ಟಿಡಿಪಿ ಪಕ್ಷ ಸೇರಿಕೊಂಡರೇ ನಟ ನಿಖಿಲ್? ವೈರಲ್ ಫೋಟೊನ ಅಸಲಿಯತ್ತೇನು?
Nikhil Siddhartha: ಹಲವು ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿರುವ ನಟ ನಿಖಿಲ್ ಸಿದ್ಧಾರ್ಥ್ ರಾಜಕೀಯಕ್ಕೆ ಧುಮುಕಿದರೇ? ಟಿಡಿಪಿ ಮುಖಂಡ ನಾರಾ ಲೋಕೇಶ್, ನಿಖಿಲ್ಗೆ ಪಕ್ಷದ ಶಾಲು ತೊಡಿಸುತ್ತಿರುವ ಚಿತ್ರ ವೈರಲ್ ಆಗಿದೆ. ಆದರೆ ರಾಜಕೀಯ ಪ್ರವೇಶವನ್ನು ನಿಖಿಲ್ ಅಲ್ಲಗಳೆದಿದ್ದಾರೆ.
ಹಿಂದುತ್ವದ ಬಗ್ಗೆ ಅಭಿಮಾನ ಹೊಂದಿರುವ, ಹಿಂದೂಪರ ಎನ್ನಬಹುದಾದಂತೆ ವಿಷಯಗಳನ್ನೇ ಆರಿಸಿಕೊಂಡು ಸಿನಿಮಾ ಮಾಡುತ್ತಿರುವ ಟಾಲಿವುಡ್ (Tollywood) ನಟ ನಿಖಿಲ್ ಸಿದ್ಧಾರ್ಥ್, ಇದೀಗ ರಾಜಕೀಯಕ್ಕೆ ಧುಮುಕಿದ್ದಾರೆ ಎಂಬ ಸುದ್ದಿಗಳು ಜೋರಾಗಿಯೇ ಹರಿದಾಡುತ್ತಿವೆ. ಈ ಹಿಂದೆ ಅಮಿತ್ ಶಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಇನ್ನಿತರೆ ಕೆಲವು ಬಿಜೆಪಿ ಪ್ರಮುಖ ನಾಯಕರನ್ನು ಭೇಟಿ ಆಗಿದ್ದ ನಟ ನಿಖಿಲ್, ಬಿಜೆಪಿ ಸೇರುತ್ತಾರೆ ಎಂಬ ಮಾತು ಮೊದಲಿನಿಂದಲೂ ಇತ್ತು. ಆದರೆ ಇದೀಗ ಬಿಜೆಪಿಯ ಮಿತ್ರ ಪಕ್ಷ ಟಿಡಿಪಿಯನ್ನು ನಿಖಿಲ್ ಸೇರ್ಪಡೆಗೊಂಡಿದ್ದಾರೆ ಎನ್ನಲಾಗುತ್ತಿದ್ದು. ಅದಕ್ಕೆ ಪೂರಕವಾಗಿ, ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ ಅವರು ನಿಖಿಲ್ಗೆ ಟಿಡಿಪಿ ಪಕ್ಷ ಶಾಲು ತೊಡಿಸುತ್ತಿರುವ ಚಿತ್ರ ಸಖತ್ ವೈರಲ್ ಆಗಿದೆ.
ಚಿತ್ರ ವೈರಲ್ ಆದ ಬಳಿಕ ನಿಖಿಲ್ ಸಿದ್ಧಾರ್ಥ್ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ತಾವು ಟಿಡಿಪಿ ಪಕ್ಷ ಸೇರಿಲ್ಲವೆಂದಿದ್ದಾರೆ. ಚಿತ್ರದ ಹಿಂದಿನ ಕತೆಯನ್ನು ಸಹ ವಿವರಿಸಿದ್ದಾರೆ. ‘ನನ್ನ ಚಿಕ್ಕಪ್ಪ ಎಂಎಂ ಕೊಂಡಯ್ಯ ಯಾದವ್ ಅವರಿಗೆ ವಿಧಾನಸಭೆ ಟಿಕೆಟ್ ನೀಡಿದ್ದಕ್ಕೆ ಧನ್ಯವಾದ ಅರ್ಪಿಸಲೆಂದು ನಾನು ನಾರಾ ಲೋಕೇಶ್ ಅವರನ್ನು ಭೇಟಿ ಆಗಿದ್ದೆ. ಆ ಸಮಯದಲ್ಲಿ ತೆಗೆದ ಚಿತ್ರವಿದು. ಇದಕ್ಕೂ ಹೆಚ್ಚಿನದ್ದು ಇನ್ನೇನೂ ಇಲ್ಲ’ ಎಂದಿದ್ದಾರೆ ನಿಖಿಲ್. ನಟನ ಚಿಕ್ಕಪ್ಪ ಶಾಸಕ ಎಂಎಂ ಕೊಂಡಯ್ಯ ಯಾದವ್ ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಚಿರಾಲ ಕ್ಷೇತ್ರದಿಂದ ಟಿಡಿಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ. ನಿಖಿಲ್ ಸಿದ್ಧಾರ್ಥ್ ಸಹ ಅವರ ಪರ ಪ್ರಚಾರ ಮಾಡಲಿದ್ದಾರೆ.
