ನಾಯಿ ಕಚ್ಚಿದರೆ ದೊಡ್ಡ ವಿಷಯ ಮಾಡಬೇಡಿ: ಇಂಥ ಹೇಳಿಕೆ ನೀಡಿ ಟೀಕೆಗೆ ಗುರಿಯಾದ ನಟಿ

ಟಾಲಿವುಡ್ ಮತ್ತು ಕಾಲಿವುಡ್​​ನ ಖ್ಯಾತ ನಟಿ ನಿವೇತಾ ಪೇತುರಾಜ್ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ. ಬೀದಿ ನಾಯಿಗಳ ಪರವಾಗಿ ಮಾತನಾಡುವಾಗ ಅವರು ನೀಡಿದ ಹೇಳಿಕೆಯು ತೀವ್ರ ಟೀಕೆಗೆ ಗುರಿ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ನಿವೇತಾ ಅವರ ವಿಡಿಯೋ ವೈರಲ್ ಆಗಿದ್ದು, ಜನರು ಖಂಡಿಸುತ್ತಿದ್ದಾರೆ.

ನಾಯಿ ಕಚ್ಚಿದರೆ ದೊಡ್ಡ ವಿಷಯ ಮಾಡಬೇಡಿ: ಇಂಥ ಹೇಳಿಕೆ ನೀಡಿ ಟೀಕೆಗೆ ಗುರಿಯಾದ ನಟಿ
Nivetha Pethuraj

Updated on: Nov 25, 2025 | 6:13 PM

ಬೀದಿ ನಾಯಿಗಳಿಂದ (Stray Dog) ಆಗುತ್ತಿರುವ ಸಮಸ್ಯೆಗಳ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಅಲ್ಲದೇ, ಬೀದಿ ನಾಯಿಗಳನ್ನು ಕಾಪಾಡಬೇಕು ಎಂಬ ಬೇಡಿಕೆ ಕೂಡ ಇದೆ. ಈ ಸಂದರ್ಭದಲ್ಲಿ ನಟಿ ನಿವೇತಾ ಪೇತುರಾಜ್ ಅವರು ನೀಡಿರುವ ಒಂದು ಹೇಳಿಕೆಯಿಂದ ವಿವಾದ ಸೃಷ್ಟಿ ಆಗಿದೆ. ನಿವೇತಾ ಪೇತುರಾಜ್ (Nivetha Pethuraj) ಅವರು ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಫೇಮಸ್ ಆಗಿದ್ದಾರೆ. ಚೆನ್ನೈನಲ್ಲಿ ಬೀದಿನಾಯಿಗಳ ಪರವಾಗಿ ನಡೆದ ಅಭಿಯಾನದಲ್ಲಿ ಅವರು ಪಾಲ್ಗೊಂಡಿದ್ದರು. ಈ ವೇಳೆ ಅವರು ಮಾತನಾಡಿದ ವಿಡಿಯೋ ವೈರಲ್ ಆಗಿದೆ. ‘ನಾಯಿ ಕಚ್ಚಿದನ್ನು ದೊಡ್ಡ ವಿಷಯ ಮಾಡುವ ಅವಶ್ಯಕತೆ ಇಲ್ಲ’ ಎಂದು ನಿವೇತಾ ಪೇತುರಾಜ್ ಅವರು ಹೇಳಿದ್ದಾರೆ.

‘ಬೀದಿ ನಾಯಿಗಳ ಬಗ್ಗೆ ಸಾಕಷ್ಟು ಭಯ ಹುಟ್ಟಿಸಲಾಗುತ್ತಿದೆ. ಒಂದು ವೇಳೆ ನಾಯಿ ಕಚ್ಚಿದರೆ ಅದನ್ನು ದೊಡ್ಡ ವಿಷಯ ಮಾಡಬೇಡಿ ಹಾಗೂ ಭಯ ಹರಡಬೇಡಿ. ಹಾಗಂತ ನಾಯಿ ಕಚ್ಚಿದರೆ ಪರವಾಗಿಲ್ಲ ಅಂತ ನಾನು ಹೇಳುತ್ತಿಲ್ಲ. ರೇಬಿಸ್ ಹರಡಿದರೆ ತುಂಬಾ ಕೆಟ್ಟಿದ್ದು. ಅದರಿಂದ ಆರೋಗ್ಯ ಕೆಡುತ್ತದೆ. ಆದರೆ ಭಯ ಹರಡುವುದರ ಬದಲು ಪರಿಹಾರ ಹುಡುಕೋಣ’ ಎಂದು ನಿವೇತಾ ಪೇತುರಾಜ್ ಅವರು ಹೇಳಿದ್ದಾರೆ.

