ್ ಎದುರು ನಾಯಕಿಯಾಗಿ ಬೆಂಗಳೂರಲ್ಲಿ ಬೆಳೆದ ಹುಡುಗಿ: ಯಾವ ಸಿನಿಮಾ?
Prabhas: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ಹೊಸ ಸಿನಿಮಾಕ್ಕೆ ಬೆಂಗಳೂರಿನಲ್ಲಿ ಓದಿ ಬೆಳೆದ ಹುಡುಗಿ ನಾಯಕಿಯಾಗಿ ಆಯ್ಕೆ ಆಗಿದ್ದಾರೆ! ಯಾರಾಕೆ?
ಪ್ರಭಾಸ್ (Prabhas) ಈಗ ಪ್ಯಾನ್ ಇಂಡಿಯಾ (Pan India) ಸ್ಟಾರ್ ಪಟ್ಟಕ್ಕೂ ಮಿಗಿಲಾದ ಖ್ಯಾತಿ ಗಳಿಸಿಬಿಟ್ಟಿದ್ದಾರೆ. ಅವರ ನಟನೆಯ ‘ಕಲ್ಕಿ’ ಸಿನಿಮಾ ಹಾಲಿವುಡ್ ಮೇಲೆ ಕಣ್ಣಿಟ್ಟಿದೆ. ಪ್ರಭಾಸ್ ಜೊತೆ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಹಲವು ನಟ-ನಟಿಯರು ತುದಿ ಗಾಲಲ್ಲಿ ನಿಂತಿದ್ದಾರೆ. ಹೀಗಿರುವಾಗ ಅವರ ಹೊಸ ಸಿನಿಮಾದಲ್ಲಿ ನಾಯಕಿಯಾಗುವ ಅವಕಾಶ ಬೆಂಗಳೂರಿನಲ್ಲಿ ಬೆಳೆದ ಹುಡುಗಿಗೆ ದೊರಕಿದೆ.
ಹೈದರಾಬಾದ್ನಲ್ಲಿ ಜನಿಸಿ, ಬೆಂಗಳೂರಿನಲ್ಲಿ ಬೆಳೆದ ನಟಿ ನಿಧಿ ಅಗರ್ವಾಲ್ ಪ್ರಭಾಸ್ರ ಹೊಸ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಸದ್ಯಕ್ಕೆ ‘ಕಲ್ಕಿ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಪ್ರಭಾಸ್, ಆ ಬಳಿಕ ಮಾರುತಿ ನಿರ್ದೇಶನದ ‘ರಾಜಾ ಡಿಲಕ್ಸ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ನಿಧಿ ಅಗರ್ವಾಲ್ ನಟಿಸಲಿದ್ದಾರೆ. ಈ ವಿಷಯವನ್ನು ನಿರ್ದೇಶಕ ಮಾರುತಿ ಖಚಿತಪಡಿಸಿದ್ದಾರೆ.
ಆಗಸ್ಟ್ 17ರಂದು ನಿಧಿ ಅಗರ್ವಾಲ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ಸಮಯದಲ್ಲಿ ನಿರ್ದೇಶಕ ಮಾರುತಿ ನಿಧಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುವ ಜೊತೆಗೆ ತಮ್ಮ ಮುಂದಿನ ಸಿನಿಮಾ ‘ರಾಜಾ ಡಿಲಕ್ಸ್’ನಲ್ಲಿ ನಿಧಿ ಅಗರ್ವಾಲ್ ನಾಯಕಿ ಎಂಬ ವಿಷಯವನ್ನು ಬಹಿರಂಗಗೊಳಿಸಿದ್ದಾರೆ. ನಿಧಿಗೆ ಇದೇ ಮೊದಲ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಆಗಿರಲಿದ್ದು, ಸಹಜವಾಗಿಯೇ ಸಖತ್ ಥ್ರಿಲ್ ಆಗಿದ್ದಾರೆ ನಟಿ.
ಇದನ್ನೂ ಓದಿ:ಪ್ರಭಾಸ್ ಎದುರು ಸ್ಪರ್ಧೆಗೆ ಇಳಿದ ಅಗ್ನಿಹೋತ್ರಿ; ‘ದಿ ವ್ಯಾಕ್ಸಿನ್ ವಾರ್’ ರಿಲೀಸ್ ಡೇಟ್ ಘೋಷಣೆ
ಬೆಂಗಳೂರಿನಲ್ಲಿಯೇ ಶಾಲೆ, ಕಾಲೇಜು ಕಲಿತ ನಟಿ ನಿಧಿ ಅಗರ್ವಾಲ್ ನಟನೆಗೆ ಬೇಕಾದ ನೃತ್ಯ ಇನ್ನಿತರೆಗಳ ಕಲಿಕೆಯನ್ನು ಮಾಡಿದ್ದು ಸಹ ಬೆಂಗಳೂರಿನಲ್ಲಿಯೇ. ಬಾಲಿವುಡ್ನ ‘ಮುನ್ನಾ ಮೈಖಲ್’ ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ನಿಧಿ ಅಗರ್ವಾಲ್ ಆ ನಂತರ ನಟಿಸಿದ್ದೆಲ್ಲ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿಯೇ. ನಿಧಿ ಪ್ರಸ್ತುತ ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದೆ ಎನ್ನಲಾಗುತ್ತಿದೆ.
ಇನ್ನು ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದು ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದಾರೆ. ಅದಾದ ಬಳಿಕ ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ‘ಕಲ್ಕಿ’ ಸಿನಿಮಾ ಬಿಡುಗಡೆ ಆಗಲಿದೆ. ಈ ನಡುವೆ ಇದೇ ವರ್ಷಾಂತ್ಯಕ್ಕೆ ವಿದೇಶಕ್ಕೆ ತೆರಳಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೂ ಒಳಗಾಗಲಿದ್ದಾರೆ ಪ್ರಭಾಸ್. ಮುಂದಿನ ಅರ್ಧವರ್ಷದ ಬಳಿಕ ಪ್ರಭಾಸ್ರ ಹೊಸ ಸಿನಿಮಾ ‘ರಾಜಾ ಡಿಲಕ್ಸ್’ ಪ್ರಾರಂಭವಾಗಲಿದೆ. ಅದೇ ಸಮಯಕ್ಕೆ ‘ಸ್ಪಿರಿಟ್’ ಹೆಸರಿನ ಮತ್ತೊಂದು ಸಿನಿಮಾದಲ್ಲಿಯೂ ಪ್ರಭಾಸ್ ನಟಿಸಲಿದ್ದಾರೆ. ‘ಸ್ಪಿರಿಟ್’ ಸಿನಿಮಾವನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