ಇದನ್ನೂ ಓದಿ:ಆಂಧ್ರ ಪ್ರದೇಶ ಚುನಾವಣೆಯಲ್ಲಿ ಪಿಠಾಪುರಂನಿಂದ ಕಣಕ್ಕಿಳಿಯಲಿದ್ದಾರೆ ಪವನ್ ಕಲ್ಯಾಣ್
ಹಿಂದೂ ಪೌರಾಣಿಕ ಕತೆಗಳ ಬಗ್ಗೆ ಮಹಾನತೆ ಬಗ್ಗೆ ಕತೆ ಹೊಂದಿದ್ದ ‘ಕಾರ್ತಿಕೇಯ 2’ ಸಿನಿಮಾದಲ್ಲಿ ನಿಖಿಲ್ ನಟಿಸಿದ್ದರು. ಈ ಸಿನಿಮಾ ಭಾರಿ ದೊಡ್ಡ ಹಿಟ್ ಆಯ್ತು. ಈ ಸಿನಿಮಾ ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರಗಳಲ್ಲಿಯೂ ಯಶಸ್ವಿಯಾಯಿತು. ಅದಾದ ಬಳಿಕ ಸುಭಾಷ್ ಚಂದ್ರ ಬೋಸ್ರ ಸಾವಿನ ರಹಸ್ಯ ಹುಡುಕಿ ಹೊರಟ ಗೂಢಚಾರಿಯ ಕತೆ ಹೊಂದಿದ್ದ ‘ಸ್ಪೈ’ ಸಿನಿಮಾ ಮಾಡಿದರು. ಅದು ಫ್ಲಾಪ್ ಆಯ್ತು. ಅದಾದ ಬಳಿಕ ಈಗ ‘ಸ್ವಯಂಭು’ ಹೆಸರಿನ ಪೌರಾಣಿಕ ಕತೆಯುಳ್ಳ ಸಿನಿಮಾ ಮಾಡುತ್ತಿದ್ದಾರೆ. ಅದರ ಜೊತೆಗೆ ಸ್ವಾತಂತ್ರ್ಯ ಪೂರ್ವದ ಕತೆ ಹೊಂದಿರುವ ‘ದಿ ಇಂಡಿಯಾ ಹೌಸ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದನ್ನು ರಾಮ್ ಚರಣ್ ನಿರ್ಮಾಣ ಮಾಡುತ್ತಿದ್ದಾರೆ.
ಆಂಧ್ರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಹವಾ ಜೋರಾಗಿಯೇ ಎದ್ದಿದೆ. ನಟ ಪವನ್ ಕಲ್ಯಾಣ್ ಮುಂದಾಳತ್ವದ ಜನಸೇನಾ, ಚಂದ್ರಬಾಬು ನಾಯ್ಡು ಮುಂದಾಳತ್ವದ ಟಿಡಿಪಿ, ಬಿಜೆಪಿ ಜೊತೆ ಸೇರಿಕೊಂಡು ಒಟ್ಟಿಗೆ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಎದುರಿಸುತ್ತಿದೆ. ಸಿಎಂ ಜಗನ್ ಅನ್ನು ಹೇಗಾದರೂ ಮಾಡಿ ಅಧಿಕಾರದಿಂದ ಕೆಳಗೆ ಇಳಿಸಬೇಕೆಂದು ಪವನ್ ಕಲ್ಯಾಣ್ ಹಾಗೂ ಚಂದ್ರಬಾಬು ನಾಯ್ಡು ನಿರ್ಧಾರ ಮಾಡಿದ್ದಾರೆ. ಪವನ್ ಕಲ್ಯಾಣ್, ರೋಜಾ ಸೇರಿದಂತೆ ಇನ್ನೂ ಕೆಲವು ಸಿನಿಮಾ ನಟ-ನಟಿಯರು ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