‘ಬಾಲ್ಯದಿಂದಲೇ ಜನರಿಗೆ ಕರುಣೆಯ ಬಗ್ಗೆ ತಿಳಿಸಿಕೊಡಬೇಕು. ಯಾರಾದರೂ ತಪ್ಪು ಮಾಡಿದರೆ ಅವರನ್ನು ಕೊಂದುಬಿಡಿ ಅಂತ ನಾವು ಹೇಳಲ್ಲ. ಅದೇ ತಪ್ಪನ್ನು ನಾವು ಪ್ರಾಣಿಗಳ ವಿಷಯದಲ್ಲೂ ಮಾಡಬಾರದು. ಲಸಿಕೆ ಹಾಕಿಸುವುದು, ಸಂತಾನ ಹರಣ ಮಾಡಿಸುವುದು ಮುಂತಾದ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕರುಣೆ ಮತ್ತು ಜಾಗೃತಿ ಮೂಡಿಸಬೇಕು’ ಎಂದು ನಿವೇತಾ ಪೇತುರಾಜ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಬೀದಿ ನಾಯಿಗಳ ಹಾವಳಿಯಿಂದ ಸಮಸ್ಯೆ ಅನುಭವಿಸಿರುವ ಸಾಕಷ್ಟು ಮಂದಿ ಇದ್ದಾರೆ. ಅಲ್ಲದೇ ಅನೇಕ ನಗರಗಳಲ್ಲಿ ಬೀದಿ ನಾಯಿಗಳ ಹಾವಳಿ ಜಾಸ್ತಿ ಆಗಿದೆ. ರೇಬಿಸ್​ನಿಂದ ಪ್ರಾಣಹಾನಿ ಕೂಡ ಆಗುತ್ತಿದೆ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ನಿವೇತಾ ಪೇತುರಾಜ್ ಅವರ ಹೇಳಿಕೆಯನ್ನು ಹಲವರು ತೀವ್ರವಾಗಿ ಖಂಡಿಸುತ್ತಿದ್ದಾರೆ.

ಇದನ್ನೂ ಓದಿ: ಬೀದಿ ನಾಯಿಗಳ ಹಾವಳಿ: ವರದಿ ಸಲ್ಲಿಸದ ಕರ್ನಾಟಕ ಸೇರಿ ಇತರ ರಾಜ್ಯಗಳಿಗೆ ಸುಪ್ರೀಂಕೋರ್ಟ್​ ಛೀಮಾರಿ

‘ನಿವೇತಾ ಪೇತುರಾಜ್ ಅವರು ಶ್ರೀಮಂತರು. ಯಾವಾಗಲೂ ಕಾರಿನಲ್ಲಿ ಸುತ್ತಾಡುತ್ತಾರೆ. ಅವರಿಗೆ ಬೀದಿ ನಾಯಿ ಹಾವಳಿ ತಿಳಿಯುವುದಿಲ್ಲ. ರಸ್ತೆಯಲ್ಲಿ ನಡೆದುಕೊಂಡು ಹೋಗಿದ್ದರೆ ಕಷ್ಟ ಅರ್ಥ ಆಗುತ್ತಿತ್ತು. ಅಲ್ಲದೇ ನಿವೇತಾ ಅವರು ಹೆಚ್ಚು ಕಾಲ ದುಬೈನಲ್ಲಿ ವಾಸಿಸುತ್ತಾರೆ. ಬೀದಿ ನಾಯಿಗಳಿಂದ ಯಾವಾಗಲೂ ಸಮಸ್ಯೆ ಆಗುವುದು ಬಡವರಿಗೆ ಹೊರತು ಕಾರಿನಲ್ಲಿ ಓಡಾಡುವ ಶ್ರೀಮಂತರಿಗಲ್ಲ’ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.