ಸೌತ್ ಸಿನಿರಂಗದ ಚೆಂದುಳ್ಳಿ ಚೆಲುವೆ ನಿತ್ಯಾ ಮೆನನ್ (Nithya Menen) ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿಯೊಂದು ಇತ್ತೀಚೆಗಷ್ಟೇ ವೈರಲ್ ಆಗಿತ್ತು. ಆದರೆ ಈ ಎಲ್ಲಾ ವದಂತಿಗಳನ್ನು ಮೈನಾ ಸುಂದರಿ ಅಲ್ಲೆಗಳೆದಿದ್ದರು. ಇದಾಗ್ಯೂ ಈ ಸುದ್ದಿ ಹೇಗೆ ಹುಟ್ಟಿಕೊಂಡಿತು? ಎಂಬುದರ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿರಲಿಲ್ಲ. ಆದರೀಗ ಇದರ ಹಿಂದಿರುವ ವ್ಯಕ್ತಿ ಯೂಟ್ಯೂಬ್ ಚಾನೆಲ್ವೊಂದರ ಸಿನಿಮಾ ವಿಮರ್ಶಕ ಎನ್ನಲಾಗುತ್ತಿದೆ. ಸಂತೋಷ್ ವರ್ಕಿ ಎನ್ನುವ ವ್ಯಕ್ತಿಯು ನಟಿಯ ಹೆಸರಿನಲ್ಲಿ ನಾನಾ ಸುದ್ದಿಗಳನ್ನು ಹರಿಬಿಡುತ್ತಿದ್ದ. ಅಲ್ಲದೆ ಇದೀಗ ನಿತ್ಯಾ ಮೆನನ್ರನ್ನು ಮದುವೆಯಾಗುವುದಾಗಿ ಹೇಳಿಕೊಂಡು ಓಡಾಡುತ್ತಿದ್ದಾರೆ.
ಅಷ್ಟೇ ಯಾಕೆ ನಟಿಗೆ ಕರೆ ಮಾಡಿ ಮದುವೆಯಾಗುವಂತೆ ಪೀಡಿಸುತ್ತಿದ್ದಾನಂತೆ. ಆರಂಭದಲ್ಲಿ ಅಭಿಮಾನಿಯೊಬ್ಬರ ಅಭಿಲಾಷೆ ಎಂದು ಸುಮ್ಮನಾಗಿದ್ದ ನಟಿಗೆ ಆ ಬಳಿಕ ಆತನಿಂದ ಕಿರುಕುಳ ಶುರುವಾಗಿದೆ. ಇದರಿಂದ ಬೆಸತ್ತ ನಟಿಯು ಆತನ ನಂಬರ್ ಅನ್ನು ಬ್ಲಾಕ್ ಮಾಡಿದ್ದಾರೆ. ಇದಾದ ಬಳಿಕವಷ್ಟೇ ಅಸಲಿಯಾಟ ಶುರುವಾಗಿದ್ದು.
ಅಂದರೆ ಸಂತೋಷ್ ವರ್ಕಿ ಬರೋಬ್ಬರಿ 30 ನಂಬರ್ಗಳಿಂದ ನಟಿಗೆ ಕಾಲ್ ಮಾಡಿದ್ದ. ಪ್ರತಿ ಬಾರಿ ನಿತ್ಯಾ ಮೆನನ್ ನಂಬರ್ ಬ್ಲಾಕ್ ಮಾಡುತ್ತಿದ್ದರೆ, ಅತ್ತ ಕಡೆಯಿಂದ ಹೊಸ ನಂಬರ್ ಮೂಲಕ ಆತ ಕರೆ ಮಾಡುತ್ತಿದ್ದ. ಮೊದಲು ಹುಡುಗನ ಭವಿಷ್ಯ ಹಾಳಾಗಬಾರದು ಎಂಬ ಉದ್ದೇಶದಿಂದ ನಟಿ ಪೊಲೀಸರಿಗೆ ದೂರು ನೀಡಿರಲಿಲ್ಲ.
ಆದರೆ ಯಾವಾಗ ಟಾರ್ಚರ್ ಜಾಸ್ತಿ ಆಯ್ತೋ, ಕುಟುಂಬಸ್ಥರು ದೂರು ನೀಡುವಂತೆ ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲದೆ ನಿತ್ಯಾ ಮೆನನ್ನ ನಾನು ಪ್ರೀತಿಸುತ್ತಿದ್ದು, ನಾವಿಬ್ಬರೂ ಮದುವೆಯಾಗುತ್ತಿರುವುದಾಗಿ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಸಿನಿಮಾ ವಿಮರ್ಶಕನ ವಿರುದ್ದ ದೂರು ದಾಖಲಿಸಲು ಮೈನಾ ಸುಂದರಿಗೆ ಮುಂದಾಗಿದ್ದಾರೆ.
ಸದ್ಯ ನಿತ್ಯಾ ಮೆನನ್ ಅಭಿನಯದ 19(1) ಚಿತ್ರ ಬಿಡುಗಡೆಯಾಗಿದ್ದು, ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದ ಬೆನ್ನಲ್ಲೇ ಇದೀಗ ವಿಮರ್ಶಕನ ರೂಪದಲ್ಲಿ ನಟಿಗೆ ಹೊಸ ಸಮಸ್ಯೆ ಎದುರಾಗಿದೆ. ಕನ್ನಡದಲ್ಲಿ ಸೆವೆನ್ ಓ ಕ್ಲಾಕ್, ಜೋಶ್, ಮೈನಾ ಸೇರಿದಂತೆ ಪ್ರಮುಖ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ನಿತ್ಯಾ ಮೆನನ್ ಕೊನೆಯ ಬಾರಿ ಸ್ಯಾಂಡಲ್ವುಡ್ ಸಿನಿಮಾದಲ್ಲಿ ಅಭಿನಯಿಸಿದ್ದು ಕೋಟಿಗೊಬ್ಬ- 2 ಚಿತ್ರದಲ್ಲಿ. ಇದಾದ ಬಳಿಕ ತಮಿಳು, ಮಲಯಾಳಂ, ತೆಲುಗು ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಟಿ ಶೀಘ್ರದಲ್ಲೇ ಮತ್ತೊಮ್ಮೆ ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.