
97ನೇ ಸಾಲಿನ ಆಸ್ಕರ್ ಅವಾರ್ಡ್ ಕಾರ್ಯಕ್ರಮ ಅಮೆರಿಕದ ಲಾಸ್ ಏಂಜಲೀಸ್ನ ಡಾಲ್ಬಿ ಥಿಯೇಟರ್ನಲ್ಲಿ ನಡೆದಿದೆ. ಅಮೆರಿಕದಲ್ಲಿ ಉಂಟಾದ ಕಾಡ್ಗಿಚ್ಚಿನ ಕಾರಣಕ್ಕೆ ಆಸ್ಕರ್ ಅವಾರ್ಡ್ ನಡೆಯುವುದಿಲ್ಲ ಎಂದು ಹೇಳಲಾಗಿತ್ತು. ಆದರೆ, ಅದ್ದೂರಿಯಾಗಿಯೇ ಕಾರ್ಯಕ್ರಮ ನಡೆದಿದೆ. ವಿವಿಧ ವಿಭಾಗಗಳಲ್ಲಿ ಅವಾರ್ಡ್ ನೀಡಲಾಗಿದೆ. ಅದೇ ರೀತಿ ಕಾಡ್ಗಿಚ್ಚಿನ ವಿರುದ್ಧ ಹೋರಾಡಿದ ಅಗ್ನಿಶಾಮಕ ದಳದವರಿಗೆ ವೇದಿಕೆ ಮೇಲೆ ಗೌರವ ಸೂಚಿಸಲಾಗಿದೆ.
ಭಾನುವಾರ ರಾತ್ರಿ (ಭಾರತೀಯ ಕಾಲಮಾನ ಸೋಮವಾರ (ಮಾರ್ಚ್ 3) ಮುಂಜಾನೆ 5.30) ಆಸ್ಕರ್ ಅವಾರ್ಡ್ ಕಾರ್ಯಕ್ರಮ ನಡೆದಿದೆ. ಜಿಯೋ ಹಾಟ್ಸ್ಟಾರ್ನಲ್ಲಿ ಕಾರ್ಯಕ್ರಮ ವೀಕ್ಷಣೆಗೆ ಲಭ್ಯವಿದೆ. ಭಾರತದ ಯಾವುದೇ ಸಿನಿಮಾಗಳು ಈ ಬಾರಿ ಆಸ್ಕರ್ ಅವಾರ್ಡ್ ಗೆದ್ದಿಲ್ಲ. ಪ್ರಿಯಾಂಕಾ ಚೋಪ್ರಾ ನಿರ್ಮಾಣದ ‘ಅನುಜಾ’ ಶಾರ್ಟ್ ಫಿಲ್ಮ್ ‘ಬೆಸ್ಟ್ ಲೈವ್ ಆ್ಯಕ್ಷನ್ ಶಾರ್ಟ್ ಫಿಲ್ಮ್’ ವಿಭಾಗದಲ್ಲಿ ಇತ್ತು. ಆದರೆ, ಇದಕ್ಕೆ ಅವಾರ್ಡ್ ಸಿಕ್ಕಿಲ್ಲ ಅನ್ನೋದು ಬೇಸರದ ವಿಚಾರ. ನಟಿ ಪ್ರಿಯಾಂಕಾ ಚೋಪ್ರಾ, ಆಸ್ಕರ್ ಗೆದ್ದಿರೋ ‘ದಿ ಎಲಿಫೆಂಟ್ ವಿಸ್ಪರ್ಸ್’ನ ನಿರ್ಮಾಪಕಿ ಗುನೀತ್ ಮೊಂಗಾ ಹಾಗೂ ಇನ್ನಿತರರು ನಿರ್ಮಿಸಿದ ‘ಅನುಜಾ’ ಲೈವ್ ಆಕ್ಷನ್ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ನಾಮಿನೇಟ್ ಆಗಿತ್ತು. ಇದನ್ನು ಆ್ಯಡಮ್ ಜೆ ಗ್ರಾವೆಸ್ ನಿರ್ದೇಶನ ಮಾಡಿದ್ದರು, ದೆಹಲಿಯ ಸ್ಲಂನ ಇಬ್ಬರು ಬಾಲಕಿಯರ ಕತೆಯನ್ನು ಈ ಕಿರುಚಿತ್ರ ಒಳಗೊಂಡಿದೆ.
ಇದನ್ನೂ ಓದಿ: ಆಸ್ಕರ್ಗೆ ನಾಮಿನೇಟ್ ಆದ ಪ್ರಿಯಾಂಕಾ ಚೋಪ್ರಾ ನಿರ್ಮಾಣದ ಕಿರುಚಿತ್ರ
‘ಐ ಆಮ್ ನಾಟ್ ಎ ರೊಬಾಟ್’, ‘ಎ ಲಿಯನ್’, ‘ದಿ ಲಾಸ್ಟ್ ರೇಂಜರ್’, ‘ದಿ ಮ್ಯಾನ್ ಹು ಕುಡ್ ನಾಟ್ ರಿಮೇನ್ ಸೈಲೆಂಟ್’ ಕಿರುಚಿತ್ರಗಳು ‘ಅನುಜಾ’ ಕಿರುಚಿತ್ರದ ಜೊತೆಗೆ ಸ್ಪರ್ಧೆಯಲ್ಲಿದ್ದವು. ಈ ಪೈಕಿ ಅಂತಿಮವಾಗಿ ‘ಐ ಆಮ್ ನಾಟ್ ಎ ರೊಬಾಟ್ ಅವಾರ್ಡ್ ಗೆದ್ದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:56 am, Mon, 3 March 25